ಕಿಮ್ಸ್‌ಗೆ ಯಡಿಯೂರಪ್ಪ ಭೇಟಿ: ಪಾಪು ಸ್ಥಿತಿ ಗಂಭೀರ

By Kannadaprabha NewsFirst Published Mar 16, 2020, 7:46 AM IST
Highlights

ಪಾಪು ಆರೋಗ್ಯ ವಿಚಾರಿಸಿದ ಸಿಎಂ ಯಡಿಯೂರಪ್ಪ| ತಜ್ಞ ವೈದ್ಯರು, ಪಾಪು ಕುಟುಂಬದವರಿಂದ ಆರೋಗ್ಯ ಸ್ಥಿತಿ ಮಾಹಿತಿ|ಡಾ. ಪಾಟೀಲ ಪುಟ್ಟಪ್ಪ ಆರೋಗ್ಯ ಚಿಕಿತ್ಸೆ ವೆಚ್ಚ ಸರ್ಕಾರವೇ ಭರಿಸಲಿದೆ|

ಹುಬ್ಬಳ್ಳಿ[ಮಾ.16]: ಇಲ್ಲಿನ ಕಿಮ್ಸ್ ನಲ್ಲಿ ಕಳೆದ ಫೆ. 10 ರಿಂದ ಚಿಕಿತ್ಸೆ ಪಡೆಯುತ್ತಿರುವ, ಹಿರಿಯ ಪತ್ರಕರ್ತ, ನಾಡೋಜ ಪಾಟೀಲ ಪುಟ್ಟಪ್ಪ ಅವರನ್ನು ಭಾನುವಾರ ಭೇಟಿ ಮಾಡಿದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಆರೋಗ್ಯ ವಿಚಾರಿಸಿದ್ದಾರೆ.

ಉತ್ತಮ ಚಿಕಿತ್ಸೆ ದೊರೆಯುತ್ತಿದೆ. ಸಾಧ್ಯವಾದಷ್ಟುಇನ್ನೂ ಹೆಚ್ಚಿನ ಪ್ರಯತ್ನ ಮಾಡಿ ಎಂದು ಮುಖ್ಯಮಂತ್ರಿಗಳು ಕಿಮ್ಸ್‌ ವೈದ್ಯಾಧಿಕಾರಿಗಳಿಗೆ ಸಲಹೆ ನೀಡಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ತಜ್ಞ ವೈದ್ಯ ಪ್ರೊ. ಡಿ.ಎಂ. ಕಬಾಡಿ ಮಾತನಾಡಿ, ಕಿಮ್ಸ್‌ ವೈದ್ಯಶಾಸ್ತ್ರ ಒಳರೋಗಿ ವಿಭಾಗದಲ್ಲಿ ದಾಖಲಾಗಿರುವ ನಾಡೋಜ ಪಾಪು, ವಿಪರೀತ ಜ್ವರ, ಉಸಿರಾಟದ ತೊಂದರೆ ಹಾಗೂ ಆಯತಪ್ಪಿ ಬಿದ್ದ ಪರಿಣಾಮ ತಲೆಗೆ ಪೆಟ್ಟಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದೀರ್ಘಕಾಲದ ಪುಪ್ಪುಸ ತೊಂದರೆ ಹಾಗೂ ತಲೆಯಲ್ಲಿ ರಕ್ತಸ್ರಾವ ಉಂಟಾಗಿದ್ದರಿಂದ ಚಿಕಿತ್ಸೆ ಮಾಡಲಾಗಿದೆ. ಕಿಡ್ನಿ ತೊಂದರೆ, ರಕ್ತಹೀನತೆ ಹಾಗೂ ಸೋಂಕು ಕಂಡು ಬಂದಿದ್ದು, ಎಲ್ಲ ಕಾಯಿಲೆಗಳಿಗೆ ಚಿಕಿತ್ಸೆ ನೀಡಲಾಗಿದೆ. ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿದ್ದರಿಂದ ಶಸ್ತ್ರಚಿಕಿತ್ಸೆ ಮಾಡಲಾಯಿತು. ಶಸ್ತ್ರಚಿಕಿತ್ಸೆ ನಂತರ ಆರೋಗ್ಯ ಗಂಭೀರವಾಗಿದೆ. ಕೃತಕ ಉಸಿರಾಟ ಯಂತ್ರ (ವೆಂಟಿಲೇಟರ್‌) ಅಳವಡಿಸಲಾಗಿದೆ. ದೀರ್ಘಕಾಲ ಹಾಸಿಗೆ ಹಿಡಿದ ಪರಿಣಾಮ ಪಲ್ಮನರಿ ಥ್ರಂಬೋ ಎಂಬೋಲಿಸಂ ಆಗಿದೆ ಎಂದು ಮುಖ್ಯಮಂತ್ರಿಗಳಿಗೆ ವಿವರಿಸಿದ್ದಾರೆ.

