ಚಿಕ್ಕಮಗಳೂರು ಜಿಲ್ಲೆಯಲ್ಲಿ ಬೆಳ್ಳಂಬೆಳಗ್ಗೆಯೇ ಜೆಸಿಬಿಗಳು ಗರ್ಜಿಸುತ್ತಿದ್ದಂತೆ ದಶಕಗಳಿಂದ ಬದುಕುತ್ತಿದ್ದವರು ಕಂಗಾಲು. ರಸ್ತೆಯ ಜಾಗವನ್ನ ಒತ್ತುವರಿ ಮಾಡಿ ಮನೆಗಳನ್ನ ಕಟ್ಟಿಕೊಂಡಿದ್ದೀರಿ ಅಂತ ರಸ್ತೆ ಬದಿ ಇದ್ದ ಮನೆಗಳನ್ನ ಧ್ವಂಸ ಮಾಡಿದ್ರು.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಅ.9): ಕಾಫಿನಾಡು ಚಿಕ್ಕಮಗಳೂರು ನಗರದ ಬೈಪಾಸ್ ರಸ್ತೆಯಲ್ಲಿ ಇಂದು ಬೆಳ್ಳಂಬೆಳಗ್ಗೆಯೇ ಜೆಸಿಬಿಗಳು ಗರ್ಜನೆ ಮಾಡಿತ್ತು. ಕಳೆದ ಹತ್ತಾರು ವರ್ಷಗಳಿಂದ ನಿರಾಂತಕವಾಗಿ ಬದುಕುತ್ತಿದ್ದ ಕುಟುಂಬಗಳಿಗೆ ಜೆಸಿಬಿಗಳು ಗರ್ಜಿಸುತ್ತಿದ್ದಂತೆ ದಶಕಗಳಿಂದ ಬದುಕುತ್ತಿದ್ದವರು ಕಂಗಾಲಾಗಿದ್ರು. ಚಿಕ್ಕಮಗಳೂರು ನಗರದ ಬೈಪಾಸ್ ರಸ್ತೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಪೊಲೀಸರ ಭದ್ರತೆಯಲ್ಲಿ ಮನೆಗಳ ತೆರವು ಕಾರ್ಯವನ್ನು ನಡೆಸಿದರು. ಬೆಳ್ಳಂಬೆಳಗ್ಗೆಯೇ ಜೆಸಿಬಿ , ಹಿಟಾಚಿಗಳು ಮನೆ ಬಾಗಿಲಲ್ಲಿ ಜಮಾಯಿಸಿದ್ದನ್ನ ಕಂಡು ಜನ ಕಂಗಾಲಾಗಿದ್ರು. ಮನೆಗಳನ್ನ ತೆರವು ಮಾಡದಂತೆ ಮಹಿಳೆಯರು ವಿರೋಧ ವ್ಯಕ್ತಪಡಿಸಿದ್ರು. ಆದ್ರೆ, ಜೆಸಿಬಿಯ ಆರ್ಭಟ ಜೋರಾಗಿ ತೊಡಗಿತು. ಈ ಜಾಗದ ವಿಚಾರ ಕೋರ್ಟಿನಲ್ಲಿದ್ದು, ಇನ್ನೂ ಅಂತಿಮ ತೀರ್ಮಾನ ಬಂದಿಲ್ಲ. ಯಾವುದೇ ಕಾರಣಕ್ಕೂ ಮನೆಗಳನ್ನ ಒಡೆಯಬಾರದು ಅಂತ ಪಟ್ಟು ಹಿಡಿದ್ರು. ಆದ್ರು, ಯಾವ ಆದೇಶವೂ ಇಲ್ಲ ಅಂತ ರಸ್ತೆಯ ಜಾಗವನ್ನ ಒತ್ತುವರಿ ಮಾಡಿ ಮನೆಗಳನ್ನ ಕಟ್ಟಿಕೊಂಡಿದ್ದೀರಿ ಅಂತ ರಸ್ತೆ ಬದಿ ಇದ್ದ ಮನೆಗಳನ್ನ ಧ್ವಂಸ ಮಾಡಿದ್ರು. ಆದರೆ, ಜನ ಒತ್ತುವರಿಯಾಗಿದ್ರೆ ನಗರಸಭೆ ಹತ್ತಾರು ವರ್ಷಗಳಿಂದ ಕಂದಾಯ ಏಕೆ ಕಟ್ಟಿಸಿಕೊಂಡಿದ್ರು ಅನ್ನೋ ಪ್ರಶ್ನೆಗೆ ಅವರ ಬಳಿ ಉತ್ತರವಿರಲಿಲ್ಲ ಎನ್ನುವುದು ನೊಂದವರಾದ ಹೇಮಾವತಿಯವರ ಆಕ್ರೋಶ.
