ಇಂದು ಬಸವನಗುಡಿ ಕಡಲೆಕಾಯಿ ಪರಿಷೆ, ಬಸವ ಮೂರ್ತಿಗೆ ಕಡಲೆಕಾಯಿ ತುಲಾಭಾರ!

By Web DeskFirst Published Nov 25, 2019, 7:43 AM IST
Highlights

ಇಂದು ಬಸವನಗುಡಿ ಕಡಲೆಕಾಯಿ ಪರಿಷೆ| ಬೆಳಗ್ಗೆ 9.30ಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಂದ ಅಧಿಕೃತ ಚಾಲನೆ| ಬಸವನ ಮೂರ್ತಿಗೆ ಕಾಡಲೆಕಾಯಿಯ ತುಲಾಭಾರ| ಸಂಜೆ 6ರಿಂದ 10ರವರೆಗೆ ಸಾಂಸ್ಕೃತಿಕ ಕಾರ‍್ಯಕ್ರಮ| ಸ್ವಚ್ಛತೆಗಾಗಿ 200 ಪೌರ ಕಾರ್ಮಿಕರ ನೇಮಕ| ಪ್ಲಾಸ್ಟಿಕ್‌ ಮುಕ್ತ ಪರಿಷೆಗೆ ಜಾಗೃತಿ

ಬೆಂಗಳೂರು[ನ.25]: ಎಲ್ಲೆಡೆ ಹರಡಿರುವ ಕಡಲೆಕಾಯಿ ಘಮಲು, ರಸ್ತೆಯ ಇಕ್ಕೆಲಗಳಲ್ಲಿ ಬೀಡುಬಿಟ್ಟನೂರಾರು ವ್ಯಾಪಾರಿಗಳು, ಬಗೆ ಬಗೆಯ ಗಾತ್ರದ ಹಸಿಕಡಲೆಕಾಯಿ, ಹುರಿದ ಕಡಲೆಕಾಯಿ ಖರೀದಿಗೆ ಮುಂದಾಗಿರುವ ನಗರವಾಸಿಗಳು, ಸಿಂಗಾರಗೊಂಡು ಆಕರ್ಷಿಸುತ್ತಿರುವ ದೊಡ್ಡಗಣಪತಿ ದೇವಾಲಯ, ಕಣ್ಣು ಹಾಯಿಸಿದ ಕಡೆಗಳಲ್ಲಿ ರಾಶಿ ರಾಶಿ ಕಡಲೆಕಾಯಿ ಸೊಬಗಿಗೆ ಜಾತ್ರೆಯ ವಾತಾವರಣ.

ರಾಜಧಾನಿಯ ಐತಿಹಾಸಿಕ ಬಸವನಗುಡಿ ಕಡಲೆಕಾಯಿ ಪರಿಷೆ ಇದೇ ಸೋಮವಾರ ಮತ್ತು ಮಂಗಳವಾರ (ನ.25 ಮತ್ತು 26ರಂದು) ಆರಂಭವಾಗಲಿದ್ದು, ಪರಿಷೆಗೆ ಮೊದಲೇ ಬಸವನಗುಡಿ ಸುತ್ತ ಮುತ್ತ ಕಂಡುಬಂದ ದೃಶ್ಯಗಳಿವು. ಕಾರ್ತಿಕ ಮಾಸದ ಕೊನೆಯ ಸೋಮವಾರ (ನ.25) ಬೆಳಗ್ಗೆ 9.30ಕ್ಕೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಅಧಿಕೃತವಾಗಿ ಪರಿಷೆಗೆ ಚಾಲನೆ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉಪಮುಖ್ಯಮಂತ್ರಿ ಡಾ.ಸಿ.ಎಸ್‌.ಅಶ್ವತ್ಥ ನಾರಾಯಣ್‌, ಸಚಿವ ಆರ್‌.ಅಶೋಕ್‌, ಶಾಸಕ ರವಿಸುಬ್ರಹ್ಮಣ್ಯ, ಮೇಯರ್‌ ಗೌತಮ್‌ಕುಮಾರ್‌ ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದಾರೆ.

