ಸಿಎಂಗೆ ಶಿಕಾರಿಪುರ ಅಭಿವೃದ್ದಿ ಉತ್ತುಂಗಕ್ಕೆ ಕೊಂಡೊಯ್ಯುವಾಸೆ: ಸಂಸದ ರಾಘವೇಂದ್ರ

Kannadaprabha News   | Asianet News
Published : Jun 29, 2020, 12:26 PM ISTUpdated : Jun 29, 2020, 12:35 PM IST
ಸಿಎಂಗೆ ಶಿಕಾರಿಪುರ ಅಭಿವೃದ್ದಿ ಉತ್ತುಂಗಕ್ಕೆ ಕೊಂಡೊಯ್ಯುವಾಸೆ: ಸಂಸದ ರಾಘವೇಂದ್ರ

ಸಾರಾಂಶ

ಪಟ್ಟಣದ ಸರ್ವತೋಮುಖ ಅಭಿವೃದ್ಧಿಯ ವಿಷಯದಲ್ಲಿ ರಾಜಿ-ಸಂಧಾನಕ್ಕೆ ಅವಕಾಶವಿಲ್ಲದ ರೀತಿಯಲ್ಲಿ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿದೆ. ಮುಖ್ಯಮಂತ್ರಿಗಳ ಸ್ವಕ್ಷೇತ್ರವಾಗಿ ರಾಜ್ಯದಲ್ಲಿ ವಿಶೇಷವಾಗಿ ಗುರುತಿಸಿಕೊಂಡಿರುವ ಶಿಕಾರಿಪುರವನ್ನು ಅಭಿವೃದ್ಧಿಯ ಉತ್ತುಂಗಕ್ಕೆ ಕೊಂಡೊಯ್ಯುವ ಮಹದಾಸೆಯನ್ನು ಮುಖ್ಯಮಂತ್ರಿಗಳು ಹೊಂದಿದ್ದಾರೆ ಎಂದು ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಹೇಳಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಶಿಕಾರಿಪುರ(ಜೂ.29): ಮುಖ್ಯಮಂತ್ರಿಗಳ ಸ್ವಕ್ಷೇತ್ರವಾಗಿ ರಾಜ್ಯದಲ್ಲಿ ವಿಶೇಷವಾಗಿ ಗುರುತಿಸಿಕೊಂಡಿರುವ ಶಿಕಾರಿಪುರವನ್ನು ಅಭಿವೃದ್ಧಿಯ ಉತ್ತುಂಗಕ್ಕೆ ಕೊಂಡೊಯ್ಯುವ ಮಹದಾಸೆಯನ್ನು ಮುಖ್ಯಮಂತ್ರಿಗಳು ಹೊಂದಿದ್ದು, ಈ ದಿಸೆಯಲ್ಲಿ ಪಟ್ಟಣವನ್ನು ಅತ್ಯಂತ ವಿಶಿಷ್ಟ ಹಾಗೂ ಸುಂದರ ನಗರವಾಗಿಸುವ ಜತೆಗೆ ಸಕಲ ಸೌಲಭ್ಯವನ್ನು ಜನತೆಗೆ ಕಲ್ಪಿಸುವ ಗುರಿಯನ್ನು ಹೊಂದಲಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದರು.

ಪಟ್ಟಣದ ಶಿರಾಳಕೊಪ್ಪ ವೃತ್ತದಲ್ಲಿ 6 ಕಿ.ಮೀ ಉದ್ದದ ರಸ್ತೆ ವಿಭಜಕಕ್ಕೆ ಅಲಂಕಾರಿಕ ವಿದ್ಯುತ್‌ ದೀಪ ಅಳವಡಿಸುವ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.

ತಾಲೂಕಿನ ರೈತ ವರ್ಗಕ್ಕೆ ಶಾಶ್ವತ ನೀರಾವರಿ ಕಲ್ಪಿಸಲು ಈಗಾಗಲೇ ಏತ ನೀರಾವರಿ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಸುಂದರ ಟ್ರೀಪಾರ್ಕ ನಿರ್ಮಾಣ ಮತ್ತಿತರ ಹಲವು ಕಾಮಗಾರಿಗೆ ವೇಗದ ಚಾಲನೆ ನೀಡಲಾಗಿದೆ ಎಂದು ಅವರು ತಿಳಿಸಿದರು.

ಪಟ್ಟಣದ ಸರ್ವತೋಮುಖ ಅಭಿವೃದ್ಧಿಯ ವಿಷಯದಲ್ಲಿ ರಾಜಿ-ಸಂಧಾನಕ್ಕೆ ಅವಕಾಶವಿಲ್ಲದ ರೀತಿಯಲ್ಲಿ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿದೆ. ಈ ದಿಸೆಯಲ್ಲಿ ಶಿವಮೊಗ್ಗ ಮುಖ್ಯ ರಸ್ತೆಯ ಕುಮದ್ವತಿ ಕಾಲೇಜಿನಿಂದ ಕುಮದ್ವತಿ ನದಿವರೆಗೆ ಹಾಗೂ ಸಾಲೂರು ಮುಖ್ಯ ರಸ್ತೆಯಲ್ಲಿನ ರಸ್ತೆ ವಿಭಜಕಗಳಿಗೆ ಅಲಂಕಾರಿಕ ವಿದ್ಯುತ್‌ ದೀಪ ಅಳವಡಿಸುವ 6 ಕಿ.ಮೀ ಉದ್ದದ ಸುಂದರ, ಪಟ್ಟಣದ ಸೌಂದರ‍್ಯ ವೃದ್ಧಿಸುವ ಕಾಮಗಾರಿಗೆ ಸರ್ಕಾರ 5.5 ಕೋಟಿ ಅನುದಾನ ಬಿಡುಗಡೆಗೊಳಿಸಿದ್ದು ಇದೀಗ ಹೆಚ್ಚುವರಿಯಾಗಿ 2 ಕೋಟಿ ಬಿಡುಗಡೆಗೊಳಿಸಿದೆ ಎಂದು ತಿಳಿಸಿದರು.

