Udupi: ಕೊರಗ ಜನಾಂಗದ ವೈದ್ಯಕೀಯ ವೆಚ್ಚ ಮರುಪಾವತಿಗೆ ಸಿಎಂ ಬೊಮ್ಮಾಯಿ ಸೂಚನೆ

By Govindaraj SFirst Published Sep 15, 2022, 3:05 PM IST
Highlights

ಪರಿಶಿಷ್ಟ ಪಂಗಡದ ಆದಿವಾಸಿ ಬುಡಕಟ್ಟು, ಕೊರಗ ಜನಾಂಗದವರ ವೈದ್ಯಕೀಯ ವೆಚ್ಚ ಮರುಪಾವತಿಗೆ ಶಾಸಕ ರಘುಪತಿ ಭಟ್ ನೇತೃತ್ವದಲ್ಲಿ ಶಾಸಕರ ನಿಯೋಗ ಮುಖ್ಯಮಂತ್ರಿಯವರಿಗೆ ಮನವಿ ನೀಡಿದ್ದು, ತಕ್ಷಣವೇ ಸ್ಪಂದಿಸಿರುವ ಮುಖ್ಯಮಂತ್ರಿಗಳು ಮರುಪಾವತಿಗೆ ಆದೇಶಿಸಿದ್ದಾರೆ. 

ಉಡುಪಿ (ಸೆ.15): ಪರಿಶಿಷ್ಟ ಪಂಗಡದ ಆದಿವಾಸಿ ಬುಡಕಟ್ಟು, ಕೊರಗ ಜನಾಂಗದವರ ವೈದ್ಯಕೀಯ ವೆಚ್ಚ ಮರುಪಾವತಿಗೆ ಶಾಸಕ ರಘುಪತಿ ಭಟ್ ನೇತೃತ್ವದಲ್ಲಿ ಶಾಸಕರ ನಿಯೋಗ ಮುಖ್ಯಮಂತ್ರಿಯವರಿಗೆ ಮನವಿ ನೀಡಿದ್ದು, ತಕ್ಷಣವೇ ಸ್ಪಂದಿಸಿರುವ ಮುಖ್ಯಮಂತ್ರಿಗಳು ಮರುಪಾವತಿಗೆ ಆದೇಶಿಸಿದ್ದಾರೆ. 

ಈ ಕುರಿತು ಮಾಹಿತಿ ನೀಡಿರುವ ಉಡುಪಿ ಶಾಸಕ ರಘುಪತಿ ಭಟ್, ಆರ್ಥಿಕವಾಗಿ ತೀರಾ ಹಿಂದುಳಿದ ಪರಿಶಿಷ್ಟ ಪಂಗಡ, ಆದಿವಾಸಿ ಬುಡಕಟ್ಟು ಸಮುದಾಯ, ಕೊರಗ ಜನಾಂಗದವರು ತೀವ್ರ ತರಹದ ಖಾಯಿಲೆಗಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಲ್ಲಿ ಅವರ ವೈದ್ಯಕೀಯ ವೆಚ್ಚವನ್ನು ಈ ಹಿಂದಿನಂತೆಯೇ ಸರ್ಕಾರದ ವತಿಯಿಂದ ಮರುಪಾವತಿಸುವಂತೆ  3  ಜಿಲ್ಲೆಗಳ ಶಾಸಕರ ನಿಯೋಗ ಬುಧವಾರ  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತ್ತು. 

ಹಿಂದುಳಿದ ವರ್ಗಗಳ ಹಾಸ್ಟೆಲ್‌ನಲ್ಲಿ ಶೇ.25ರಷ್ಟು ಹೆಚ್ಚು ಪ್ರವೇಶಾವಕಾಶ: ಕೋಟ ಶ್ರೀನಿವಾಸ ಪೂಜಾರಿ

ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಪರಿಶಿಷ್ಟ ಪಂಗಡ, ಆದಿವಾಸಿ ಬುಡಕಟ್ಟು ಸಮುದಾಯ, ಕೊರಗ ಜನಾಂಗದವರ ವೈದ್ಯಕೀಯ ವೆಚ್ಚವನ್ನು 2023ನೇ ಸಾಲಿನಿಂದ ನಿಗದಿಪಡಿಸಿದ ಅನುದಾನದಲ್ಲಿ ವೈದ್ಯಕೀಯ ವೆಚ್ಚ ಮರುಪಾವತಿಗೆ ಒಂದು ಬಾರಿ ಮಾತ್ರ ಷರತ್ತಿಗೊಳಪಟ್ಟು ಮಂಜೂರಾತಿ ನೀಡಿ ಸರ್ಕಾರ ಆದೇಶಿಸಿದೆ. ಹೆಚ್ಚಾಗಿ ನಗರ ಪ್ರದೇಶದಿಂದ ದೂರವಿದ್ದು, ಕಾಡಂಚಿನಲ್ಲಿ ವಾಸವಿರುವ ಈ ಸಮುದಾಯಗಳ ಮಂದಿ ರಕ್ತ ಹೀನತೆ, ಅಪೌಷ್ಟಿಕತೆ, ಟಿಬಿ, ಕ್ಯಾನ್ಸರ್, ಮಧುಮೇಹ ಮುಂತಾದ ತೀವ್ರ ತರಹದ ಕಾಯಿಲೆಗಳಿಗೆ ತುತ್ತಾದಾಗ ಪರಿಣಾಮಕಾರಿಯಾದ ಚಿಕಿತ್ಸೆ ಪಡೆಯಲು ಸಾಧ್ಯವಾಗದೆ ಮರಣ ಹೊಂದುತ್ತಾರೆ. 

