
ಹುಣಸೂರು (ಡಿ.16): ರಾಜ್ಯದಲ್ಲಿ ನಡೆಯುತ್ತಿರುವ ಜೆಡಿಎಸ್ ಪಕ್ಷದ ಪಂಚರತ್ನ ಯೋಜನೆ ಯಾತ್ರೆಯ ಸಮಾವೇಶ ವರದಾನ ವಾಗಲಿದೆ. ಮುಂದಿನ ದಿನದಲ್ಲಿ ಸರ್ಕಾರ ರಚನೆ ಮಾಡುವ ಮೂಲಕ ನೊಂದವರ ಮತ್ತು ಶೋಷಿತರ ಒಳತಿಗಾಗಿ ಕೆಲಸ ಮಾಡಲಾಗುತ್ತದೆ ಎಂದು ಮಾಜಿ ಸಿ.ಎಂ. ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಬೆಂಗಳೂರಿನ ಜೆಡಿಎಸ್ (JDS) ಪಕ್ಷದ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಸ್. ಚಿಕ್ಕಮಾದು ಪುತ್ರಿ ರಂಜಿತಾ, ಜಿಪಂ ಮಾಜಿ ಸದಸ್ಯ ಸಿ.ಟಿ. ರಾಜಣ್ಣ ಸೇರಿದಂತೆ ಹಲವರು ಕಾಂಗ್ರೆಸ್ ಮತ್ತು ಬಿಜೆಪಿ (BJP) ಬಿಟ್ಟು ಜೆಡಿಎಸ್ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಳೆದ ಎರಡು ಬಾರಿ ಅಲ್ಪ ಅವಧಿ ಸರ್ಕಾರ ನಡೆಸಿ ಎಲ್ಲ ವರ್ಗಗಳ ಜನರ ಒಳತಿಗಾಗಿ ಕೆಲಸ ಮಾಡಿರುವುದನ್ನು ಜನ ಮರೆತಿಲ್ಲ. ಆದರೆ ಪೂರ್ಣ ಅವಧಿಯ ಅಧಿಕಾರವಿಲ್ಲದ ಕಾರಣ ಎಲ್ಲ ವರ್ಗಗಳನ್ನು ಮುಟ್ಟಲು ಸಾಧ್ಯವಾಗಿಲ್ಲ. ಆದ್ದರಿಂದ ಈ ಬಾರಿ ನಡೆಯುವ ಚುನಾವಣೆಯಲ್ಲಿ ಅತ್ಯಧಿಕ ಮತಗಳಿಂದ ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ರಾಜ್ಯದಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಕೆಲಸವನ್ನು ಕಾರ್ಯಕರ್ತರು ಮತ್ತು ಮತದಾರರು ಮಾಡುವಂತೆ ಮನವಿ ಮಾಡಿದರು.
ಮೈಸೂರು- ಚಾಮರಾಜನಗರ ಜಿಲ್ಲೆ ಜಿಟಿಡಿಗೆ
ಮೊಟ್ಟಮೊದಲ ಬಾರಿಗೆ ಮುಖ್ಯಮಂತ್ರಿ ಆಗುವ ಮುನ್ನ ಮೈಸೂರಿನಿಂದ ಜಿ.ಟಿ. ದೇವೇಗೌಡರು ಘೋಷಣೆ ಮಾಡಿದ್ದರು. ಮುಂದಿನ ದಿನದಲ್ಲೂ ಮೈಸೂರಿನಿಂದಲ್ಲೆ ನಮ್ಮ ಪ್ರಚಾರ ಆರಂಭವಾಗುತ್ತದೆ. ಆದ್ದರಿಂದ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ ಶಾಸಕ ಹಾಗೂ ಪಕ್ಷದ ಹಿರಿಯ ಮುಖಂಡ ಜಿ.ಟಿ. ದೇವೇಗೌಡರ ನೇತೃತ್ವದಲ್ಲಿ ಜೆಡಿಎಸ್ ಪಕ್ಷದ ಸಂಘಟಿಸಿ, 13 ಶಾಸಕರನ್ನು ಗೆಲ್ಲಿಸುವ ಹೊಣೆಗಾರಿಕೆ ನೀಡಲಾಗಿದೆ ಎಂದರು.
ಹರೀಶ್ ಗೌಡಗೆ ಆನೆ ಬಲ ಬಂದಿದೆ
ಹುಣಸೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಜಿ.ಡಿ. ಹರೀಶ್‌ಗೌಡರ ನೇತೃತ್ವದಲ್ಲಿ ಅನೇಕರು ಕಾಂಗ್ರೆಸ್ ಮತ್ತು ಬಿಜೆಪಿ ತೊರೆದು ಜೆಡಿಎಸ್ ಪಕ್ಷವನ್ನು ಸೇರ್ಪಡೆಯಾಗುವ ಮೂಲಕ ಪಕ್ಷಕ್ಕೆ ಆನೆ ಬಲ ಬಂದಿದೆ. ಅವರ ಗೆಲುವಿನ ದಾರಿ ಸುಗಮವಾಗಿದೆ ಎಂದರು.
