ವಲಸೆ ಕಾರ್ಮಿಕರು: ಒಡಿಶಾ ಮುಖ್ಯಮಂತ್ರಿ ಪಟ್ನಾಯಕ್‌ ಜೊತೆ ಸಿಎಂ BSY ಚರ್ಚೆ

By Suvarna NewsFirst Published May 2, 2020, 2:01 PM IST
Highlights

ಹೊರ ರಾಜ್ಯಗಳಿಗೆ ಕಾರ್ಮಿಕರನ್ನು ಕಳುಹಿಸುವ ಕುರಿತು ನೋಡಲ್ ಅಧಿಕಾರಿಗಳ ನೇಮಕ| ಒಡಿಶಾದ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು, ಸಮನ್ವಯ ನಿರ್ವಹಿಸುವರು: ಯಡಿಯೂರಪ್ಪ| ಒಡಿಶಾ ರಾಜ್ಯಕ್ಕೆ ಹಿಂತಿರುಗುವ ಕಾರ್ಮಿಕರ ವಿವರ, ಅವರ ಆರೋಗ್ಯ ತಪಾಸಣೆ ಹಾಗೂ ಅವರ ಕ್ವಾರಂಟೈನ್ ವ್ಯವಸ್ಥೆ ಮತ್ತಿತರ ವಿಷಯಗಳ ಕುರಿತು ಸಭೆಯಲ್ಲಿ ಚರ್ಚೆ|
 

ಬೆಂಗಳೂರು(ಮೇ.02): ಕರ್ನಾಟಕದಲ್ಲಿ ನೆಲೆಸಿರುವ ಒಡಿಶಾ ರಾಜ್ಯದ ವಲಸೆ ಕಾರ್ಮಿಕರನ್ನು ಒಡಿಶಾಕ್ಕೆ ಕಳುಹಿಸುವ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಹಾಗೂ ಒಡಿಶಾ ಸಿಎಂ ನವೀನ್ ಪಟ್ನಾಯಕ್ ಅವರು ಇಂದು(ಶನಿವಾರ) ವಿಡಿಯೋ ಕಾನ್ಫರೆನ್ಸ್ ಮೂಲಕ ಸಮಾಲೋಚನೆ ನಡೆಸಿದ್ದಾರೆ. 

ರಾಜ್ಯದಲ್ಲಿ ಲಾಕ್‌ಡೌನ್ ಸಂದರ್ಭದಲ್ಲಿ ವಲಸೆ ಕಾರ್ಮಿಕರಿಗೆ ಎಲ್ಲ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗಿದೆ. ಕಾರ್ಮಿಕರು ಹಸಿವಿನಿಂದ ಬಳಲದಂತೆ ಎಚ್ಚರ ವಹಿಸಲಾಗಿದೆ. ಪ್ರಸ್ತುತ ಕೇಂದ್ರ ಸರ್ಕಾರದ ಮಾರ್ಗಸೂಚಿಗಳಂತೆ ವಿವಿಧ ವಲಯಗಳಲ್ಲಿ ಆರ್ಥಿಕ ಚಟುವಟಿಕೆಗಳನ್ನು ಮರು ಪ್ರಾರಂಭ ಮಾಡಲಾಗುತ್ತಿದೆ. ಇದರಿಂದ ಬಹುತೇಕ ಕಾರ್ಮಿಕರಿಗೆ ಮತ್ತೆ ಉದ್ಯೋಗ ದೊರೆಯಲಿದೆ ಎಂದು ಯಡಿಯೂರಪ್ಪ ಅವರು ತಿಳಿಸಿದರು.

ಲಾಕ್‌ಡೌನ್ ಸಡಿಲಿಕೆ: ಜಿಲ್ಲಾಧಿಕಾರಿಗಳೊಂದಿಗೆ ಸಿಎಂ ಯಡಿಯೂರಪ್ಪ ವಿಡಿಯೋ ಸಂವಾದ

ಹೊರ ರಾಜ್ಯಗಳಿಗೆ ಕಾರ್ಮಿಕರನ್ನು ಕಳುಹಿಸುವ ಕುರಿತು ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಅವರು ಒಡಿಶಾದ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು, ಸಮನ್ವಯ ನಿರ್ವಹಿಸುವರು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಒಡಿಶಾ ರಾಜ್ಯಕ್ಕೆ ಹಿಂತಿರುಗುವ ಕಾರ್ಮಿಕರ ವಿವರ, ಅವರ ಆರೋಗ್ಯ ತಪಾಸಣೆ ಹಾಗೂ ಅವರ ಕ್ವಾರಂಟೈನ್ ವ್ಯವಸ್ಥೆ ಮತ್ತಿತರ ವಿಷಯಗಳ ಕುರಿತು ಚರ್ಚಿಸಲಾಯಿತು ಎಂದು ಹೇಳಿದ್ದಾರೆ.

ಇನ್ನು ಮದ್ಯ ಮಾರಾಟದ ಬಗ್ಗೆ ಮಾಹಿತಿ ನೀಡಿದ ಕಂದಾಯ ಸಚಿವ ಆರ್. ಅಶೋಕ್‌ ಅವರು, ರಾಜ್ಯದಲ್ಲಿ ಮದ್ಯ ಮಾರಾಟ ಮಾಡುವ ಬಗ್ಗೆ ತಿರ್ಮಾನ ಮಾಡಲು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರಿಗೆ ಅಧಿಕಾರ ನೀಡಿದ್ದೇವೆ. ಎಲ್ಲಿ ? ಹೇಗೆ ಮಾರಾಟ ಮಾಡಬೇಕು ಎಂಬುದರ ಬಗ್ಗೆ ಮೇ. 4 ರಂದು ಸಿಎಂ ತಿರ್ಮಾನ ಮಾಡುತ್ತಾರೆ ಎಂದು ಹೇಳಿದ್ದಾರೆ. 

ಈ ಸಭೆಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್, ಒಡಿಶಾ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. 
 

click me!