SSLC ಪರೀಕ್ಷಾ ಮಂಡಳಿ ಮತ್ತೊಂದು ಎಡವಟ್ಟು; 28 ಅಂಕ ಬಂದಿದ್ದ ವಿದ್ಯಾರ್ಥಿಗೆ ಸ್ಕ್ಯಾನ್ ಕಾಪಿಯಲ್ಲಿ ಸಿಕ್ಕಿತು 72 ಅಂಕ!

Published : Apr 27, 2026, 12:09 PM IST
SSLC Marks Sheet error

ಸಾರಾಂಶ

ಚಿಕ್ಕಮಗಳೂರಿನ ಶೃಂಗೇರಿಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ರಾಮದತ್ತ ಶರ್ಮಾ ಇಂಗ್ಲಿಷ್‌ನಲ್ಲಿ 28 ಅಂಕ ಪಡೆದು ಕಂಗಾಲಾಗಿದ್ದ. ಶಿಕ್ಷಕರ ಧೈರ್ಯದ ಮೇರೆಗೆ ಉತ್ತರ ಪತ್ರಿಕೆಯ ಸ್ಕ್ಯಾನ್ ಕಾಪಿ ಪಡೆದಾಗ, ಆತನಿಗೆ ನಿಜವಾಗಿ 72 ಅಂಕ ಬಂದಿರುವುದು ದೃಢಪಟ್ಟಿದೆ.

ಚಿಕ್ಕಮಗಳೂರು (ಏ.27): ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾದಾಗ ಕೆಲವೊಮ್ಮೆ ತಾಂತ್ರಿಕ ದೋಷಗಳು ವಿದ್ಯಾರ್ಥಿಗಳ ಜೀವನದ ಜೊತೆ ಹೇಗೆ ಆಟವಾಡುತ್ತವೆ ಎಂಬುದಕ್ಕೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಕೇವಲ 28 ಅಂಕಗಳನ್ನು ಕಂಡು ಕಂಗಾಲಾಗಿದ್ದ ವಿದ್ಯಾರ್ಥಿಯೊಬ್ಬನಿಗೆ, ಸ್ಕ್ಯಾನ್ ಕಾಪಿ ಬಂದಾಗ ಬರೋಬ್ಬರಿ 72 ಅಂಕಗಳು ಬಂದಿರುವುದು ಬೆಳಕಿಗೆ ಬಂದಿದೆ.

ಏನಿದು ಘಟನೆ?

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪಟ್ಟಣದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ರಾಮದತ್ತ ಶರ್ಮಾ ಎಂಬಾತ ಈ ಅನ್ಯಾಯಕ್ಕೆ ಒಳಗಾದ ದುರ್ದೈವಿ. ಎಸ್.ಎಸ್.ಎಲ್.ಸಿ ಫಲಿತಾಂಶ ಬಂದಾಗ ಇಂಗ್ಲಿಷ್ ಭಾಷೆಯಲ್ಲಿ ರಾಮದತ್ತನಿಗೆ ಕೇವಲ 28 ಅಂಕಗಳು ಲಭಿಸಿದ್ದವು. ಓದಿನಲ್ಲಿ ಮುಂದಿದ್ದ ವಿದ್ಯಾರ್ಥಿಗೆ ಇಷ್ಟು ಕಡಿಮೆ ಅಂಕ ಬಂದಿದ್ದನ್ನು ನೋಡಿ ವಿದ್ಯಾರ್ಥಿ ಹಾಗೂ ಪೋಷಕರು ಅಕ್ಷರಶಃ ಕಂಗಾಲಾಗಿದ್ದರು. ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ರಾಮದತ್ತ ತನಗೆ ಅನ್ಯಾಯವಾಗಿದೆ ಎಂದು ಮನನೊಂದು ಕಣ್ಣೀರಿಟ್ಟಿದ್ದನು.

ಧೈರ್ಯ ತುಂಬಿದ್ದ ಶಿಕ್ಷಕರು:

ವಿದ್ಯಾರ್ಥಿ ರಾಮದತ್ತನ ಅಂಕಗಳನ್ನು ನೋಡಿ ಶಾಲೆಯ ಶಿಕ್ಷಕರಿಗೂ ಅನುಮಾನ ಬಂದಿತ್ತು. ಕೂಡಲೇ ವಿದ್ಯಾರ್ಥಿಯ ಮನೆಗೆ ಭೇಟಿ ನೀಡಿದ ಶಿಕ್ಷಕರು, 'ನೀನು ಚೆನ್ನಾಗಿ ಬರೆದಿರುವುದು ನಮಗೆ ಗೊತ್ತು, ಧೈರ್ಯವಾಗಿರು' ಎಂದು ಸಾಂತ್ವನ ಹೇಳಿದ್ದರು. ಸ್ಕ್ಯಾನ್ ಕಾಪಿ (Scan Copy) ಬರುವವರೆಗೂ ತಾಳ್ಮೆಯಿಂದ ಇರುವಂತೆ ವಿದ್ಯಾರ್ಥಿಗೆ ಧೈರ್ಯ ತುಂಬಿದ್ದರು.

