
ಚಿತ್ರದುರ್ಗ (ಡಿ.23): ರಾಜ್ಯಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿರುವ ಹುಬ್ಬಳ್ಳಿಯಲ್ಲಿ ಮರ್ಯಾದಾ ಹತ್ಯೆಗೆ ಅಪ್ಪನೇ ಗರ್ಭಿಣಿ ಮಗಳನ್ನು ಕೊಂದ ಪ್ರಕರಣ ಮಾಸುವ ಮುನ್ನವೇ ಚಿತ್ರದುರ್ಗದಲ್ಲಿ ಮತ್ತೊಬ್ಬ ಗರ್ಭಿಣಿ ಯುವತಿ ಜಾತಿ ದ್ವೇಷಕ್ಕೆ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದಾಳೆ.
ಜಿಲ್ಲೆಯ ಚಿತ್ರದುರ್ಗ ತಾಲೂಕಿನ ಕಾಟಿಹಳ್ಳಿ ಗ್ರಾಮದಲ್ಲಿ ಗರ್ಭಿಣಿಯೊಬ್ಬಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇದು ಆತ್ಮ*ಹತ್ಯೆಯಲ್ಲ, ಬದಲಿಗೆ ಜಾತಿ ದ್ವೇಷದ ಹಿನ್ನೆಲೆಯಲ್ಲಿ ನಡೆದ ಕೊಲೆ ಎಂದು ಮೃತರ ಪೋಷಕರು ಗಂಭೀರ ಆರೋಪ ಮಾಡಿದ್ದಾರೆ. ಮೃತಪಟ್ಟ ಯುವತಿಯನ್ನು ಪುಷ್ಪ (25) ಎಂದು ಗುರುತಿಸಲಾಗಿದೆ. ಮಾದಿಗ ಸಮಾಜಕ್ಕೆ ಸೇರಿದ ಪುಷ್ಪ ಮತ್ತು ಬಂಜಾರ ಸಮಾಜದ ಹರೀಶ್ ಎಂಬುವವರು ಎರಡು ವರ್ಷಗಳ ಹಿಂದೆ ಪರಸ್ಪರ ಪ್ರೀತಿಸಿ ವಿವಾಹವಾಗಿದ್ದರು. ಈ ಅಂತರಜಾತಿ ವಿವಾಹಕ್ಕೆ ಕುಟುಂಬಗಳಲ್ಲಿ ಒಪ್ಪಿಗೆ ಇರಲಿಲ್ಲ ಎನ್ನಲಾಗಿದೆ. ದಂಪತಿಗೆ ಈಗಾಗಲೇ ಒಂದೂವರೆ ವರ್ಷದ ಒಂದು ಮಗುವಿದ್ದು, ಪುಷ್ಪ ಇದೀಗ ಎರಡನೇ ಬಾರಿ ಗರ್ಭಿಣಿಯಾಗಿದ್ದರು.
ಮೃತಳ ಪೋಷಕರು ಹರೀಶ್ ಮತ್ತು ಆತನ ಕುಟುಂಬದವರ ಮೇಲೆ ಕೊಲೆ ಆರೋಪ ಹೊರಿಸಿದ್ದಾರೆ. 'ಜಾತಿ ಕಾರಣಕ್ಕಾಗಿ ಹರೀಶ್ ಕುಟುಂಬದವರು ಪುಷ್ಪಳನ್ನು ಮೊದಲಿನಿಂದಲೂ ದ್ವೇಷಿಸುತ್ತಿದ್ದರು. ಮದುವೆಯಾದ ನಂತರವೂ ಆಕೆಯನ್ನು ಸರಿಯಾಗಿ ನಡೆಸಿಕೊಳ್ಳುತ್ತಿರಲಿಲ್ಲ. ಆಕೆಯನ್ನು ಮನೆಯೊಳಗೆ ಬಿಟ್ಟುಕೊಳ್ಳದೆ ದನದ ಕೊಟ್ಟಿಗೆಯಲ್ಲಿ ವಾಸಿಸುವಂತೆ ಚಿತ್ರಹಿಂಸೆ ನೀಡುತ್ತಿದ್ದರು. ಈಗ ಅವರೇ ಕೊಲೆ ಮಾಡಿ, ಅದನ್ನು ಆತ್ಮಹತ್ಯೆಯಂತೆ ಬಿಂಬಿಸಲು ನೇಣು ಹಾಕಿದ್ದಾರೆ' ಎಂದು ಪೋಷಕರು ಅಳಲು ತೋಡಿಕೊಂಡಿದ್ದಾರೆ.
ಮನೆಯಲ್ಲಿ ಪುಷ್ಪ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲು ಪ್ರಯತ್ನಿಸಲಾಯಿತು. ಆದರೆ ಆಸ್ಪತ್ರೆಗೆ ತಲುಪುವಷ್ಟರಲ್ಲಿ ಪುಷ್ಪ ಕೊನೆಯುಸಿರೆಳೆದಿದ್ದಾರೆ. ಒಂದು ಕಡೆ ಒಂದೂವರೆ ವರ್ಷದ ಹಸುಗೂಸು ತಾಯಿಯನ್ನು ಕಳೆದುಕೊಂಡಿದ್ದರೆ, ಇನ್ನೊಂದೆಡೆ ಗರ್ಭದಲ್ಲಿದ್ದ ಶಿಶು ಕೂಡ ಜನಿಸುವ ಮೊದಲೇ ಸಾವನ್ನಪ್ಪಿರುವುದು ಗ್ರಾಮಸ್ಥರ ಕಣ್ಣಾಲಿಗಳನ್ನು ತೇವಗೊಳಿಸಿದೆ.
ವಿಷಯ ತಿಳಿಯುತ್ತಿದ್ದಂತೆ ಚಿತ್ರದುರ್ಗ ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ವರದಿಯ ನಂತರ ಸಾವಿನ ನಿಖರ ಕಾರಣ ತಿಳಿಯಲಿದೆ. ಪೋಷಕರ ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಹರೀಶ್ ಮತ್ತು ಆತನ ಕುಟುಂಬದವರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ. ಜಾತಿ ದ್ವೇಷ ಮತ್ತು ಕೌಟುಂಬಿಕ ಕಲಹ ಒಂದು ತುಂಬು ಗರ್ಭಿಣಿಯ ಜೀವವನ್ನು ಬಲಿಪಡೆದಿರುವುದು ಜಿಲ್ಲೆಯಲ್ಲಿ ಸಂಚಲನ ಮೂಡಿಸಿದೆ.