ಕಲಬುರಗಿ ವಿಮಾನ ನಿಲ್ದಾಣ ಇಂದು ಉದ್ಘಾಟನೆ| ಕೇವಲ 35 ನಿಮಿಷದ ಕಾರ್ಯಕ್ರಮ|ಕಲಬುರಗಿಗೆ ಬರುವ ಚೊಚ್ಚಲ ವಿಮಾನದಲ್ಲಿ ಬರಲಿದ್ದಾರೆ ಸಿಎಂ, ಡಿಸಿಎಂ, ಸಚಿವರು, ಸಂಸದರು, ಶಾಸಕರು|ವಿಮಾನ ನಿಲ್ದಾಣದ ಟರ್ಮಿನಲ್ ಕಾಂಪ್ಲೆಕ್ಸ್ ಎದುರುಗಡೆ ಸಾರ್ವಜನಿಕ ಸಮಾರಂಭ|
ಕಲಬುರಗಿ(ನ.22): ಇಂದು ಕಲಬುರಗಿ ವಿಮಾನ ನಿಲ್ದಾಣ ಲೋಕಾರ್ಪಣೆ ಕಾರ್ಯಕ್ರಮ ನಡೆಯುತ್ತಿದ್ದು ಸಿಎಂ ಯಡಿಯೂರಪ್ಪ ಅವರು ಬೆಂಗಳೂರು ವಿಮಾನ ನಿಲ್ದಾಣದಿಂದ ಸ್ಟಾರ್ ಏರ್ ಸಂಸ್ಥೆಯ ವಿಮಾನದಲ್ಲಿ ಕಲಬುರಗಿಗೆ ಆಗಮಿಸಿ ಅದೇ ವಿಮಾನದ ಮೂಲಕ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ. ಹೀಗಾಗಿ ಸದರಿ ಉದ್ಘಾಟನೆ ಕಾರ್ಯಕ್ರಮ ಕೇವಲ 35 ನಿಮಿಷದ ಅವಧಿಯದ್ದಾಗಿರಲಿದೆ.
ಯಡಿಯೂರಪ್ಪ ಅವರು ನ.22ರಂದು ಶುಕ್ರವಾರ ಮ.1.30 ಗಂಟೆಗೆ ಕಲಬುರಗಿ ವಿಮಾನ ನಿಲ್ದಾಣವನ್ನು ಉದ್ಘಾಟಿಸುವರು. ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡುವ ಸ್ಟಾರ್ ಏರ್‌ಲೈನ್ ವಿಮಾನದ ಮೂಲಕ 12.30ಕ್ಕೆ ಅಲ್ಲಿಂದ ಹೊರಡುವ ಯಡಿಯೂರಪ್ಪ ಮ.1.35ಕ್ಕೆ ಕಲಬುರಗಿ ನೂತನ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ. ಅಂದು ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಂಡು ಜನರನ್ನು ಉದ್ದೇಶಿಸಿ ಮಾತನಾಡಿ ನಂತರ ಅಂದೇ ಮ.1.55 ಕ್ಕೆ ಕಲಬುರಗಿ ವಿಮಾನ ನಿಲ್ದಾಣದಿಂದ ಹೊರಡುವ ಸ್ಟಾರ್ ಏರ್‌ಲೈನ್‌ಸ ವಿಮಾನ ಹತ್ತಿ 2.55 ಕ್ಕೆ ಬೆಂಗಳೂರು ತಲುಪಲಿದ್ದಾರೆ.
ಕೊನೆಗೂ ಕಲಬುರಗಿ ವಿಮಾನ ನಿಲ್ದಾಣ ಉದ್ಘಾಟನೆಗೆ ಡೇಟ್ ಫಿಕ್ಸ್!
ಸಿಎಂ ಅಂದೇ ಬೆಂಗಳೂರಿಗೆ ಅದೇ ವಿಮಾನದಲ್ಲಿ ವಾಪಸ್ಸಾಗುವುದರಿಂದ ಅವರು ಕೇವಲ 35 ನಿಮಿಷ ಮಾತ್ರ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಅದರನ್ವಯ ವೇದಿಕೆ ಕಾರ್ಯಕ್ರಮ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬೆಳಗಿನ 10 ಗಂಟೆಯಿಂದ ಸಂಗೀತದ ಮೂಲಕ ಸಮಾರಂಭಕ್ಕೆ ಚಾಲನೆ ದೊರಕಲಿದೆ.
