ನವಲಗುಂದ: ಬರಪೀಡಿತ ತಾಲೂಕಿಗೆ ಆಶಾಕಿರಣ, 10 ಸಾವಿರ ಎಕರೆಗೆ ನೀರಾವರಿ ಭಾಗ್ಯ

By Suvarna NewsFirst Published Dec 18, 2019, 7:47 AM IST
Highlights

38.43 ಕೋಟಿ ವೆಚ್ಚದ 10000 ಎಕರೆಗೆ ಏತ ನೀರಾವರಿ ಭಾಗ್ಯ| 7 ವರ್ಷಗಳ ಬಳಿಕ ಕಾಮಗಾರಿ ಪೂರ್ಣ|ಇಂದು ಬೆಣ್ಣಿಹಳ್ಳ ಹಾಗೂ ತುಪರಿಹಳ್ಳಗಳಿಗೆ ಏತ ನೀರಾವರಿ ಯೋಜನೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಚಾಲನೆ|ಈ ಏತ ನೀರಾವರಿ ಯೋಜನೆಯಿಂದ ಹಸಿದಾಗ ಒಂದು ತುತ್ತು ಅನ್ನ ಕೊಟ್ಟಂತಾಗಿದೆ ಎಂದ ರೈತ|

ನವಲಗುಂದ(ಡಿ.18): ಬರಪೀಡಿತ ಪ್ರದೇಶವಾಗಿರುವ ತಾಲೂಕಿನ ಅಮರಗೋಳ, ಅಳಗವಾಡಿ, ಹುಣಸಿಕಟ್ಟಿ, ಗೊಬ್ಬರಗುಂಪಿ, ಶಾನವಾಡ, ಬೆಳವಟಗಿ ಗ್ರಾಮಗಳ ಬಹುವರ್ಷಗಳ ಕನಸು ನನಸಾಗುತ್ತಿದೆ. ಪ್ರತಿ ವರ್ಷ ವ್ಯರ್ಥವಾಗಿ ಹರಿಯುವ ಬೆಣ್ಣಿಹಳ್ಳ ಹಾಗೂ ತುಪರಿಹಳ್ಳಗಳಿಗೆ ಏತ ನೀರಾವರಿ ಯೋಜನೆಗೆ ಬುಧವಾರ ಮುಖ್ಯಮಂತ್ರಿ ಯಡಿಯೂರಪ್ಪ ಚಾಲನೆ ನಿಡಲಿದ್ದಾರೆ. 

ಒಂದು ಅಮರಗೋಳ ಹಾಗೂ ಇನ್ನೊಂದು ಶಾನವಾಡ ಏತ ನೀರಾವರಿ ಇವಾಗಿವೆ. 38.43 ಕೋಟಿ ವೆಚ್ಚದಲ್ಲಿ ಈ ಯೋಜನೆಗಳು ಇವಾಗಿದ್ದು, ಬರೋಬ್ಬರಿ 10 ಸಾವಿರ ಎಕರೆ ಪ್ರದೇಶಗಳಿಗೆ ನೀರುಣಿಸಲಿದೆ. ಪ್ರತಿವರ್ಷ ಮಳೆಗಾಲದಲ್ಲಿ ಉಕ್ಕೇರುವ ಬೆಣ್ಣೆಹಳ್ಳ ಹಾಗೂ ತುಪ್ಪರಿಹಳ್ಳಗಳ ನೀರು ಪ್ರತಿವರ್ಷವೂ ಪೋಲಾಗುತ್ತಿತ್ತು. ರೈತರು ಏತ ನೀರಾವರಿ ಯೋಜನೆ ಮೂಲಕವಾದರೂ ಕಾಲುವೆಗೆ ನೀರು ಹರಿಸುವಂತೆ ವರ್ಷಗಳಿಂದ ಬೇಡಿಕೆ ಇಟ್ಟಿದ್ದರು. ಇದಕ್ಕೆ ಈ ಹಿಂದಿನ ಬಿಜೆಪಿ ಸರ್ಕಾರ ಸ್ಪಂದಿಸಿತ್ತು. ಈ ಯೋಜನೆಗೆ ಚಾಲನೆ ನೀಡಿತ್ತು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

2012ರಲ್ಲಿ ಅಂದಿನ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಆದರೆ ಬರೋಬ್ಬರಿ 7 ವರ್ಷಗಳ ಕಾಲ ಕಾಮಗಾರಿ ಕುಂಟುತ್ತಾ, ತೆವಳುತ್ತಾ ಸಾಗಿತ್ತು. ಮತ್ತೆ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಅಧಿಕಾರಕ್ಕೆ ಬಂದ ನಂತರ ಯೋಜನೆಗೆ ತ್ವರಿತಗತಿಗೊಳಿಸಿದ್ದರು. ಹೀಗಾಗಿ ಇದೀಗ ಯೋಜನೆ ಪೂರ್ಣವಾಗಿದೆ.

ಇದೀಗ ಜಮೀನುಗಳಲ್ಲಿ ನೀರು ಬರುವುದರಿಂದ ಗೋಧಿ, ಜೋಳ, ಕಡಲೆ, ಮೆಕ್ಕೆಜೋಳ, ಸೂರ್ಯಪಾನ, ಕುಸುಬೆ ಮತ್ತು ತೋಟಗಾರಿಕಾ ಬೆಳೆಗಳನ್ನು ವರ್ಷ​ಕ್ಕೆ 2 ಬೆಳೆ ಪಡೆಯಬಹುದು. ತರಕಾರಿ ಬೆಳೆದು ಜೀವನ ಸಾಗಿ​ಸುವ ರೈತರ ಬದುಕು ಸದೃಢವಾಗಲಿದೆ. ಈಗ ತುಪರಿಹಳ್ಳ ಮತ್ತು ಬೆಣ್ಣೆಹಳ್ಳಗಳ ನೀರನ್ನು ಸ್ಥಳಾಂತರಿಸಿಕೊಳ್ಳುವ ಕಾಲುವೆಯ ಪಕ್ಕದಲ್ಲಿ ತಡೆಗೋಡೆ ನಿರ್ಮಿಸಿದರೆ ಇನ್ನಷ್ಟುಉತ್ತಮ ಎಂಬ ಅಭಿಪ್ರಾಯ ರೈತರದ್ದು.