ಪಾಟೀಲ ಪುಟ್ಟಪ್ಪ ಅವರ ಮಕ್ಕಳಾದ ಅಶೋಕ, ಮಂಜುಳಾ ಹಾಗೂ ಶೈಲಜಾ ಅವರಿಂದಲೂ ಮುಖ್ಯಮಂತ್ರಿ ಮಾಹಿತಿ ಪಡೆದರು. ಬೃಹತ್‌, ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್‌, ಗೃಹಸಚಿವ ಬಸವರಾಜ ಬೊಮ್ಮಾಯಿ, ಸಂಸದೆ ಶೋಭಾ ಕರಂದ್ಲಾಜೆ, ವಿಧಾನಪರಿಷತ್‌ ಸದಸ್ಯ ಲೆಹರ್‌ ಸಿಂಗ್‌, ಜಿಲ್ಲಾಧಿಕಾರಿ ದೀಪಾ ಚೋಳನ್‌, ಪೊಲೀಸ್‌ ಆಯುಕ್ತ ಆರ್‌. ದಿಲೀಪ್‌, ಜಿಪಂ ಸಿಇಒ ಡಾ. ಬಿ.ಸಿ. ಸತೀಶ, ಮಹಾನಗರ ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ, ಕಿಮ್ಸ್‌ ನಿರ್ದೇಶಕ ಡಾ. ರಾಮಲಿಂಗಪ್ಪ ಅಂತಾರದಾನಿ, ವೈದ್ಯಕೀಯ ಅಧೀಕ್ಷಕ ಡಾ. ಅರುಣಕುಮಾರ್‌, ಮುಖ್ಯ ಆಡಳಿತಾಧಿಕಾರಿ ರಾಜಶ್ರೀ ಜೈನಾಪುರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಯಶವಂತ ಮದೀನಕರ್‌, ಜಿಲ್ಲಾ ಸಮೀಕ್ಷಣಾಧಿಕಾರಿ ಡಾ. ಸುಜಾತಾ ಹಸವಿಮಠ ಮತ್ತಿತರರು ಇದ್ದರು.

ಶೀಘ್ರದಲ್ಲೇ ಬಸವ ರಾಷ್ಟ್ರೀಯ ಪುರಸ್ಕಾರ ಪ್ರದಾನ

ನಾಡೋಜ ಪಾಟೀಲ ಪುಟ್ಟಪ್ಪ ಅವರಿಗೆ ಕರ್ನಾಟಕ ರಾಜ್ಯ ಸರ್ಕಾರದಿಂದ 2017ನೇ ಸಾಲಿಗಾಗಿ ಘೋಷಿಸಿದ್ದ ರಾಷ್ಟ್ರೀಯ ಬಸವ ಪುರಸ್ಕಾರ ಪ್ರಶಸ್ತಿಯನ್ನು ಶೀಘ್ರದಲ್ಲಿ ಸರ್ಕಾರದಿಂದ ಪ್ರದಾನ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ತಿಳಿಸಿದ್ದಾರೆ.

ಕಿಮ್ಸ್ ಆಸ್ಪತ್ರೆಯಲ್ಲಿ ನಾಡೋಜ ಪಾಟೀಲ ಪುಟ್ಟಪ್ಪ ಅವರ ಆರೋಗ್ಯ ವಿಚಾರಿಸಿದ ಆನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು. ಕಾರಣಾಂತರದಿಂದ ಪ್ರಶಸ್ತಿ ಪ್ರದಾನ ಮಾಡಿರಲಿಲ್ಲ. ಇದೀಗ ಇನ್ನೆರಡು ದಿನಗಳಲ್ಲಿ ರಾಷ್ಟ್ರೀಯ ಬಸವ ಪುರಸ್ಕಾರದೊಂದಿಗೆ ನಗದು . 10 ಲಕ್ಷ ನೀಡಲಾಗುತ್ತಿದೆ. ಇದರೊಂದಿಗೆ ಡಾ. ಪಾಟೀಲ ಪುಟ್ಟಪ್ಪ ಅವರ ಆರೋಗ್ಯ ಚಿಕಿತ್ಸೆ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು. ನಾಡೋಜ ಪುಟ್ಟಪ್ಪ ಅವರು ಈಗ ಸದ್ಯ ಕೃತಕ ಉಸಿರಾಟ ವ್ಯವಸ್ಥೆಯಲ್ಲಿ ಇದ್ದು, ಶೀಘ್ರ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುವದಾಗಿ ಅವರು ಹೇಳಿದರು.

