ದಲಿತರು ಮತ್ತು ಅಲ್ಪಸಂಖ್ಯಾತರಿಗೂ ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ನಿಂದ ಮುಖ್ಯಮಂತ್ರಿಯಾಗುವ ಯೋಗ ಒದಗಿ ಬರಲಿದೆ ಎಂಬ ವಿಶ್ವಾಸವನ್ನು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್. ರಾಜಣ್ಣ ವ್ಯಕ್ತಪಡಿಸಿದರು.
ತುಮಕೂರು : ದಲಿತರು ಮತ್ತು ಅಲ್ಪಸಂಖ್ಯಾತರಿಗೂ ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ನಿಂದ ಮುಖ್ಯಮಂತ್ರಿಯಾಗುವ ಯೋಗ ಒದಗಿ ಬರಲಿದೆ ಎಂಬ ವಿಶ್ವಾಸವನ್ನು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್. ರಾಜಣ್ಣ ವ್ಯಕ್ತಪಡಿಸಿದರು.
ನಗರದ ಬಾಲಭವನದಲ್ಲಿ ತುಮಕೂರು ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ವತಿಯಿಂದ ನೂತನ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಚಂದ್ರಶೇಖರಗೌಡ ಅವರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿರುವ ಚಂದ್ರಶೇಖರಗೌಡನಿಗೆ ಬೆಂಬಲವಾಗಿ ಎಲ್ಲಾ ಹಿಂದುಳಿದ ವರ್ಗಗಳ ಜನರು ನಿಲ್ಲಬೇಕಾಗಿದೆ ಎಂದು ಕೆ.ಎನ್.ರಾಜಣ್ಣ ನುಡಿದರು.
ಪತ್ರಕರ್ತ ಹಾಗೂ ರೆಡ್‌ಕಾಸ್ ರಾಷ್ಟ್ರೀಯ ಮಂಡಳಿ ಸದಸ್ಯ ಎಸ್.ನಾಗಣ್ಣ ಮಾತನಾಡಿ, ಗುರುವಾರ ಪ್ರಕಟಗೊಂಡಿರುವ ಗುಜರಾತ್ ಮತ್ತು ಹಿಮಾಚಲಪ್ರದೇಶ ಚುನಾವಣೆ ಹಿಂದುಳಿದ ವರ್ಗಗಳಿಗೆ ಒಂದು ಎಚ್ಚರಿಕೆ ಗಂಟೆಯಾಗಿದೆ ಎಂದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ, ಪಕ್ಷ ನನ್ನನ್ನು ಗುರುತಿಸಿ, ಜಿಲ್ಲಾಧ್ಯಕ್ಷ ಹುದ್ದೆ ನೀಡಿದೆ. ಡಾ.ಜಿ.ಪರಮೇಶ್ವರ್, ಕೆ.ಎನ್.ರಾಜಣ್ಣ,ಟಿ.ಬಿ.ಜಯಚಂದ್ರ ಸೇರಿದಂತೆ ಎಲ್ಲಾ ನಾಯಕರು ನನ್ನಗೆ ಬೆಂಬಲವಾಗಿ ನಿಂತಿದ್ದಾರೆ. ಅವರ ಹೆಸರಿಗೆ ಚ್ಯುತಿ ಬರದಂತೆ ಜಿಲ್ಲೆಯಾದ್ಯಂತ ಪ್ರವಾಸ ಮಾಡಿ, ಅತಿ ಹೆಚ್ಚಿನ ಶಾಸಕರು ಈ ಭಾರಿ ವಿಧಾನಸಭೆ ಪ್ರವೇಶಿಸುವಂತೆ ಮಾಡುತ್ತೇನೆ. ಹಿರಿಯರ ಮಾರ್ಗದರ್ಶನದ ಜೊತೆಗೆ, ಕಿರಿಯರ ಸಹಕಾರವೂ ಅಗತ್ಯವಿದೆ. ಈ ನಿಟ್ಟಿನಲ್ಲಿ ಎಲ್ಲರೂ ಬೆಂಬಲ ನೀಡುವಂತೆ ಮನವಿ ಮಾಡಿದರು.
ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಧನಿಯಕುಮಾರ್ ಮಾತನಾಡಿ, ನಮ್ಮ ಒಕ್ಕೂಟ ಸಮುದಾಯದ ಶೈಕ್ಷಣಿಕ, ಸಾಮಾಜಿಕ, ಅರ್ಥಿಕ ಮತ್ತು ರಾಜಕೀಯ ಬೆಳವಣಿಗೆಗೆ ಸಹಕಾರ ನೀಡುತ್ತಾ ಬಂದಿದೆ. ರಾಜಕೀಯವಾಗಿ ಸಮುದಾಯದ ವ್ಯಕ್ತಿಗಳಿಗೆ ಅಧಿಕಾರ ಸಿಕ್ಕಾಗ, ಸಮುದಾಯದ ಮಕ್ಕಳು ಕ್ರೀಡೆಯಲ್ಲಿ ಹೆಸರು ಮಾಡಿದಾಗ ಅವರನ್ನು ಗುರುತಿಸಿ, ಗೌರವಿಸುವ ಮೂಲಕ ಉತ್ತೇಜನ ನೀಡಲಾಗುತ್ತಿದೆ. ಹಿಂದುಳಿದ ವರ್ಗದ ಚಂದ್ರಶೇಖರಗೌಡ ಪಕ್ಷ ಸಂಘಟನೆಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ವೇದಿಕೆಯಲ್ಲಿ ಜಿಲ್ಲಾ ಜಾತ್ಯತೀತ ಮಾನವ ವೇದಿಕೆಯ ಅಧ್ಯಕ್ಷ ಟಿ.ಆರ್.ಆಂಜನಪ್ಪ, ಹಿಂದುಳಿದ ವರ್ಗಗಳ ಒಕ್ಕೂಟದ ರಾಜ್ಯ ಸಂಘಟನಾ ಕಾರ್ಯದರ್ಶಿ ಹೆಬ್ಬೂರು ಶ್ರೀನಿವಾಸಮೂರ್ತಿ, ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಜಿ.ಎಂ.ಸಣ್ಣಮುದ್ದಯ್ಯ, ಹಿಂದುಳಿದ ವರ್ಗಗಳ ಒಕ್ಕೂಟ್ದ ಕಾರ್ಯಾಧ್ಯಕ್ಷ ಪಿ.ಕೆಂಪರಾಜು, ಪ್ರಧಾನ ಕಾರ್ಯದರ್ಶಿ ಪ್ರೆಸ್ ರಾಜಣ್ಣ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶಾಂತಕುಮಾರ್, ಟಿ.ಎನ್.ಮಧುಕರ್, ಸುವರ್ಣಮ್ಮ, ಜಿಲ್ಲಾ ಯುವಕಾಂಗ್ರೆಸ್ ಅಧ್ಯಕ್ಷ ಶಶಿಹುಲಿಕುಂಟೆ ಮಠ್, ವೈ.ಎನ್.ನಾಗರಾಜು, ಎಚ್.ಆರ್.ಹನುಮಂತರಾಯಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕೋಟ....1
ದೇಶದಲ್ಲಿ ಸಾಮಾಜಿಕ ನ್ಯಾಯದ ಆಧಾರದ ಮೇಲೆ ಎಲ್ಲ ವರ್ಗದ ಜನರಿಗೆ ಅವರ ಯೋಗ್ಯತೆಯ ಆಧಾರದ ಮೇಲೆ ಅಧಿಕಾರ ನೀಡಿರುವ ಪಕ್ಷವೆನ್ನಾದರೂ ಇದ್ದರೆ ಅದು ಕಾಂಗ್ರೆಸ್ ಮಾತ್ರ. ಓರ್ವ ಶಾಸಕರ ಪರ ಮಾತನಾಡಲು ಮತ್ತೊಬ್ಬ ಶಾಸಕರಿಲ್ಲದ ಅತ್ಯಂತ ಸಣ್ಣ ಸಣ್ಣ ಜಾತಿಗಳನ್ನು ಗುರುತಿಸಿ ಕಾಂಗ್ರೆಸ್ ಪಕ್ಷ ಮುಖ್ಯಮಂತ್ರಿ ಮಾಡಿದೆ. ದೇವರಾಜ ಅರಸು, ವೀರಪ್ಪಮೊಯಿಲಿ, ಧರ್ಮಸಿಂಗ್ ಮುಖ್ಯಮಂತ್ರಿಯಾದರು. ಅದೇ ಸಮಯದಲ್ಲಿ ಲಿಂಗಾಯಿತರು,ಒಕ್ಕಲಿಗರಿಗೂ ಮುಖ್ಯಮಂತ್ರಿಯನ್ನಾಗಿ ಮಾಡಿದೆ.
ಕೆ.ಎನ್. ರಾಜಣ್ಣ ಡಿಸಿಸಿ ಬ್ಯಾಂಕ್ ಅಧ್ಯಕ್ಷ
ಮಲ್ಲಣ್ಣರಿಂದ ಇಂದಿನ ಚಂದ್ರಶೇಖರಗೌಡರವರೆಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹುದ್ದೆಯನ್ನು ಅಲಂಕರಿಸಿದ ಎಲ್ಲರೂ ರಾಜಕೀಯವಾಗಿ ಬೆಳೆದವರೇ ಆಗಿದ್ದಾರೆ. ಕಾಡುಗೊಲ್ಲ ಸಮುದಾಯಕ್ಕೆ ಸೇರಿದ ಚಂದ್ರಶೇಖರಗೌಡ ಸಮಾಜ ಕಟ್ಟುವ ಜೊತೆಗೆ ಪಕ್ಷ ಸಂಘಟನೆಯತ್ತಲೂ ತೊಡಗುವ ಅಗತ್ಯವಿದೆ. ಕಾಂಗ್ರೆಸ್ ಮುಕ್ತ ಭಾರತ ಎನ್ನುತ್ತಿದ್ದ ಬಿಜೆಪಿಯವರಿಗೆ ಹಿಮಾಚಲಪ್ರದೇಶದ ಫಲಿತಾಂಶ ತಿರುಗೇಟು ನೀಡಿದೆ. ಕರ್ನಾಟಕದಲ್ಲಿಯೂ ಕನಿಷ್ಠ 130 ಸೀಟುಗಳನ್ನು ಗೆಲ್ಲಿಸಿಕೊಳ್ಳಲು ನಾವೆಲ್ಲರೂ ಹೋರಾಡಬೇಕಿದೆ.
ಟಿ.ಬಿ.ಜಯಚಂದ್ರ ಮಾಜಿ ಮಂತ್ರಿ