Chikkamagaluru Rain; ತತ್ತರಿಸಿದ ಮಲೆನಾಡು, ಮಳೆ ಅಬ್ಬರಕ್ಕೆ ಓರ್ವ ಬಲಿ

By Gowthami K  |  First Published Aug 9, 2022, 8:59 PM IST

ಚಿಕ್ಕಮಗಳೂರು ಜಿಲ್ಲೆಯ ಮಳೆ ಅಬ್ಬರ  ಜೋರಾಗಿದೆ. ಪರಿಣಾಮ ಓರ್ವ ವ್ಯಕ್ತಿ ಜೀವ ಕಳೆದುಕೊಂಡಿದ್ದಾರೆ. ಈ ಬಾರಿ ಮುಂಗಾರಿನ ಅಬ್ಬರಕ್ಕೆ ಮೂರು ಮಂದಿ ಸಾವಿಗೀಡಾದಂತಾಗಿದೆ.


ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ಚಿಕ್ಕಮಗಳೂರು (ಆ.9): ಚಿಕ್ಕಮಗಳೂರು ಜಿಲ್ಲೆಯ ಮಳೆ ಅಬ್ಬರ   ಜೋರಾಗಿದೆ. ಮಳೆಯಿಂದ ಹಲವು  ಅವಾಂತರಗಳು ಸಂಭವಿಸಿದ್ದು, ಓರ್ವ ವ್ಯಕ್ತಿ ಜೀವ ಕಳೆದುಕೊಂಡಿದ್ದಾರೆ. ಈ ಬಾರಿ ಮುಂಗಾರಿನ ಅಬ್ಬರಕ್ಕೆ ಮೂರು ಮಂದಿ ಸಾವಿಗೀಡಾದಂತಾಗಿದೆ. ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಕಾರೊಂದು ಕೊಚ್ಚಿ ಹೋದ ಪರಿಣಾಮ ಚಾಲಕ ಪ್ರಸನ್ನ (51) ಎಂಬುವವರು ಮೃತ ಪಟ್ಟಿರುವ ಘಟನೆ ಎನ್ಆರ್ಪುರ ತಾಲ್ಲೂಕಿನ ಸಾತ್ಕೊಳ ಗ್ರಾಮದಲ್ಲಿ ನಡೆದಿದೆ.ಅರಿಶಿಣಗೆರೆಯ ಪ್ರಸನ್ನ ಅವರು ಸಂಬಂಧಿಕರ ಮನೆಗೆ ಶ್ರಾವಣ ಪೂಜೆ ಕಾರ್ಯಕ್ಕೆಂದು ಹೋಗುವಾಗ ಕಾರು ಸಮೇತ ಹಳ್ಳಕ್ಕೆ ಬಿದ್ದಿದ್ದಾರೆ. ರಭಸವಾಗಿ ನೀರು ಹರಿಯುತ್ತಿದ್ದ ಕಾರಣ ನೂರಾರು ಮೀಟರ್ನಷ್ಟು ದೂರ ಕಾರು ಕೊಚ್ಚಿಕೊಂಡು ಹೋಗಿದೆ.ಸ್ಥಳೀಯರು ಹಳ್ಳದಲ್ಲಿ ಬಿದ್ದಿದ್ದ ಕಾರನ್ನು ಕಂಡು ಪೊಲೀಸರ ಗಮನಕ್ಕೆ ತಂದು ನಂತರ ಮೇಲೆಕ್ಕತ್ತಲಾಗಿದೆ. ಪ್ರಸನ್ನ ಅವರ ಮೃತದೇಹ ಕಾರಿನಲ್ಲಿ ಪತ್ತೆಯಾಗಿದೆ. ಇದರೊಂದಿಗೆ ಮಳೆಯಿಂದ ಜಿಲ್ಲೆಯಲ್ಲಿ ಮೂರು ಮಂದಿ ಜೀವ ಕಳೆದುಕೊಂಡಂತಾಗಿದೆ. ಈ ಹಿಂದೆ ಚಿಕ್ಕಮಗಳೂರು ತಾಲ್ಲೂಕು ಹೊಸಪೇಟೆಯ ಶಾಲಾ ಬಾಲಕಿ ಹಳ್ಳದಲ್ಲಿ ಕೊಚ್ಚಿ ಹೋಗಿದ್ದು, ಇನ್ನೂ ಆಕೆ ಪತ್ತೆಯಾಗಿಲ್ಲ. ಮತ್ತೊಂದು ಪ್ರಕರಣದಲ್ಲಿ ಕಳಸ ತಾಲ್ಲೂಕಿನ ತೋಟದಲ್ಲಿ ಕೆಲಸ ಮಾಡುವಾಗ ಮರ ಬಿದ್ದು ಯುವತಿಯೋರ್ವಳು ಮೃತಪಟ್ಟಿದ್ದರು. ಈ ಎರಡೂ ಪ್ರಕರಣಗಳಲ್ಲೂ ಜಿಲ್ಲಾಡಳಿತ ಕುಟುಂಬಸ್ಥರಿಗೆ ಪರಿಹಾರ ವಿತರಿಸಿದೆ.

