ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಕಂಚು ತಂದ ಕೊಪ್ಪದ ಮಣ್ಣಿನ ಮಗಳು ಎಸ್.ಎಸ್ ಸ್ನೇಹಾ

Published : Oct 01, 2026, 09:11 AM IST
SS Sneha

ಸಾರಾಂಶ

ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನ ಮಿಶ್ರ 4x100 ಮೀಟರ್ ರಿಲೇಯಲ್ಲಿ ಕೊಪ್ಪದ ಎಸ್.ಎಸ್. ಸ್ನೇಹಾ ಅವರನ್ನೊಳಗೊಂಡ ಭಾರತ ತಂಡ ಕಂಚಿನ ಪದಕ ಗೆದ್ದಿದೆ. ಈ ಮೂಲಕ ನೂತನ ರಾಷ್ಟ್ರೀಯ ದಾಖಲೆ ನಿರ್ಮಿಸಿರುವ ಮಲೆನಾಡಿನ ಗ್ರಾಮೀಣ ಪ್ರತಿಭೆಯ ಸಾಧನೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

ಚಿಕ್ಕಮಗಳೂರು: ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ ಪ್ರತಿಷ್ಠಿತ 2026ರ ಏಷ್ಯನ್ ಗೇಮ್ಸ್‌ನ ಮಿಶ್ರ 4x100 ಮೀಟರ್ ರಿಲೇ ಸ್ಪರ್ಧೆಯಲ್ಲಿ ಭಾರತ ತಂಡ ಕಂಚಿನ ಪದಕ ಗೆದ್ದು ನೂತನ ರಾಷ್ಟ್ರೀಯ ದಾಖಲೆ ಬರೆದಿದೆ.

ಈ ತಂಡದಲ್ಲಿ ಮಿಂಚಿನ ಓಟದ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಕೀರ್ತಿ ಪತಾಕೆ ಹಾರಿಸಿರುವ ಕರ್ನಾಟಕದ ಹೆಮ್ಮೆಯ ಅಥ್ಲೀಟ್, ಕೊಪ್ಪ ತಾಲೂಕಿನ ಶಾನುವಳ್ಳಿಯ ಎಸ್.ಎಸ್. ಸ್ನೇಹಾ (ಸ್ನೇಹಾ ಸತ್ಯನಾರಾಯಣ ಶಾನುವಳ್ಳಿ) ಅವರ ಸಾಧನೆಗೆ ಎಲ್ಲರ ಮೆಚ್ಚುಗೆ ವ್ಯಕ್ತವಾಗಿದೆ.

ಅಭಿನಂದನೆಗಳ ಮಹಾಪೂರ

ಗ್ರಾಮೀಣ ಯುವ ಪ್ರತಿಭೆ ಜಾಗತಿಕ ವೇದಿಕೆಯಲ್ಲಿ ಇಂತಹ ಉನ್ನತ ಸಾಧನೆ ಮಾಡಿರುವುದಕ್ಕೆ ಕ್ರೀಡಾಭಿಮಾನಿಗಳು, ಸ್ಥಳೀಯ ಸಂಘ-ಸಂಸ್ಥೆಗಳು ಹಾಗೂ ತಾಲೂಕಿನ ಗಣ್ಯರು ಅಪಾರ ಹರ್ಷ ವ್ಯಕ್ತಪಡಿಸಿದ್ದು, ಸ್ನೇಹಾ ಹಾಗೂ ಭಾರತೀಯ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ. ಈ ಐತಿಹಾಸಿಕ ಸಾಧನೆ ಕ್ರೀಡಾಕ್ಷೇತ್ರಕ್ಕೆ ಪಾದಾರ್ಪಣೆ ಮಾಡುತ್ತಿರುವ ರಾಜ್ಯದ ಯುವ ಪೀಳಿಗೆಗೆ, ಅದರಲ್ಲೂ ವಿಶೇಷವಾಗಿ ಗ್ರಾಮೀಣ ಭಾಗದ ಹೆಣ್ಣುಮಕ್ಕಳಿಗೆ ದೊಡ್ಡ ಸ್ಫೂರ್ತಿ.

