ಮಳೆ ಬಂದರೆ ಬದುಕೇ ದುಸ್ತರ: ಸಿಎಂ ಸಿದ್ದರಾಮಯ್ಯ ಎದುರು ಜನರ ಕಣ್ಣೀರು

Published : May 22, 2025, 10:59 AM IST
ಮಳೆ ಬಂದರೆ ಬದುಕೇ ದುಸ್ತರ: ಸಿಎಂ ಸಿದ್ದರಾಮಯ್ಯ ಎದುರು ಜನರ ಕಣ್ಣೀರು

ಸಾರಾಂಶ

ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಭಾನುವಾರ ಮತ್ತು ಸೋಮವಾರ ಸುರಿದ ಭಾರೀ ಮಳೆಯಿಂದ ತೊಂದರೆಗೆ ಒಳಗಾದ ಸ್ಥಳಗಳಿಗೆ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರವಾಹ ಪೀಡಿತ ಪ್ರದೇಶಗಳಿಗೆ ಶಾಶ್ವತ ಪರಿಹಾರದ ಭರವಸೆ ನೀಡಿದರು. 

ಬೆಂಗಳೂರು (ಮೇ.22): ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಭಾನುವಾರ ಮತ್ತು ಸೋಮವಾರ ಸುರಿದ ಭಾರೀ ಮಳೆಯಿಂದ ತೊಂದರೆಗೆ ಒಳಗಾದ ಮಾನ್ಯತಾ ಟೆಕ್‌ ಪಾರ್ಕ್‌, ಎಚ್‌ಬಿಆರ್‌ ಲೇಔಟ್‌, ಸಾಯಿಲೇಔಟ್‌, ಸಿಲ್ಕ್‌ಬೋರ್ಡ್‌, ಗುರಪ್ಪನ ಪಾಳ್ಯ ಸೇರಿದಂತೆ ಮೊದಲಾದ ಸ್ಥಳಗಳಿಗೆ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರವಾಹ ಪೀಡಿತ ಪ್ರದೇಶಗಳಿಗೆ ಶಾಶ್ವತ ಪರಿಹಾರದ ಭರವಸೆ ನೀಡಿದರು. ಬಿಬಿಎಂಪಿ, ಮೆಟ್ರೋ, ಬೆಂಗಳೂರು ಜಲಮಂಡಳಿ ಹಾಗೂ ಬಿಡಿಎ ಅಧಿಕಾರಿಗಳಿಗೆ ಶಾಶ್ವತ ಪರಿಹಾರ ಕ್ರಮಗಳನ್ನು ಕೈಗೊಳ್ಳುವುದಕ್ಕೆ ತಾಕೀತು ಮಾಡಿದರು. ಮುಖ್ಯಮಂತ್ರಿ ಅವರ ಜತೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌, ಇಂಧನ ಸಚಿವ ಕೆ.ಜೆ.ಜಾರ್ಜ್‌ ಸೇರಿದಂತೆ ಶಾಸಕರು, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಮತ್ತಿತರ ಅಧಿಕಾರಿಗಳು ಜೊತೆಗಿದ್ದರು.

ಮಾನ್ಯತಾ ಟೆಕ್‌ ಸಿಇಒಗೆ 90 ದಿನ ಗಡುವು: ಹೊರ ವರ್ತುಲ ರಸ್ತೆಯ ನಾಗವಾರ ಬಳಿ ಇರುವ ಮಾನ್ಯತಾ ಟೆಕ್‌ ಪಾರ್ಕ್‌ ಬಳಿಕ ರಾಜಕಾಲುವೆ ಪರಿಶೀಲಿಸಿದ ಅವರು, ವಿಪತ್ತು ನಿರ್ವಹಣೆ ಕಾಯ್ದೆಯಡಿ ರಾಜಕಾಲುವೆ ಒತ್ತುವರಿಯನ್ನು ತೆರವುಗೊಳಿಸಿ ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು. ಈ ವೇಳೆ ಮಾನ್ಯತಾ ಟೆಕ್‌ಪಾರ್ಕ್‌ ಸಿಇಒ ಸ್ವತಃ ತಾವೇ 90 ದಿನದಲ್ಲಿ ರಾಜಕಾಲುವೆ ಸರಿಪಡಿಸಿಕೊಂಡು ನೀರು ಹರಿದು ಹೋಗುಲು ವ್ಯವಸ್ಥೆ ಮಾಡುವುದಾಗಿ ತಿಳಿಸಿದರು.