ನಾಡೋಜ ಪಾಪು ಸ್ಥಿತಿ ಗಂಭೀರ

ವಯೋಸಹಜ ಕಾಯಿಲೆಗಳಿಂದಾಗಿ ಇಲ್ಲಿನ ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಾಜ್ಯಸಭಾ ಮಾಜಿ ಸದಸ್ಯ, ನಾಡೋಜ ಪಾಟೀಲ ಪುಟ್ಟಪ್ಪ ಅವರ ಸ್ಥಿತಿ ಗಂಭೀರವಾಗಿದೆ.
ಫೆ. 10ರಂದು ಕಿಮ್ಸ್‌ನಲ್ಲಿ ದಾಖಲಾಗಿರುವ ಪಾಪು ಅವರಿಗೆ ಸದ್ಯ ಕೃತಕ ಉಸಿರಾಟ ಯಂತ್ರವನ್ನು ಅಳವಡಿಸಲಾಗಿದೆ. ದೀರ್ಘಕಾಲದಿಂದ ಹಾಸಿಗೆ ಹಿಡಿದಿರುವ ಕಾರಣ ಹೆಪ್ಪು ಗಟ್ಟಿದ ರಕ್ತದ ಕೆಲ ಕಣಗಳು ಶ್ವಾಸಕೋಶವನ್ನು (ಪಲ್ಮನರಿ ಥ್ರಂಬೋಎಂಬೋಲಿಸಂ) ಪ್ರವೇಶಿಸಿವೆ. ಕಿಡ್ನಿ ಸಮಸ್ಯೆಯೂ ಇದೆ. ಹಾಗಾಗಿ ಪಾಪು ಆರೋಗ್ಯದಲ್ಲಿ ದಿನದಿಂದ ದಿನಕ್ಕೆ ಏರುಪೇರಾಗುತ್ತಿದೆ.

ಶಸ್ತ್ರಚಿಕಿತ್ಸೆ ನಂತರ ಗಂಭೀರ:

ಆಸ್ಪತ್ರೆಗೆ ದಾಖಲಾಗುವ ಮುನ್ನ ಕೆಮ್ಮು, ವಿಪರೀತ ಜ್ವರ, ಉಸಿರಾಟದ ತೊಂದರೆ, ಪ್ರಜ್ಞೆಯಲ್ಲಿ ವ್ಯತ್ಯಾಸ ಕಂಡು ಬಂದಿತ್ತು. ಕೆಲ ದಿನಗಳ ಹಿಂದೆ ಆಯತಪ್ಪಿ ಬಿದ್ದು ತಲೆಗೆ ಪೆಟ್ಟಾಗಿತ್ತು. ಆದಕಾರಣ ಅವರ ಎದೆಯ ಹಾಗೂ ತಲೆಯ ಸಿಟಿ ಸ್ಕಾ್ಯನ್‌ ಮಾಡಿಸಲಾಗಿತ್ತು. ಅದರಲ್ಲಿ ದೀರ್ಘಕಾಲದ ಪುಪ್ಪುಸ ತೊಂದರೆ ಹಾಗೂ ತಲೆಯಲ್ಲಿ ರಕ್ತಸ್ರಾವವಾಗಿದ್ದು ಕಂಡು ಬಂದಿತ್ತು. ರಕ್ತ ಪರೀಕ್ಷೆಯಲ್ಲಿ ಕಿಡ್ನಿ ತೊಂದರೆ ರಕ್ತಹೀನತೆ ಮತ್ತು ಸೋಂಕು ಕಂಡು ಬಂದಿತ್ತು. ಈ ಎಲ್ಲ ಸಮಸ್ಯೆಗಳಿಗೆ ಚಿಕಿತ್ಸೆ ಕೊಡಲಾಗಿದೆ. ಆದರೆ ತಲೆಯಲ್ಲಿ ರಕ್ತಸ್ರಾವ ಜಾಸ್ತಿಯಾದ ಕಾರಣ ತಲೆಯ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ತದನಂತರ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ತದನಂತರದಿಂದ ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿದೆ ಎಂದು ಕಿಮ್ಸ್‌ ನಿರ್ದೇಶಕ ಡಾ. ರಾಮಲಿಂಗಪ್ಪ ಅಂತರದಾನಿ ತಿಳಿಸಿದ್ದಾರೆ. ಸದ್ಯ ಆರೋಗ್ಯ ಕ್ಷೀಣಿಸುತ್ತಿದ್ದು ಪರಿಸ್ಥಿತಿ ಗಂಭೀರವಾಗಿದೆ. ತೀವ್ರ ನಿಗಾ ಘಟಕದಲ್ಲಿರುವ ಪಾಪು ಅವರಿಗೆ ವಿವಿಧ ತಜ್ಞ ವೈದ್ಯರ ತಂಡದಿಂದ ಚಿಕಿತ್ಸೆ ನೀಡಲಾಗುತ್ತಿದೆ ಎಂದು ರಾಮಲಿಂಗಪ್ಪ ವಿವರಿಸಿದ್ದಾರೆ.

