
ಚಿಕ್ಕಮಗಳೂರು (ಅ.07): ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾ*ರ ಹಾಗೂ ಭೂತ ಬಿಡಿಸುವ ನೆಪದಲ್ಲಿ ಹಿಂಸೆ ನೀಡಿದ ಗಂಭೀರ ಪ್ರಕರಣದ ಪ್ರಮುಖ ಆರೋಪಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಕರ್ತವ್ಯಲೋಪ ಎಸಗಿದ ಪೊಲೀಸ್ ಪೇದೆಯನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಎನ್.ಆರ್. ಪುರ ಪೊಲೀಸ್ ಠಾಣೆಯ ಕಾನ್‌ಸ್ಟೆಬಲ್ ಕಾಂತೇಶ್ ಅಮಾನತಾದ ಸಿಬ್ಬಂದಿ ಆಗಿದ್ದಾನೆ.
ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಜಿತೇಂದ್ರ ಕುಮಾರ್ ದಯ್ಮಾ ಅವರು ಪೇದೆ ಕಾಂತೇಶ್ ವಿರುದ್ಧ ಈ ಶಿಸ್ತುಕ್ರಮ ಕೈಗೊಂಡು ಆದೇಶಿಸಿದ್ದಾರೆ. ಭೂತ ಬಿಡಿಸುವ ನೆಪದಲ್ಲಿ ಅಪ್ರಾಪ್ತ ಬಾಲಕಿಗೆ ಕೋಳಿ ರಕ್ತ ಕುಡಿಯುವಂತೆ ಬಲವಂತಪಡಿಸಿ ಹಿಂಸಿಸಿದ ಅಮಾನವೀಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಸಂಬಂಧ ಆರೋಪಿ ಸತೀಶ್ ಪಾತ್ರಿ ವಿರುದ್ಧ ಎನ್.ಆರ್. ಪುರ ಹಾಗೂ ಕೊಪ್ಪ ಪೊಲೀಸ್ ಠಾಣೆಗಳಲ್ಲಿ ಪೋಕ್ಸೋ, ಅತ್ಯಾ*ರ ಹಾಗೂ ವಂಚನೆ ಪ್ರಕರಣಗಳು ದಾಖಲಾಗಿದ್ದವು. ಪ್ರಕರಣ ದಾಖಲಾದ ಬೆನ್ನಲ್ಲೇ ಕಳೆದ ಒಂದು ತಿಂಗಳಿನಿಂದ ಆರೋಪಿ ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದಾನೆ.
ಆರೋಪಿಯನ್ನು ಬಂಧಿಸಲು ಪೊಲೀಸರು ಬಲೆ ಬೀಸಿದ್ದರೆ, ಎನ್.ಆರ್. ಪುರ ಠಾಣೆಯ ಪೇದೆ ಕಾಂತೇಶ್ ಮಾತ್ರ ಆರೋಪಿ ಸತೀಶ್ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದು, ಇಲಾಖೆಯ ಚಲನವಲನ ಹಾಗೂ ಠಾಣೆಯ ಗೌಪ್ಯ ಮಾಹಿತಿಗಳನ್ನು ಆತನಿಗೆ ರವಾನಿಸುತ್ತಿದ್ದ ಎನ್ನಲಾಗಿದೆ. ಪೊಲೀಸರ ಆಂತರಿಕ ತನಿಖೆಯಲ್ಲಿ ಇದು ಬಯಲಾಗುತ್ತಿದ್ದಂತೆ ಎಸ್ಪಿ ಅವರು ಪೇದೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿದ್ದಾರೆ.