ರೈಲು ಆರಂಭಕ್ಕೆ ಇನ್ನೂ ಎಷ್ಟು ದಿನ ? ಪ್ರಯಾಣಿಕರಿಗೆ ಬಸ್ ದರದ ಹೊರೆ

By Suvarna NewsFirst Published Jul 10, 2021, 7:12 PM IST
Highlights
  • ಬೆಂಗಳೂರು ಮತ್ತಿತರ ಕಡೆ ಕೆಲಸಕ್ಕೆ ತೆರಳುವ ಉದ್ಯೋಗಿಗಳಿಗೆ ಸಂಕಷ್ಟ
  • ಜಿಲ್ಲೆಯಲ್ಲಿ ನಿತ್ಯ 6 ರೈಲುಗಳ ಸಂಚಾರ, ಲಾಕ್‌ಡೌನ್‌ ಬಳಿಕ ರೈಲು ಸಂಚಾರ ಸ್ಥಗಿತ
  • ಜನ ಸಾಮಾನ್ಯರಿಗೆ ರೈಲು ಪ್ರಯಾಣ ಸುಲಭ, ಜನಪ್ರತಿನಿಧಿಗಳು ಗಮನ ಹರಿಸುವಂತೆ ಆಗ್ರಹ

ಚಿಕ್ಕಬಳ್ಳಾಪುರ(ಜು.10): ಕೊರೋನಾ ಎರಡನೇ ಅಲೆ ಅರ್ಭಟ ತಗ್ಗಿ ರಾಜ್ಯ ಸರ್ಕಾರ ಲಾಕ್‌ಡೌನ್‌ ತೆರವುಗೊಳಿಸಿ ಎಲ್ಲಾ ವಲಯಗಳನ್ನು ಮುಕ್ತಗೊಳಿಸುವ ಮೂಲಕ ಅನ್‌ಲಾಕ್‌ ಪ್ರಕ್ರಿಯೆ ಶುರುವಾದರೂ ಜಿಲ್ಲೆಯಲ್ಲಿ ಪ್ಯಾಸೆಂಜರ್‌ ರೈಲ್ವೇ ಆರಂಭಗೊಳ್ಳದೇ ಇರುವುದು ರೈಲು ಸಂಚಾರವನ್ನೆ ನಂಬಿರುವ ಪ್ರಯಾಣಿಕರಿಗೆ ಈಗ ಸಂಕಷ್ಟಎದುರಾಗಿದೆ.

ಕೋಲಾರ ಚಿಕ್ಕಬಳ್ಳಾಪುರ ಅವಿಭಜಿ ಜಿಲ್ಲೆಗಳಿಗೆ ಮೊದಲೇ ರೈಲು ಸೇವೆ ತೀರಾ ಕಡಿಮೆ. ಆದರೂ ಜಿಲ್ಲೆಯಲ್ಲಿ ಕೊರೋನಾ 2ನೇ ಅಲೆ ವೇಳೆ ಜಾರಿಗೊಂಡ ಲಾಕ್‌ಡೌನ್‌ನಿಂದ ಸ್ಥಗಿತಗೊಂಡ ರೈಲು ಸಂಚಾರ ಇದೀಗ ಅನ್‌ಲಾಕ್‌ ಆದರೂ ಆರಂಭಗೊಳ್ಳದಿರುವ ಕಾರಣ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗುತ್ತಿದೆ.

ಸಾವಿರಾರು ಕುಟುಂಬಗಳಿಗೆ ತೊಂದರೆ

ಈಗಾಗಲೇ ರಾಜ್ಯ ಸರ್ಕಾರ ಎಲ್ಲಾ ವಲಯಗಳನ್ನು ವಿಶೇಷವಾಗಿ ಸಾರಿಗೆ ಹಾಗೂ ರೈಲು ಸಂಚಾರಕ್ಕೆ ಮುಕ್ತ ಅವಕಾಶ ಕಲ್ಪಿಸಿದೆ. ಅದರಂತೆ ರಾಜ್ಯಾದ್ಯಂತ ಪ್ಯಾಸೆಂಜರ್‌ ರೈಲು ಸೇವೆ ಪ್ರಯಾಣಿಕರಿಗೆ ಸಿಗುತ್ತಿದ್ದರೂ ಬೆಂಗಳೂರಿಗೆ ಅತ್ಯಂತ ಸನಿಹದಲ್ಲಿರುವ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಯ ಜನತೆಗೆ ಮಾತ್ರ ಇನ್ನೂ ರೈಲು ಸಂಚಾರ ಆರಂಭಗೊಳ್ಳದೇ ಇರುವುದು ಒಂದು ರೀತಿ ಸಂಕಷ್ಟಕ್ಕೀಡು ಮಾಡಿದೆ. ಮೊದಲೇ ಜಿಲ್ಲೆಯಲ್ಲಿ ಉದ್ಯೋಗಾವಕಾಶಗಳು ಕಡಿಮೆ. ಕುಟುಂಬ ಪೋಷಣೆಗೆ ಬೆಂಗಳೂರನ್ನೇ ನಂಬಿರುವ ಸಾವಿರಾರು ಕುಟುಂಬಗಳು ಇವೆ.

