ಜಾಗತಿಕ ತಾಪಮಾನ ಏರಿಕೆ, ಹವಾಮಾನ ಬದಲಾವಣೆ ಜಗತ್ತಿಗೇ ಸವಾಲು: ಸಚಿವ ಈಶ್ವರ ಖಂಡ್ರೆ

By Kannadaprabha News  |  First Published Jul 3, 2024, 5:13 PM IST

ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆ ಇಡೀ ಜಗತ್ತಿಗೆ ಸವಾಲಾಗಿರುವ ಈ ಕಾಲಘಟ್ಟದಲ್ಲಿ ಪರಿಸರ ಸಂರಕ್ಷಣೆ ಮಾತ್ರ ಸಮೃದ್ಧ ಬದುಕಿಗೆ ಸೋಪಾನವಾಗುತ್ತದೆ ಎಂದು ರಾಜ್ಯ ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ .ಖಂಡ್ರೆ ಅಭಿಪ್ರಾಯಪಟ್ಟಿದ್ದಾರೆ. 


ಬಂಟ್ವಾಳ (ಜು.03): ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆ ಇಡೀ ಜಗತ್ತಿಗೆ ಸವಾಲಾಗಿರುವ ಈ ಕಾಲಘಟ್ಟದಲ್ಲಿ ಪರಿಸರ ಸಂರಕ್ಷಣೆ ಮಾತ್ರ ಸಮೃದ್ಧ ಬದುಕಿಗೆ ಸೋಪಾನವಾಗುತ್ತದೆ ಎಂದು ರಾಜ್ಯ ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ .ಖಂಡ್ರೆ ಅಭಿಪ್ರಾಯಪಟ್ಟಿದ್ದಾರೆ. ತಾಲೂಕಿನ ಆಲಂಪುರಿಯ ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಅರಣ್ಯ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ದಶಲಕ್ಷ ಗಿಡಗಳ ನಾಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಾನವ- ಕಾಡುಪ್ರಾಣಿ ಸಂಘರ್ಷವೇ ಹೆಚ್ಚಾಗುತ್ತಿದ್ದು, ಅಭಿವೃದ್ಧಿಯ ಜೊತೆಗೆ ನೆಲ, ಜಲ, ಪ್ರಾಣಿ ಮತ್ತು ವನ ಸಂರಕ್ಷಣೆಯ ಕಾಳಜಿಯ ಸುಸ್ಥಿರ ಅಭಿವೃದ್ಧಿ ನಮ್ಮ ಸಂಕಲ್ಪವಾಗಬೇಕು ಎಂದು ಹೇಳಿದರು.

ಪರಿಸರ ದಿನ, ವನಮಹೋತ್ಸವದ ದಿನದಂದು ಮಾತ್ರ ಸಸಿ ನೆಟ್ಟು, ನಮ್ಮ ಪರಿಸರ ಪ್ರೇಮ ಮೆರೆದರೆ ಸಾಲದು, ಅದು ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಬೇಕು. ಪ್ರತಿಯೊಬ್ಬರೂ ತಮ್ಮ ಮನೆಯ ಮುಂದೆ ಒಂದು ಗಿಡ ನೆಟ್ಟು ಪೋಷಿಸಬೇಕು ಎಂದು ಈಶ್ವರ ಖಂಡ್ರೆ ಹೇಳಿದರು. ಕಳೆದ ಕೆಲವು ತಿಂಗಳುಗಳಲ್ಲಿ ಇಡೀ ಜಗತ್ತು ಬಿರು ಬಿಸಿಲಿನ ತಾಪದಿಂದ ತತ್ತರಿಸಿ ಹೋಯಿತು. ಭಾರತದಲ್ಲಿ ಈ ಬಾರಿ 40 ಸಾವಿರಕ್ಕೂ ಹೆಚ್ಚು ಜನರು ಸೌರಾಘಾತಕ್ಕೆ ಈಡಾಗಿದ್ದು, 100ಕ್ಕೂ ಹೆಚ್ಚು ಸಾವು ಸಂಭವಿಸಿವೆ. ಹಜ್ ಯಾತ್ರೆಗೆ ಹೋದ ಸಾವಿರಕ್ಕೂ ಹೆಚ್ಚು ಜನರು ಸೌರಶಾಖ ತಾಳಲಾರದೆ ನರಳಿ ಮೃತಪಟ್ಟಿದ್ದನ್ನು ನಾವು ಮಾಧ್ಯಮಗಳಲ್ಲಿ ನೋಡಿದ್ದೇವೆ. ತಾಪಮಾನ ಏರಿಕೆ ತಡೆಯಲು ವೃಕ್ಷ ಸಂರಕ್ಷಣೆಯೇ ಪರಿಹಾರ ಎಂದರು.