ಮೆಟ್ರೋ ಮಹಿಳಾ ಪ್ರಯಾಣಿಕರ ವಿಡಿಯೋ ಪೋಸ್ಟ್‌ ಪ್ರಕರಣ: ಕಿಡಿಗೇಡಿಯ ಪತ್ತೆಗೆ ಪೊಲೀಸರ ಶೋಧ

ಹೂಳು ಯಾಕೆ ತೆಗೆದಿಲ್ಲ?: ಎಚ್‌ಬಿಆರ್‌ ಲೇಔಟ್‌ 5ನೇ ಹಂತದ ಬಳಿಕ ರಾಜಕಾಲುವೆ ಪರಿಶೀಲನೆ ನಡೆಸಿದರು. ಈ ವೇಳೆ ಸಾರ್ವಜನಿಕರು ರಾಜಕಾಲುವೆಯ ನೀರು ಬಡಾವಣೆಗಳಿಗೆ ನುಗ್ಗುತ್ತಿದೆ ಎಂದು ದೂರಿದರು. ರಾಜಕಾಲುವೆಯಲ್ಲಿ ಹೂಳು ಗಮನಿಸಿದ ಸಿದ್ದರಾಮಯ್ಯ, ಯಾಕೆ ಹೂಳು ತೆಗೆದಿಲ್ಲ. ಯಾರು ಗುತ್ತಿಗೆದಾರ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ಬಾಕಿ ಇರುವ ತಡೆಗೋಡೆ ಕಾಮಗಾರಿಯನ್ನು ತ್ವರಿತವಾಗಿ ಮುಗಿಸುವಂತೆ ಸೂಚಿಸಿದರು.

ಸಾಯಿ ಲೇಔಟ್‌ನಲ್ಲಿ ನಿವಾಸಿಗಳ ಅಳಲು:  ಕಳೆದ ಮೂರ್ನಾಲ್ಕು ದಿನಗಳಿಂದ ನೀರಿನಲ್ಲಿ ಅವಾಂತರದ ನಡುವೆ ದಿನದೂಡುತ್ತಿದ್ದ ಸಾಯಿ ಲೇಔಟ್‌ ನಿವಾಸಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡುತ್ತಿದ್ದಂತೆ ಕಣ್ಣೀರು ಹಾಕುತ್ತಾ ಸಾಲ ಮಾಡಿ ಮನೆ ಕಟ್ಟಿಕೊಂಡಿದ್ದೇವೆ. ಸಾಲ ಇನ್ನೂ ತೀರಿಲ್ಲ. ಮಳೆ ಬಂದರೆ, ಬದುಕುವುದೇ ಕಷ್ಟವಾಗಿದೆ. ಶಾಶ್ವತ ಪರಿಹಾರ ಮಾಡುವಂತೆ ಅಂಗಲಾಚಿದರು. ಮತ್ತೊಂದು ಕಡೆ ಕೆ.ಆರ್‌.ಪುರ ಶಾಸಕ ಬೈರತಿ ಬಸವರಾಜ್‌ ಅವರನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡು. ಬಸವರಾಜ್‌ ಸಮಾಧಾನ ಪಡಿಸುವುದಕ್ಕೆ ಮುಂದಾದರೂ ಪ್ರಯೋಜನವಾಗಲಿಲ್ಲ. ನಮಗೆ ಮುಖ್ಯಮಂತ್ರಿ ಬಳಿ ಮನವಿ ಮಾಡುವುದಕ್ಕೆ ಅವಕಾಶ ಕೊಡಿಸುವಂತೆ ಕೋರಿದರು. ಈ ನಡುವೆ ಕಾಂಗ್ರೆಸ್‌ ಮತ್ತು ಬಿಜೆಪಿ ಕಾರ್ಯಕರ್ತರು ಗಲಾಟೆ ಮಾಡಿಕೊಂಡರು.

