ಕಾಂಗ್ರೆಸ್, ಜೆಡಿಎಸ್‌ನದ್ದು ವಿಶ್ವಾಸದ ಮೈತ್ರಿಯಲ್ಲ ಎಂದು ಹಿಂದೆಯೇ ಹೇಳಿದ್ದೆವು. ಈಗ ಅದು ಬಹಿರಂಗವಾಗಿ ಸಾಬೀತುಗೊಂಡಿದೆ ಎಂದು ಸಚಿವ ಸಿ.ಟಿ. ರವಿ ಆರೋಪಿಸಿದರು. ಜೆಡಿಎಸ್ ಮತ್ತು ಕಾಂಗ್ರೆಸ್‌ನ ಮೈತ್ರಿಕೂಟ ಪರಸ್ಪರರನ್ನು ಮುಗಿಸಲು ಮಾಡಿಕೊಂಡಿರುವ ದುಷ್ಟಕೂಟ ಎಂದು ಅವರು ಹೇಳಿದರು.
ಚಿಕ್ಕಮಗಳೂರು(ಆ.27): ಜೆಡಿಎಸ್ ಮತ್ತು ಕಾಂಗ್ರೆಸ್‌ನ ಮೈತ್ರಿಕೂಟ ಪರಸ್ಪರರನ್ನು ಮುಗಿಸಲು ಮಾಡಿಕೊಂಡಿರುವ ದುಷ್ಟಕೂಟ ಎಂದು ಸಚಿವ ಸಿ.ಟಿ. ರವಿ ಆರೋಪಿಸಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್, ಜೆಡಿಎಸ್‌ನದ್ದು ವಿಶ್ವಾಸದ ಮೈತ್ರಿಯಲ್ಲ ಎಂದು ಹಿಂದೆಯೇ ಹೇಳಿದ್ದೆವು. ಈಗ ಅದು ಬಹಿರಂಗವಾಗಿ ಸಾಬೀತುಗೊಂಡಿದೆ ಎಂದರು.
ಮೈತ್ರಿ ನಡುವೆ ಯಾವ ಉತ್ತಮ ಸಂಬಂಧವೂ ಇರಲಿಲ್ಲ:
ಸಿದ್ದರಾಮಯ್ಯ ಅವರೇ ನನ್ನನ್ನು ಅಧಿಕಾರದಿಂದ ಇಳಿಸಿದರು ಎಂದು ಕುಮಾರಸ್ವಾಮಿ ಹೇಳುತ್ತಿದ್ದಾರೆ. ಅಧಿಕಾರದಲ್ಲಿರುವವರೆಗೆ ನನ್ನನ್ನು ಕುಮಾರಸ್ವಾಮಿ ಶತ್ರುವಿನ ರೀತಿ ನೋಡಿದರು, ಮಿತ್ರನ ತರಹ ನೋಡಲೇ ಇಲ್ಲ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಹಾಗಾಗಿ ಅವರದು ಜನ್ಮಜನ್ಮದ ಅನುಬಂಧವೂ ಅಲ್ಲ, ಗುರು-ಶಿಷ್ಯನ ಸಂಬಂಧವೂ ಅಲ್ಲ. ತಂದೆ- ಮಕ್ಕಳ ಸಂಬಂಧವೂ ಅಲ್ಲ. ಇದು ಪರಸ್ಪರ ಮುಗಿಸುವ ದುಷ್ಟಕೂಟ ಎಂದು ದೂಷಿಸಿದರು.
ಅತೃಪ್ತ ಶಾಸಕರ ಕುರಿತು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ಅವರನ್ನು ಆ ಸ್ಥಿತಿಗೆ ತಂದೊಡ್ಡಿದ್ದು ಸಭಾಧ್ಯಕ್ಷರು. ಈಗ ತೀರ್ಮಾನ ಮಾಡಬೇಕಾಗಿರುವುದು ಸರ್ವೋಚ್ಚ ನ್ಯಾಯಾಲಯ. ಅದರ ತೀರ್ಪಿನ ಆಧಾರದ ಮೇಲೆ ಮುಂದಿನ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು ಎಂದರು.
ಒಳ್ಳೆಯ ಕೆಲಸ ಮಾಡೋದಷ್ಟೇ ಆದ್ಯತೆ:
ಕಾಂಗ್ರೆಸ್ಸಿಗರು ಮುಂಬರುವ ಫೆಬ್ರವರಿಯಲ್ಲಿ ಚುನಾವಣೆ ನಡೆಯುತ್ತದೆ ಎನ್ನುವ ಕುರಿತು ಪ್ರತಿಕ್ರಿಯಿಸಿದ ಅವರು, ಬಿಜೆಪಿ ಕಾರ್ಯಕರ್ತರ ಬೆಂಬಲಿತ ಪಕ್ಷ. ನಮಗೆ ಚುನಾವಣೆ ಬಗ್ಗೆ ಹೆದರಿಕೆಯೇ ಇಲ್ಲ. ಈಗ ನಮ್ಮ ಸರ್ಕಾರ ಇದೆ. ಒಳ್ಳೆಯ ಕೆಲಸ ಮಾಡುವುದಷ್ಟೇ ನಮ್ಮ ಆದ್ಯತೆ. ಎಷ್ಟುದಿನ ಸರ್ಕಾರ ಇರುತ್ತೆ ಅನ್ನೋದನ್ನು ಗಣನೆಗೆ ತೆಗೆದುಕೊಂಡರೆ ಇದ್ದಷ್ಟುದಿನ ಒಳ್ಳೆಯ ಕೆಲಸ ಮಾಡುತ್ತೇವೆ ಎಂದರು.
ಚಿಕ್ಕಮಗಳೂರು: ಬೆಳೆ ಮಾತ್ರವಲ್ಲ, ಕೃಷಿಭೂಮಿಯೂ ನಾಶ 182 ಕೋಟಿಗೂ ಅಧಿಕ ನಷ್ಟ
ಖಾತೆ ಹಂಚಿಕೆ ಕುರಿತು ಮಾತನಾಡಿದ ಅವರು, ನಾನು ಸಚಿವಾಕಾಂಕ್ಷಿಯೇ ಆಗಿರಲಿಲ್ಲ. ಇಂಥದ್ದೇ ಖಾತೆ ಬೇಕೆಂದು ಕೇಳುವುದಿಲ್ಲ. ಯಾವ ಖಾತೆ ಕೊಟ್ಟರೂ ಕೆಲಸ ಮಾಡಬೇಕಾಗಿದ್ದು ನಾವೇ. ಅದನ್ನು ಮಾಡುತ್ತೇವೆ ಎಂದರು.