ಐತಿಹಾಸಿಕ ಲಕ್ಕುಂಡಿ ಉತ್ಸವಕ್ಕೆ 10ರಂದು ಸಿಎಂ ಚಾಲನೆ

By Kannadaprabha NewsFirst Published Feb 7, 2023, 11:38 AM IST
Highlights

ಫೆ. 10 ರಂದು ಆರಂಭಗೊಳ್ಳಲಿರುವ ಐತಿಹಾಸಿಕ ಲಕ್ಕುಂಡಿ ಉತ್ಸವವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದು, ಉತ್ಸವದ ಯಶಸ್ವಿಗಾಗಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ. ಪಾಟೀಲ ಹೇಳಿದರು.

ಗದಗ (ಫೆ.7) : ಫೆ. 10 ರಂದು ಆರಂಭಗೊಳ್ಳಲಿರುವ ಐತಿಹಾಸಿಕ ಲಕ್ಕುಂಡಿ ಉತ್ಸವವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದು, ಉತ್ಸವದ ಯಶಸ್ವಿಗಾಗಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ. ಪಾಟೀಲ ಹೇಳಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಉತ್ಸವದ ವಿವರ ನೀಡಿದ ಅವರು, 10 ರಿಂದ 12ರ ವರೆಗೆ ಮೂರು ದಿನಗಳ ಕಾಲ ಜರುಗಲಿರುವ ಲಕ್ಕುಂಡಿ ಉತ್ಸವದ ಯಶಸ್ವಿಗಾಗಿ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿವೆ ಎಂದರು.

'ಮಳೆ ಸಂಪಾದೀತಲೇ ಪರಾಕ್‌' : ಚಿಕ್ಕ ಮೈಲಾರದ ಕಾರ್ಣಿಕ ನುಡಿ

ಫೆ. 10 ರಂದು ಲಕ್ಕುಂಡಿ ಸರ್ಕಾರಿ ಮಾದರಿ ಪ್ರೌಢ ಶಾಲೆಯಲ್ಲಿ ಬೆಳಗ್ಗೆ 10ಕ್ಕೆ ರಾಜ್ಯದ ವಿವಿಧ ಜಿಲ್ಲೆ ಹಾಗೂ ಸ್ಥಳೀಯ ಕಲಾತಂಡಗಳಿಂದ 25ಕ್ಕೂ ಹೆಚ್ಚು ಕಲಾ ಪ್ರಕಾರಗಳ ಜಾನಪದ ಕಲಾವಾಹಿನಿಗಳ ಮೆರವಣಿಗೆ ಮೂಲಕ ಲಕ್ಕುಂಡಿ ಉತ್ಸವ ಪ್ರಾರಂಭವಾಗುವದು. ಅದೇ ದಿನ ಸಂಜೆ 6 ಗಂಟೆಗೆ ದಾನಚಿಂತಾಮಣಿ ಅತ್ತಿಮಬ್ಬೆ ಪ್ರಧಾನ ವೇದಿಕೆಯಲ್ಲಿ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ ಎಂದರು.

ಉತ್ಸವದ ಅಂಗವಾಗಿ ಲಕ್ಕುಂಡಿಯ ಬಿ.ಎಚ್‌. ಪಾಟೀಲ ಪ್ರೌಢಶಾಲೆ ಆವರಣದಲ್ಲಿ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಕ್ರೀಡಾ ಸ್ಪರ್ಧೆಗಳಿಗೆ ಬೆಳಗ್ಗೆ 10 ಕ್ಕೆ ಚಾಲನೆ ದೊರೆಯಲಿದೆ. ಕುಸ್ತಿ ಸ್ಪರ್ಧೆಗೆ ಲಕ್ಕುಂಡಿಯ ಅಂತಾರಾಷ್ಟ್ರೀಯ ಕುಸ್ತಿಪಟು ಪ್ರೇಮಾ ಹುಚ್ಚಣ್ಣವರ, ಕಬಡ್ಡಿ ಸ್ಪರ್ಧೆಗೆ ಅರ್ಜುನ ಪ್ರಶಸ್ತಿ ಪುರಸ್ಕೃತ ಅಂತಾರಾಷ್ಟ್ರೀಯ ಕಬಡ್ಡಿ ಕ್ರೀಡಾಪಟು ಡಾ.ಸಿ.ಹೊನ್ನಪ್ಪಗೌಡ ಚಾಲನೆ ನೀಡುವರು ಎಂದು ಹೇಳಿದರು.

