ತುಮಕೂರು: ನರಹಂತಕ ಚಿರತೆಯಿಂದ ಜನತೆ ಹೈರಾಣ!

By Kannadaprabha News  |  First Published Dec 20, 2019, 10:30 AM IST

ಈಗಾಗಲೇ ಇಬ್ಬರು ಮನುಷ್ಯರ ರಕ್ತ ಹೀರಿ ಮತ್ತೊಬ್ಬರನ್ನು ಕೊಲ್ಲಲು ಯತ್ನಿಸಿದ ನರಹಂತಕ ಚಿರತೆ ಈಗ ಅಕ್ಷರಶಃ ಅರಣ್ಯ ಇಲಾಖೆ ಹಾಗೂ ಜನರಿಗೆ ದುಸ್ವಪ್ನವಾಗಿ ಪರಿಣಮಿಸಿದೆ.


ತುಮಕೂರು(ಡಿ.20): ಒಂದೇ ತಿಂಗಳ ಅವಧಿಯಲ್ಲಿ ಹೆಬ್ಬೂರು ಸಮೀಪದ ಬಿನ್ನಿಕುಪ್ಪೆ ಹಾಗೂ ಕುಣಿಗಲ್‌ ತಾಲೂಕಿನ ದೊಡ್ಡಮಳಲವಾಡಿಯಲ್ಲಿ ಇಬ್ಬರು ಮನುಷ್ಯರ ಮೇಲೆ ಎಗರಿ ರಕ್ತ ಹೀರಿರುವ ನರ ಹಂತಕ ಚಿರತೆಯನ್ನು ಹಿಡಿಯಲು ಅರಣ್ಯ ಇಲಾಖೆ ನಡೆಸುತ್ತಿರುವ ಕಸರತ್ತು ಇನ್ನೂ ಫಲಕೊಟ್ಟಿಲ್ಲ.

ಹೆಬ್ಬೂರು ಸುತ್ತಮುತ್ತ ಸಂಚರಿಸುತ್ತಿರುವ ಈ ನರಹಂತಕ ಚಿರತೆಯನ್ನು ಸೆರೆ ಹಿಡಿಯಲು ಹಲವಾರು ಕಡೆ ಬೋನಿಗೆ ನಾಯಿಯನ್ನು ಕಟ್ಟಿಇಡಲಾಗಿದ್ದರೂ ಬೋನು ಇಟ್ಟಿರುವ ಕಡೆ ಈ ನರಹಂತಕ ಚಿರತೆ ಅಪ್ಪಿತಪ್ಪಿಯೂ ಸುಳಿದಿಲ್ಲ.

Latest Videos

ಕೃತಜ್ಞತಾ ಸಭೆಯಲ್ಲಿ ಸೋಲಿನ ಕಾರಣ ಬಿಚ್ಚಿಟ್ಟ ವಿಶ್ವನಾಥ್‌..!

ಮೊನ್ನೆ ಮೊನ್ನೆಯಷ್ಟೆಹೆಬ್ಬೂರು ಪಟ್ಟಣದಲ್ಲೇ ಪ್ರತ್ಯಕ್ಷವಾದ ಈ ಚಿರತೆ ಮಹಿಳೆಯೊಬ್ಬರ ಮೇಲೆ ಎಗರಲು ಮುಂದಾದಾಗ ಜನರ ಗದ್ದಲಕ್ಕೆ ಬೆಚ್ಚಿ ಓಟ ಕಿತ್ತಿದೆ. ಇನ್ನೇನು ಚಿರತೆ ದಾಳಿಗೆ ಆಹುತಿಯಾಗಬೇಕಾಗಿದ್ದ ಆ ಮಹಿಳೆಗೆ ಜೀವ ಬಂದಂತಾಗಿದೆ. ಈ ಮಧ್ಯೆ ಚಿರತೆ ದಾಳಿಗಳು ನಿರಂತರವಾಗಿ ನಡೆಯುತ್ತಲೇ ಇದೆ. ಮೇಕೆಗಳು, ನಾಯಿ, ಕರುಗಳ ರಕ್ತ ಹೀರುವುದು ಮಾಮೂಲಾಗಿದೆ.

