'ಸಂಸದೆ ಶೊಭಾ ಮೌನ ಮುರಿದು ಮಾತನಾಡಲಿ'

By Kannadaprabha NewsFirst Published Feb 1, 2021, 1:23 PM IST
Highlights

ಜಿಲ್ಲೆಯ ಸಮಸ್ಯೆಗಳ ಬಗ್ಗೆ ಸಂಸದೆ ಶೊಭಾ ಕರಂದ್ಲಾಜೆ ಮಾತನಾಡುವ ಅವಶ್ಯಕತೆ ಇದೆ. ಅವರು ಮೌಲ ಮುರಿದು ಅಗತ್ಯತೆಗಳ ಬಗ್ಗೆ ಸಂಸತ್‌ನಲ್ಲಿ ಮಾತನಾಡಲಿ ಎಂದು ಮುಖಂಡರು ಹೇಳಿದ್ದಾರೆ.

ನರಸಿಂಹರಾಜಪುರ (ಫೆ.01):  ಲೋಕಸಭೆ ಅಧಿವೇಶನ ನಡೆಯುತ್ತಿದ್ದು ಉಡುಪಿ-ಚಿಕ್ಕಮಗಳೂರು ಕ್ಷೇತ್ರ ಸಂಸದೆ ಶೋಭಾ ಕರಂದ್ಲಾಜೆ ಮೌನ ಮುರಿದು ಜಿಲ್ಲೆ ಸಮಸ್ಯೆಗಳ ಬಗ್ಗೆ ದ್ವನಿ ಎತ್ತಬೇಕು ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಡಾ. ಕೆ.ಪಿ.ಅಂಶುಮಂತ್‌ ಆಗ್ರಹಿಸಿದರು.

ಭಾನುವಾರ ಮುತ್ತಿನಕೊಪ್ಪದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ 6 ತಾಲೂಕುಗಳ 147 ಗ್ರಾಮಗಳಲ್ಲಿ ಕಸ್ತೂರಿ ರಂಗನ್‌ ವರದಿ, ಪರಿಸರ ಸೂಕ್ಷ್ಮ ವಲಯದ ಸಮಸ್ಯೆ ರೈತರನ್ನು ಕಾಡುತ್ತಿದೆ. ಸಮಸ್ಯೆ ಪರಿಹರಿಸಿ ಎಂದು ರೈತರು ಹಾಗೂ ವಿವಿಧ ಸಂಘಟನೆಗಳು ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಮಾಡಿದ ನಂತರ ರಾಜ್ಯ ಸರ್ಕಾರವು ಈ ಯೋಜನೆಗಳನ್ನು ಕೈ ಬಿಡುವಂತೆ ಕೇಂದ್ರಕ್ಕೆ ತಿಳಿಸಿದೆ. ಆದರೆ, ಕೇಂದ್ರ ಸರ್ಕಾರವು ಮುಂದೆ ಏನು ಮಾಡುತ್ತಿದೆ ಎಂಬುದರ ಬಗ್ಗೆ ಮಾಹಿತಿ ಇಲ್ಲವಾಗಿದೆ ಎಂದರು

ಸಂಸದೆ ಶೋಭಾ ಕರಂದ್ಲಾಜೆ ಕೂಡಲೆ ರಾಜೀನಾಮೆಗೆ ಆಗ್ರಹ ..

ಈ ಸಮಸ್ಯೆಬಗ್ಗೆ ತಾರ್ಕಿಕ ಅಂತ್ಯವಾಗಬೇಕಾಗಿದೆ. 2014 ರಲ್ಲಿ ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಅಧಿಕಾರಕ್ಕೆ ಬಂದರೆ ಕಸ್ತೂರಿ ರಂಗನ್‌ ವರದಿ ತಿರಸ್ಕಾರ ಮಾಡಲಾಗುವುದು ಎಂದು ಭರವಸೆ ನೀಡಿತ್ತು. ಈ ವಿಚಾರ ಪ್ರಸ್ತಾಪ ಮಾಡಲು ಸಂಸತ್‌ ಸೂಕ್ತ ವೇದಿಕೆಯಾಗಿದ್ದು, ಶೋಭಾ ಕರಂದ್ಲಾಜೆ ವಿಷಯ ಪ್ರಸ್ತಾಪ ಮಾಡಬೇಕು. ಅರಣ್ಯ ಇಲಾಖೆಯು ಕೇಂದ್ರದ ವ್ಯಾಪ್ತಿಯಲ್ಲಿ ಬರುತ್ತಿದ್ದು, ಲೋಕಸಭೆಯಲ್ಲಿ ಚರ್ಚೆ ಮಾಡುವ ಮೂಲಕ ಸುಪ್ರೀಂಕೋರ್ಟಿನ ಹಸಿರು ಪೀಠಕ್ಕೆ ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ಒತ್ತಾಯಿಸಿದರು.