ಗದಗ ಜಿಲ್ಲೆಯ ಪ್ರಮುಖವಾಗಿ ಲಕ್ಕುಂಡಿಯ ಐತಿಹಾಸಿಕ ಹಾಗೂ ಪಾರಂಪರಿಕ ಹಿನ್ನೆಲೆಯನ್ನು ಗಮನದಲ್ಲಿರಿಸಿಕೊಂಡು ವಿಶೇಷ ಲೇಸರ್‌ ಶೋ ಪ್ರದರ್ಶನ, ವಿವಿಧ ಕಲಾ ಪ್ರಕಾರಗಳ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ. ಲಕ್ಕುಂಡಿ ಗ್ರಾಮದ ಬಿ.ಎಚ್‌. ಪಾಟೀಲ ಪ್ರೌಢಶಾಲೆಯ ಆವರಣದಲ್ಲಿ ಫೆ. 10 ರಂದು ರಾತ್ರಿ 9 ಗಂಟೆಯಿಂದ ವೀರರಾಣಿ ಕಿತ್ತೂರು ಚೆನ್ನಮ್ಮ ನಾಟಕ ಪ್ರದರ್ಶನ ನಡೆಯಲಿದೆ. ನಾಟಕ ಪ್ರದರ್ಶನದಲ್ಲಿ 250ಕ್ಕೂ ಹೆಚ್ಚು ಕಲಾವಿದರು ಆನೆ, ಕುದುರೆ, ಒಂಟೆಗಳೊಂದಿಗೆ ನಾಟಕವು ಜನಮನ ರಂಜಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಫೆ. 11ರಂದು ರಾತ್ರಿ 10 ಗಂಟೆಗೆ ಖ್ಯಾತ ಗಾಯಕಿ ಅನನ್ಯ ಭಟ್‌ ಮತ್ತು ತಂಡದವರಿಂದ ರಸಮಂಜರಿ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿಯವರ ಮನ್‌ ಕಿ ಬಾತ್‌ ನಲ್ಲಿ ಮೆಚ್ಚುಗೆಗೆ ಪಾತ್ರವಾದ ಗದುಗಿನ ಕಾ.ವೆಂ.ಶ್ರೀ ತಂಡದಿಂದ ಯಕ್ಷಗಾನ, ಭಗವದ್ಗೀತೆ ರೂಪಕ ಮೂಡಿಬರಲಿದೆ. ಅತ್ತಿಮಬ್ಬೆ ನಾಟಕ, ಸರಿಗಮಪ ತಂಡದ ಜ್ಞಾನೇಶ, ಮೆಹಬೂಬಸಾಬ್‌ ಅವರಿಂದ ಜುಗಲ್‌ ಬಂದಿ, ಮಿಮಿಕ್ರಿ ಗೋಪಿ ಹಾಗೂ ಕಾರ್ತಿಕ ಪತ್ತಾರ ಅವರಿಂದ ಹಾಸ್ಯ ಕಾರ್ಯಕ್ರಮ, ಕ್ಲಾಸಿಕಲ್‌ ಇವೆಂಟ್‌, ದೀಪನೃತ್ಯ, ಜನಮನ ಸೆಳೆಯಲಿವೆ ಎಂದರು.