ಇವರು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಿ ಚಿನ್ನದ ಪದಕಗಳನ್ನು ಗೆದ್ದು ಭಾರತದ ಕೀರ್ತಿ ಪತಾಕೆ ಇನ್ನಷ್ಟು ಹೆಚ್ಚಿಸಲಿ ಎಂದು ಕ್ರೀಡಾಭಿಮಾನಿಗಳು ಹಾರೈಸಿದ್ದಾರೆ.

ರಾಷ್ಟ್ರೀಯ ದಾಖಲೆಯೊಂದಿಗೆ ಕಂಚಿನ ಪದಕ

ತೀವ್ರ ಪೈಪೋಟಿಯಿಂದ ಕೂಡಿದ್ದ ಮಿಶ್ರ 4x100 ಮೀಟರ್ ರಿಲೇ ಅಂತಿಮ ಸುತ್ತಿನಲ್ಲಿ ಭಾರತದ ಸ್ಪರ್ಧಿಗಳಾದ ಗುರಿಂದರ್‌ವೀರ್ ಸಿಂಗ್, ಅನಿಮೇಶ್ ಕುಜೂರ್, ಹರಿತಾ ಭದ್ರಾ ಹಾಗೂ ಕರ್ನಾಟಕದ ಎಸ್.ಎಸ್. ಸ್ನೇಹಾ ಅವರನ್ನೊಳಗೊಂಡ ತಂಡ ಅದ್ಭುತ ಸಮನ್ವಯತೆಯಿಂದ ಓಡಿ 3ನೇ ಸ್ಥಾನ ಗಳಿಸಿದರು. ಈ ಪ್ರದರ್ಶನದ ಮೂಲಕ ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದಲ್ಲದೆ, ನೂತನ ರಾಷ್ಟ್ರೀಯ ದಾಖಲೆ ನಿರ್ಮಿಸಿ ಇತಿಹಾಸ ನಿರ್ಮಿಸಿದ್ದಾರೆ.

ಮಲೆನಾಡಿನಿಂದ ಅಂತಾರಾಷ್ಟ್ರೀಯ ವೇದಿಕೆಗೆ

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ವಿಧಾನಸಭಾ ಕ್ಷೇತ್ರದ ಕೊಪ್ಪ ತಾಲೂಕಿನ ಶಾನುವಳ್ಳಿ ಗ್ರಾಮದ ಎಸ್.ಎಸ್. ಸತ್ಯ ನಾರಾಯಣ ಮತ್ತು ಕೆ.ಎ. ಶಾಲಿನಿ ದಂಪತಿ ಪುತ್ರಿಯಾದ ಸ್ನೇಹಾ, ಶಾಲಾ ದಿನಗಳಿಂದಲೇ ಕ್ರೀಡೆಯಲ್ಲಿ ಅದ್ಭುತ ಪ್ರತಿಭೆ ತೋರುತ್ತಾ ಬಂದವರು. ಗ್ರಾಮೀಣ ಭಾಗದಲ್ಲಿ ಸೀಮಿತ ಕ್ರೀಡಾ ಸೌಲಭ್ಯಗಳ ನಡುವೆಯೂ ಕಠಿಣ ಪರಿಶ್ರಮ, ಅಚಲ ಶ್ರದ್ಧೆ ಹಾಗೂ ನಿರಂತರ ಅಭ್ಯಾಸದ ಬಲದಿಂದ ರಾಜ್ಯ, ರಾಷ್ಟ್ರ ಮತ್ತು ಈಗ ಏಷ್ಯಾ ಮಟ್ಟದಲ್ಲಿ ಛಾಪು ಮೂಡಿಸಿದ್ದಾರೆ.

PREV
Read more Articles on
click me!

Recommended Stories

ಹಿಂದಿಗಿಂತ ಈ ಸರ್ಕಾರದಲ್ಲೇ ಲಂಚ ಹೆಚ್ಚು: ಗುತ್ತಿಗೆದಾರರಿಂದ 75% ಕಮಿಷನ್ ಬಾಂಬ್, ಸಿಎಂ ಕ್ರಮಕ್ಕೆ ಸಿದ್ಧರಿದ್ದಾರಾ?
73ರ ವೃದ್ಧ ಧರ್ಮರಾಜ್ ಅವ್ರಿಗೆ ಬಟ್ಟೆ ವ್ಯಾಪಾರಕ್ಕೆ 53 ವರ್ಷಗಳಿಂದ ಸೈಕಲ್ಲೇ ಅಂಗಡಿ!