* ಬಿಎಸ್‌ವೈ ಪ್ರವಾಸಕ್ಕೆ ಯಾವುದೇ ಅಡ್ಡಿ ಇಲ್ಲ
* ಈ ಕುರಿತು ಈಗಾಗಲೇ ಸ್ಪಷ್ಟನೆ ನೀಡಿರುವ ಅರುಣ್ ಸಿಂಗ್
* ಸರ್ಕಾರ ಟೇಕ್ ಆಫ್ ಆಗಿ ಬಹಳ ದಿನ ಆಗಿದೆ
ಬೆಳಗಾವಿ(ಸೆ.27): ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ(BS Yediyurappa) ಅವರ ರಾಜ್ಯ ಪ್ರವಾಸಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಎಸ್‌ವೈ ರಾಜ್ಯ ಪ್ರವಾಸಕ್ಕೆ ಹೈಕಮಾಂಡ್ ಬ್ರೇಕ್ ಹಾಕಿದೆ ಎನ್ನಲಾದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ ಸಿಂಗ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಬಿಎಸ್‌ವೈ ರಾಜ್ಯ ಪ್ರವಾಸಕ್ಕೆ ಯಾವುದೇ ತೊಂದರೆ ಇಲ್ಲ ಅಂತ ಹೇಳಿದ್ದಾರೆ. ಅದಕ್ಕಿಂತ ಹೆಚ್ಚು ಏನೂ ಹೇಳಲ್ಲ ಎಂದರು.
ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಅ.1ರಂದು ಜಯಮೃತ್ಯುಂಜಯ ಸ್ವಾಮೀಜಿ ಪ್ರತಿಭಟನೆಗೆ ನಿರ್ಧರಿಸಿರುವುದಕ್ಕೆ ಪ್ರತಿಕ್ರಿಯಿಸಿದ ಸಿಎಂ, ನಾನು ಸ್ವಾಮೀಜಿ ಜೊತೆ ನಿರಂತರ ಸಂಪರ್ಕದಲ್ಲಿದ್ದೇನೆ. ಹಿಂದುಳಿದ ವರ್ಗಗಳ ಆಯೋಗ ವರದಿ ಬಂದ ಮೇಲೆ ಕ್ರಮವಹಿಸುತ್ತೇನೆ. ಅದರ ಪ್ರಗತಿ ಬಗ್ಗೆ ತಿಳಿದುಕೊಂಡು ಮಾತನಾಡುತ್ತೇನೆ. ಶ್ರೀಗಳ ಜೆತೆಗೆ ಫೋನ್‌ನಲ್ಲಿ ಮಾತನಾಡ್ತೇನೆ. ಸಮಸ್ಯೆಗಳನ್ನು ಎಲ್ಲರೂ ಸೇರಿ ಬಗೆಹರಿಸಬೇಕಿದೆ. ಕಿತ್ತೂರು ಕರ್ನಾಟಕ ಘೋಷಣೆ ಬಗ್ಗೆ ಮುಂದಿನ ದಿನಗಳಲ್ಲಿ ಚಿಂತನೆ ಮಾಡುವುದಾಗಿ ತಿಳಿಸಿದರು.
ಉತ್ತರ ಕರ್ನಾಟಕದ ಅಭಿವೃದ್ಧಿಯತ್ತ ಸಿಎಂ ಚಿತ್ತ: ಬೆಳಗಾವಿ ಸೌಧಕ್ಕೆ ಸರ್ಕಾರ ನವಶಕ್ತಿ..!
ರಾಜ್ಯದ ಎಲ್ಲ ಕಡೆ ಮಕ್ಕಳಲ್ಲಿ ಜ್ವರ ಕಾಣಿಸುತ್ತಿದೆ. ಮಕ್ಕಳಿಗೆ ಫೀವರ ಇರುವುದರಿಂದ ಜಿಲ್ಲಾಸ್ಪತ್ರೆಗಳಲ್ಲಿ ತಪಾಸಣೆ ಮಾಡಲು ಸೂಚಿಸಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ತಪಾಸಣೆ ಹಾಗೂ ಆರೋಗ್ಯ ಶಿಬಿರ ಆಯೋಜನೆಗೆ ನಿರ್ದೇಶನ ನೀಡಲಾಗಿದೆ ಎಂದರು.
ಜಾರಕಿಹೊಳಿ ಸಹೋದರರು ಬರುವುದಿಲ್ಲ ಎಂದಿದ್ದಾರೆ:
ಜಾರಕಿಹೊಳಿ ಸಹೋದರರು ನನ್ನಿಂದ ಅಂತರ ಕಾಯ್ದುಕೊಳ್ಳುತ್ತಿರುವುದು ಅದೇನು ಸಮಸ್ಯೆ ಇಲ್ಲ, ಬರಲ್ಲ ಅಂತಾ ಈಗಾಗಲೇ ತಿಳಿಸಿದ್ದಾರೆ. ಕ್ಷೇತ್ರದ ಅಭಿವೃದ್ಧಿ ವಿಚಾರವಾಗಿ ಬಾಲಚಂದ್ರ ಜಾರಕಿಹೊಳಿ ಪತ್ರ ಬರೆದಿದ್ದಾರೆ. ಗಡಿ ಸಂರಕ್ಷಣಾ ಆಯೋಗವನ್ನು ಶಕ್ತಿಶಾಲಿ ಮಾಡುತ್ತೇವೆ. ಬೊಮ್ಮಾಯಿ ಸರ್ಕಾರ ಟೇಕ್‌ಆಫ್‌ಆಗಿಲ್ಲ ಎಂಬ ಕಾಂಗ್ರೆಸ್ ಆರೋಪಕ್ಕೆ ತಿರುಗೇಟು ನೀಡಿದ ಅವರು, ಎಲ್ಲರೂ ಟೇಕ್ ಆಫ್‌ಆ ಗಿದೆ ಅಂತಾ ಹೇಳುತ್ತಿದ್ದಾರೆ. ಜನಸಾಮಾನ್ಯರ ಧ್ವನಿ ತುಂಬಾ ಮುಖ್ಯ. ಜನ ಸ್ಪಂದಿಸದಿದ್ದರಿಂದ ಜನರಲ್ಲಿ ವಿಶ್ವಾಸ ಮೂಡಿದೆ. ಸರ್ಕಾರ ಟೇಕ್‌ಆಫ್ ಆಗಿ ಬಹಳ ದಿನ ಆಗಿದೆ ಎಂದು ತಿರುಗೇಟು ನೀಡಿದರು.