Tap to resize

Latest Videos

ಮುಳುಗಿದ ಸೇತುವೆ: ಕುದುರೆಮುಖ ಭಾಗದಲ್ಲಿ ನಿರಂತರವಾಗಿ ಮಳೆ ಸುರಿದ ಪರಿಣಾಮ ಭದ್ರಾ ನದಿ ಉಕ್ಕಿ ಹರಿಯುತ್ತಿದೆ. ಭದ್ರಾ ನದಿ ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದ್ದು ಕಳಸ _ಹೊರನಾಡಿನ ಹೆಬ್ಬಾಳೆ ಸೇತುವೆ ಮೇಲೆ ಇಂದು ಕೂಡ ಭದ್ರಾ ನದಿ ನೀರು ಹರಿದು ಸಂಪರ್ಕ ಕಡಿತಗೊಂಡಿದೆ.ಇನ್ನುಎನ್ಆರ್ಪುರ ತಾಲ್ಲೂಕಿನಲ್ಲಿ ಮಳೆ ಅಬ್ಬರದಿಂದಾಗಿ ಮಹಲ್ಗೋಡು ಸೇತುವೆ  ಮುಳುಗಡೆಯಾಗಿದ್ದು, ಬಾಳೆಹೊನ್ನೂರು-ಕಳಸ ಸಂಪರ್ಕ ಬಂದ್ ಆಗಿದೆ. ಸೇತುವೆ ಮೇಲೆ ನಾಲ್ಕು ಅಡಿ ಹರಿಯುತ್ತಿದೆ. ಇದರಿಂದ ರಸ್ತೆಯ ಎರಡು ಕಡೆ ವಾಹನಗಳು ಗಂಟೆಗಳ ಕಾಲ ನಿಂತಲ್ಲೇ ನಿಲ್ಲಬೇಕಾಯಿತು.

ಹೆದ್ದಾರಿ ಬಿರುಕು: ಮಳೆಯಿಂದ ಶೃಂಗೇರಿ ತಾಲ್ಲೂಕು ಉಳುಮೆ ಗ್ರಾಮದ ಬಳಿ ಕೊಪ್ಪ-ಶೃಂಗೇರಿ ಮಾರ್ಗದ ರಾಜ್ಯ ಹೆದ್ದಾರಿಯಲ್ಲಿ ಬಿರುಕು ಕಾಣಿಸಿಕೊಂಡಿದೆ. ರಸ್ತೆ ಕುಸಿಯುವ ಭೀತಿ ಎದುರಾಗಿದ್ದು ವಾಹನ ಸವಾರರು ಆತಂಕಕ್ಕೊಳಗಾಗಿದ್ದಾರೆ. ಸ್ಥಳೀಯಾಡಳಿತ ಹೆದ್ದಾರಿಯಲ್ಲಿ ಕೆಂಪು ಪಟ್ಟಿ, ಬ್ಯಾರಿಕೇಡ್ ಅಳವಡಿಸಿ ಸವಾರರಿಗೆ ಎಚ್ಚರಿಕೆ ನೀಡಿದೆ.

