Latest Videos

ಪಂಚಮಸಾಲಿ ಮೀಸಲಾತಿಗೆ ಸಿಎಂ ನಿರ್ಲಕ್ಷ್ಯ: ಬಸವಜಯ ಮೃತ್ಯುಂಜಯ ಸ್ವಾಮೀಜಿ

By Kannadaprabha NewsFirst Published May 23, 2024, 4:33 PM IST
Highlights

ನಮ್ಮ ಮುಂದಿನ ಪೀಳಿಗೆಯಾದರೂ ಸರ್ಕಾರದ ಮೀಸಲಾತಿ ಸವಲತ್ತು ಪಡೆಯಲಿ ಎಂಬ ಉದ್ದೇಶದಿಂದ ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ 2ಎ ಮೀಸಲಾತಿ ಹಾಗೂ ಲಿಂಗಾಯತರನ್ನು ಒಬಿಸಿ ಪಟ್ಟಿಗೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸು.

ಮುಂಡಗೋಡ (ಮೇ.23): ನಮ್ಮ ಮುಂದಿನ ಪೀಳಿಗೆಯಾದರೂ ಸರ್ಕಾರದ ಮೀಸಲಾತಿ ಸವಲತ್ತು ಪಡೆಯಲಿ ಎಂಬ ಉದ್ದೇಶದಿಂದ ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ 2ಎ ಮೀಸಲಾತಿ ಹಾಗೂ ಲಿಂಗಾಯತರನ್ನು ಒಬಿಸಿ ಪಟ್ಟಿಗೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಹೋರಾಟ ಪುನಾರಂಭಗೊಳಿಸಲು ನಿರ್ಧರಿಸಲಾಗಿದ್ದು, ಈ ಕುರಿತು ಮೇ 23ರಂದು ಉಳವಿ ಚನ್ನಸವೇಶ್ವರ ದೇವಾಲಯದಲ್ಲಿ ಹೋರಾಟ ಸಮಿತಿ ಪದಾಧಿಕಾರಿಗಳ ಸಭೆ ಕರೆಯಲಾಗಿದೆ ಎಂದು ಕೂಡಲಸಂಗಮ ಮಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಲಿಂಗಾಯತ ಅಡಿಯಲ್ಲಿ ಬರುವ ಹಲವು ಸಮಾಜಗಳು ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಪಡೆದುಕೊಂಡಿವೆ. ಆದರೆ ಪಂಚಮಸಾಲಿ ಮತ್ತು ಮುಂಡಗೋಡ, ಬನವಾಸಿ ಹಾಗೂ ಕರಾವಳಿ ಭಾಗದಲ್ಲಿ ಬರುವ ಮಣಾ ಗೌಡರ ಸೇರಿದಂತೆ ಹಲವು ಲಿಂಗಾಯತ ಉಪ ಜಾತಿಗಳಿಗೂ ಮೀಸಲಾತಿ ಕೋರಿ ಹೋರಾಟ ನಡೆಸಲಾಗುವುದು. ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ ೨ಎ ಮೀಸಲಾತಿ ಕೋರಿ ಕಳೆದ ಮೂರು ವರ್ಷಗಳಿಂದ ನಡೆಸುತ್ತಿದ್ದ ಹೋರಾಟ ಫಲವಾಗಿ ೨೦೨೩ರಲ್ಲಿ ಬಿಜೆಪಿ ಸರ್ಕಾರ ಮೀಸಲಾತಿ ನೀಡಿದ್ದರೂ ಮೀಸಲಾತಿ ಅನುಷ್ಠಾನವಾಗುವ ಪೂರ್ವದಲ್ಲಿ ಚುನಾವಣೆ ನೀತಿ ಸಂಹಿತೆ ಜಾರಿಯಾಯಿತು. 