ನ.25ರ ಬೆಳಗ್ಗೆ 6ರಿಂದಲೇ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ಹೂವಿನ ಅಲಂಕಾರ, ಎಣ್ಣೆ ಮರ್ಜನ ಹಾಗೂ ಐದು ಮೂಟೆಗಳಷ್ಟುಕಡಲೆಕಾಯಿ ಅಭಿಷೇಕ ನಡೆಯಲಿದೆ. 40 ಕೆ.ಜಿ. ತೂಕದ ಬಸವಣ್ಣನ ಮೂರ್ತಿಗೆ ಕಡಲೆಕಾಯಿಯ ತುಲಾಭಾರ ನೆರವೇರಲಿದೆ. ಪ್ರತಿ ದಿನ ಸಂಜೆ 6ರಿಂದ 10ರವರೆಗೆ ದೊಡ್ಡಗಣಪತಿ ದೇವಸ್ಥಾನದ ಬಳಿ ಇರುವ ಉದ್ಯಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ದೇವಸ್ಥಾನ ಮಂಡಳಿ ಪರಿಷೆಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದರೆ, ಈಗಾಗಲೇ ದೇವಸ್ಥಾನದ ಸುತ್ತಮುತ್ತಲ ರಸ್ತೆಗಳಲ್ಲಿ ವ್ಯಾಪಾರ- ವಹಿವಾಟು ಜೋರಾಗಿ ನಡೆಯುತ್ತಿದೆ. ಆಂಧ್ರ, ತಮಿಳುನಾಡು, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ ಭಾಗಗಳಿಂದ ಬಂದ ನೂರಾರು ರೈತರು ಹಾಗೂ ಕಡಲೆಕಾಯಿ ವ್ಯಾಪಾರಿಗಳು, ತಿಂಡಿ ತಿನಿಸುಗಳು, ಮಕ್ಕಳ ಆಟದ ಸಾಮಾನು, ಪೂಜೆ ಸಾಮಾನುಗಳ ವ್ಯಾಪಾರಿಗಳು ದೊಡ್ಡಗಣೇಶ ದೇವಸ್ಥಾನ ರಸ್ತೆ ಪಾದಚಾರಿ ಮಾರ್ಗದಲ್ಲಿ ತಮ್ಮ ಮಳಿಗೆಗಳನ್ನು ಹಾಕಿದ್ದಾರೆ. ಹೀಗಾಗಿಯೇ ದೊಡ್ಡಗಣೇಶ ದೇವಸ್ಥಾನದ ಸುತ್ತಮುತ್ತಲ ರಸ್ತೆಯಲ್ಲಿ ಜಾತ್ರೆಯ ವಾತಾವರಣ ನಿರ್ಮಾಣವಾಗಿದೆ. ಹುರಿದ ಹಾಗೂ ಹಸಿ ಕಡಲೆಕಾಯಿ ಗುಣಮಟ್ಟದ ಆಧಾರದ ಮೇಲೆ ಸೇರಿಗೆ .25ರಿಂದ .30 ಹಾಗೂ ಒಂದೂವರೆ ಹಾಗೂ ಎರಡು ಕೆ.ಜಿ.ಗೆ .100 ನಂತೆ ಮಾರುತ್ತಿದ್ದಾರೆ.

ಪರಿಷೆಗೆ ಸುಮಾರು ಮೂರು ಲಕ್ಷಕ್ಕೂ ಹೆಚ್ಚು ಜನರು ಆಗಮಿಸುವ ನಿರೀಕ್ಷೆ ಇದ್ದು, ಅದಕ್ಕನುಗುಣವಾಗಿ ಯಾವುದೇ ರೀತಿಯ ಅವಘಡಗಳು ಸಂಭವಿಸದಂತೆ ಎಚ್ಚರವಹಿಸಲು ಬಿಗಿ ಪೊಲೀಸ್‌ ಬಂದೋಬÓ್ತ… ವ್ಯವಸ್ಥೆ ಮಾಡಲಾಗಿದೆ. ಕಡಲೆಕಾಯಿ ಪರಿಷೆಯಲ್ಲಿ ಸ್ವಚ್ಛತೆ ಕಾಪಾಡಲು ಪಾಲಿಕೆ 200 ಪೌರಕಾರ್ಮಿಕರನ್ನು ನಿಯೋಜಿಸಿದೆ. ಸೋಮವಾರ ಮತ್ತು ಮಂಗಳವಾರ ಪೌರಕಾರ್ಮಿಕರು ಸ್ವಚ್ಛತೆ ಕಾರ್ಯ ನಡೆಸಲಿದ್ದಾರೆ.

