ಅಜ್ಜಂಪುರದ ತಾಲೂಕಿನ ಬರಗಾಲಕ್ಕೆ ಸೆಡ್ಡು ಹೊಡೆಯಲು ಜಿಲ್ಲಾಧಿಕಾರಿಗಳಿಂದ ಮಹಾ ಪ್ಲಾನ್

Published : Oct 09, 2026, 04:23 PM IST
Ajjampur

ಸಾರಾಂಶ

ಚಿಕ್ಕಮಗಳೂರು ಜಿಲ್ಲೆಯ ಬರಪೀಡಿತ ಅಜ್ಜಂಪುರ ತಾಲೂಕಿನಲ್ಲಿ ನೀರಿನ ಸಮಸ್ಯೆ ಬಗೆಹರಿಸಲು ಜಿಲ್ಲಾಧಿಕಾರಿಗಳು ಮಹತ್ವದ ಆದೇಶವೊಂದನ್ನು ಹೊರಡಿಸಿದ್ದಾರೆ. ಅಲ್ಲದೆ, ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಮತ್ತು ಖಾಲಿ ಜಾಗಗಳಲ್ಲಿ ಮೇವು ಬೆಳೆಯಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಚಿಕ್ಕಮಗಳೂರು: ತೀವ್ರ ಬರಪೀಡಿತವಾದ ಅಜ್ಜಂಪುರ ತಾಲೂಕಿನಲ್ಲಿ ನೀರಿನ ಸಮಸ್ಯೆ ಎದುರಾಗದಂತೆ 10 ಹೊಸ ಕೆರೆಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ ಅಧಿಕಾರಿಗಳಿಗೆ ಸೂಚಿಸಿದರು.

ಗುರುವಾರ ಅಜ್ಜಂಪುರ ತಾಲೂಕಿನ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಬಗ್ಗವಳ್ಳಿಯ ಕೆರೆ ತುಂಬಿಸುವ ಯೋಜನೆ ಹಾಗೂ ಗೊಂಡೇದಹಳ್ಳಿಯಲ್ಲಿ ಹೊಸ ಕೆರೆ ನಿರ್ಮಿಸಲು ಗುರುತಿಸಿರುವ ಸ್ಥಳ ಪರಿಶೀಲಿಸಿದರು.

ಮೂರು ಕೆರೆಗಳ ನಿರ್ಮಾಣಕ್ಕೆ ಒಟ್ಟು 60 ಎಕರೆ ಜಾಗ

ಅಜ್ಜಂಪುರ ತಾಲೂಕಿನಲ್ಲಿ ಹೊಸ 10 ಕೆರೆ ನಿರ್ಮಿಸಿದರೆ ಸುತ್ತಮುತ್ತಲಿನ ಗ್ರಾಮದ ಜನರಿಗೆ ಅನುಕೂಲವಾಗಲಿದೆ. ಅಂತರ್ಜಲ ಹೆಚ್ಚಾಗಲಿದೆ ಎಂದರು. ಅದಕ್ಕೆ ಪ್ರಕ್ರಿಯಿಸಿದ ತಹಸೀಲ್ದಾರ್ ವಿನಾಯಕ ಸಾಗರ್, ಈಗಾಗಲೇ ಮೂರು ಕೆರೆಗಳ ನಿರ್ಮಾಣಕ್ಕೆ ಒಟ್ಟು 60 ಎಕರೆ ಜಾಗ ಗುರುತಿಸಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

54 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ

ಬಳಿಕ ತಾಪಂ ಸಭಾಂಗಣದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಬರ ನಿರ್ವಹಣೆ ಕುರಿತು ಸಭೆ ನಡೆಸಿ, ಕುಡಿವ ನೀರಿನ ಸಮಸ್ಯೆ ಇರುವ ಗ್ರಾಮಗಳ ಮಾಹಿತಿ ಪಡೆದರು. ಸದ್ಯ ಅಜ್ಜಂಪುರ ತಾಲೂಕಿನ ಒಂದು ಗ್ರಾಮಕ್ಕೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಮೂರು ಗ್ರಾಮಗಳಲ್ಲಿ ಖಾಸಗಿ ವ್ಯಕ್ತಿಗಳ ಬೋರ್‌ವೆಲ್‌ಗಳನ್ನು ಬಾಡಿಗೆಗೆ ಪಡೆದು ನೀರು ಸರಬರಾಜು ಮಾಡಲಾಗುತ್ತಿದೆ. ಮುಂದಿನ ಒಂದು ತಿಂಗಳಲ್ಲಿ ಸುಮಾರು 54 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ ಎಂಬ ವರದಿ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮ ಕೈ ಗೊಳ್ಳಲಾಗುವುದು ಎಂದು ತಹಸೀಲ್ದಾರ್ ತಿಳಿಸಿದರು.