ರಾಜ್ಯದ ಮೂಲಸೌಲಭ್ಯ ಅಭಿವೃದ್ಧಿ ಇಲಾಖೆ ಹಾಗೂ ಭಾರತ ಸರ್ಕಾರದ ನಾಗರಿಕ ವಿಮಾನಯಾನ ಸಚಿವಾಲಯದಿಂದ ಆಯೋಜಿಸಿರುವ ಕಾರ್ಯಕ್ರಮದಲ್ಲಿ ರಾಜ್ಯದ ಉಪಮುಖ್ಯಮಂತ್ರಿಗಳು, ಸಮಾಜ ಕಲ್ಯಾಣ ಮತ್ತು ಲೋಕೋಪಯೋಗಿ ಸಚಿವರು ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ, ಉಪಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಹಾಗೂ ಉಪ ಮುಖ್ಯಮಂತ್ರಿಗಳು ಹಾಗೂ ಉನ್ನತ ಶಿಕ್ಷಣ, ವೈದ್ಯಕೀಯ ಶಿಕ್ಷಣ, ಐಟಿ ಮತ್ತು ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಚಿವ ಡಾ. ಅಶ್ವಥ್ ನಾರಾಯಣ ಸಿ.ಎನ್., ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್, ಗೃಹ ಮತ್ತು ಸಹಕಾರ ಸಚಿವ ಬಸವರಾಜ ಬೊಮ್ಮಾಯಿ , ಕಲಬುರಗಿ ಸಂಸದ ಡಾ. ಉಮೇಶ ಜಾಧವ್ ಸೇರಿದಂತೆ ಅನೇಕ ಗಣ್ಯರು ಮೊದಲ ವಿಮಾನದಲ್ಲಿ ಬೆಂಗಳೂರಿನಿಂದ ಕಲಬುರಗಿಗೆ ಬರುತ್ತಿದ್ದಾರೆ. ಕಲಬುರಗಿ (ಗ್ರಾಮೀಣ) ವಿಧಾನಸಭಾ ಮತಕ್ಷೇತ್ರ ಶಾಸಕ ಬಸವರಾಜ ಮುತ್ತಿಮೂಡ ಅಧ್ಯಕ್ಷತೆ ವಹಿಸಲಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಕಲಬುರಗಿ ಜಿಪಂ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಾಲಾಜಿ, ಕಲಬುರಗಿ ಸಂಸದ ಡಾ. ಉಮೇಶ ಜಾಧವ, ಬೀದರ ಸಂಸದ ಭಗವಂತ ಖೂಬಾ, ಜಿಲ್ಲೆಯ ಎಲ್ಲಾ ಶಾಸಕರುಗಳು, ಕಲಬುರಗಿ ತಾಪಂ ಅಧ್ಯಕ್ಷ ಶಿವರಾಜ್ ಸಜ್ಜನ್, ಸರಡಗಿ ಗ್ರಾಪಂ ಅಧ್ಯಕ್ಷೆ ಯಶೋಧ ಆರ್. ಪವಾರ್, ಸರ್ಕಾರದ ಮುಖ್ಯ ಕಾರ್ಯದರ್ಶಿ ತ.ಮ. ವಿಜಯಭಾಸ್ಕರ್, ಭಾರತ ಸರ್ಕಾರದ ನಾಗರಿಕ ವಿಮಾನಯಾನ ಸಚಿವಾಲಯದ ಕಾರ್ಯದರ್ಶಿ ಪ್ರದೀಪ್‌ಸಿಂಗ್ ಕರೋಲಾ, ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ ಅಧ್ಯಕ್ಷ ಅರವಿಂದ್ ಸಿಂಗ್ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ವಿಮಾನ ನಿಲ್ದಾಣದ ಟರ್ಮಿನಲ್ ಕಾಂಪ್ಲೆಕ್ಸ್ ಎದುರುಗಡೆ ಸಾರ್ವಜನಿಕ ಸಮಾರಂಭ ಏರ್ಪಡಿಸಲಾಗಿದೆ. ಮುಖ್ಯಮಂತ್ರಿಗಳು, ಸಚಿವರು, ಜನಪ್ರತಿನಿಧಿಗಳು, ಗಣ್ಯರು, ಹಿರಿಯ ಅಧಿಕಾರಿಗಳು ಸೇರಿದಂತೆ ಸುಮಾರು 5000ಕ್ಕೂ ಹೆಚ್ಚಿನ ಜನಸಂಖ್ಯೆ ಅಂದು ಸೇರುವುದರಿಂದ ಸೂಕ್ತ ಆಸನ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ, ಗಣ್ಯರು ಮತ್ತು ಸಾರ್ವಜನಿಕರಿಗೆ ಪ್ರತ್ಯೇಕ ಊಟದ ವ್ಯವಸ್ಥೆ, ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.