Tap to resize

Latest Videos

ಹಿಂದೂ ಧರ್ಮದ ಚಿಂತನೆಗಳ ಮೇಲೆ ರಾಹುಲ್ ಗಾಂಧಿ ಬೆಳೆದಿಲ್ಲ: ಚಕ್ರವರ್ತಿ ಸೂಲಿಬೆಲೆ

ಶ್ರೀಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಸಮಾಜಮುಖಿ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವರು, ಅರಣ್ಯದ ಬಳಿ, ಅರಣ್ಯದಲ್ಲಿ ಪಶು ಪಕ್ಷಿಗಳಿಗೆ ಆಹಾರ ನೀಡುವ ಫಲ ನೀಡುವ ವೃಕ್ಷ ನಾಟಿ ಮಾಡುವ ಈ ಯೋಜನೆ ಫಲಪ್ರದ ಕಾರ್ಯಕ್ರಮ ಎಂದು ಬಣ್ಣಿಸಿದರು. ಅಧ್ಯಕ್ಷತೆ ವಹಿಸಿದ್ದ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಮಾತನಾಡಿ, ಹೊಸ ಸಸಿ ನೆಡುವುದರ ಜೊತೆಗೆ ಇರುವ ವೃಕ್ಷಗಳ ಸಂರಕ್ಷಣೆಯನ್ನೂ ನಾವು ಮಾಡಬೇಕು. ಆಗ ಮಾತ್ರ ಹಸಿರು ಉಳಿಸಲು ಸಾಧ್ಯ. ಈ ಭೂಮಿ ನಮ್ಮದಲ್ಲ. ಮುಂದಿನ ತಲೆಮಾರಿಗೆ ಇದನ್ನು ಕಾಪಾಡುವ ಹೊಣೆ ಹೊರಬೇಕು ಎಂದರು.

ಪುತ್ತೂರಿನ ಪ್ರಗತಿಪರ ಕೃಷಿಕ ಅವಿನಾಶ್‌ ಕೊಡಂಕಿರಿಯವರಿಗೆ ಅರಣ್ಯ ಮಿತ್ರ ಪ್ರಶಸ್ತಿಯನ್ನು ಪ್ರದಾನ ಮಾಡಿದ, ಮಾಜಿ ಸಚಿವ ರಮಾನಾಥ ರೈ ಯವರು ಮಾತನಾಡಿ, ಸಾಲುಮರದ ತಿಮ್ಮಕ್ಕ ಹೆಸರಿನಲ್ಲಿ ಸರ್ಕಾರ ತಾಲೂಕಿಗೊಂದು ಸಸ್ಯೋದ್ಯಾನ ನಿರ್ಮಿಸುವ ಸಂಕಲ್ಪ ತೊಟ್ಟಿದೆ, ಉತ್ತಮ ಭವಿಷ್ಯಕ್ಕೆ ಪರಿಸರ ಸಂರಕ್ಷಣೆಯ ಅಗತ್ಯ ಇದೆ ಎಂದವರು ಅಭಿಪ್ರಾಯಿಸಿದರು. ಶಾಸಕ ರಾಜೇಶ್ ನಾಯ್ಕ್‌ ಅವರು ಸಸಿ ವಿತರಣೆ ಮಾಡಿ, ಮಾತನಾಡಿ, ಪ್ರತಿಗ್ರಾಮಗಳು ಸ್ವಚ್ಛತೆ, ಸಮೃದ್ಧಿ ವಿಚಾರದಲ್ಲಿ ಸ್ವಾವಲಂಬಿಗಳಾದಾಗ ಗಾಂಧೀಜಿ ಕಂಡ ನಿಜವಾದ ರಾಮರಾಜ್ಯದ ಕನಸು ನನಸಾಗಲು ಸಾಧ್ಯ ಎಂದರು. 