ಈಗ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದು, ಮೀಸಲಾತಿ ಬಗ್ಗೆ ಸಭೆ ನಡೆಸಿ ತೀರ್ಮಾನಿಸುತ್ತೇವೆ ಎಂದು ಭರವಸೆ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಹಾಗಾಗಿ ಸಭೆ ಕರೆಯಲಾಗಿದ್ದು, ಶಾಂತಿಯುತವಾಗಿ ಸರ್ಕಾರದ ಗಮನ ಸೆಳೆದು ಮನವಿ ಮಾಡುವ ದೃಷ್ಟಿಯಿಂದ ಹೋರಾಟ ಕೈಗೊಳ್ಳಲಾಗುತ್ತಿದೆ ಎಂದರು. ೨೨ ಜನ ಲಿಂಗಾಯತ ಶಾಸಕರಿದ್ದು, ಅದರಲ್ಲಿ ೧೨ ಜನ ಕಾಂಗ್ರೆಸ್ ಸರ್ಕಾರದಲ್ಲಿದ್ದಾರೆ. ಅವರು ಕೂಡ ಸಭೆಗೆ ಹಾಜರಾಗಬೇಕಿದ್ದು, ನೀತಿ ಸಂಹಿತೆ ತೆರವುಗೊಂಡ ಬಳಿಕ ಆ ಶಾಸಕರ ಮೂಲಕ ಸರ್ಕಾರದ ಮೇಲೆ ಒತ್ತಡ ತರಲಾಗುವುದು ಎಂದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ವಿ.ಎಸ್. ಪಾಟೀಲ, ಹೋರಾಟ ಸಮಿತಿ ಮುಖ್ಯಸ್ಥ ಚನ್ನಬಸಪ್ಪ ಬಾಗೇವಾಡಿ, ರಾಮಣ್ಣ ಕುನ್ನೂರ, ನಾಗರಾಜ ಚಿನ್ನಪ್ಪನವರ, ರಾಜು ಕುಟ್ರಿ ಮುಂತಾದವರು ಉಪಸ್ಥಿತರಿದ್ದರು.

ಹಿಂದೂ ಧರ್ಮಕ್ಕೆ ಬಿಜೆಪಿ, ಶ್ರೀರಾಮ ಸೇನೆಯಂತ ಕ್ರಿಮಿನಲ್ ಸಂಘಟನೆಯ ಅವಶ್ಯಕತೆ ಇಲ್ಲ: ಸಚಿವ ಪ್ರಿಯಾಂಕ್

ಜಾತಿಗಣತಿಗೆ ವಿರೋಧವಿಲ್ಲ: ಜಾತಿಗಣತಿ ಬಗ್ಗೆ ನಮ್ಮ ವಿರೋಧವಿಲ್ಲ. ಬದಲಾಗಿ ಅದು ವೈಜ್ಞಾನಿಕ ಹಾಗೂ ಕಾನೂನುಬದ್ಧವಾಗಿ ಯಾವುದೇ ಸಮುದಾಯಕ್ಕೆ ಅನ್ಯಾಯವಾಗದಂತಿರಬೇಕು ಎಂದು ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಾತಿ ಗಣತಿ ಮಾಡಬೇಕು. ಒಂದು ಕೋಟಿಗೂ ಅಧಿಕವಿರುವ ಲಿಂಗಾಯತರು ಕೇವಲ ೬೦ ಲಕ್ಷ ಇದ್ದಾರೆ ಅಂದರೆ ಒಪ್ಪಲು ಸಾಧ್ಯವಿಲ್ಲ. ಸರ್ವೇ ವರದಿಯನ್ನು ಆಧರಿಸಿ ಜಾತಿ ಗಣತಿ ಮಾಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು, ಲಿಂಗಾಯತರಲ್ಲಿ ಕುಂಬಾರ, ಮಡಿವಾಳ ಹೀಗೆ ಹಲವು ಉಪ ಪಂಗಡಗಳಿವೆ. ಹಲವರು ಲಿಂಗಾಯತ ಎಂಬುದನ್ನು ನಮೂದಿಸಿಲ್ಲ. ಹಾಗಾಗಿ ಎಲ್ಲವನ್ನು ಒಟ್ಟುಗೂಡಿಸಿಕೊಂಡು ಎಲ್ಲ ಉಪಪಂಗಡಗಳನ್ನು ಗಣನೆಗೆ ತೆಗೆದುಕೊಂಡು ಸಮರ್ಪಕ ಹಾಗೂ ಪ್ರಾಮಾಣಿಕವಾಗಿ ಗಣತಿ ನಡೆಸಿದರೆ ಒಪ್ಪಿಕೊಳ್ಳುತ್ತೇವೆ ಎಂದು ಸ್ಪಷ್ಪಪಡಿಸಿದರು.

click me!