
ವರದಿ : ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಮಾ.24): ಕಾಫಿ ನಾಡು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ಈಗ ಅನ್ಯಕೋಮಿನ ಅಪ್ರಾಪ್ತ ಪ್ರೇಮಿಗಳ ಪ್ರಕರಣವೊಂದು ಭಾರೀ ಸದ್ದು ಮಾಡುತ್ತಿದೆ. ಇದು ಕೇವಲ ಪ್ರೇಮ ಪ್ರಕರಣವಾಗಿ ಉಳಿಯದೆ, 'ಲವ್ ಜಿಹಾದ್' ಆರೋಪ, ಹಲ್ಲೆ ಹಾಗೂ ಪೋಕ್ಸೋ ಕಾಯ್ದೆಯಡಿ ದೂರು-ಪ್ರತಿದೂರುಗಳ ಸಮರವಾಗಿ ಮಾರ್ಪಟ್ಟಿದೆ.
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಿಳಗೊಳ ಗ್ರಾಮದಲ್ಲಿ ಅಪ್ರಾಪ್ತ ಯುವಕ-ಯುವತಿಯ ನಡುವಿನ ಪ್ರೀತಿಯ ವಿಚಾರವು ಉದ್ವಿಗ್ನತೆಗೆ ಕಾರಣವಾಗಿ, ಎರಡು ವಿಭಿನ್ನ ಪ್ರಕರಣಗಳು ದಾಖಲಾಗಿರುವ ಘಟನೆ ಬೆಳಕಿಗೆ ಬಂದಿದೆ. ಮೂಡಿಗೆರೆ ತಾಲೂಕಿನ ಬಿಳಗೊಳ ಗ್ರಾಮದ ನಿವಾಸಿಗಳಾದ ಇಬ್ಬರು ಅಪ್ರಾಪ್ತರಾಗಿದ್ದಾರೆ.
ಪಿಯುಸಿ ವ್ಯಾಸಂಗ ಮಾಡುತ್ತಿರುವ ಹಿಂದೂ ಮುದಾಯದ ಹುಡುಗಿ ಮತ್ತು ಎಸ್ ಎಸ್ ಎಲ್ ಸಿ ಓದುತ್ತಿರುವ ಮುಸ್ಲಿಂ ಸಮುದಾಯದ ಹುಡುಗ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು ಎಂದು ತಿಳಿದುಬಂದಿದೆ. ಈ ವಿಚಾರ ಹೊರಬಿದ್ದ ನಂತರ, 'ಲವ್ ಜಿಹಾದ್' ಆರೋಪದಡಿ ಕೆಲವು ಹಿಂದೂ ಸಂಘಟನೆ ಕಾರ್ಯಕರ್ತರು ಅಪ್ರಾಪ್ತ ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಹಲ್ಲೆಗೆ ಒಳಗಾದ ಅಪ್ರಾಪ್ತ ಯುವಕ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಅದರ ಆಧಾರದಲ್ಲಿ ಮೂವರು ಹಿಂದೂ ಸಂಘಟನೆ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಘಟನೆಗೆ ಸಂಬಂಧಿಸಿದಂತೆ ತನಿಖೆ ಮುಂದುವರೆಸಿದ್ದಾರೆ.
ಇನ್ನೊಂದೆಡೆ, ಹುಡುಗಿಯ ತಂದೆಯೂ ಕೂಡ ಅಪ್ರಾಪ್ತ ಮುಸ್ಲಿಂ ಯುವಕನ ವಿರುದ್ಧ ದೂರು ನೀಡಿದ್ದು, ಅದರ ಆಧಾರದಲ್ಲಿ ಪೋಕ್ಸೋ (POCSO) ಕಾಯ್ದೆಯಡಿ ಪ್ರಕರಣ ದಾಖಲಾಗಿರುವುದಾಗಿ ತಿಳಿದುಬಂದಿದೆ. ಅಪ್ರಾಪ್ತರ ನಡುವಿನ ಸಂಬಂಧವಾಗಿರುವುದರಿಂದ ಪ್ರಕರಣ ಇನ್ನಷ್ಟು ಗಂಭೀರತೆಯನ್ನು ಪಡೆದಿದೆ.ಈ ಘಟನೆ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಕಾವಲು ಹೆಚ್ಚಿಸಿದ್ದಾರೆ.
ಈ ಪ್ರಕರಣದಲ್ಲಿ ಯುವಕ ಮತ್ತು ಯುವತಿ ಇಬ್ಬರೂ ಅಪ್ರಾಪ್ತರಾಗಿರುವುದರಿಂದ, ಕಾನೂನು ಪ್ರಕಾರ ಪ್ರಕರಣವನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗುತ್ತಿದೆ. ಪೊಲೀಸರು ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದು, ಹಲ್ಲೆ ಆರೋಪ ಮತ್ತು ಪೋಕ್ಸೋ ಪ್ರಕರಣ ಎರಡರ ಮೇಲೂ ಕ್ರಮ ಕೈಗೊಳ್ಳಲಾಗುತ್ತಿದೆ.