ಪಟ್ಟಣದ ಕರ್ನಾಟಕ ವಸತಿ ನಿಗಮದ ನಿವೇಶನದ ಬಳಿ ಕೋಟ್ಯಂತರ ವೆಚ್ಚದಲ್ಲಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ನಿರ್ಮಾಣ ಕಾಮಗಾರಿ ಭರದಿಂದ ಸಾಗಿದ್ದು, 60 ಹಾಸಿಗೆಯ ಆಸ್ಪತ್ರೆಗೆ ಸಲ್ಲಿಸಿದ ಮನವಿಗೆ ಸರ್ಕಾರ 100 ಹಾಸಿಗೆ ನಿರ್ಮಾಣಕ್ಕೆ ಹೆಚ್ಚುವರಿ ಅನುದಾನ ನೀಡಲು ಮುಂದಾಗಿದೆ. ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ 150 ಹಾಸಿಗೆ ಸಾಮರ್ಥ್ಯದಿಂದ 250 ಹಾಸಿಗೆ ಸಾಮರ್ಥ್ಯಕ್ಕೆ ಹೆಚ್ಚಳಕ್ಕೆ ಪೂರಕವಾಗಿ ಕಟ್ಟಡ ನಿರ್ಮಾಣಕ್ಕೆ ಸರ್ಕಾರ ಅನುಮತಿಯನ್ನು ನೀಡಿದೆ ಎಂದು ತಿಳಿಸಿದರು.

ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿನ ಪುರಸಭೆಯ ತಾತ್ಕಾಲಿಕ ಕಟ್ಟಡ ಮಳಿಗೆಯನ್ನು ನೆಲಸಮಗೊಳಿಸಿ ಹೊಸ ಸುಂದರ ಬಸ್‌ ನಿಲ್ದಾಣ ಕಾಮಗಾರಿಗೆ ವೇಗದ ಚಾಲನೆ ನೀಡಲಾಗಿದೆ. ಪಟ್ಟಣ ಹೊರವಲಯ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಬಳಿಯಲ್ಲಿನ ವಿಶಾಲ ಜಾಗದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಡಿಪೋ ಕಾಮಗಾರಿಗೆ ಸರ್ಕಾರದಿಂದ ಅನುದಾನ ಬಿಡುಗಡೆಗೊಂಡಿದ್ದು, ಶೀಘ್ರ ಕಾಮಗಾರಿ ಆರಂಭಿಸಿ ವರ್ಷದ ಅವಧಿಯಲ್ಲಿ ಪೂರ್ಣಗೊಳಿಸುವ ಸಂಕಲ್ಪವನ್ನು ಹೊಂದಲಾಗಿದೆ ಎಂದು ತಿಳಿಸಿದರು.

ಶಿಕಾರಿಪುರ ತಾಲೂಕು ಮಾದರಿಯಾಗಿಸುವ ಬಹು ದೊಡ್ಡ ಆಕಾಂಕ್ಷೆಯನ್ನು ಮುಖ್ಯಮಂತ್ರಿಗಳು ಹೊಂದಿದ್ದು, ಎಲ್ಲ ರೀತಿಯಲ್ಲಿ ಬೆಂಬಲಿಸಿದ ತಾಲೂಕಿನ ಜನತೆಗೆ ಸಕಲ ಸೌಲಭ್ಯವನ್ನು ಕಲ್ಪಿಸಲು ಮುಖ್ಯಮಂತ್ರಿಗಳು ಉತ್ಸುಕರಾಗಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿ.ಪಂ. ಸದಸ್ಯೆ ಮಮತಾ ಸಾಲಿ, ತಾಪಂ ಉಪಾಧ್ಯಕ್ಷೆ ಪ್ರೇಮಾ, ಪುರಸಭಾ ಸದಸ್ಯ ನಾಗರಾಜಗೌಡ, ಉಳ್ಳಿ ದರ್ಶನ್‌, ಪ್ರಶಾಂತ್‌ ಜೀನಳ್ಳಿ, ಪ್ರಕಾಶ್‌ ಗೋಣಿ, ರೇಣುಕಸ್ವಾಮಿ, ಪಾಲಾಕ್ಷಪ್ಪ, ರೂಪಕಲಾ ಹೆಗ್ಡೆ, ಮುಖ್ಯಾಧಿಕಾರಿ ಸುರೇಶ್‌, ಮುಖಂಡ ಚನ್ನವೀರಪ್ಪ, ಗುರುರಾಜ ಜಗತಾಪ್‌, ರುದ್ರಮುನಿ, ದೇವೇಂದ್ರಪ್ಪ ಬೆಣ್ಣೆ, ಗಜೇಂದ್ರ, ಮಂಜುಸಿಂಗ್‌, ರವೀಂದ್ರ ದೂಪದಹಳ್ಳಿ, ಮಹಾಲಿಂಗ ಮತ್ತಿತರರು ಹಾಜರಿದ್ದರು.
 

PREV
click me!

Recommended Stories

ತುಮಕೂರಿನಲ್ಲಿ ಉದ್ಯಮಿಗೆ ಲಂಚಕ್ಕೆ ಬೇಡಿಕೆ; ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!
ಮಂಡ್ಯಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ರಾಜಕೀಯ ಹೊಸ ದಾಳ ಉರುಳಿಸಿದ ದಳಪತಿ!