3 ತಾಲೂಕುಗಳಲ್ಲಿ ನರಹಂತಕ ಚಿರತೆ ಸಂಚಾರ: ಭೀತಿಯಲ್ಲಿ ಜನ

By Kannadaprabha News  |  First Published Jan 11, 2020, 11:46 AM IST

ತುಮಕೂರಿನಲ್ಲಿ 2 ತಿಂಗಳಲ್ಲಿ ಮೂರು ಜನರನ್ನು ಚಿರತೆ ಬಲಿ ಪಡೆದಿದೆ. ಬೋನುಗಳನ್ನಿಟ್ಟರೂ ಚಿರತೆ ಮಾತ್ರ ಸೆರೆಯಾಗುತ್ತಿಲ್ಲ. ಜಿಲ್ಲೆಯ 5 ತಾಲೂಕುಗಳಿಂದ 93 ಹಳ್ಳಿಗಳಲ್ಲಿ ಚಿರತೆ ಹಾವಳಿ ಹೆಚ್ಚಾಗಿದೆ. ಆದರೆ 3 ತಾಲೂಕುಗಳಲ್ಲಿ ಈ ನರಹಂತಕ ಚಿರತೆ ಸಂಚಾರ ಮಾಡುತ್ತಿರುವುದು ಜನರನ್ನು ಭೀತಿಗೊಳಿಸಿದೆ.


ತುಮಕೂರು(ಜ.11): ತುಮಕೂರು ಜಿಲ್ಲೆಯ 3 ತಾಲೂಕುಗಳಲ್ಲಿ ನರಹಂತಕ ಚಿರತೆಯ ಜಾಡು ಇದ್ದು ಭರ್ತಿ 93 ಹಳ್ಳಿಗಳಲ್ಲಿ ಚಿರತೆ ದಾಳಿಯಿಂದ ಕುರಿ, ಮೇಕೆ, ಕರುಗಳನ್ನು ಕಳೆದುಕೊಂಡಿರುವ ಜನ ಹೈರಾಣಾಗಿದ್ದಾರೆ.

ಈಗಾಗಲೇ ಕೇವಲ 2 ತಿಂಗಳ ಅವಧಿಯಲ್ಲಿ 3 ಜನರನ್ನು ಈ ನರಹಂತಕ ಚಿರತೆ ಬಲಿ ತೆಗೆದುಕೊಂಡಿದೆ. ಪ್ರತಿ ದಿನ ಒಂದಲ್ಲ ಒಂದು ಪ್ರಾಣಿಗಳು ಚಿರತೆ ದಾಳಿಗೆ ತುತ್ತಾಗುತ್ತಲೇ ಇವೆ. ಹೆಬ್ಬೂರು ಸಮೀಪದ ಬಿನ್ನಿಕುಪ್ಪೆಯಲ್ಲಿ ಲಕ್ಷಮ್ಮ ಎಂಬ ಮಹಿಳೆಯ ಮೇಲೆ ಚಿರತೆ ದಾಳಿ ನಡೆಸಿ ಕೊಂದ ಘಟನೆ ತಿಳಿಯುತ್ತಿದ್ದಂತೆ ಜನ ಬೆಚ್ಚಿ ಬಿದ್ದರು. ಇದಾದ ಕೆಲವೇ ದಿವಸಗಳಲ್ಲಿ ಕುಣಿಗಲ್‌ ತಾಲೂಕು ದೊಡ್ಡಮಳಲವಾಡಿ ಗ್ರಾಮದಲ್ಲಿ ಅಂದಾನಪ್ಪ ಅವರನ್ನು ಚಿರತೆ ಕೊಂದಿದ ಘಟನೆ ಮತ್ತಷ್ಟುಬೆಚ್ಚಿ ಬೀಳಿಸುವಂತಾಯಿತು. ಕಳೆದ ಕೆಲ ದಿವಸಗಳ ಹಿಂದೆ ಕೊತ್ತಗೆರೆ ಹೋಬಳಿಯಲ್ಲಿ ಬೋನಿಗೆ ಚಿರತೆಯೊಂದು ಬಿದ್ದಿದ್ದು ನರಹಂತಕ ಚಿರತೆಯೇ ಇರಬಹುದು ಎಂದು ಜನ ನಿಟ್ಟುಸಿರು ಬಿಟ್ಟರು. ಆದರೆ ಗುಬ್ಬಿ ತಾಲೂಕು ಮಣಿಕುಪ್ಪೆ ಗ್ರಾಮದಲ್ಲಿ ಸಮರ್ಥಗೌಡ ಎಂಬ ಬಾಲಕನ ಮೇಲೆ ದಾಳಿ ನಡೆಸಿ ಕೊಂದ ಘಟನೆ ರಾಜ್ಯಾದ್ಯಂತ ಸುದ್ದಿಗೆ ಗ್ರಾಸವಾಗಿದೆ.

Latest Videos

undefined

ತುಮಕೂರು: ಚಿರತೆ ದಾಳಿಗೆ 3 ಬಲಿ, 40 ಕಡೆ ಬೋನಿಟ್ಟರೂ ನೋ ಯೂಸ್..!

