ಚಿಕ್ಕಬಳ್ಳಾಪುರ, (ಏ.16): ಜಿಲ್ಲಾ ಶಸ್ಕಚಿಕಿತ್ಸಕರಾಗಿದ್ದ ಡಾ. ಅನಿಲ್ ಕುಮಾರ್ (52) ಅವರು ಇಂದು (ಗುರುವಾರ) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಕಳೆದ ಮಾ.8ರಂದು ಕೊರೋನಾ ತಡೆ ಕರ್ತವ್ಯದಲ್ಲಿದ್ದಾಗ ಅವರಿಗೆ ಹೃದಯಾಘಾತವಾಗಿತ್ತು.ಇದರಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಆಂಜಿಯೋಪ್ಲಾಸ್ಟಿ ಮಾಡಿ ಚಿಕಿತ್ಸೆ ನೀಡಲಾಗುತ್ತಿತ್ತು.
ಆದರೆ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಸಂಜೆ ನಿಧನರಾಗಿದ್ದಾರೆ. ಮೃತರು ಕನಕಪುರ ತಾಲೂಕಿನ ಹಾರೋಹಳ್ಳಿ ಗ್ರಾಮಕ್ಕೆ ಸೇರಿದವರಾಗಿದ್ದು, ಇವರಿಗೆ ಪತ್ನಿ ಮತ್ತು ಇಬ್ಬರು ಪುತ್ರಿಯರಿದ್ದಾರೆ.
ಕೊರೋನಾ ಹೋರಾಟದಲ್ಲಿ ಹೆಚ್ಚಿನ ಶ್ರಮ
ಕಳೆದ 8 ತಿಂಗಳ ಹಿಂದೆ ಜಿಲ್ಲಾ ಶಸ್ಕ ಚಿಕಿತ್ಸಕರಾಗಿ ಅಧಿಕಾರ ವಹಿಸಿಕೊಂಡಿದ್ದ ಡಾ. ಅನಿಲ್ ಕುಮಾರ್ ಅವರು ಕೊರೋನಾ ಸೋಂಕು ತಡೆ ಹೋರಾಟದಲ್ಲಿ ಸಕ್ರೀಯವಾಗಿ ಭಾಗವಹಿಸಿದ್ದರು.
ಹಳೇ ಜಿಲ್ಲಾಸ್ಪತ್ರೆಯನ್ನು ಕೋವಿಡ್ 19 ಆಸ್ಪತ್ರೆಯನ್ನಾಗಿ ಬದಲಿಸಿದ ಶ್ರಮದ ಹಿಂದೆ ಅನಿಲ್ ಕುಮಾರ್ ಅವರದ್ದು ಇದೆ. ಅಲ್ಲದೆ ನಿರಂತರವಾಗಿ ಕೋವಿಡ್ 19 ರೋಗಿಗಳ ಚಿಕಿತ್ಸೆ ಸೇರಿದಂತೆ ಇತರೆ ಕ್ರಮಗಳಲ್ಲಿ ಅನಿಲ್ ಕುಮಾರ್ ಅವರು ನಿರಂತರವಾಗಿ ಶ್ರಮಿಸುತ್ತಿದ್ದರು.
ಇವರ ನಿಧನಕ್ಕೆ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಸಂತಾಪ ಸೂಚಿಸಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸಕರಾಗಿದ್ದ ಡಾ.ಅನಿಲ್ ಕುಮಾರ್ ಹೃದಯಾಘಾತದಿಂದ ನಿಧನರಾದ ವಿಷಯ ತಿಳಿದು ತೀವ್ರ ದುಃಖವಾಗಿದೆ. ಅವರ ನಿಧನದಿಂದ ಜಿಲ್ಲೆಗೆ ಹಾಗು ವೈದ್ಯಕೀಯರಂಗಕ್ಕೆ ತುಂಬಲಾರದ ನಷ್ಟವಾಗಿದ್ದು, ಅವರ ಆತ್ಮಕ್ಕೆ ಸದ್ಗತಿಯನ್ನು,ಅವರ ಕುಟುಂಬಕ್ಕೆ ನೋವನ್ನು ಭರಿಸುವ ಶಕ್ತಿಯನ್ನು ದೇವರಲ್ಲಿ ಪ್ರಾರ್ಥಿಸುತ್ತೇನೆ. pic.twitter.com/yynDvjynTs
— Dr Sudhakar K (@mla_sudhakar)