13 ಕೋಟಿ ರು. ಅನುದಾನ ಬಿಡುಗಡೆ: ಸಾಯಿ ಲೇಔಟ್‌ ಹಿಂಭಾಗದಲ್ಲಿ ರಾಜಕಾಲುವೆ ನೀರು ಸರಾಗವಾಗಿ ಹರಿದು ಹೋಗಲು ರೈಲ್ವೆ ವೆಂಟ್‌ (ನೀರು ಹರಿದು ಹೋಗುವ ಜಾಗ) ಸಣ್ಣದಾಗಿದೆ. ಹೆಚ್ಚುವರಿ ವೆಂಟ್‌ ನಿರ್ಮಾಣಕ್ಕೆ 13 ಕೋಟಿ ರು. ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ. ಅನುದಾನ ಸಹ ಬಿಡುಗಡೆ ಮಾಡಲಾಗಿದೆ. ಬಿಬಿಎಂಪಿಯಿಂದ ರೈಲ್ವೆ ಇಲಾಖೆಗೆ ಈಗಾಗಲೇ 3 ಲಕ್ಷ ರು. ಠೇವಣೆ ಮಾಡಲಾಗಿದೆ. 6 ಲಕ್ಷ ರು. ಕಾಮಗಾರಿಗೆ ವೆಚ್ಚ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ತ್ವರಿತವಾಗಿ ಕಾಮಗಾರಿ ಪೂರ್ಣಕ್ಕೆ ಮುಖ್ಯಮಂತ್ರಿ ಸೂಚಿಸಿದ್ದಾರೆ.

ಟ್ರಂಚ್‌ ಲೆಸ್‌ ತಂತ್ರಜ್ಞಾನ: ಪಣತ್ತೂರಿನಲ್ಲಿ ಸಬ್‌ ಅರ್ಬನ್‌ ರೈಲ್ವೆ ಮೇಲ್ಸೇತುವೆ ನಿರ್ಮಾಣ ಮಾಡಲಾಗಿದ್ದು, ಕೆಳಭಾಗದಲ್ಲಿ ಮಳೆ ಬಂದರೆ ಭಾರೀ ಪ್ರಮಾಣ ನೀರು ನಿಲುಗಡೆಯಾಗುತ್ತಿದೆ. ಬಿಬಿಎಂಪಿಯಿಂದ ಕಾಮಗಾರಿ ನಡೆಸಬೇಕಾಗಿದೆ. ಟ್ರಂಚ್‌ ಲೆಸ್ ತಂತ್ರಜ್ಞಾನ ಬಳಕೆ ಮಾಡಿಕೊಂಡು ಭೂಮಿ ಒಳಭಾಗದಲ್ಲಿಯೇ ಕೊರೆದು ನೀರು ಹರಿದು ಹೋಗಲು ಕೊಳವೆ ಅಳವಡಿಕೆ ಮಾಡುವುದಾಗಿ ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದರು. 45 ದಿನದಲ್ಲಿ ಕಾಮಗಾರಿ ಮುಗಿಸುವುದಕ್ಕೆ ಮುಖ್ಯಮಂತ್ರಿ ಗಡುವು ನೀಡಿದರು.