ಫೆ. 12 ರಂದು ಸಂಜೆ 4 ರಿಂದ ವಿವಿಧ ಕಲಾ ಪ್ರಕಾರಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಪ್ರಖ್ಯಾತ ಗಾಯಕ ಕುನಾಲ್‌ ಗಂಜಾವಾಲ ಅವರಿಂದ ರಸಮಂಜರಿ ಕಾರ್ಯಕ್ರಮ ಮೂಡಿಬರಲಿದೆ. ಕಾಮಿಡಿ ಕಿಲಾಡಿಗಳು ಖ್ಯಾತಿಯ ಉಮೇಶ ಕಿನ್ನಾಳ ಹಾಗೂ ತಂಡದಿಂದ ಹಾಸ್ಯ ಕಾರ್ಯಕ್ರಮ, ಪದ್ಮಶ್ರೀ ವೆಂಕಟೇಶ ಕುಮಾರ್‌ ಅವರಿಂದ ಹಿಂದೂಸ್ತಾನಿ ಸಂಗೀತ, ಕನ್ನಡದ ಪುಟಾಣಿ ಕೋಗಿಲೆ ಮಹನ್ಯಾ ಪಾಟೀಲ ಅವರಿಂದ ರಸಮಂಜರಿ ಕಾರ್ಯಕ್ರಮ, ಪ್ರಭಾತ ಕಲಾತಂಡದಿಂದ ನೃತ್ಯ ರೂಪಕ ಇದೆ. ತೋಟಗಾರಿಕೆ ಇಲಾಖೆಯಿಂದ ಫಲಪುಷ್ಪ ಪ್ರದರ್ಶನ ಸೇರಿದಂತೆ ವಿವಿಧ ಇಲಾಖೆಗಳ ಮಳಿಗೆಗಳನ್ನು ತೆರೆಯಲಾಗುವುದು. ಕೃಷಿ, ಮಹಿಳಾ, ಕೈಮಗ್ಗ, ನೈರ್ಮಲ್ಯ ಇಲಾಖೆಗಳ ಮಳಿಗೆಗಳು ಕಾರ್ಯನಿರ್ವಹಿಸಲಿವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್‌, ಜಿಪಂ ಸಿ.ಇ.ಓ. ಡಾ. ಸುಶೀಲಾ ಬಿ, ಎಸ್ಪಿ ಬಿ.ಎಸ್‌. ನೇಮಗೌಡ, ಡಿಎಫ್‌ಓ ದೀಪಿಕಾ ಬಾಜಪೇಯಿ, ಎಡಿಸಿ ಮಾರುತಿ ಎಂ.ಪಿ, ಎಸಿ ಅನ್ನಪೂರ್ಣ, ಸ್ಥಳೀಯ ಜನಪ್ರತಿನಿಧಿಗಳು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

12ರಂದು ಸಮಾರೋಪ:

ಫೆ. 12ರ ಸಂಜೆ 5.30 ಗಂಟೆಗೆ ಸಮಾರೋಪ ಸಮಾರಂಭ ಜರುಗಲಿದ್ದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ, ಸಚಿವರುಗಳಾದ ಬಿ.ಸಿ. ಪಾಟೀಲ, ಗೋವಿಂದ ಕಾರಜೋಳ, ಬಿ. ಶ್ರೀರಾಮುಲು, ಬೈರತಿ ಬಸವರಾಜ ಭಾಗವಹಿಸುವರು. ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್‌ ಸಮಾರೋಪ ನುಡಿಗಳನ್ನಾಡುವರು.

 

ಲಕ್ಕುಂಡಿ ಉತ್ಸವ-2023: ಸಚಿವ ಸಿ.ಸಿ.ಪಾಟೀಲರಿಂದ ಲೋಗೋ, ಪ್ರೋಮೊ ಬಿಡುಗಡೆ

ಉಚಿತ ಸಾರಿಗೆ ವ್ಯವಸ್ಥೆ:

ಗದಗ ನಗರದಿಂದ ಲಕ್ಕುಂಡಿ ಉತ್ಸವಕ್ಕೆ ಆಗಮಿಸುವ ಸಾರ್ವಜನಿಕರೆಲ್ಲರಿಗೂ ಉಚಿತ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ವಾಯವ್ಯ ಸಾರಿಗೆಯ 10 ಬಸ್ಸುಗಳು ಗದಗ ಹೊಸ ಹಾಗೂ ಹಳೆಯ ಬಸ್‌ ನಿಲ್ದಾಣಗಳಿಂದ ನಿರಂತರವಾಗಿ ಸಂಚರಿಸಲಿವೆ.

click me!