ಚಿಕ್ಕಬಳ್ಳಾಪುರ (ಸೆ.25): ದೆಹಲಿ ರೈತರ ಹೋರಾಟ (Farmers Protest) ಬೆಂಬಲಿಸಿ ಹಾಗೂ ಕೇಂದ್ರದ ಕೃಷಿ ಕಾಯ್ದೆಗಳ ವಾಪಸ್ಸುಗೆ ಆಗ್ರಹಿಸಿ ರೈತಪರ ಸಂಘಟನೆಗಳ ಒಕ್ಕೂಟ ಕರೆ ನೀಡಿರುವ ಸೆ.27ರ ಅಖಿಲ ಭಾರತ ಬಂದ್‌ಗೆ (Bharat Bandh) ಜಿಲ್ಲೆಯಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು ಜಿಲ್ಲೆಯ ಹಲವಾರು ರೈತಪರ ಸಂಘಟನೆಗಳು, ಕನ್ನಡಪರ ಸಂಘಟನೆಗಳು ಹಾಗೂ ದಲಿತ ಪರ ಸಂಘಟನೆಗಳು ಬಂದ್ ಬೆಂಬಲ ಘೋಷಿಸಿ ಹೇಳಿಕೆ ನೀಡಿವೆ.
ಚಿಕ್ಕಬಳ್ಳಾಪುರ (chikkaballapura) ಪತ್ರಕರ್ತರ ಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕೋಡಿಹಳ್ಳಿ ಬಣ, ಶಿವರಾಮೇಗೌಡ ಬಣದ ಕರವೇ, ಕನ್ನಡ ಸೇನೆ, ಕಾಂಗ್ರೆಸ್ ಕಿಸಾನ್ ಘಟಕ, ಸಾಮೂಹಿಕ ನಾಯಕತ್ವದ ರೈತ ಸಂಘ, ರಾಜ್ಯ ಹಳ್ಳಿ ಮಕ್ಕಳ ಸಂಸ್ಥೆ, ದಲಿತ ಸಂಘರ್ಷ ಸಮಿತಿ ಜಿಲ್ಲಾದ್ಯಂತ ಶಾಂತಿಯುತವಾಗಿ ಭಾರತ್ ಬಂದ್ ಆಚರಿಸಲಾಗುವುದೆಂದರು.
ಭಾರತ್ ಬಂದ್ ಯಶಸ್ವಿಗೊಳಿಸುತ್ತೇವೆ: ಕೋಡಿಹಳ್ಳಿ ಚಂದ್ರಶೇಖರ್
ಭಾರತ್ ಬಂದ್ ಕೇವಲ ಕೃಷಿ ಕಾಯ್ದೆಗಳ ವಿರುದ್ದ ಮಾತ್ರ, ಜಿಲ್ಲಾಡಳಿತ, ಪೊಲೀಸ್ ಇಲಾಖೆ ಬಂದ್ ಆಚರಣೆಗೆ ಸಹಕರಿಸಬೇಕು, ನಾವು ಶಾಂತಿಯುತವಾಗಿ ಬಂದ್ ಆಚರಿಸಲು ನಿರ್ಧರಿಸಿದ್ದೇವೆ. ಬಂದ್ ಭಾಗವಾಗಿ ಬೈಕ್ , ರೈತರ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ. ಕೇಂದ್ರ ಸರ್ಕಾರ ಕೂಡಲೇ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ಪದಾಧಿಕಾರಿಗಳಾದ ಭಕ್ತರಹಳ್ಳಿ ಬೈರೇಗೌಡ, ಬಿ.ಎನ್.ಮುನಿಕೃಷ್ಣಪ್ಪ, ಜಾತವಾರ ರಾಮಕೃಷ್ಣಪ್ಪ, ಮುನಿಕೆಂಪಣ್ಣ, ಭಕ್ತರಹಳ್ಳಿ ಪ್ರತೀಶ್, ಕರವೇ ರವಿಪ್ರಕಾಶ್, ಶಿವರಾಮೇಗೌಡ, ದಸಂಸ ಪರಮೇಶ್ ಸೇರಿದಂತೆ ವಿವಿಧ ಕನ್ನಡಪರ, ರೈತಪರ, ದಲಿತ ಹಾಗೂ ಪ್ರಗತಿಪರ ಸಂಘಟನೆಗಳು ಮುಖಂಡರು ಇದ್ದರು.
ಕೋಡಿಹಳ್ಳಿ ಬೆಂಬಲ : ಸೆ.27 ರ ಭಾರತ್ ಬಂದ್‌ಗೆ ರಾಜ್ಯದಲ್ಲೂ ಬೆಂಬಲ ವ್ಯಕ್ತವಾಗುತ್ತಿದೆ. ಬಂದ್ ಯಶಸ್ವಿಗೊಳಿಸಲು ಪೂರ್ವ ತಯಾರಿಯನ್ನ ಮಾಡಿಕೊಳ್ಳಲಾಗುತ್ತಿದೆ ಅಂತ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ. ನಾರಾಯಣಗೌಡ, ವಾಟಾಳ್ ನಾಗರಾಜ್, ಪ್ರವೀಣ್ ಶೆಟ್ಟಿ ಬೆಂಬಲ ಸೂಚಿಸಿದ್ದಾರೆ. ರೈತ ಸಂಘಗಳು ಒಟ್ಟಾಗಿ ಕೆಲಸ ಮಾಡುತ್ತಿವೆ. ಕಾರ್ಮಿಕ ಸಂಘ, ದಲಿತ ಸಂಘ ಎಲ್ಲವೂ ಒಟ್ಟಾಗಿದೆ. ನಗರದ ಟೌನ್‌ಹಾಲ್‌ನಲ್ಲಿ ಮೆರವಣಿಗೆ, ಮೈಸೂರು ಬ್ಯಾಂಕ್ ಸರ್ಕಲ್‌ನಲ್ಲಿ ಬೃಹತ್ ಸಭೆ, ಹೆದ್ದಾರಿ ಬಂದ್, ರೈಲು ಬಂದ್ ನಡೆಸಲಿದ್ದೇವೆ ಎಂದು ಹೇಳಿದ್ದಾರೆ.