ಈ ವೇಳೆ ಮಾಜಿ ಸಚಿವ ಅರವಿಂದ ಲಿಂಬಾವಳಿ, ವರ್ತೂರು ಮುಖ್ಯ ರಸ್ತೆ ಅಗಲೀಕರಣಕ್ಕೆ ಮನವಿ ಮಾಡಿದರು. ಬಿಬಿಎಂಪಿಯು 100 ಅಡಿ ರಸ್ತೆ ಅಗಲೀಕರಣಕ್ಕೆ ಅಧಿಸೂಚನೆ ಹೊರಡಿಸಿದೆ. ಆದರೆ, ಬಿಎಂಆರ್‌ಡಿಎ 300 ಅಡಿ ರಸ್ತೆ ಅಗಲೀಕರಣಕ್ಕೆ ಅಧಿಸೂಚನೆ ಹೊರಡಿಸಿದೆ. ಹೀಗಾಗಿ, ಸಮಸ್ಯೆ ಉಂಟಾಗಿದೆ. ಅರಣ್ಯ ಇಲಾಖೆಗೆ ಭೂಮಿ ಹಸ್ತಾಂತರ, ಕೆಪಿಟಿಸಿಎಲ್‌ ಸ್ಟೇಷನ್‌ ಸ್ಥಳಾಂತರ, ಅಂಡರ್‌ ಪಾಸ್‌ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಿದರೆ ಜನರಿಗೆ ತುಂಬಾ ಅನುಕೂಲವಾಗಿದೆ ಎಂದು ಸಿದ್ದರಾಮಯ್ಯ ಅವರ ಬಳಿ ಮನವಿ ಮಾಡಿದರು.

ಪ್ರಹ್ಲಾದ್‌ಗೆ ಗದರಿದ ಸಿಎಂ: ಪಣತ್ತೂರು ಗಾರ್ಡ್‌ನ ರಸ್ತೆ ಅಗಲೀಕರಣ ಹಾಗೂ ಅಂಡರ್‌ ಪಾಸ್‌ ನಿರ್ಮಾಣಕ್ಕೆ ಸಂಬಂಧಿಸಿದಂತೆ ಫೈಲ್‌ ಅನ್ನು ಬಿಬಿಎಂಪಿಯ ಎಂಜಿನಿಯರಿಂಗ್‌ ವಿಭಾಗದ ಮುಖ್ಯಸ್ಥ ಬಿ.ಎಸ್‌. ಪ್ರಹ್ಲಾದ್‌ ಇಟ್ಟುಕೊಂಡಿದ್ದಾರೆ. ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ದೂರಿದರು. ಆಗ ಕೋಪಗೊಂಡ ಸಿದ್ದರಾಮಯ್ಯ, ಎಲ್ಲಿ ಆ ಪ್ರಹ್ಲಾದ್‌ ಕೇಳಿದರು. ಆದರೆ, ಪ್ರಹ್ಲಾದ್‌ ದೂರದಲ್ಲಿ ನಿಂತುಕೊಂಡಿದ್ದರು. ಆ ಮೇಲೆ ಪ್ರಹ್ಲಾದ್‌ ಆಗಮಿಸುತ್ತಿದಂತೆ ನಾವಿಲ್ಲಿ ಇರುವಾಗ ನೀನು ಇಲ್ಲಿಯೇ ಇರಬೇಕು ಎಂದು ಮುಖ್ಯಮಂತ್ರಿ ಗದರಿದರು.