ಹೆಚ್ಚಿನ ಜಿಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಆದರೆ ಎರಡು ತಿಂಗಳಿಂದ ಲಾಕ್‌ಡೌನ್‌ಗೆ ತುತ್ತಾಗಿದ್ದ ಬಡ ಕುಟುಂಬಗಳು ಉದ್ಯೋಗಕ್ಕಾಗಿ ಹಾತೊರೆಯುವ ಪರಿಸ್ಥಿತಿ ಇದೆ. ಕೆಲಸ ಸಿಕ್ಕೂ ದುಬಾರಿ ಬಸ್‌ ಪ್ರಯಾಣ ದರ ಭರಿಸಲಾಗದೇ ಸಾಕಷ್ಟುಮಂದಿ ಉದ್ಯೋಗಸ್ಥರು ಬೆಂಗಳೂರಿಗೆ ತೆರಳುತ್ತಿಲ್ಲ. ಆದರೆ ರೈಲ್ವೆ ಪ್ಯಾಸೆಂಜರ್‌ ರೈಲು ಆರಂಭಗೊಂಡದೇ ಕೈಗೆಟುಕುವ ಬೆಲೆಯಲ್ಲಿ ಬೆಂಗಳೂರು ತಲುಪಬಹುದೆಂಬ ಲೆಕ್ಕಾಚಾರ ಜಿಲ್ಲೆಯ ಜನ ಸಾಮಾನ್ಯರ ಲೆಕ್ಕಾಚಾರ.

ಬಸ್‌ ಪ್ರಯಾಣ ದರ ಹೆಚ್ಚು

ಈಗಾಗಲೇ ಪೆಟ್ರೋಲ್‌, ಡೀಸೆಲ್‌ ಬೆಲೆ ಹೆಚ್ಚಳ ಆಗುತ್ತಿದ್ದಂತೆ ಬಸ್‌ ಪ್ರಯಾಣ ದರ ಹೆಚ್ಚಾಗಿದೆ. ಬೆಂಗಳೂರಿಗೆ ಹೋಗಿ ಬರಬೇಕಾದರೆ ಕನಿಷ್ಠ 200 ರು, ಇರಬೇಕು, ಅದೇ ರೈಲಿನಲ್ಲಿ ಉದ್ಯೋಗ ಸ್ಥಳಕ್ಕೆ ಮುಟ್ಟಬೇಕಾದರೆ ಕನಿಷ್ಠ 50 ರು, ಇದ್ದರೆ ಸಾಕು. ಬೆಂಗಳೂರಿಗೆ ಹೋಗಿ ಬರಬಹುದು. ಆದರೆ ರೈಲು ಸಂಚಾರ ಇನ್ನೂ ಆರಂಭಗೊಳ್ಳದಿರುವುದು ಅಂತೂ ಖಾಸಗಿ ವಲಯದಲ್ಲಿ ಉದ್ಯೋಗ ಮಾಡುವ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳ ಸಾವಿರಾರು ಮಂದಿಗೆ ತೊಂದರೆಯಾಗಿದೆ.

ಈ ಬಗ್ಗೆ ಸಂಬಂದಪಟ್ಟಜಿಲ್ಲೆಯ ರೈಲ್ವೆ ಪ್ರತಿನಿಧಿಗಳು, ಕ್ಷೇತ್ರದ ಸಂಸದರು, ಶಾಸಕರು, ಸಚಿವರು ಗಮನ ಹರಿಸಿ ರೈಲ್ವೆ ಇಲಾಖೆ ಮೇಲೆ ಒತ್ತಡ ತಂದು ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪುನಃ ರೈಲು ಸಂಚಾರಕ್ಕೆ ಇಲಾಖೆ ಅಧಿಕಾರಿಗಳ ಮೇಲೆ ಒತ್ತಡ ತಬೇಕಿದೆ.

ಕಿಸಾನ್‌ ರೈಲು ನೆಪವೊಡ್ಡಿ ರೈಲು ಸಂಚಾರಕ್ಕೆ ಬ್ರೇಕ್‌!

ಕೊರೋನಾ ಲಾಕ್‌ಡೌನ್‌ಗೆ ಮೊದಲು ಪ್ರತಿ ದಿನ ಬೆಂಗಳೂರು ವಯಾ ಚಿಕ್ಕಬಳ್ಳಾಪುರ ಮೂಲಕ ಕೋಲಾರಕ್ಕೆ 6 ರೈಲುಗಳು ಸಂಚರಿಸುತ್ತಿದ್ದವು. ಹೀಗಾಗಿ ಪ್ರತಿ ನಿತ್ಯ ಬೆಂಗಳೂರಿಗೆ ತೆರಳುವ ಉದ್ಯೋಗಸ್ಥರಿಂದ ಹಿಡಿದು ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲವಾಗಿತ್ತು. ಆದರೆ ಲಾಕ್‌ಡೌನ್‌ ಬಳಿಕ ಸ್ಥಗಿತಗೊಂಡ ರೈಲು ಸಂಚಾರ ಅನ್‌ಲಾಕ್‌ ಆದರೂ ಆರಂಭಗೊಳ್ಳದಿರುವುದು ರೈಲ್ವೆ ಪ್ರಯಾಣಿಕರಿಗೆ ತೊಂದರೆ ಆಗಿದೆ. ಜೊತೆಗೆ ಜಿಲ್ಲೆಯಲ್ಲಿ ಕಿಸಾನ್‌ ರೈಲು ಸಂಚಾರ ಮಾಡುತ್ತಿರುವುದನ್ನು ನೆಪವೊಡ್ಡಿ ಪ್ಯಾಸೆಂಜರ್‌ ರೈಲು ಆರಂಭಿಸುವ ಬಗ್ಗೆ ರೈಲ್ವೆ ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ಹೊಂದಿದ್ದಾರೆಂಬ ಮಾತು ರೈಲ್ವೆ ಇಲಾಖೆ ಅಧಿಕಾರಿಗಳಿಂದಲೇ ಕೇಳಿ ಬರುತ್ತಿದೆ.

click me!