ಕಾರ್ಯಕ್ರಮದಲ್ಲಿ ವಗ್ಗ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಶಾಲಾ‌ವನ ನಿರ್ಮಾಣಕ್ಕೆ , ಕಾರಿಂಜೇಶ್ವರ ದೇವಸ್ಥಾನದ ದೇವ ವನ, ರುದ್ರಭೂಮಿ‌ ವನ‌, ಪೊಳಲಿ ಕೆರೆಯ.ಗಳಲ್ಲಿ ಗಿಡನಾಟಿ, ಸಾಲು‌ಮರ ನಾಟಿ, ವಾಣಿಜ್ಯ ಕಾಡು , ಶೌರ್ಯ ವನ ನಿರ್ಮಾಣದ ಗಿಡಗಳನ್ನು ಸಾಂಕೇತಿಕವಾಗಿ ವಿತರಿಸಲಾಯಿತು. ನಂತರ ಅರಣ್ಯ ಸಚಿವ ಈಶ್ವರ ಖಂಡ್ರೆ ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನ ವೀಕ್ಷಿಸಿ, ಅಲ್ಲಿರುವ ವೃಕ್ಷಗಳ ಮಾಹಿತಿ ಪಡೆದರು. ಸಸ್ಯೋದ್ಯಾನಗಳಿಗೆ ಬರುವ ಮಕ್ಕಳಿಗೆ, ಜನರಿಗೆ ಕನಿಷ್ಠ 10 ಗಿಡ ಮರಗಳನ್ನು ಗುರುತಿಸುವಂತೆ ಮಾಹಿತಿ ನೀಡಿ ಎಂದು ಸಲಹೆ ನೀಡಿದರು.

ಸದ್ಯಕ್ಕೆ ಕೇಂದ್ರದಿಂದ ಪರಿಹಾರ ಕೇಳುವ ಸ್ಥಿತಿ ಇಲ್ಲ: ಸಚಿವ ಕೃಷ್ಣ ಬೈರೇಗೌಡ

ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಮಂಗಳೂರು ವೃತ್ತ ದ ಸಿಎಫ್ ಡಾ.ವಿ. ಕರಿಕಾಲನ್, ಕಮಲಾ ಕರಿಕಾಲನ್ , ಮಂಗಳೂರು ವಿಭಾಗದ ಡಿ.ಸಿ.ಎಫ್ ಅಂಟೋನಿ ಮರಿಯಪ್ಪ ವೈ.ಕೆ., ಮಂಗಳೂರು ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ್, ಕಾವಳಪಡೂರು ಗ್ರಾಪಂ ಅಧ್ಯಕ್ಷ ಲಕ್ಷ್ಮೀನಾರಾಯಣ ಶರ್ಮ, ಬಂಟ್ವಾಳ ವಲಯ ಅರಣ್ಯ ಅಧಿಕಾರಿ ಪ್ರಫುಲ್‌ ಶೆಟ್ಟಿ, ಸ್ಥಳೀಯ ಹಲವು ಪ್ರಮುಖರು ವೇದಿಕೆಯಲ್ಲಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆಯ ಕಾರ್ಯನಿರ್ವಾಹಕ ಅನಿಲ್ ಕುಮಾರ್ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಬಂಟ್ವಾಳ ತಾಲೂಕು ಯೋಜನಾಧಿಕಾರಿ ಬಾಲಕೃಷ್ಣ ವಂದಿಸಿದರು. ಶ್ರೀಕ್ಷೃಏತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕರಾದ ವಿವೇಕ್‌ ವಿ. ಪಾಯಸ್‌, ಗಣೇಶ್‌ ಪಿ. ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.

click me!