ಜೆಡಿಎಸ್ ಪಕ್ಷದ ತೆಕ್ಕೆಗೆ ರಾಷ್ಟ್ರೀಯ ಪಕ್ಷ ತೊರೆದು ಜೆಡಿಎಸ್ ಪಕ್ಷಕ್ಕೆ ನಮ್ಮ ಪಕ್ಷದ ಮಾಜಿ ಶಾಸಕ ದಿ ಎಸ್. ಚಿಕ್ಕಮಾದು ಅವರ ಪುತ್ರಿ ರಂಜಿತಾ ಚಿಕ್ಕಮಾದು ಹಾಗೂ ಜಿಪಂ ಮಾಜಿ ಸದಸ್ಯ ಹಿರಿಯ ಮುಖಂಡ ಸಿ.ಟಿ. ರಾಜಣ್ಣ, ತಟ್ಟೆಕೆರೆ ಶ್ರೀನಿವಾಸ್, ಜಾಬಗೆರೆ ತಿಮ್ಮನಾಯಕ, ಗವಿನಾಯಕ, ಜಗದೀಶ್ ಮೊದಲಾದ ಮುಖಂಡರು, ಎಚ್‌ಡಿಕೆ ಮತ್ತು ಜಿಟಿಡಿ ನೇತೃತ್ವದಲ್ಲಿ ಚುನಾಯಿತ ಪ್ರತಿನಿಧಿಗಳು ಪಕ್ಷ ಸೇರುವ ಮೂಲಕ ಜೆ.ಡಿ. ಹರೀಶ್‌ಗೌಡರ ಗೆಲುವಿಗೆ ಸಹಕಾರಿಯಾಗುತ್ತಿರುವು ಜೆಡಿಎಸ್ ಪಕ್ಷಕ್ಕೆ ಹೊಸ ಚೈತನ್ಯ ತುಂಬಿದಂತಾಗಿದೆ ಎಂದರು.
ಶಾಸಕ ಜಿ.ಟಿ. ದೇವೇಗೌಡ ಮಾತನಾಡಿ, ರಾಜ್ಯದಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಮೂಲಕ ಕುಮಾರಣ್ಣನನ್ನು ಮುಖ್ಯಮಂತ್ರಿ ಮಾಡಬೇಕು ಎಂಬ ಎಚ್.ಡಿ. ದೇವೇಗೌಡರ ಕನಸಿಗೆ ಪ್ರತಿಯೊಬ್ಬ ಮುಖಂಡರು ಶ್ರಮಿಸಬೇಕಿದೆ ಜತೆಗೆ ಇದು ಹುಣಸೂರಿನಿಂದ ಪ್ರಾರಂಭವಾಗಿದೆ ಎಂದರು.
ರಾಜ್ಯದ ಅಭಿವೃದ್ದಿ ಮತ್ತು ರೈತರು, ಬಡವರು ಹಾಗೂ ನೊಂದವರ ಪರ ಕೆಲಸ ಮಾಡಲು ಕುಮಾರಣ್ಣ ಮುಖ್ಯಮಂತ್ರಿ ಆಗಬೇಕಿದೆ. ಕಾರ್ಯಕರ್ತರು ಸೈನಿಕರಂತೆ ಕೆಲಸ ಮಾಡಿ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಬೇಕಿದೆ ಹಾಗೂ ಜಿಲ್ಲೆಯಲ್ಲಿ ಸಾ.ರಾ. ಮಹೇಶ್, ಮಹದೇವ್, ಅಶ್ವಿನ್‌ಕುಮಾರ್ ಒಟ್ಟಾಗಿ ಸೇರಿ ಪಕ್ಷ ಸಂಘಟನೆ ಮಾಡುತ್ತೆವೆ ಎಂದರು.
ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಾತನಾಡಿ, ರಾಜ್ಯದಲ್ಲಿ ಪಂಚರತ್ನ ಯೋಜನೆ ಯಾತ್ರೆಯಿಂದ ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ಪ್ರಯತ್ನ ಮಾಡಲಾಗುತ್ತಿದೆ. ಜಿ.ಟಿ. ದೇವೇಗೌಡರು ಪಕ್ಷದಲ್ಲಿ ಉಳಿದಿದ್ದರಿಂದ ಪಕ್ಷವನ್ನು ಅಧಿಕಾರಕ್ಕೆ ತರುವುದರಲ್ಲಿ ಮತ್ತಷ್ಟುಬಲ ಬಂದಂತಾಗಿದೆ ಎಂದರು.
ಹುಣಸೂರು ಕ್ಷೇತ್ರದ ಜೆಡಿಎಸ್‌ಅಭ್ಯರ್ಥಿ ಜಿ.ಡಿ. ಹರೀಶ್‌ಗೌಡ ಮಾತನಾಡಿ, ಕ್ಷೇತ್ರದಲ್ಲಿ ರಂಜಿತಾ ಚಿಕ್ಕಮಾದು ಮತ್ತು ಸಿ.ಟಿ. ರಾಜಣ್ಣ ಸೇರಿದಂತೆ ನೂರಾರು ಮುಖಂಡರು ಪಕ್ಷ ಸೇರುವ ಮೂಲಕ ಜೆಡಿಎಸ್‌ಗೆ ಮತ್ತಷ್ಟುಬಲ ಬಂದಂತಾಗಿದೆ ಎಂದರು.
ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ, ಶಾಸಕರಾದ ಕೆ. ಮಹದೇವ್, ಅಶ್ವಿನ್ ಕುಮಾರ್, ಬಿ.ಎಂ. ಫಾರುಕ್, ಎಚ್.ಎಂ. ರಮೇಶ್‌ಗೌಡ, ಮಾಜಿ ಶಾಸಕರಾದ ಶಾರದಪೂರಾರಯ ನಾಯಕ್, ಪಾವಗಡ ತಿಮ್ಮರಾಯಪ್ಪ ಸೇರಿದಂತೆ ಹಲವು ಶಾಸಕರು, ಜನಪ್ರತಿನಿಧಿಗಳು ಮುಖಂಡರು ಇದ್ದರು.