ಮೇವಿಗೆ ಕೊರತೆ ಆಗದಂತೆ ಕ್ರಮವಹಿಸಿ

ಬರ ಪರಿಸ್ಥಿತಿಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಕ್ರಮ ಕೈಗೊಳ್ಳುವ ಉದ್ದೇಶದಿಂದ ಜಿಲ್ಲಾಧಿಕಾರಿ ಬೀರೂರು ಹಾಗೂ ಅಜ್ಜಂಪುರದ ಅಮೃತ್ ಮಹಲ್ ತಳಿ ಸಂವರ್ಧನ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಮೇವು ಬೆಳೆಯಲಾದ ಪ್ರದೇಶಗಳನ್ನು ವೀಕ್ಷಿಸಿ, 100 ಎಕರೆ ಪ್ರದೇಶದಲ್ಲಿ ಮೇವು ಬೆಳೆಯಲು ವಿಬಿಜಿ ರಾಂಜಿ ಯೋಜನೆಯಡಿ ಜಿಪಂ ನಿಂದ ಅನುದಾನ ಪಡೆದು ಕ್ರಮ ಕೈಗೊಳ್ಳಲು ಸೂಚಿಸಿದರು. ಬೆಳೆದ ಮೇವನ್ನು ತುರ್ತು ಸಂದರ್ಭದಲ್ಲಿ ವಿತರಿಸಲು ಶೇಖರಿಸಿಡುವಂತೆ ಕಡೂರು ತಾಪಂ ಕಾರ್ಯನಿರ್ವಾಹಕ ಅಧಿಕಾರಿಗೆ ತಿಳಿಸಿದರು.

ಅಮೃತ್ ಮಹಲ್ ತಳಿ ಸಂವರ್ಧನ ಕೇಂದ್ರದಲ್ಲಿ ಖಾಲಿ ಜಾಗದಲ್ಲಿ ಮೇವು ಬೆಳೆವಂತೆ ಸೂಚಿಸಿದಾಗ, ಆ ಜಾಗ ಕೇಂದ್ರದ ರಾಸುಗಳ ಮೇಯುವಿಕೆಗೆ ಬಳಸಲಾಗುತ್ತಿದೆ. ಉಳಿದ ಜಾಗದಲ್ಲಿ ಮೇವು ಬೆಳೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರದ ಉಪನಿರ್ದೇಶಕರು ತಿಳಿಸಿದರು.

ಸಭೆ ಬಳಿಕ ಹೆಬ್ಬೂರು ಲಿಫ್ಟ್ ಇರಿಗೇಶನ್ ಪಾಯಿಂಟ್ ಹಾಗೂ ಗೌರಾಪುರ ಗ್ರಾಮಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ, ಭದ್ರಾ ಮೇಲ್ದಂಡೆ ಯೋಜನೆಯಡಿ ಹನಿ ನೀರಾವರಿ ಮೂಲಕ ಜಮೀನುಗಳಿಗೆ ನೀರು ಒದಗಿಸುತ್ತಿರುವ ವ್ಯವಸ್ಥೆ ಪರಿಶೀಲಿಸಿದರು.

ಅಜ್ಜಂಪುರ ತಹಸೀಲ್ದಾರ್ ವಿನಾಯಕ ಸಾಗರ್, ಕಡೂರು ತಹಸೀಲ್ದಾರ್ ಪೂರ್ಣಿಮಾ, ಪಶುಪಾಲನೆ ಇಲಾಖೆಯ ಉಪ ನಿರ್ದೇಶಕ ಡಾ.ಬಿ.ಜಿ.ಗುರುಶಾಂತಪ್ಪ ಹಾಗೂ ಅಜ್ಜಂಪುರ ಮತ್ತು ಕಡೂರು ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

PREV
Read more Articles on
click me!

Recommended Stories

Mysuru: ದಸರಾ ಸಂಭ್ರಮಾಚರಣೆಯ ವೇಳೆಯೇ ಚಾಮುಂಡಿ ಬೆಟ್ಟದಲ್ಲಿ ನಿಷೇಧಾಜ್ಞೆ, ಕಮಿಷನರ್ ಸೀಮಾ ಲಾಟ್ಕರ್ ಆದೇಶ
Haveri: ಪಿಡಿಒ ಕೊಠಡಿಯಲ್ಲಿ ಹಸು ಕಟ್ಟಿದ ಗ್ರಾಮಸ್ಥರು: ಏನಿದು ವಿಶಿಷ್ಟ ಪ್ರತಿಭಟನೆ