
ಬೆಂಗಳೂರು (ಆ.22): ಆರ್‌ಸಿಬಿ ವಿಜಯೋತ್ಸವ ಸಂದರ್ಭದಲ್ಲಿ ಚಿನ್ನಸ್ವಾಮಿ ಸ್ಟೇಡಿಯಂ ಎದುರು ಆದ ಭೀಕರ ಕಾಲ್ತುಳಿತದಲ್ಲಿ 11 ಜನ ಅಮಾಯಕ ಕ್ರಿಕೆಟ್ ಅಭಿಮಾನಿಗಳು ಸಾವು ಕಂಡಿದ್ದರು. ಆ ಬಳಿಕ ಪೊಲೀಸ್ ಅಧಿಕಾರಿಗಳ ಅಮಾನತು, ಕೆಎಸ್‌ಸಿಎ, ಡಿಎನ್‌ಎ ಹಾಗೂ ಆರ್‌ಸಿಬಿ ಅಧಿಕಾರಿಗಳ ಮೇಲೆ ಕೇಸ್ ಕೂಡ ದಾಖಲಾಗಿತ್ತು. ಶುಕ್ರವಾರ ವಿಧಾನಸಭೆಯಲ್ಲಿ ಸಿಎಂ ಸಿದ್ಧರಾಮಯ್ಯ ಈ ಬಗ್ಗೆ ಮಾತನಾಡಿದರು. ಇದಕ್ಕೂ ಮುನ್ನ ವಿಪಕ್ಷ ನಾಯಕ ಆರ್.ಅಶೋಕ್ ಕೂಡ ಸರ್ಕಾರದ ವಿರುದ್ಧ ಈ ಪ್ರಕರಣದಲ್ಲಿ ವಾಗ್ದಾಳಿ ನಡೆಸಿದರು.
ಅಶೋಕ್ ಸುಧೀರ್ಘವಾಗಿ ಉತ್ತರ ನೀಡಿದ್ದಾರೆ. ಅವರು ಕಾಲ್ತುಳಿತ ಆದ ದಿನವೇ ಸದನದಲ್ಲಿ ಮಾತನಾಡಲು ಸಿದ್ಧತೆ ಮಾಡಿಕೊಂಡಿದ್ದರು ಎನಿಸುತ್ತದೆ. ವೈರ್‌ಲೆಸ್ ಮೆಸೇಜ್ ಎಲ್ಲಾ ಹೇಗಿತ್ತು ಅಂತಾ ಹೇಳಿದ್ದಾರೆ. ಅವರು ಎಲ್ಲಿಂದ ಮಾಹಿತಿ ಪಡೆದರು ಅನ್ನೋದು ಗೊತ್ತಿಲ್ಲ. ಆದರೆ ಅವರ ಮಾಹಿತಿಗೂ ವೈರ್ ಲೆಸ್ ಸಂದೇಶಕ್ಕೂ ಸರಿ ಇದೆ. ಅವರು ಎಲ್ಲಿ ಮಾಹಿತಿ ಪಡೆದರೋ ಗೊತ್ತಿಲ್ಲ ಎಂದು ಸಿಎಂ ಹೇಳಿದ್ದಾರೆ.
ನಿಮಗೆ ಹೃದಯ ಇಲ್ವಾ ಎಂದು ಅಶೋಕ್ ಕೇಳಿದ್ದರು. ನಾನು ಸುಧೀರ್ಘ 42 ವರ್ಷಕ್ಕೂ ಅಧಿಕ ಸಮಯ ಇಲ್ಲಿದ್ದೇನೆ. ಕಾಲ್ತುಳಿತದ ಪ್ರಕರಣದಿಂದ ನನಗೆ ಬಹಳ ನೋವಾಗಿದ್ದು ನಿಜ. ಆ ದಿನ ನಾನು ಜನಾರ್ದನ ಹೊಟೇಲ್ ಗೆ ತಿಂಡಿ ತಿನ್ನೋಕೆ ಹೋಗಿದ್ದೆ. ನನ್ನ ಮೊಮ್ಮಗ ಹಿಂದಿನ ದಿನ ಲಂಡನ್‌ನಿಂದ ಬಂದಿದ್ದ. ಅವನನ್ನು ಕಾರ್ಯಕ್ರಮಕ್ಕೆ ಕರೆದುಕೊಂಡು ಬಂದಿದ್ದೆ. ಅವನು ದೋಸೆ ತಿನ್ನೋಣ ಎಂದ. ನಾನೇ ಕರೆದುಕೊಂಡು ಹೋದೆ. ನಂಗೆ ವಿಷಯ ಗೊತ್ತಾಗಿದ್ದು ಸಂಜೆ 5.30ಕ್ಕೆ. ಪೊನ್ನಣ್ಣ ಹೇಳಿದ ಮೇಲೆ ನನಗೆ ಗೊತ್ತಾಗಿದ್ದು. ನನಗೆ ಅಲ್ಲಿ ತನಕ ವಿಷಯ ಗೊತ್ತಿರಲಿಲ್ಲ. ನಾನು ದಯಾನಂದಗೆ ಕರೆ ಮಾಡಿದೆ. ಅವರು ಒಬ್ಬರು ಸತ್ತಿದ್ದಾನೆ ಅಂತಾ ಮಾಹಿತಿ ನೀಡಿದ್ದರು. ಆದರೆ ಅಷ್ಟರೊಳಗೆ 11 ಜನ ಸಾವು ಕಂಡಿದ್ದರು. ನನಗೆ ಪೊನ್ನಣ್ಣ ಹೇಳುವ ತನಕ ಗೊತ್ತಿರಲಿಲ್ಲ. ಇದನ್ನ ನೀವು ನಂಬಿದ್ರೆ ನಂಬಿ ಬಿಟ್ಟರೆ ಬಿಡಿ ಎಂದು ಹೇಳಿದ್ದಾರೆ.