ಕೊಚ್ಚಿ ಹೋದ ತೋಟ: ಭಾರೀ ಮಳೆಯಿಂದಾಗಿ ಚಿಕ್ಕಮಗಳೂರು ತಾಲ್ಲೂಕಿನ ಹುಣಸೇಹಳ್ಳಿ ಸಮೀಪದ ತಂಬಳ್ಳಿಪುರ ಗ್ರಾಮದಲ್ಲಿ ಗುಡ್ಡ ಜರಿದು ಅಣ್ಣಪ್ಪಶೆಟ್ಟಿ ಎಂಬುವವರಿಗೆ ಸೇರಿದ ಒಂದು ಎಕರೆ ಕಾಫಿ ತೋಟ ಸರ್ವ ನಾಶವಾಗಿದೆ.ತೋಟದಲ್ಲಿ ಹೊಸದಾಗಿ ಹಳ್ಳ ಕೊಳ್ಳಗಳು ಸೃಷ್ಠಿಯಾಗುವಷ್ಟರ ಮಟ್ಟಿಗೆ ಮಳೆ ಸುರಿದಿದೆ. ರಾತ್ರಿ ಕಳೆದು ಬೆಳಗಾಗುವುದರಲ್ಲಿ ತೋಟದ ಸ್ಥಿತಿ ಕಂಡು ಮಾಲೀಕರು, ಮನೆಯವರು ಕಣ್ಣೀರಿಟ್ಟಿದ್ದಾರೆ.ಬೆಳೆದು ನಿಂತಿದ್ದ ಮೆಣಸು, ಅಡಿಕೆ, ಕಾಫಿ, ಬಾಳೆ ನಾಶವಾಗಿದ್ದು, ಸ್ಥಳಕ್ಕೆ ಅಧಿಕಾರಿಗಳು ಬರಬೇಕು, ತೋಟ ಕಳೆದುಕೊಂಡವರಿಗೆ ಪರಿಹಾರ ಕೊಡಿಸಬೇಕು ಎಂದು ರೈತರು ಒತ್ತಾಯಿಸಿದರು.

ರಾತ್ರಿಯಿಡೀ ಜೀವಭಯ: ಭಾರೀ ಮಳೆಯಿಂದ ಭದ್ರಾ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿರುವುದರಿಂದ ಬಾಳೆಹೊನ್ನೂರು ಬಳಿ ನದಿ ಪಾತ್ರದ 5 ಮನೆಗಳ ಕುಟುಂಬಸ್ಥರು ರಾತ್ರಿಯಿಡೀ ನಿದ್ದೆಯಿಲ್ಲದೆ ಜೀವಭಯದಲ್ಲೇ ಕಾಲ ಕಳೆದಿದ್ದಾರೆ.ಸೇತುವೆ ಪಕ್ಕದಲ್ಲೇ ಇರುವ ಈ ಮನೆಗಳ ನಿವಾಸಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕಿದೆ. ಆದರೆ ಸ್ಥಳೀಯ ಶಾಸಕರಾಗಲಿ, ಚುನಾಯಿತ ಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಿ ಇತ್ತ ಸುಳಿದಿಲ್ಲ ಎಂದು ಜನರು ಆಕ್ರೋಶ ವ್ಯಕತಪಡಿಸಿದ್ದಾರೆ.

ತೋಟ ಜಲಾವೃತ: ಭದ್ರಾನದಿ ಅಬ್ಬರದಿಂದಾಗಿ ನದಿ ಪಾತ್ರದ ಅಡಿಕೆ, ಕಾಪಿ ತೋಟ ಸಂಪೂರ್ಣ ಜಲಾವೃತಗೊಂಡಿರುವ ಘಟನೆ ಬಾಳೆಹೊನ್ನೂರಿನ ಭದ್ರಾನದಿಯ  ಸೇತುವೆ ಸಮೀಪ ನಡೆದಿದೆ. ಕಣ್ಣೆದುರೇ ಬೆಳೆ ಹಾನಿಯಾಗುತ್ತಿರುವುದನ್ನು ಕಂಡು ಮಾಲೀಕರು ಮರುಗುತ್ತಿದ್ದಾರೆ.

