'ಪಾಪುಗೆ ರಾಜ್ಯ ಸರ್ಕಾರ ಅಪಚಾರ: ಯಡಿಯೂರಪ್ಪ ರಾಜ್ಯದ ಜನತೆಯ ಕ್ಷಮೆ ಕೋರಬೇಕು'

By Kannadaprabha News  |  First Published Mar 18, 2020, 7:51 AM IST

ಪಾಪು ನಿಧನಕ್ಕೆ ಶೋಕಾಚರಣೆ ಮಾಡದ ಸರ್ಕಾರ| ಕನ್ನಡಿಗರ ಕ್ಷಮೆ ಕೋರಲು ವಿದ್ಯಾವರ್ಧಕ ಸಂಘ ಆಗ್ರಹ| ನಾಡಿನ ಧೀಮಂತ ನಾಯಕ ಪಾಟೀಲ ಪುಟ್ಟಪ್ಪ ಸಾವಿನಲ್ಲೂ ರಾಜಕೀಯ| 


ಧಾರವಾಡ/ಹಾವೇರಿ/ಹುಬ್ಬಳ್ಳಿ(ಮಾ.18): ಹೋರಾಟಗಾರ, ಹಿರಿಯ ಪತ್ರಕರ್ತ ನಾಡೋಜ ಡಾ. ಪಾಟೀಲ ಪುಟ್ಟಪ್ಪ ಅವರ ನಿಧನದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಶೋಕಾಚರಣೆ ಘೋಷಿಸದೆ ಅವಮಾನ ಮಾಡಿದೆ ಎಂದು ಆರೋಪಿಸಿ ‘ಕರ್ನಾಟಕ ವಿದ್ಯಾವರ್ಧಕ ಸಂಘ’, ‘ಕರ್ನಾಟಕ ನವನಿರ್ಮಾಣ ಸೇನೆ’ ಮತ್ತು ಪಾಪು ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಪ್ರಮಾದಕ್ಕಾಗಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ರಾಜ್ಯದ ಜನತೆಯ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದ್ದಾರೆ.

ವಿದ್ಯಾವರ್ಧಕ ಸಂಘದ ಎದುರು ಪಾಪು ಅವರ ಅಂತಿಮ ದರ್ಶನದ ನಂತರ ಸುದ್ದಿಗಾರರೊಂದಿಗೆ ಸರ್ಕಾರದ ನಡೆಯನ್ನು ತೀವ್ರವಾಗಿ ಖಂಡಿಸಿದ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ ಉಡಿಕೇರಿ, ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಪಾಪು ಅವರ ಬಗ್ಗೆ ಅಪಾರ ಗೌರವ ಹೊಂದಿದ್ದರಲ್ಲದೆ, ಅವರನ್ನು ತಮ್ಮ ಗುರುಗಳು ಎಂದು ಹೇಳಿಕೊಳ್ಳುತ್ತಿದ್ದರು. ಆದರೆ, ಪಾಪು ನಿಧನ ಸಂದರ್ಭದಲ್ಲಿ ಶೋಕಾಚರಣೆ ಘೋಷಣೆ ಮಾಡದಿರುವುದು ಏತಕ್ಕೆ ಎಂಬುದೇ ತಿಳಿಯಲಿಲ್ಲ. ಹೀಗಾಗಿ ಮುಖ್ಯಮಂತ್ರಿಗಳು ಇಡೀ ನಾಡಿನ ಜನರ ಕ್ಷಮೆ ಕೇಳಬೇಕು ಎಂದರು.

Tap to resize

Latest Videos

ತವರಲ್ಲಿ ಮಣ್ಣಾದ ಪಾಪು: ಏಳು ದಶಕದ ಹುಬ್ಬಳ್ಳಿಯ ನಂಟು ಇನ್ನು ನೆನಪು ಮಾತ್ರ

ಪಾಪು ಒಬ್ಬ ವ್ಯಕ್ತಿ ಅಲ್ಲ. ಇಡೀ ಕನ್ನಡ ನಾಡಿನ ಶಕ್ತಿ ಆಗಿದ್ದರು. ಕರ್ನಾಟಕದ ಇತಿಹಾಸ, ಆಗು ಹೋಗುಗಳನ್ನು ಅತ್ಯಂತ ಖಚಿತವಾಗಿ ಹೇಳಬಲ್ಲ ಧೀಮಂತ ನಾಯಕರಾಗಿದ್ದರು. ಅವರ ನಿಧನದ ಹಿನ್ನೆಲೆಯಲ್ಲಿ ಒಂದು ದಿನದ ರಜೆ ಘೋಷಿಸಿ ಸರ್ಕಾರ ಶೋಕಾಚರಣೆ ಆಚರಿಸಬಹುದು ಎಂದು ಊಹೆ ಮಾಡಿದ್ದೆವು. ಆದರೆ, ಶೋಕಾಚರಣೆ ಮಾಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಪಾಪುಗೆ ಅವಮಾನ: 

ಹಾವೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ‘ಕರ್ನಾಟಕ ನವನಿರ್ಮಾಣ ಸೇನೆ’ ಅಧ್ಯಕ್ಷ ಭೀಮಾಶಂಕರ ಪಾಟೀಲ, ನಾಡಿನ ಧೀಮಂತ ನಾಯಕ ಪಾಟೀಲ ಪುಟ್ಟಪ್ಪ ಅವರ ಸಾವಿನಲ್ಲೂ ರಾಜಕೀಯ ಮಾಡಲಾಗಿದೆ. ಶೋಕಾಚರಣೆ ಘೋಷಿಸದೇ ಪಾಪು ಅವರಿಗೆ ಸರ್ಕಾರವೇ ಅವಮಾನ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಾಟೀಲ ಪುಟ್ಟಪ್ಪನವರು ಧೀಮಂತ ವ್ಯಕ್ತಿ. ನಾಡು-ನುಡಿಗೋಸ್ಕರ ಹೋರಾಟ ಮಾಡಿದವರು. ಅನ್ಯಾಯದ ವಿರುದ್ಧ ಯಾವತ್ತೂ ಹೋರಾಡಿದ್ದಾರೆ. ಅವರ ನಿಧನಕ್ಕೆ ಶೋಕಾಚರಣೆ ಮೂಲಕ ಸರ್ಕಾರ ಗೌರವ ಸಲ್ಲಿಸಬೇಕಿತ್ತು. ನಮ್ಮನ್ನೂ ಸೇರಿದಂತೆ ಅನೇಕ ರಾಜಕಾರಣಿಗಳನ್ನು ಎಚ್ಚರಿಸಿದ ಪಾಪು ಅವರ ವಿಷಯದಲ್ಲಿ ಬಿಜೆಪಿ ರಾಜಕಾರಣ ಮಾಡಬಾರದಿತ್ತು ಎಂದು ಮಾಜಿ ಸಚಿವ ವಿನಯ ಕುಲಕರ್ಣಿ ಹೇಳಿದ್ದಾರೆ. 

ಪಾಪು ಅತ್ಯಂತ ಧೀಮಂತ ನಾಯಕ. ಸರ್ಕಾರ ರಜೆ ಘೋಷಿಸಬೇಕಿತ್ತು. ಶೋಕಾಚರಣೆ ಮಾಡಬೇಕಿತ್ತು. ದಕ್ಷಿಣ ಕರ್ನಾಟಕದವರು ಯಾರಾದರೂ ನಿಧನರಾಗಿದ್ದರೆ ಹೀಗೆ ಮಾಡುತ್ತಿದ್ದರೇ? ಇದು ಉತ್ತರ ಕರ್ನಾಟಕಕ್ಕೆ ಮಾಡಿದ ಅವಮಾನ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಮಾಜಿ ಅಧ್ಯಕ್ಷ ಸದಾನಂದ ಡಂಗನವರ ಹೇಳಿದ್ದಾರೆ. 

ಹಿರಿಯ ಸಾಹಿತಿಗಳು, ಹೋರಾಟಗಾರರು, ಚಿತ್ರನಟರು ಅಸ್ತಂಗತವಾದಾಗ ಘೋಷನೆಯಾಗಿದ್ದ ಶೋಕಾಚರಣೆ ಪಾಪು ಅವರಿಗೆ ಏಕೆ ಅನ್ವಯವಾಗಲಿಲ್ಲ? ನಾಡು, ನುಡಿಗೆ ಶ್ರಮಿಸಿದ ಮಹಾನಾಯಕನಿಗೆ ರಾಜ್ಯ ಸರ್ಕಾರ ಅಪಚಾರವೆಸಗಿದೆ. ಇದು ಉತ್ತರ ಕರ್ನಾಟಕಕ್ಕೆ ಮಾಡಿದ ಅವಮಾನ ಎಂದು ಕನ್ನಡಪರ ಹೋರಾಟಗಾರ ಸಂಜೀವ ದುಮಕನಾಳ ತಿಳಿಸಿದ್ದಾರೆ. 
 

click me!