
ರೈಲ್ವೆ ಸುದ್ದಿ: ರೈಲ್ವೇ ಸಚಿವ ಅಶ್ವಿನ್ ವೈಷ್ಣವ್, ವಿಸ್ತರಿಸಲಾದ ಮಂಗಳೂರು-ಕಾರವಾರ (ಮಡಗಾಂವ್) ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ನವೆಂಬರ್ ಮೂರನೇ ವಾರದೊಳಗೆ ಬೆಂಗಳೂರು-ಮಂಗಳೂರು-ಮಡಗಾಂವ್ ವಂದೇ ಭಾರತ್ ಎಕ್ಸ್‌ಪ್ರೆಸ್ ಆಗಿ ಉದ್ಘಾಟಿಸುವುದಾಗಿ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ತಿಳಿಸಿದ್ದಾರೆ. ಈ ಕುರಿತು ಕಂಪ್ಲೀಟ್ ಸ್ಟೋರಿ ಇಲ್ಲಿದೆ.
ಕರಾವಳಿ ಕರ್ನಾಟಕದ ಮೂರು ಜಿಲ್ಲೆಗಳನ್ನು ರಾಜ್ಯದ ರಾಜಧಾನಿಯೊಂದಿಗೆ ಸಂಪರ್ಕಿಸುವ ಈ ವಿಸ್ತರಿತ ಸೇವೆ ಉದ್ಘಾಟಿಸಲು ತಾವು ಮಂಗಳೂರಿಗೆ ಭೇಟಿ ನೀಡುವುದಾಗಿ ರೈಲ್ವೆ ಸಚಿವರು ಭರವಸೆ ನೀಡಿದ್ದಾರೆ ಎಂದು ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಬುಧವಾರ ನವದೆಹಲಿಯಲ್ಲಿ ಸಂಸದರು ಸಚಿವ ಅಶ್ವಿನ್ ವೈಷ್ಣವ್ ಭೇಟಿಯಾದಾಗ ಈ ಭರವಸೆ ಸಿಕ್ಕಿದೆ. ದಕ್ಷಿಣ ಭಾರತದ ಮೊದಲ ಸ್ಲೀಪರ್ ವಂದೇ ಭಾರತ್ ಎಕ್ಸ್‌ಪ್ರೆಸ್ ಆದ ಬೆಂಗಳೂರು-ಮುಂಬೈ ರೈಲು ಭಾನುವಾರ ಚಾಲನೆಗೊಳ್ಳಲು ನಿಗದಿಯಾಗಿದೆ ಎಂಬುದು ಗಮನಾರ್ಹ ಸಂಗತಿಯಾಗಿದೆ.
ಸೆಪ್ಟೆಂಬರ್ 29 ರಂದು ಮಂಗಳೂರು ಸೆಂಟ್ರಲ್-ಮಡಗಾಂವ್-ಮಂಗಳೂರು ಸೆಂಟ್ರಲ್ ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ಬೆಂಗಳೂರಿಗೆ ವಿಸ್ತರಿಸುವುದಾಗಿ ಘೋಷಿಸಿದ್ದಕ್ಕಾಗಿ ಸಂಸದ ಶ್ರೀ ಪೂಜಾರಿ ಅವರು ರೈಲ್ವೆ ಸಚಿವರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಕರಾವಳಿ ಕರ್ನಾಟಕದ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಕೋಟ ಶ್ರೀನಿವಾಸ ಪೂಜಾರಿ ಮತ್ತು ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಬರೆದಿರುವ ಪತ್ರಗಳಲ್ಲಿ, ಸಚಿವ ವೈಷ್ಣವ್ ಅವರು ಪ್ರಸ್ತುತ ಚಾಲನೆಯಲ್ಲಿರುವ ರೈಲು ಸಂಖ್ಯೆ 20646/20645 ಸೇವೆಯನ್ನು ಯಶವಂತಪುರದವರೆಗೆ ವಿಸ್ತರಿಸಲಾಗುವುದು ಎಂದು ತಿಳಿಸಿದ್ದಾರೆ. ಈ ವಿಸ್ತರಿತ ಸೇವೆಯು ಹೊಸ ರೈಲು ಸಂಖ್ಯೆ 26655/26656 ಯಶವಂತಪುರ-ಮಡಗಾಂವ್-ಯಶವಂತಪುರ ವಂದೇ ಭಾರತ್ ಎಕ್ಸ್‌ಪ್ರೆಸ್ (ಮಂಗಳೂರು ಮಾರ್ಗವಾಗಿ) ಎಂಬ ಹೆಸರಿನಲ್ಲಿ ಪರಿಷ್ಕೃತ ಸಮಯದೊಂದಿಗೆ ಸಂಚರಿಸಲಿದೆ.
ಸಂಸದರು ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರನ್ನೂ ಭೇಟಿಯಾಗಿ, ಕರಾವಳಿ ಕರ್ನಾಟಕದ ಅಗತ್ಯತೆಗಳನ್ನು ಪೂರೈಸುವ ವಂದೇ ಭಾರತ್ ಸೇವೆಗಾಗಿ ಧನ್ಯವಾದ ತಿಳಿಸಿದರು. ಜೊತೆಗೆ, ಮಂಗಳೂರು ರೈಲ್ವೆ ವಲಯವನ್ನು ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗದಿಂದ ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಕ್ಕಾಗಿ ಅವರು ಸೋಮಣ್ಣ ಅವರಿಗೆ ಕೃತಜ್ಞತೆ ಸಲ್ಲಿಸಿದರು.
ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ ಅನ್ನು ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಳಿಸಬೇಕೆಂಬ ಕರಾವಳಿ ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರದ ಜನರ ಸುದೀರ್ಘ ಬೇಡಿಕೆಯತ್ತಲೂ ಕೋಟಾ ಶ್ರೀನಿವಾಸ್ ಪೂಜಾರಿ ಅವರು ರೈಲ್ವೆ ಸಚಿವರು ಹಾಗೂ ರಾಜ್ಯ ಸಚಿವರು ಗಮನ ಸೆಳೆದರು. ಅಲ್ಲದೇ ಆರ್ಥಿಕ ಸಂಕಷ್ಟದ ಕಾರಣದಿಂದಾಗಿ ಕೆಆರ್‌ಸಿಎಲ್ ಸಂಸ್ಥೆಯು ಭಾರತೀಯ ರೈಲ್ವೆಗೆ ಸರಿಹೊಂದುವಂತೆ ಹಳಿಗಳ ದ್ವಿಗುಣಗೊಳಿಸುವಿಕೆ ಮತ್ತು ಮೂಲಸೌಕರ್ಯ ಸುಧಾರಣೆ ಮಾಡುವ ಮೂಲಕ ಸಾಮರ್ಥ್ಯವನ್ನು ಹೆಚ್ಚಿಸಲು ಸಾಧ್ಯವಾಗುತ್ತಿಲ್ಲ. ಈ ವಿಲೀನವನ್ನು ಜಾರಿಗೊಳಿಸಲು ತಕ್ಷಣವೇ ಪಾಲುದಾರ ರಾಜ್ಯಗಳಾದ ಮಹಾರಾಷ್ಟ್ರ, ಗೋವಾ, ಕರ್ನಾಟಕ ಮತ್ತು ಕೇರಳದೊಂದಿಗೆ ಸಮನ್ವಯ ಸಾಧಿಸುವಂತೆ ಅವರು ಸಚಿವಾಲಯಕ್ಕೆ ರಾಜ್ಯ ಸಚಿವ ಸೋಮಣ್ಣ ಮನವಿ ಮಾಡಿದ್ದಾರೆ.