ಹರಿಯುತ್ತಿದ್ದ ನೀರಲ್ಲಿ ಕಾರು ದಾಟಿಸುವ ಹುಚ್ಚಾಟ: ಕೊಚ್ಚಿ ಹೋಗುತ್ತಿದ್ದವರ ರಕ್ಷಣೆ

ಪಾರಾದ ಮಹಿಳೆ: ನಿರಂತರ ಮಳೆಯಿಂದಾಗಿ ಮನೆಯೊಂದರ ಮೇಲ್ಚಾವಣಿ ಕುಸಿದು ಬಿದ್ದಿದ್ದು, ಮನೆಯಲ್ಲಿದ್ದ ವಳ್ಳಿಯಮ್ಮ ಎಂಬ ಮಹಿಳೆ ಕೂದಲೆಳೆ ಅಂತರದಲ್ಲಿ ಸಾವಿನಿಂದ ಪಾರಾದ ಘಟನೆ ತರೀಕೆರೆ ತಾಲ್ಲೂಕಿನ ಸೀತಾಪುರ ಕಾವಲ್ನಲ್ಲಿ ನಡೆದಿದೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Chitradurga; ಜಿಟಿ ಜಿಟಿ ಮಳೆಗೆ ಅಡಿಕೆ, ಈರುಳ್ಳಿ ಬೆಳೆ ಸಂಪೂರ್ಣ ನಾಶ

ಋಷ್ಯಶೃಂಗನಿಗೆ ಮೊರೆ: ಮಲೆನಾಡು ಸೇರಿದಂತೆ ಜಿಲ್ಲೆಯಾದ್ಯಂತ ಸಂಭವಿಸುತ್ತಿರುವ ಅತಿವೃಷ್ಠಿ ನಿವಾರಣೆಗೆ ಶೃಂಗೇರಿಯ ಕಾಂಗ್ರೆಸ್ ಮುಖಂಡರು ಮಳೆ ದೇವರೆಂದೇ ಪ್ರಸಿದ್ಧವಾದ ಕಿಗ್ಗಾದ ಋಷ್ಯಶೃಂಗ ದೇವರ ಮೊರೆ ಹೋಗಿದ್ದಾರೆ.ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೂಚನೆ ಮೇರೆಗೆ ವಿಶೇಷ ಪೂಜೆ ಸಲ್ಲಿಸಿ ಮಳೆ ಕಡಿಮೆಯಾಗುವಂತೆ ಪ್ರಾರ್ಥಿಸಲಾಗಿದೆ ಎಂದು ಕರ್ನಾಟಕ ಕಿಸಾನ್ ಕಾಂಗ್ರೆಸ್ ಘಟಕದ ಅಧ್ಯಕ್ಷ ಸಚಿನ್ ಮೀಗಾ ತಿಳಿಸಿದ್ದಾರೆ. ಅನಾವೃಷ್ಠಿ ಎದುರಾದಾಗ ಮಳೆ ಸುರಿಸುವ ಹಾಗೂ ಮಳೆಯಿಂದ ಹಾನಿ ಸಂಭವಿಸಿದ ಸಂದರ್ಭದಲ್ಲಿ ಮಳೆ ನಿಯಂತ್ರಿಸುವ ಶಕ್ತಿ ಋಷ್ಯಶೃಂಗ ದೇವರಿಗಿದೆ ಎನ್ನುವ ಪ್ರತೀತಿ ಅನಾದಿಕಾಲದಿಂದಲೂ ಬಂದಿರುವ ಹಿನ್ನೆಲೆಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿದೆ.

click me!