ಇಂದಿರಾ ಕ್ಯಾಂಟೀನ್‌ ಆಹಾರದ ಬಗ್ಗೆ ತನಿಖೆಗೆ ಆದೇಶ

By Web DeskFirst Published Aug 27, 2019, 7:59 AM IST
Highlights

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ‘ಇಂದಿರಾ ಕ್ಯಾಂಟೀನ್‌’ಗಳ ಆಹಾರ ಪೂರೈಕೆ ಗುತ್ತಿಗೆ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಆದೇಶಿಸಿದ್ದಾರೆ. 

ಬೆಂಗಳೂರು [ಆ.27]: ಅವ್ಯವಹಾರದ ಆರೋಪದ ಹಿನ್ನೆಲೆಯಲ್ಲಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ‘ಇಂದಿರಾ ಕ್ಯಾಂಟೀನ್‌’ಗಳ ಆಹಾರ ಪೂರೈಕೆ ಗುತ್ತಿಗೆ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಆದೇಶಿಸಿದ್ದಾರೆ. ಕಾಂಗ್ರೆಸ್‌ ಸರ್ಕಾರದ ಬಹುಮುಖ್ಯ ಯೋಜನೆ ಇದಾಗಿದೆ. ಆದೇಶ ಹೊರಬಿದ್ದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ನಾಯಕರಿಗೆ ತಲೆನೋವು ಆರಂಭವಾಗಿದೆ ಎನ್ನಲಾಗುತ್ತಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ 174 ಇಂದಿರಾ ಕ್ಯಾಂಟೀನ್‌ಗಳು ಮತ್ತು 15 ಮೊಬೈಲ್‌ ಕ್ಯಾಂಟೀನ್‌ಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳ ಮೂಲಕ ಪ್ರತಿ ತಿಂಗಳು 62.70 ಲಕ್ಷ ಮಂದಿಗೆ ಬೆಳಗಿನ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟವನ್ನು ಪೂರೈಸಲಾಗುತ್ತಿದೆ ಎಂಬ ಮಾಹಿತಿಯಯನ್ನು ಸರ್ಕಾರಕ್ಕೆ ನೀಡಿ ಅಪಾರ ಮೊತ್ತದ ಸಬ್ಸಿಡಿಯನ್ನು ಪಡೆಯಲಾಗುತ್ತಿದೆ ಎಂಬ ವಿಷಯ ಗೊತ್ತಾಗಿದೆ ಎಂದು ಮುಖ್ಯಮಂತ್ರಿಗಳು ಆದೇಶದಲ್ಲಿ ಹೇಳಿದ್ದಾರೆ.

ಇಂದಿರಾ ಕ್ಯಾಂಟೀನ್‌ಗಳನ್ನು ನಿರ್ವಹಿಸುತ್ತಿರುವ ಶೆಫ್‌ಟಾಕ್‌ ಹಾಗೂ ರಿವಾರ್ಡ್ಸ್ ಗುತ್ತಿಗೆ ಸಂಸ್ಥೆಗಳು 6.82 ಕೋಟಿ ರು. ಗಳನ್ನು ಸಬ್ಸಿಡಿ ರೂಪದಲ್ಲಿ ಪಡೆದಿವೆ. ವಾಸ್ತವವಾಗಿ ಈ ಅಂಕಿ ಅಂಶಗಳು ತಪ್ಪು ಮಾಹಿತಿಯಿಂದ ಕೂಡಿದ್ದು, ಆಪಾರ ಪ್ರಮಾಣದ ಸಬ್ಸಿಡಿಯನ್ನು ವಂಚಿಸಲಾಗುತ್ತಿದೆ ಎಂಬ ದೂರುಗಳು ಬಂದಿವೆ. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಈ ಆರೋಪದ ಕುರಿತು ಪರಿಶೀಲಿಸಿ ತನಿಖಾ ವರದಿಯನ್ನು ಸಲ್ಲಿಸುವಂತೆ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಿಗೆ ಮುಖ್ಯಮಂತ್ರಿಗಳು ನಿರ್ದೇಶಿಸಿದ್ದಾರೆ.

click me!