ಭಾನುವಾರ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಸಚಿವರಾದ ಜಗದೀಶ ಶೆಟ್ಟರ್‌, ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವರು ಭೇಟಿಯಾಗಿದ್ದರು. ಆದರೆ, ಪಾಪು ಅವರು ಯಾರನ್ನು ಗುರುತು ಹಿಡಿಯಲಿಲ್ಲ ಎಂದು ಹೇಳಲಾಗಿದೆ. ಆದರೆ ಶನಿವಾರ ಮಧ್ಯಾಹ್ನ ತಮ್ಮ ಮೊಮ್ಮಗಳನ್ನು ಕೈ ಸನ್ನೆಯಿಂದ ಮಾತನಾಡಿಸಿದ್ದರು ಎಂದು ಮೂಲಗಳು ತಿಳಿಸಿವೆ.

ಚೇತರಿಸಿಕೊಂಡು ಬರಲಿ: ಶೋಭಾ ಕರಂದ್ಲಾಜೆ

ಕಿಮ್ಸ್‌ಗೆ ಭೇಟಿ ನೀಡಿದ್ದ ಸಂಸದೆ ಶೋಭಾ ಕರಂದ್ಲಾಜೆ, ಪಾಪು ಅವರ ಆರೋಗ್ಯ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಹೇಳಿದರು. ಕಿಮ್ಸ್‌ನಲ್ಲಿ ಪಾಪು ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ನಂತರ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು. ಈ ನಾಡಿನ ಜಲ- ನೆಲ ರಕ್ಷಣೆಗಾಗಿ ನಿರಂತರ ಹೋರಾಟ ಮಾಡಿದ ಮಹಾನ ಚೇತನ ಪಾಪು. ಅವರ ಆರೋಗ್ಯ ಶೀಘ್ರ ಸುಧಾರಿಸಲಿ. ಅವರು ನಮ್ಮೊಂದಿಗೆ ಇರಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ನುಡಿದರು. ಅವರಿಗೆ ಬಸವ ರಾಷ್ಟ್ರೀಯ ಪುರಸ್ಕಾರ ಪ್ರದಾನ ಮಾಡಲು ನಿರ್ಧರಿಸಿರುವುದು ಸಂತಸವನ್ನುಂಟು ಮಾಡಿದೆ ಎಂದು ನುಡಿದರು.

ಕಾರಜೋಳ ಭೇಟಿ:

ಈ ನಡುವೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಕೂಡ ಭಾನುವಾರ ಸಂಜೆ ಕಿಮ್ಸ್‌ಗೆ ಭೇಟಿ ನೀಡಿ ಪಾಟೀಲ ಪುಟ್ಟಪ್ಪ ಅವರ ಆರೋಗ್ಯ ವಿಚಾರಿಸಿದರು. ಕಾರಜೋಳ ಅವರಿಗೆ ಕಿಮ್ಸ್‌ ನಿರ್ದೇಶಕ ರಾಮಲಿಂಗಪ್ಪ, ಅಧೀಕ್ಷಕ ಡಾ. ಅರುಣಕುಮಾರ ಅವರು ಪಾಪು ಆರೋಗ್ಯ ಸ್ಥಿತಿ ಬಗ್ಗೆ ವಿವರಿಸಿದರು.
 

click me!