'ಖರ್ಚಿಗೆ ಏನಾದ್ರೂ ಕೊಟ್ರೆ ಜಾಸ್ತಿ ಬರೀತೀನಿ!' ಕಾಡಾನೆ ದಾಳಿ ಪರಿಹಾರಕ್ಕೆ ರೈತನ ಬಳಿಯೇ ಲಂಚ ಕೇಳಿದ ಅರಣ್ಯ ಅಧಿಕಾರಿ!

Published : Apr 01, 2026, 06:18 PM IST
Chikkamagaluru Forest Officer

ಸಾರಾಂಶ

ಚಿಕ್ಕಮಗಳೂರಿನಲ್ಲಿ ಕಾಡಾನೆಗಳಿಂದ ಅಡಿಕೆ ಬೆಳೆ ಕಳೆದುಕೊಂಡ ರೈತನಿಗೆ ಪರಿಹಾರ ಕೊಡಿಸಲು ಬಂದ ಅರಣ್ಯ ಇಲಾಖೆ ಅಧಿಕಾರಿ, ಹೆಚ್ಚಿನ ಪರಿಹಾರ ಕೊಡಿಸಲು ಲಂಚಕ್ಕೆ ಬೇಡಿಕೆಯಿಟ್ಟಿದ್ದಾರೆ. ರೈತ ಲಂಚ ನೀಡಲು ನಿರಾಕರಿಸಿದಾಗ, ಕಡಿಮೆ ಪರಿಹಾರಕ್ಕೆ ವರದಿ ಸಲ್ಲಿಸುವುದಾಗಿ ಬೆದರಿಕೆ ಹಾಕಿದ ವಿಡಿಯೋ ವೈರಲ್ ಆಗಿದೆ.

ಚಿಕ್ಕಮಗಳೂರು (ಏ.01): ಕಾಫಿನಾಡು ಚಿಕ್ಕಮಗಳೂರಿನಲ್ಲಿ ಒಂದೆಡೆ ಕಾಡಾನೆಗಳ ಹಾವಳಿಯಿಂದ ರೈತರು ಹೈರಾಣಾಗಿದ್ದರೆ, ಮತ್ತೊಂದೆಡೆ ಬೆಳೆ ಕಳೆದುಕೊಂಡ ರೈತರಿಗೆ ಪರಿಹಾರ ಕೊಡಿಸಬೇಕಾದ ಸರ್ಕಾರಿ ಅಧಿಕಾರಿಗಳೇ ಲಂಚಕ್ಕಾಗಿ ಪೀಡಿಸುತ್ತಿರುವ ದಂಧೆ ಬಯಲಾಗಿದೆ. 'ನೀವು ಖರ್ಚಿಗೆ ಏನಾದರೂ ಕೊಟ್ಟರೆ ನಾನು ಜಾಸ್ತಿ ಬರೀತೀನಿ, ಇಲ್ಲಾಂದ್ರೆ ಅಷ್ಟೇ ಬರೀತೀನಿ' ಎಂದು ರೈತನ ಮುಖಕ್ಕೆ ಹೊಡೆದಂತೆ ಲಂಚ ಕೇಳಿದ ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.

ಘಟನೆಯ ವಿವರ:

ಚಿಕ್ಕಮಗಳೂರು ತಾಲೂಕಿನ ಕಣತಿ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ. ಕಣತಿ ಗ್ರಾಮದ ರೈತರೊಬ್ಬರ ಜಮೀನಿಗೆ ನುಗ್ಗಿದ್ದ ಕಾಡಾನೆಗಳು ಸುಮಾರು 65 ಅಡಿಕೆ ಮರಗಳನ್ನು ಧ್ವಂಸಗೊಳಿಸಿದ್ದವು. ವರ್ಷಗಟ್ಟಲೆ ಸಾಕಿ ಸಲಹಿದ್ದ ಮರಗಳು ಕಣ್ಣೆದುರೇ ನಾಶವಾಗಿರುವುದನ್ನು ಕಂಡು ಕಂಗಾಲಾಗಿದ್ದ ರೈತ, ಪರಿಹಾರಕ್ಕಾಗಿ ಅರಣ್ಯ ಇಲಾಖೆಗೆ ಮೊರೆ ಹೋಗಿದ್ದರು. ನಿಯಮದಂತೆ ಸ್ಥಳ ಪರಿಶೀಲನೆಗೆ ಬಂದಿದ್ದ ಚಿಕ್ಕಮಗಳೂರು ಅರಣ್ಯ ವಿಭಾಗದ ಕಣತಿ ಬೀಟ್‌ನ ಡಿ.ಆರ್.ಎಫ್.ಓ (DRFO) ವೀರಭದ್ರ ನಾಯಕ್ ಅವರು ರೈತನಿಗೆ ಸಹಾಯ ಮಾಡುವ ಬದಲು ಲಂಚಕ್ಕಾಗಿ ಬೇಡಿಕೆಯಿಟ್ಟಿದ್ದಾರೆ.