ಪೊದೆಗಳು ಬೆಳೆದಿವೆ:

ಹೆಬ್ಬೂರು ಸುತ್ತಮುತ್ತ ಬೆಂಗಳೂರಿನಲ್ಲಿ ನೆಲೆ ನಿಂತಿರುವ ಸಾಕಷ್ಟುಮಂದಿ ಜಮೀನು ಖರೀದಿಸಿದ್ದಾರೆ. ಆದರೆ ಜಮೀನಿನ ಪೋಷಣೆ ಮಾಡದೇ ಇರುವುದರಿಂದ ದೊಡ್ಡ ದೊಡ್ಡ ಪೊದೆಗಳು ಬೆಳೆದು ನಿಂತಿವೆ. ಈ ಪೊದೆಗಳನ್ನೇ ಈ ನರಹಂತಕ ಚಿರತೆಗಳು ಆವಾಸಸ್ಥಾನವನ್ನಾಗಿ ಮಾಡಿಕೊಂಡಿವೆ. ಪೊದೆಗಳನ್ನು ತೆರವುಗೊಳಿಸುವುದು ಯಾರು ಎನ್ನುವ ಬಗ್ಗೆ ಚರ್ಚೆ ನಡೆಯುತ್ತಿದೆ. ಆದರೆ ಖಾಸಗಿ ಜಮೀನಿನ ಮಾಲಿಕರ ಪತ್ತೆ ಮಾಡುವುದು ಕಷ್ಟಸಾಧ್ಯವಾಗಿದೆ. ಆದರೆ ಪೊದೆಗಳ ತೆರವಿಗೆ ಯಾವ ಇಲಾಖೆ ಹಣ ಕೊಡಬೇಕು ಎಂಬ ಬಗ್ಗೆ ಗೊಂದಲ ಉಂಟಾಗಿ ಸಮಸ್ಯೆ ಮತ್ತಷ್ಟುಬಿಗಡಾಯಿಸಿದೆ.

ಮಂಗಳೂರು: ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಗೆ ಕರ್ಫ್ಯೂ ವಿಸ್ತರಣೆ

ಚಿರತೆ ಸಂತತಿ ಹೆಚ್ಚಳ

ಚಿರತೆಗಳ ಗಣತಿ ಮಾಡದೇ ಇದ್ದರೂ ಅವುಗಳ ಓಡಾಟವನ್ನು ಸೂಕ್ಷ್ಮವಾಗಿ ಅವಲೋಕಿಸಿರುವ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಗಳ ಸಂತತಿ ಗಣನೀಯವಾಗಿ ಏರಿಕೆಯಾಗಿದೆ ಎಂಬ ನಿರ್ಣಯಕ್ಕೆ ಬಂದಿದ್ದಾರೆ. ಈಗಾಗಲೇ ಕಾಡಿನಿಂದ ನಾಡಿನತ್ತ ವಲಸೆ ಬಂದಿರುವ ಈ ಚಿರತೆಗಳು ಗ್ರಾಮಗಳಲ್ಲಿ, ಕೆಲವು ಸಲ ಪಟ್ಟಣಗಳಲ್ಲೂ ಕಾಣಿಸಿಕೊಳ್ಳುತ್ತಿದೆ. ತುಮಕೂರು ನಗರದಲ್ಲೇ ಹನುಮಂತಪುರ, ಸದಾಶಿವನಗರ, ಜಯನಗರದಲ್ಲೂ ಕಾಣಿಸಿಕೊಂಡು ಜನರ ಭೀತಿಯನ್ನು ಹೆಚ್ಚಿಸಿದೆ. ಈಗಾಗಲೇ ಘಟನೆಯಾಗಿ ಮೂರು ವಾರ ಕಳೆದರೂ ನರಹಂತಕ ಚಿರತೆ ಮಾತ್ರ ಬೋನಿಗೆ ಬೀಳದೆ ಅರಣ್ಯ ಇಲಾಖೆ ಹಾಗೂ ಜನತೆಗೆ ದುಸ್ವಪ್ನವಾಗಿ ಪರಿಣಮಿಸಿದೆ.

ಮುಖ್ಯಾಂಶಗಳು

  • ಬಿನ್ನಿಕುಪ್ಪೆ, ದೊಡ್ಡಮಳಲವಾಡಿಯಲ್ಲಿ ಇಬ್ಬರು ರೈತರ ಚಿರತೆಗೆ ಬಲಿ
  • ಹೆಬ್ಬೂರು ಪಟ್ಟಣದಲ್ಲೇ ಮಹಿಳೆ ಮೇಲೆ ವಿಫಲ ದಾಳಿ ನಡೆಸಿದೆ
  • ಚಿರತೆಯನ್ನು ಖೆಡ್ಡಾಗೆ ಕೆಡವಲು ಅರಣ್ಯ ಇಲಾಖೆ ಯತ್ನ ಫಲ ಕೊಟ್ಟಿಲ್ಲ
  • ನರಹಂತಕ ಚಿರತೆಯಿಂದ ಮುಂದುವರೆದ ಮೇಕೆ, ಕರುಗಳ ದಾಳಿ

-ಉಗಮ ಶ್ರೀನಿವಾಸ್‌

click me!