ಮಕ್ಕಳ ಕಲಿಕಾಭ್ಯುದಯವೇ ನಮ್ಮ ಸಂಸ್ಥೆಯ ಗುರಿ ಎಂದು ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ನಾಡೋಜ ಡಾ. ಪಿ.ಕೃಷ್ಣ ತಿಳಿಸಿದ್ದಾರೆ.
ತುಮಕೂರು (ಜ. 11) : ಮಕ್ಕಳ ಕಲಿಕಾಭ್ಯುದಯವೇ ನಮ್ಮ ಸಂಸ್ಥೆಯ ಗುರಿ ಎಂದು ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ನಾಡೋಜ ಡಾ. ಪಿ.ಕೃಷ್ಣ ತಿಳಿಸಿದ್ದಾರೆ.
ನಗರದ ಶೇಷಾದ್ರಿಪುರಂ ಶಾಲೆಯ 4ನೇ ವಾರ್ಷಿಕೋತ್ಸವದ ಅಂಗವಾಗಿ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಪಲ್ಲವ ಪ್ರಭ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಸುಮಾರು 93 ವರ್ಷ ಇತಿಹಾಸವಿರುವ ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಯಲ್ಲಿ ಮಕ್ಕಳಿಗೆ ಪ್ಲೇ ಗ್ರೂಫ್,ಮಾಂಟೆಸರಿ ತರಗತಿಯಿಂದ 10ನೇ ತರಗತಿವರೆಗೆ ಕಲಿಸಲಾಗುತ್ತಿದ್ದು, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ,ಅವರ ಭವಿಷ್ಯವನ್ನು ಉಜ್ವಲ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ. ಈ ನಿಟ್ಟಿನಲ್ಲಿ ಸಂಸ್ಥೆಯ ಶಿಕ್ಷಕರು ತಮ್ಮ ಪಾಠ-ಪ್ರವಚನಗಳಿಂದ ವಿದ್ಯಾರ್ಥಿಗಳಿಗೆ ಸರಿಯಾದ ಮಾರ್ಗ ತೋರುವ ಕೆಲಸ ಮಾಡುತ್ತಿದ್ದಾರೆ. ಮಕ್ಕಳ ಕಲಿಕೆಗಾಗಿ ಶಾಲೆಯಿಂದ ಅಗತ್ಯವಿರುವ ಪಾಠೋಪಕರಣ, ಸಲಕರಣೆಗಳನ್ನು ನೀಡಿದರೂ ಸಹ ಮಕ್ಕಳ ಮನಸನ್ನು ಅರಳಿಸುವ ಹಾಗೂ ಅವರ ಉತ್ತಮ ಭವಿಷ್ಯ ರೂಪಿಸುವ ಸೇವೆಯನ್ನು ಶಿಕ್ಷಕರು ಮಾಡುತ್ತಿದ್ದಾರೆ. ಶೇಷಾದ್ರಿಪುರಂ ಕಾಲೇಜಿಗೆ ಶೇ.100ರಷ್ಟುಫಲಿತಾಂಶ ಲಭಿಸಲು ಹಗಲಿರಳು ಶ್ರಮಿಸುತ್ತಿರುವ ಶಿಕ್ಷಕರ ಸೇವೆಗೆ ಸಂಸ್ಥೆ ಆಭಾರಿಯಾಗಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಸಾಂಸ್ಕೃತಿಕ ಚಿಂತಕ,ರಂಗ ನಿರ್ದೇಶಕ,ಕಲಾವಿದ ಶ್ರೀನಿವಾಸಪ್ರಭು ಮಾತನಾಡಿ, ಶರಣರು ಹೇಳಿರುವಂತೆ ನುಡಿದರೆ ಮತ್ತಿನ ಹಾರದಂತೆ ಇರಬೇಕು, ಸ್ಪಟಿಕದ ಸಲಾಕೆಯಂತಿರಬೇಕು ಎಂಬಂತೆ, ಮಾತು ಮತ್ತು ಕೃತಿಗೆ ವ್ಯತ್ಯಾಸವಿಲ್ಲದಂತೆ, ಇನ್ನೊಬ್ಬರ ಮನನೋಯದಂತೆ ಮಾತನಾಡುವುದನ್ನು ನಾವುಗಳು ಕಲಿಯಬೇಕು. ಯಾವುದೇ ವಿಚಾರದ ಬಗ್ಗೆ ಸಂಪೂರ್ಣ ತಿಳುವಳಿಕೆ ಇಲ್ಲದೆ ಮಾತನಾಡುವುದು ಒಳ್ಳೆಯದಲ್ಲ ಎಂಬ ಕಿವಿಮಾತು ಹೇಳಿದರು.