ಮನೆಯಲ್ಲಿದ್ದ ವಸ್ತುಗಳು ಧ್ವಂಸ : ಮಾಲೀಕರ ಆಕ್ರೋಶ
ಚಂದ್ರಶೇಖರ್, ರಾಜಪ್ಪ, ಕೃಷ್ಣಮೂರ್ತಿ, ಕೆಂಚಮ್ಮ ದಯಾನಂದ್ ಎಂಬುವರ ಮನೆಗಳನ್ನ ಧ್ವಂಸ ಮಾಡಿದ್ದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಮನೆಯ ವಸ್ತುಗಳನ್ನ ಧ್ವಂಸ ಮಾಡಿದ್ದಾರೆ. ತಿನ್ನೋ ಅನ್ನವನ್ನೂ ಚೆಲ್ಲಾಡಿದ್ದಾರೆ. ನಮಗೆ ಯಾವುದೇ ಪರಿಹಾರ ನೀಡಿಲ್ಲ. ಹೀಗಾಗಿ ಕೋರ್ಟಿನಲ್ಲಿ ತಡೆ ತಂದಿದ್ರು ಈ ರೀತಿ ಮನೆಗಳನ್ನ ಧ್ವಂಸ ಮಾಡಿರೋದು ಎಷ್ಟರ ಮಟ್ಟಿಗಿನ ನ್ಯಾಯ ಎಂದು ಸ್ಥಳಿಯರು ಅಧಿಕಾರಿಗಳು, ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ನಮ್ಮನ್ನ ಬಡವರು, ದಲಿತರು ಅಂತ ಗುರಿಯಾಗಿಸಿ ನಮ್ಮ ಮನೆಗಳನ್ನ ಮಾತ್ರ ಒಡೆದಿದ್ದಾರೆ ಎಂದು ಆರೋಪಿಸಿ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ರು.
ಚಿಕ್ಕಮಗಳೂರು: ಹದೆಗೆಟ್ಟ ರಸ್ತೆ, ಲೋಕೊಪಯೋಗಿ ಇಂಜಿನಿಯರುಗಳ ಬೆವರಿಳಿಸಿದ ಕಳಸ ಗ್ರಾಮಸ್ಥರು
ಅಂಗವಿಕಲನ ಮನೆಯನ್ನೂ ಬಿಟ್ಟಿಲ್ಲ. ಅಧಿಕಾರಿಗಳಿಗೆ ಮಾನವೀಯತೆಯೇ ಇಲ್ಲ ಎಂದು ಕಿಡಿಕಾರಿದ್ದರು.ಒಟ್ಟಾರೆ, ಮನೆಗಳನ್ನ ಕಳೆದುಕೊಂಡ ಜನ ಸರ್ಕಾರ-ಜನಪ್ರತಿನಿಧಿಗಳ ವಿರುದ್ಧ ಧಿಕ್ಕಾರ ಕೂಗಿದ್ರು. ಹತ್ತಾರು ವರ್ಷಗಳಿಂದ ಬದುಕನ್ನ ಕಟ್ಟಿಕೊಂಡಿದ್ದ ನಮ್ಮನ್ನ ಹೀಗೆ ಇದ್ದಕ್ಕಿದ್ದಂತೆ ಬೀದಿಗೆ ಹಾಕಿದ್ರೆ ಹೇಗೆ ಅಂತ ಪ್ರಶ್ನೆ ಮಾಡಿದ್ರು. ಜನಪ್ರತಿನಿಧಿಗಳು, ಅಧಿಕಾರಿಗಳು ಎಲ್ಲರಿಗೂ ವಿಷಯ ಮುಟ್ಟಿಸಿದ್ದೇವೆ. ಆದ್ರೆ, ಯಾರೂ ಕೂಡ ನಮ್ಮ ನೆರವಿಗೆ ಬರ್ತಿಲ್ಲ. ನಾವು ನ್ಯಾಯಾಲಯದ ಮೆಟ್ಟಿಲು ಏರುತ್ತೇವೆ, ನಮ್ಮ ಕಣ್ಣಲ್ಲಿ ನೀರು ಹಾಕಿಸಿದವರಿಗೆ ಪಾಠ ಕಲಿಸುತ್ತೇವೆ ವ್ಯವಸ್ಥೆಯ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.