ಬಳಿಕ ನಾನು ಪರಮೇಶ್ವರ್‌ಗೆ ಕರೆ ಮಾಡಿದೆ. ಅವರಿಗೆ ಆಸ್ಪತ್ರೆ ಹೋಗೊಣ ಎಂದು ಹೇಳಿದೆ. ಅವರು ತಕ್ಷಣ ಬಂದರು. ನಾನು ಮೃತದೇಹಗಳನ್ನು ನೋಡಿದೆ. ಅದು ಬಹಳ ನನಗೆ ಡಿಸ್ಟರ್ಬ್ ಮಾಡಿತು. ನಡೆಯಬಾರದ ಘಟನೆ ನಡೆದಿದೆ. ಅವರು ಮುಂದೆಲ್ಲ ಏನೆಲ್ಲಾ ಕನಸು ಕಂಡಿದ್ದರೋ ಏನೋ? ಇದಾದ ಮೇಲೆ ನಾನು ಮಾಜ್ಯಿಸ್ಟ್ರೇಟ್ ತನಿಖೆಗೆ ಒಪ್ಪಿಸಿದೆ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಕಾಲ್ತುಳಿತ ಪ್ರಕರಣದ ಬಗ್ಗೆ ಉತ್ತರ ನೀಡಲು ಎದ್ದು ನಿಂತಾಗ, ಹೊಸ ಬಟ್ಟೆ ಹಾಕಿದ್ರಲ್ಲ ಎಂದು ಅಶೋಕ್ ಹೇಳಿದ್ದಾರೆ. ಅದು ಕೇಸರಿ ತರ ಕಾಣ್ತಾ ಇದೆ ಎಂದು ಹಾಸ್ಯ ಮಾಡಿದ್ದಾರೆ. ಇಲ್ಲ, ಇದು ಕೇಸರಿ ಬಣ್ಣ ಅಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಈ ವೇಳೆ ಎದ್ದು ನಿಂತ ಸುರೇಶ್ ಕುಮಾರ್, ಬಟ್ಟೆ ಯಾವುದು ಎನ್ನೋದು ಮುಖ್ಯವಲ್ಲ. ಬಟ್ಟೆ ಹಾಕೋದು ಮುಖ್ಯ ಎಂದು ಅಶೋಕ್ ಗೆ ಗೊತ್ತಿಲ್ಲ ಎಂದಿದ್ದಾರೆ. ಹ..... ಸುರೇಶ್ ಕುಮಾರ್ ಅತ್ಯಂತ ಬುದ್ದಿವಂತರು. ಆದರೆ ಅವರ ಬುದ್ದಿ ಸರಿಯಾಗಿ ಬಳಕೆ ಆಗ್ಲಿಲ್ಲ ಎಂದು ಸಿಎಂ ಹೇಳಿದರು.
'ನನಗೆ ಪಕ್ಷ ಎಲ್ಲಾ ನೀಡಿದೆ. ಶಾಸಕ ಆದೆ, ಸಚಿವ ಆದೆ. ಅತ್ಯಂತ ಚೆನ್ನಾಗಿ ನನ್ನ ನಡೆಸಿಕೊಂಡಿದೆ ನಮ್ಮ ಪಾರ್ಟಿ. ಆದರೆ ನಿಮ್ಮ ಹಿಂದಿನ ಪಾರ್ಟಿ ನಿಮ್ಮನ್ನು ಹಾಗೆ ನಡೆಸಿಕೊಳ್ಳಬಹುದಿತ್ತು ಎಂದು ಸುರೇಶ್ ಕುಮಾರ್ ಕಾಲೆಳೆದಿದ್ದಾರೆ. ಅಲ್ಲಾರಿ ನಿಮ್ಮನ್ನು ಕೊನೆಯಲ್ಲಿ ಸಚಿವ ಸ್ಥಾನದಿಂದ ತೆಗೆದುಹಾಕಿದ್ರಲ್ಲ ಎಂದು ಸುರೇಶ್ ಕುಮಾರ್‌ಗೆ ಸಿಎಂ ಛೇಡಿಸಿದ್ದಾರೆ.