ಗೊಬ್ಬರಗುಂಪಿ ಏತ ನೀರಾವರಿ:

15.66 ಕೋಟಿ ವೆಚ್ಚದಲ್ಲಿ ತುಪ್ಪರಿ ಹಳ್ಳದ ಏತ ನೀರಾವರಿ ಯೋಜನೆ ಇದಾಗಿದೆ. ಗೊಬ್ಬರಗುಂಪಿ ವ್ಯಾಪ್ತಿಯ 5,155 ಎಕರೆಗೆ ನೀರು ಹರಿಸಿಕೊಳ್ಳಬಹುದಾಗಿದೆ. ತುಪ್ಪರಿಹಳ್ಳದಿಂದ 3 ಕಿ.ಮೀ. ದೂರದಲ್ಲಿನ ಪಂಪ್‌ ಮೂಲಕ ಕಾಲುವೆಗೆ ನೀರು ಹರಿಬಿಡಲಾಗುವುದು. ಗೊಬ್ಬರಗುಂಪಿ, ಶಾನವಾಡ, ಬೆಳವಟಗಿ ರೈತರ ಜಮೀನುಗಳಿಗೆ ಹರಿಯುತ್ತದೆ. ಇದರಿಂದ ರೈತರು ಸಂತಸಗೊಂಡಿದ್ದಾರೆ.

ಅಮರಗೋಳ ಏತ ನೀರಾವರಿ: 

22.77 ಕೋಟಿ ವೆಚ್ಚದಲ್ಲಿ ಬೆಣ್ಣೆಹಳ್ಳಕ್ಕೆ ಅಡ್ಡಲಾಗಿ ನಿರ್ಮಿಸಿರುವ ಈ ಕಾಮಗಾರಿಯೂ ಪೂರ್ಣಗೊಳಿಸಲಾಗಿದೆ. ಅಮರಗೋಳ ವ್ಯಾಪ್ತಿಯ 4,653 ಎಕರೆಗೆ ಏತ ನೀರಾವರಿ ಮೂಲಕ ಬೆಣ್ಣೆಹಳ್ಳದಿಂದ 7 ಕಿ.ಮೀ. ದೂರದಲ್ಲಿನ ಪಂಪ್‌ ಮೂಲಕ ಕಾಲುವೆಗೆ ನೀರು ಹರಿಬಿಡಲಾಗುವುದು. ಅಮರಗೋಳ, ಅಳಗವಾಡಿ ಹಾಗೂ ಹುಣಸಿಕಟ್ಟಿಗ್ರಾಮದ ರೈತರು ಈ ಯೋಜನೆಯ ಲಾಭ ಪಡೆಯಲಿದ್ದಾರೆ.

ಒಟ್ಟಿನಲ್ಲಿ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಅವರ ಸತತ ಪ್ರಯತ್ನದಿಂದಾಗಿ ಈ ಎರಡು ಏತ ನೀರಾವರಿ ಯೋಜನೆಗಳು ಇದೀಗ ಪೂರ್ಣಗೊಂಡು ಚಾಲನೆ ದೊರೆಯುತ್ತಿರುವುದು ರೈತರಲ್ಲಿ ಸಂತಸವನ್ನುಂಟು ಮಾಡಿರುವುದಂತೂ ಸತ್ಯ.!

ಈ ಬಗ್ಗೆ ಮಾತನಾಡಿದ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಅವರು, 7 ವರ್ಷಗಳಿಂದ ವಿಳಂಬವಾದ ಏತ ನೀರಾವರಿ ಯೋಜನೆಗೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಚಾಲನೆ ನೀಡಲಿದ್ದಾರೆ. ಇದರಿಂದ ರೈತರು ಮುಂದಿನ ದಿನಮಾನಗಳಲ್ಲಿ ಬಂಗಾರದ ಬೆಳೆ ಬೆಳೆಯಬೇಕು. ಸತತ ಹೋರಾಟ ಮಾಡಿದ ರೈತರಿಗೆ ಸ್ವಲ್ಪ ಮಟ್ಟಿಗೆ ಜಯ ಸಿಕ್ಕಿದೆ ಎಂದು ತಿಳಿಸಿದ್ದಾರೆ. 

ಈ ಏತ ನೀರಾವರಿ ಯೋಜನೆಯಿಂದ ಹಸಿದಾಗ ಒಂದು ತುತ್ತು ಅನ್ನ ಕೊಟ್ಟಂತಾಗಿದೆ. ಇದು ಸಂತಸಕರ. ಈ ಯೋಜನೆ ಯಶಸ್ವಿಯಾಗಲಿ ಎಂಬುದು ಎಲ್ಲರ ಆಶಯ. ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಭಗಿರಥದಂತೆ ಕೆಲಸ ಮಾಡಿದ್ದಾರೆ ಎಂದು ರೈತ ಸಂಗಪ್ಪ ಅವರು ಹೇಳಿದ್ದಾರೆ. 
 

click me!