ಲಂಚ ಕೇಳಿದ ವಿಲಕ್ಷಣ ರೀತಿ:

ಸರ್ಕಾರದಿಂದ ಬರಬೇಕಾದ ಪರಿಹಾರದ ಮೊತ್ತವನ್ನು ಹೆಚ್ಚಿಸಲು ಅಧಿಕಾರಿ ಬಳಸಿದ ತಂತ್ರ ರೈತರನ್ನು ಕೆರಳಿಸಿದೆ. 'ಖರ್ಚಿಗೆ ಏನಾದ್ರೂ ಕೊಡ್ತೀನಿ ಅಂದ್ರೆ ಜಾಸ್ತಿ ಬರೀತೀನಿ... ಅಲ್ಲಾ... ಈಗ ಕೊಡಬೇಕು... ಕೊಟ್ಟರೆ ಜಾಸ್ತಿ ಬರೀತೀನಿ. ಇಲ್ಲ ಅಂದ್ರೆ 65 ಅಡಿಕೆ ಮರ ಎಂದೇ ಬರೀತೀನಿ' ಎಂದು ವೀರಭದ್ರ ನಾಯಕ್ ಬಹಿರಂಗವಾಗಿಯೇ ಲಂಚಕ್ಕೆ ಡಿಮ್ಯಾಂಡ್ ಮಾಡಿದ್ದಾರೆ. ಅಂದರೆ, ರೈತ ಲಂಚ ನೀಡಿದರೆ ನಷ್ಟದ ಪ್ರಮಾಣವನ್ನು ಹೆಚ್ಚು ಮಾಡಿ ತೋರಿಸಿ ಹೆಚ್ಚಿನ ಪರಿಹಾರ ಕೊಡಿಸುವುದಾಗಿ, ಇಲ್ಲವಾದರೆ ನಿಖರವಾದ ಲೆಕ್ಕವನ್ನೇ ನೀಡುವುದಾಗಿ ಬೆದರಿಕೆ ಹಾಕಿದ್ದಾರೆ.

ಹತ್ತು ಸೆಕೆಂಡ್ ಕಾಯ್ದ ಅಧಿಕಾರಿ:

ವಿಶೇಷವೆಂದರೆ, ಲಂಚ ಕೊಡುತ್ತಾರಾ ಅಥವಾ ಒಪ್ಪಿಕೊಳ್ಳುತ್ತಾರಾ ಎಂದು ಅಧಿಕಾರಿ ವೀರಭದ್ರ ನಾಯಕ್ ಸುಮಾರು 10 ಸೆಕೆಂಡ್‌ಗಳ ಕಾಲ ರೈತನ ಮುಖವನ್ನೇ ನೋಡುತ್ತಾ ಕಾಯುತ್ತಾ ನಿಂತಿದ್ದಾರೆ. ರೈತನಿಂದ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಬಾರದಿದ್ದಾಗ, ಕೋಪಗೊಂಡ ಅಧಿಕಾರಿ ವರದಿಯಲ್ಲಿ '65 ಅಡಿಕೆ ಮರ ನಾಶ' ಎಂದು ಮಾತ್ರ ದಾಖಲಿಸಿದ್ದಾರೆ. ಈ ಇಡೀ ಸಂಭಾಷಣೆಯ ದೃಶ್ಯಗಳನ್ನು ಅಲ್ಲಿಯೇ ಇದ್ದವರು ಚಿತ್ರೀಕರಿಸಿದ್ದು, ಈಗ ಅರಣ್ಯ ಇಲಾಖೆಯ ಭ್ರಷ್ಟ ಮುಖವಾಡ ಬಯಲಾಗಿದೆ.

ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ

ರೈತರ ಆಕ್ರೋಶ:

ಕಾಡಾನೆ ಹಾವಳಿಯಿಂದ ಈಗಾಗಲೇ ಜೀವನೋಪಾಯ ಕಳೆದುಕೊಂಡು ಕಣ್ಣೀರಲ್ಲಿ ಕೈ ತೊಳೆಯುತ್ತಿರುವ ರೈತರಿಗೆ ಸಾಂತ್ವನ ಹೇಳಬೇಕಾದ ಅಧಿಕಾರಿಗಳು, ಹೀಗೆ ಹಗಲು ದರೋಡೆಗೆ ಇಳಿದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ. 'ಒಂದೆಡೆ ಆನೆಗಳಿಂದ ಪ್ರಾಣ ಮತ್ತು ಬೆಳೆ ಉಳಿಸಿಕೊಳ್ಳಲು ನಾವು ಹೋರಾಡುತ್ತಿದ್ದರೆ, ನಮ್ಮ ತೆರಿಗೆ ಹಣದಲ್ಲಿ ಸಂಬಳ ಪಡೆಯುವ ಇವರು ನಮಗೆ ಬಂದ ಪರಿಹಾರದಲ್ಲೂ ಪಾಲು ಕೇಳುತ್ತಿದ್ದಾರೆ' ಎಂದು ಕಣತಿ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ. ಈ ಕೂಡಲೇ ಭ್ರಷ್ಟ ಅಧಿಕಾರಿ ವೀರಭದ್ರ ನಾಯಕ್ ಅವರನ್ನು ಅಮಾನತ್ತುಗೊಳಿಸಬೇಕು ಮತ್ತು ಇಲಾಖೆಯು ರೈತರಿಗೆ ನ್ಯಾಯ ಒದಗಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ. ಘಟನೆಯ ಬಗ್ಗೆ ಮೇಲಧಿಕಾರಿಗಳು ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

PREV
Read more Articles on
click me!

Recommended Stories

ಕೊಪ್ಪಳ ಪಿಎಸ್‌ಐ ಸುನೀಲ್ ಅಮಾನತು; ಅಕ್ರಮಗಳಿಗೆ ಕಡಿವಾಣ ಹಾಕದ ಹಿನ್ನೆಲೆ ಎಸ್ಪಿ ರಾಮ್ ಅರಸಿದ್ದಿ ಖಡಕ್ ಆದೇಶ!
'ಮೂರ್ಖ ಯೋಜನೆಗಳ' ವಿರುದ್ಧ ಬೆಂಗಳೂರಿಗರ ಆಕ್ರೋಶ: ನಗರಾಭಿವೃದ್ಧಿ ಯೋಜನೆಗಳ ಮರುಕಲ್ಪನೆಗೆ ಆಗ್ರಹ