ಪ್ಲಾಸ್ಟಿಕ್‌ ಮುಕ್ತ ಪರಿಷೆಗೆ ಕ್ರಮ:

ಪ್ಲಾಸ್ಟಿಕ್‌ ಮುಕ್ತ ಪರಿಷೆ ಮಾಡುವ ನಿಟ್ಟಿನಲ್ಲಿ ದೇವಸ್ಥಾನ ಆಡಳಿತ ಮಂಡಳಿ, ಸ್ಥಳೀಯ ಶಾಸಕರು, ಬಿಬಿಎಂಪಿ ಸದಸ್ಯರು, ಅಧಿಕಾರಿಗಳು ಸಾರ್ವಜನಿಕರಲ್ಲಿ ಅಗತ್ಯ ಜಾಗೃತಿ ಮೂಡಿಸುತ್ತಿದ್ದಾರೆ. ವ್ಯಾಪಾರ ಮಳಿಗೆಗಳಲ್ಲಿ ಪ್ಲಾಸ್ಟಿಕ್‌ ಕವರ್‌ ಬಳಸದಂತೆ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ. ಹೀಗಾಗಿ ಪರಿಷೆಗೆ ಬರುವವರು ಮನೆಯಿಂದಲೇ ಕೈಚೀಲವನ್ನು ತಂದು ತಮಗೆ ಬೇಕಾದ ಕಡ್ಲೆಕಾಯಿ ಹಾಗೂ ಇತರೆ ಸಾಮಾಗ್ರಿಗಳನ್ನು ಖರೀದಿಸಬಹುದು. ಈಗಾಗಲೇ ಕಾಲೇಜು ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳು ಬಟ್ಟೆಬ್ಯಾಗ್‌ಗಳನ್ನು ಹಂಚಲು ಸಿದ್ಧತೆ ನಡೆಸಿದ್ದಾರೆ.

ಕಸ ಗುಡಿಸುವ ಯಂತ್ರಕ್ಕೆ ಚಾಲನೆ

ಈ ಬಾರಿ ಪರಿಷೆಗೆ ಕಸ ಗುಡಿಸುವ ಯಂತ್ರವೂ ಬಂದಿದೆ. ಖಾಸಗಿ ಸಂಸ್ಥೆಯೊಂದು ರಸ್ತೆ ಸ್ವಚ್ಛತೆಗಾಗಿ ಯಂತ್ರವೊಂದನ್ನು ಕಂಡು ಹಿಡಿದಿದೆ. ಈ ಯಂತ್ರವನ್ನು ಪೌರಕಾರ್ಮಿಕರೊಬ್ಬರು ರಸ್ತೆಯಲ್ಲಿ ತಳ್ಳುಗಾಡಿಯಂತೆ ತಳ್ಳುತ್ತಾ ಹೋದರೆ ಸಾಕು ರಸ್ತೆಯಲ್ಲಿ ಬಿದ್ದಿರುವ ಪ್ಲಾಸ್ಟಿಕ್‌ ಮತ್ತಿತರ ಕಸವನ್ನು ತೆಗೆದು ತನ್ನ ಡಬ್ಬಿಗೆ ಹಾಕಿಕೊಳ್ಳುತ್ತದೆ. ಇದಕ್ಕೆ ಭಾನುವಾರ ಚಾಲನೆ ನೀಡಲಾಯಿತು. ಪರಿಷೆಯಲ್ಲಿ ಡಸ್ಟ್‌ಬಿನ್‌ಗಳನ್ನು ಇಡುವಂತೆ ಬಿಬಿಎಂಪಿಯನ್ನು ಕೋರಿದ್ದೆವು. ರಸ್ತೆಯ ಇಕ್ಕೆಲಗಳಲ್ಲಿ ಡಸ್ಟ್‌ಬಿನ್‌ಗಳನ್ನು ಇಡಲು ತೀವ್ರ ಸಮಸ್ಯೆಯಾಗಿದೆ ಎಂದು ಪರಿಸರವಾದಿ ಡಿ.ವಿ.ಆನಂದ್‌ ತಿಳಿಸಿದರು.

ವಾಹನ ಸಂಚಾರ ನಿಷೇಧ

ಕಡಲೆಕಾಯಿ ಪರಿಷೆಗಾಗಿ ರಾಮಕೃಷ್ಣ ಆಶ್ರಮ ಸರ್ಕಲ್‌ನಿಂದ ಎನ್‌.ಆರ್‌.ಕಾಲೋನಿ, ಗಣೇಶ್‌ಭವನದವರೆಗೂ ವ್ಯಾಪಾರಿಗಳು ಮಳಿಗೆ ಹಾಕಿದ್ದಾರೆ. ಇದರಿಂದ ಆಶ್ರಮ ಸರ್ಕಲ್‌ನಿಂದ ಬಸವನಗುಡಿ ರಸ್ತೆಯ ಕಡೆಗೆ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಅಲ್ಲಿಂದ ಹೋಗುವ ಎಲ್ಲ ವಾಹನಗಳು ಹನುಮಂತನಗರದ ಮೂಲಕ ಸಾಗುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ.

click me!