ಬಟಾಬಯಲಾದ ಮಂಡಳಿಯ ಎಡವಟ್ಟು:

ಶಿಕ್ಷಕರ ಮಾರ್ಗದರ್ಶನದಂತೆ ರಾಮದತ್ತ ಇಂಗ್ಲಿಷ್ ಉತ್ತರ ಪತ್ರಿಕೆಯ ಸ್ಕ್ಯಾನ್ ಕಾಪಿಗಾಗಿ ಅರ್ಜಿ ಸಲ್ಲಿಸಿದ್ದನು. ಇಂದು ಸ್ಕ್ಯಾನ್ ಕಾಪಿ ಕೈಗೆ ಬಂದಾಗ ಪರೀಕ್ಷಾ ಮಂಡಳಿಯ ಮತ್ತು ಕಂಪ್ಯೂಟರ್ ಆಪರೇಟರ್‌ನ ಮಹಾನ್ ಎಡವಟ್ಟು ಬಯಲಾಗಿದೆ. ಉತ್ತರ ಪತ್ರಿಕೆಯಲ್ಲಿ ರಾಮದತ್ತನಿಗೆ 72 ಅಂಕಗಳು ಬಂದಿವೆ. ಆದರೆ, ಕಂಪ್ಯೂಟರ್‌ನಲ್ಲಿ ಅಂಕಗಳನ್ನು ನಮೂದಿಸುವಾಗ ಆಪರೇಟರ್ ಮಾಡಿದ ತಪ್ಪು ತಿದ್ದುಪಡಿಯಿಂದ ಕೇವಲ 28 ಅಂಕಗಳು ಮಾತ್ರ ದಾಖಲಾಗಿದ್ದವು.

ಒಟ್ಟಾರೆಯಾಗಿ 44 ಅಂಕಗಳಿಂದ ವಂಚಿತನಾಗಿದ್ದ ರಾಮದತ್ತ ಶರ್ಮಾ, ಈಗ ಸ್ಕ್ಯಾನ್ ಕಾಪಿಯಲ್ಲಿ ತನ್ನ ಅಸಲಿ ಅಂಕಗಳನ್ನು ಕಂಡು ನಿಟ್ಟುಸಿರು ಬಿಟ್ಟಿದ್ದಾನೆ. ಕಳೆದುಹೋಗಿದ್ದ ಮುಖದ ನಗು ಈಗ ಮತ್ತೆ ಮರಳಿದೆ.

ವಿದ್ಯಾರ್ಥಿಗಳ ಆಕ್ರೋಶ:

ಒಬ್ಬ ವಿದ್ಯಾರ್ಥಿಯ ಪರಿಶ್ರಮದ ಫಲವನ್ನು ಇಂತಹ ಸಣ್ಣ ತಪ್ಪುಗಳು ಹಾಳು ಮಾಡುತ್ತವೆ. ಪರೀಕ್ಷಾ ಮಂಡಳಿಯು ಅಂಕಗಳನ್ನು ದಾಖಲಿಸುವಾಗ ಇನ್ನಷ್ಟು ಜಾಗರೂಕತೆ ವಹಿಸಬೇಕೆಂದು ಪೋಷಕರು ಆಗ್ರಹಿಸಿದ್ದಾರೆ. ಒಟ್ಟಿನಲ್ಲಿ, ರಾಮದತ್ತನಿಗೆ ಈಗ ನ್ಯಾಯ ಸಿಕ್ಕಂತಾಗಿದ್ದು, ಶೃಂಗೇರಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರ ಸಮಯಪ್ರಜ್ಞೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

PREV
Read more Articles on
click me!

Recommended Stories

ನಾಲ್ವರು ಸಾಗುತ್ತಿದ್ದ ಬೈಕ್‌ಗೆ ಟಿಪ್ಪರ್ ಡಿಕ್ಕಿ: ಇಬ್ಬರ ದಾರುಣ ಸಾವು, ಯುವತಿ ಕಾಲು ಕಟ್: ಅಪಘಾತದ ರಭಸಕ್ಕೆ ಛಿದ್ರವಾದ ದೇಹಗಳು
SSLCಯಲ್ಲಿ ಜಸ್ಟ್‌ ಪಾಸ್‌, ಫೇಲ್‌ ಆದವರಿಗೆ ಉಂಟು ವಿವಿಧ ಕೋರ್ಸ್; ಧೃತಿಗೆಡುವ ಅಗತ್ಯವೇ ಇಲ್ಲ