ಯಡಿಯೂರಪ್ಪ ತಪ್ಪು ಮಾಡಿದ್ದಾರೆ: ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ಬಿಎಂಆರ್‌ಡಿಎ ತಪ್ಪಾಗಿ ಅಧಿಸೂಚನೆ ಹೊರಡಿಸಲಾಗಿದೆ. ಹಾಗಾಗಿ, ಅಗಲೀಕರಣ ನೆನಗುದಿಗೆ ಬಿದ್ದಿದೆ ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ಸಿದ್ದರಾಮಯ್ಯ ಅವರ ಗಮನಕ್ಕೆ ತರುವುದಕ್ಕೆ ಪ್ರಯತ್ನಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಬೈರತಿ ಸುರೇಶ್‌, ಯಾರ ಸರ್ಕಾರದ ಅವಧಿಯಲ್ಲಿ ತಪ್ಪಾಗಿದೆ ಎಂಬುದನ್ನು ಹೇಳುವಂತೆ ಕಾಲೆಳೆದರು. ಆಗ ಹೌದು, ನಮ್ಮ ಸರ್ಕಾರದ ಅವಧಿಯಲ್ಲಿಯೇ ತಪ್ಪಾಗಿದೆ. ಯಡಿಯೂರಪ್ಪ ತಪ್ಪು ಮಾಡಿದ್ದಾರೆ ಎಂದರು.

ಸಿಲ್ಕ್‌ ಬೋರ್ಡ್‌ ಸಮಸ್ಯೆ ಪರಿಹಾರಕ್ಕೆ ಸೂಚನೆ: ಭೈರಸಂದ್ರ, ಮಡಿವಾಳ ಕಡೆಯಿಂದ ಮಳೆ ನೀರು ಸಿಲ್ಕ್‌ ಬೋರ್ಡ್‌ ಜಂಕ್ಷನ್‌ಗೆ ಬಂದು ಸೇರುತ್ತಿದೆ. ಮೆಟ್ರೋ ಕಾಮಗಾರಿಯಿಂದ ನೀರುಗಾಲುವೆಗಳು ಮುಚ್ಚಿ ಹೋಗಿವೆ. ಹೀಗಾಗಿ, ಸಮಸ್ಯೆ ಆಗುತ್ತಿದೆ ಎಂದು ಶಾಸಕ ಸತೀಶ್‌ ರೆಡ್ಡಿ ಮುಖ್ಯಮಂತ್ರಿಗೆ ಮಾಹಿತಿ ನೀಡಿದರು. ಆ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಬಿಎಂಪಿ, ಮೆಟ್ರೋ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳು ಸಭೆ ನಡೆಸಿ ಶಾಶ್ವತ ಪರಿಹಾರ ಕೈಗೊಳ್ಳುವಂತೆ ಸೂಚಿಸಿದರು.

ಗುರಪ್ಪನಪಾಳ್ಯಕ್ಕೆ ಭೇಟಿ: ಗುರಪ್ಪನಪಾಳ್ಯದಲ್ಲಿ ತಡೆಗೋಡೆ ಕುಸಿತದಿಂದ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಪರಿಹಾರ ವಿತರಣೆ ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದರು.

Driverless Car: ಬೆಂಗಳೂರಲ್ಲಿ ದೇಶದ ಮೊದಲ ಚಾಲಕ ರಹಿತ ಕಾರಿನ ಸಂಚಾರ!

ರಾಜಕಾಲುವೆಗೆ ಕಸ- ಕಠಿಣ ಕ್ರಮಕ್ಕೆ ಸಿಎಂ ಸೂಚನೆ: ನಗರದಲ್ಲಿ ಪರಿಶೀಲನೆ ವೇಳೆ ರಾಜಕಾಲುವೆಯಲ್ಲಿ ಕಸ ಇರುವುದನ್ನು ಕಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು. ರಾಜಕಾಲುವೆಗೆ, ಚರಂಡಿಗೆ ಕಸ ಹಾಕುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಬಿಬಿಎಂಪಿಯ ಅಧಿಕಾರಿಗಳಿಗೆ ನಿರ್ದೇಶಿಸಿದರು.

PREV
Read more Articles on
click me!

Recommended Stories

ನಾದಬ್ರಹ್ಮ ಇಡ್ಲಿ ಸೆಂಟರ್‌ ಮಾಲೀಕ, 28 ವರ್ಷದ ಸಂದೇಶ್‌ ಹೃದಯಾಘಾತದಿಂದ ಸಾವು
ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