ರೈಲು ಯೋಜನೆ ಏನಾಯಿತು?: ಕೇಂದ್ರದಲ್ಲಿ ಯು.ಪಿ.ಎ. ಸರ್ಕಾರ ಇದ್ದಾಗ ಚಿಕ್ಕಮಗಳೂರು- ಬೇಲೂರು-ಹಾಸನ ರೇಲ್ವೆ ಮಾರ್ಗಕ್ಕೆ ಅನುಮೋದನೆ ದೊರಕಿತ್ತು. ಸರ್ಕಾರ ಬದಲಾದ ನಂತರ ಈ ರೈಲ್ವೆ ಮಾರ್ಗದ ಯೋಜನೆ ಏನಾಯಿತು ಎಂಬುದು ತಿಳಿಯುತ್ತಿಲ್ಲ. ಸಂಸದರು ಲೋಕಸಭೆಯಲ್ಲಿ ಈ ವಿಷಯ ಪ್ರಸ್ತಾಪ ಮಾಡಬೇಕು. ಬಿಜೆಪಿ ಸರ್ಕಾರವು ರೈತರನ್ನು ಸಂಪೂರ್ಣವಾಗಿ ಮರೆತು ಬಿಟ್ಟಿದೆ. ಜನವರಿಯಲ್ಲಿ ಬಂದ ಅಕಾಲಿಕ ಮಳೆಯಿಂದಾಗಿ ಕಾಫಿ, ಅಡಕೆ ,ಬತ್ತದ ಬೆಳೆಗೆ ಹಾನಿಯಾಗಿದೆ. 10 ಸಾವಿರ ಕæೂೕಟಿ ರು. ವಿದೇಶಿ ವಿನಿಮಯ ಮಾಡುತ್ತಿರುವ ಕಾಫಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ದಿನೇ ದಿನೇ ಕಾಫಿ ಬೆಲೆ ಕುಸಿಯುತ್ತಿದೆ. ಕೇಂದ್ರ ಸರ್ಕಾರವು ಕಾಫಿಗೆ ಬೆಂಬಲ ಬೆಲೆ ಘೋಷಿಸಿ ಕಾಫಿ ಬೆಳೆಗಾರರ ನೆರವಿಗೆ ಬರಬೇಕು ಎಂದು ಆಗ್ರಹಿಸಿದರು.

ಭತ್ತಕ್ಕೆ 1886 ಬೆಂಬಲ ಬೆಲೆ ಘೋಷಿಸಿದ್ದರೂ ಬತ್ತ ಖರೀದಿ ಕೇಂದ್ರ ಪ್ರಾರಂಭವಾಗಿಲ್ಲ. ಇದರಿಂದ ರೈತರು 1 ಕ್ವಿಂಟಲ್‌ ಭತ್ತವನ್ನು ಕೇವಲ 1200 ದರಕ್ಕೇ ಮಾರುತ್ತಿದ್ದಾರೆ. ಅನ್ನದಾತನ ಬಗ್ಗೆ ಬಿಜೆಪಿ ಸರ್ಕಾರಕ್ಕೆ ಕಾಳಜಿ ಇಲ್ಲವಾಗಿದೆ. ರಸಗೊಬ್ಬರದ ಸಬ್ಸಿಡಿ ನಿಲ್ಲಿಸಲಾಗಿದೆ. ಪೆಟ್ರೋಲ್‌, ಡೀಸೆಲ್‌ ಬೆಲೆ ಗಗನಕ್ಕೇರಿದೆ ಎಂದು ಟೀಕಿಸಿದರು. ಅಡಕೆಗೆ ಹಳದಿ ಎಲೆ ರೋಗದಿಂದಾಗಿ ಕೊಪ್ಪ, ಶೃಂಗೇರಿ, ಕಳಸ, ಮೂಡಿಗೆರೆ ತಾಲೂಕಿನ ಅಡಕೆ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಆದ್ದರಿಂದ ಡಾ.ಗೋರುಕ್‌ ಸಿಂಗ್‌ ವರದಿಯನ್ನು ಸಂಪೂರ್ಣವಾಗಿ ಜಾರಿಗೆ ತರಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಅವರು ಸಂಸತ್‌ನಲ್ಲಿ ದ್ವನಿ ಎತ್ತಬೇಕು ಎಂದು ಡಾ. ಕೆ.ಪಿ.ಅಂಶುಮಂತ್‌ ಆಗ್ರಹಿಸಿದರು.

click me!