ಕವಯಿತ್ರಿ ಹಾಗೂ ನಿವೃತ್ತ ಕನ್ನಡ ಪ್ರಾಧ್ಯಾಪಕಿ ರಂಜನಿ ಪ್ರಭು ಮಾತನಾಡಿ, ಗುರು, ಶಿಷ್ಯರ ಸಂಬಂಧ ಎಂಬುದು ಅತ್ಯಂತ ಪವಿತ್ರವಾದುದ್ದು, ಶಿಕ್ಷಣ, ಗುರು ಮತ್ತು ವಿದ್ಯಾರ್ಥಿಗಳು ಈ ಮೂರು ಅಂಶಗಳು ಕಲಿಕೆಯ ಆಧಾರಸ್ತಂಬಗಳು, ಇದರ ಜೊತೆಗೆ ಮಕ್ಕಳ ಪೋಷಕರು ಸಹ ಹೆಚ್ಚಿನ ಜವಾಬ್ದಾರಿ ಪ್ರದರ್ಶಿಸಬೇಕಿದೆ ಎಂದರು.
ವೇದಿಕೆಯಲ್ಲಿ ಸಂಸ್ಥೆಯ ಅಧ್ಯಕ್ಷರು ಹಾಗೂ ಗವರ್ನಿಂಗ್ ಕೌನ್ಸಿಲ್ ಟಿ.ಎಸ್.ಹೆಂಜಾರಪ್ಪ,ವಿದ್ಯಾರ್ಥಿಗಳು, ಪೋಷಕರು,ಶಾಲೆಯ ಪ್ರಾಂಶುಪಾಲರು ನಂದರಾಜು,ಬೋಧಕ ಹಾಗೂ ಬೋಧಕೇತರ ವರ್ಗದವರು ಉಪಸ್ಥಿತರಿದ್ದರು.
ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಅವರ ಗೊಂಬೆ ಹೇಳುತತೈ ಗೀತೆ ಸೇರಿದಂತೆ ಚಲನಚಿತ್ರದ ಹಾಡು ಹಾಗೂ ಭಕ್ತಿಗೀತೆಗಳಿಗೆ ಬಣ್ಣ-ಬಣ್ಣದ ಉಡುಗೆ ತೊಟ್ಟು ಹೆಜ್ಜೆ ಹಾಕಿದ ಪುಟಾಣಿ ಮಕ್ಕಳ ನೃತ್ಯ ನೋಡುಗರ ಕಣ್ಣಿಗೆ ಹಬ್ಬದ ವಾತಾವರಣ ಉಂಟು ಮಾಡಿತ್ತು. ಭರತನಾಟ್ಯ,ಯಕ್ಷಗಾನ, ಭೂತದ ಕೋಲ, ಶಾಲಾ ವಾರ್ಷಿಕ ವರದಿ ವಾಚನ,ಬಹುಮಾನ ವಿತರಣೆ ಸೇರಿದಂತೆ ಹಲವಾರು ಕಾರ್ಯಕ್ರಮಗಳು ಜರುಗಿದವು.
ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಪ್ರತಿ ಮಗುವಿನ ಸಮಗ್ರ ಬೆಳವಣಿಗೆಗೆ ಪೂರಕ ವಾತಾವರಣ ಕಲ್ಪಿಸಿ, ಎಲ್ಲರ ಭೌತಿಕ ಮತ್ತು ಬೌದ್ದಿಕ ಬೆಳೆವಣಿಗೆಗೆ ಶ್ರಮವಹಿಸಲಾಗುತ್ತಿದೆ. ಪಠ್ಯದ ಜೊತೆಗೆ, ಪಠ್ಯೇತರ ಚಟುವಟಿಕೆಗಳಲ್ಲಿಯೂ ಮಕ್ಕಳಿಗೆ ಹೆಚ್ಚಿನ ಆಸಕ್ತಿ ಮೂಡುವಂತೆ ಮಾಡಲಾಗುತ್ತಿದೆ.
ನಂದರಾಜು ಪ್ರಾಂಶುಪಾಲ