ಅಲ್ಲದೆ ಈ ಸಮುದಾಯದವರಿಗೆ ವೈದ್ಯಕೀಯ ಚಿಕಿತ್ಸೆಗೆ ಸಂಬಂಧಿಸಿದಂತೆ ಸರ್ಕಾರದ ಯಾವುದೇ ವಿಮಾ ಯೋಜನೆಗಳು ಉಪಯುಕ್ತವಾಗದೆ ಇರುವುದರಿಂದ ವೈದ್ಯಕೀಯ ವೆಚ್ಚ ಮರುಪಾವತಿ ಅವಶ್ಯಕವಾಗಿರುತ್ತದೆ ಎಂದು ನಿಯೋಗ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿತ್ತು. ಈ ವಿಷಯದ ಬಗ್ಗೆ 3 ಜಿಲ್ಲೆಗಳ ಶಾಸಕರು ಮಾಡಿದ ಮನವಿಗೆ  ಬಸವರಾಜ ಬೊಮ್ಮಾಯಿ ಸಕಾರಾತ್ಮಕವಾಗಿ ಸ್ಪಂದಿಸಿದ್ದು, 'ಮುಂದುವರೆಸುವುದು' ಎಂದು ಷರಾ ಬರೆದು ವೈದ್ಯಕೀಯ ವೆಚ್ಚ ಮರುಪಾವತಿ ಮುಂದುವರೆಸಿ ತಕ್ಷಣದಲ್ಲಿ ಆದೇಶ ಹೊರಡಿಸುವಂತೆ ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮಣಿವಣ್ಣನ್ ಅವರಿಗೆ ದೂರವಾಣಿ ಕರೆ  ಮೂಲಕ  ಸೂಚಿಸಿದರು. 

ಪರಿಶಿಷ್ಟ ಪಂಗಡ, ನೈಜ ದುರ್ಬಲ ಬುಡಕಟ್ಟು ಸಮುದಾಯ, ಕೊರಗ ಸಮುದಾಯದವರಿಗೆ ವೈದ್ಯಕೀಯ ಚಿಕಿತ್ಸೆಗೆ ಸಂಬಂಧಿಸಿದಂತೆ ಈ ಹಿಂದಿನಂತೆಯೇ ವೈದ್ಯಕೀಯ ವೆಚ್ಚವನ್ನು ಮರುಪಾವತಿ ಮಾಡುವುದು ಹಾಗೂ ಈ ಸಮುದಾಯಗಳು ವಾಸವಾಗಿರುವ ಕಾಲೋನಿಗಳಲ್ಲಿ ವೈದ್ಯಕೀಯ ಶಿಬಿರಗಳನ್ನು ನಡೆಸುವಂತೆ ಮನವಿಯಲ್ಲಿ ತಿಳಿಸಲಾಗಿತ್ತು. 

ಉಡುಪಿಯಲ್ಲಿ ಹೆಚ್ಚುತ್ತಿರುವ ರಸ್ತೆ ಅವಘಡ: ಸೂಕ್ತ ಕ್ರಮಕ್ಕೆ ಡಿಸಿ ಕೂರ್ಮಾರಾವ್ ಸೂಚನೆ

ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರು, ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವರಾದ ಎಸ್. ಅಂಗಾರ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಜೀವರಾಜ್, ಕಾಪು ಶಾಸಕರಾದ ಲಾಲಾಜಿ ಆರ್. ಮೆಂಡನ್, ಬೈಂದೂರು ಶಾಸಕರಾದ ಎಂ. ಸುಕುಮಾರ್ ಶೆಟ್ಟಿ, ಮಂಗಳೂರು ಶಾಸಕರಾದ ವೇದವ್ಯಾಸ್ ಕಾಮತ್, ಮಂಗಳೂರು ಉತ್ತರ ಶಾಸಕರಾದ ಭರತ್ ಶೆಟ್ಟಿ, ಬಂಟ್ವಾಳ ಶಾಸಕರಾದ ರಾಜೇಶ್ ನಾಯಕ್, ಮೂಡುಬಿದಿರೆ ಶಾಸಕರಾದ ಉಮಾನಾಥ್ ಕೋಟ್ಯಾನ್, ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜಾ, ಭಟ್ಕಳ ಶಾಸಕರಾದ ಸುನಿಲ್ ನಾಯ್ಕ್, ಕುಮಟಾ ಶಾಸಕರಾದ ದಿನಕರ ಶೆಟ್ಟಿ,  ಕಾರವಾರ ಶಾಸಕರಾದ ರೂಪಾಲಿ ನಾಯ್ಕ್ ಅವರನ್ನೊಳಗೊಂಡ ನಿಯೋಗ ಮನವಿ ಸಲ್ಲಿಸಿತ್ತು.

click me!