ಇದರ ಮಧ್ಯೆ ಹೆಬ್ಬೂರಿನ ಪಟ್ಟಣದಲ್ಲೇ ಚಿರತೆಯೊಂದು ಮಹಿಳೆ ಮೇಲೆ ಎರಗಲು ಹವಣಿಸುತ್ತಿತ್ತು. ಇದನ್ನು ಗಮನಿಸಿದ ಜನರು ಹತ್ತಿರ ಬರುವುದನ್ನು ನೋಡಿ ಚಿರತೆ ಓಡಿ ಹೋಗಿತ್ತು. ಜಿಲ್ಲೆಯ 5 ತಾಲೂಕುಗಳಿಂದ 93 ಹಳ್ಳಿಗಳಲ್ಲಿ ಚಿರತೆ ಹಾವಳಿ ಹೆಚ್ಚಾಗಿದೆ. ಆದರೆ 3 ತಾಲೂಕುಗಳಲ್ಲಿ ಈ ನರಹಂತಕ ಚಿರತೆ ಸಂಚಾರ ಮಾಡುತ್ತಿರುವುದು ಜನರನ್ನು ಭೀತಿಗೊಳಿಸಿದೆ.

ಸೆರೆ ಸಿಕ್ಕವೆಲ್ಲಾ ಎಲ್ಲಿ ಬಿಡುತ್ತಿದ್ದಾರೆ:

ಕಳೆದ ವರ್ಷದಿಂದ ಕೆಲ ಹಳ್ಳಿಗಳಲ್ಲಿ ಬೋನಿಗೆ ಬೀಳುತ್ತಿರುವ ಚಿರತೆಯನ್ನು ಬನ್ನೇರುಘಟ್ಟಕ್ಕೆ ಕಳುಹಿಸಲಾಗಿದೆ ಎನ್ನುತ್ತಾರೆ ಅರಣ್ಯ ಇಲಾಖೆಯವರು. ಆದರೆ ಬೋನಿಗೆ ಸೆರೆ ಸಿಕ್ಕ ಚಿರತೆಗಳನ್ನು ಜಿಲ್ಲೆಯ ಅರಣ್ಯಕ್ಕೆ ಬಿಟ್ಟು ಬರುತ್ತಿದ್ದಾರೆ. ಹೀಗಾಗಿ ಅವೇ ಚಿರತೆಗಳು ಮತ್ತೆ ನಗರದತ್ತ ವಲಸೆ ಬರುತ್ತಿದೆ. ಹೀಗಾಗಿ ಚಿರತೆಗಳು ಕಾಡಿಗಿಂತ ಪಟ್ಟಣ ಹಾಗೂ ಗ್ರಾಮಗಳ ಪೊದೆಗಳಲ್ಲಿ ಅಡಗಿ ಕುಳಿತಿವೆ.

ಪೊದೆ ತೆರವು ಯಾರು ಮಾಡುವುದು:

ಸದ್ಯ ಎದುರಾಗಿರುವ ಪ್ರಶ್ನೆ ಪೊದೆಗಳದ್ದೇ. ಬೆಂಗಳೂರು ಮೂಲದ ಕೆಲವರು ಹೆಬ್ಬೂರು ಸುತ್ತಮುತ್ತ ಜಮೀನನ್ನು ಖರೀದಿಸಿದ್ದಾರೆ. ಆದರೆ ಜಮೀನು ಉಳುಮೆ ಮಾಡದೇ ಖಾಲಿ ಬಿಟ್ಟಿರುವುದರಿಂದ ಅದರ ತುಂಬೆಲ್ಲಾ ಪೊದೆಗಳು ಬೆಳೆದು ನಿಂತಿವೆ. ಹೆಬ್ಬೂರು ಸುತ್ತಮುತ್ತ ಇಂತಹ ನೂರಾರು ಪೊದೆಗಳು ಬೆಳೆದು ನಿಂತಿವೆ. ಇದನ್ನು ತೆರವುಗೊಳಿಸುವುದು ಯಾರ ಕೆಲಸ ಎಂಬುದು ಸದ್ಯದ ಪ್ರಶ್ನೆ. ತಾಲೂಕು ಆಡಳಿತಕ್ಕೆ ಇದರ ತೆರವಿಗೆ ಹಣವಿಲ್ಲ. ಜಮೀನು ಮಾಲೀಕರನ್ನು ಹುಡುಕಿ ಅವರಿಗೆ ನೊಟೀಸ್‌ ಕೊಡುವುದು ದುಸ್ತರವಾಗಿದೆ.

ನೀರಿನ ಒರತೆಗಳಿವೆ:

ಹೆಬ್ಬೂರು ಸುತ್ತಮುತ್ತ 50 ಕ್ಕೂ ಹೆಚ್ಚಿನ ನೀರಿನ ಒರತೆಗಳಿವೆ. ಜೊತೆಗೆ ನೂರಾರು ಪೊದೆಗಳಿವೆ. ಬೇಟೆಗೆ ಸುಲಭವಾಗಿ ಸಿಗಲು ನಾಯಿಗಳು, ಕುರಿ, ಮೇಕೆ, ಕರುಗಳು ಇರುವುದರಿಂದ ಚಿರತೆಗಳು ಪೊದೆಗಳನ್ನೇ ಆವಾಸಸ್ಥಾನವನ್ನಾಗಿ ಮಾಡಿಕೊಂಡಿವೆ. ಅಲ್ಲದೇ ಸೆರೆ ಸಿಕ್ಕ ಚಿರತೆಗಳನ್ನು ಜಿಲ್ಲೆಯ ಕಾಡಿನಲ್ಲೇ ಬಿಟ್ಟು ಬರುವುದರಿಂದ ಮತ್ತೆ ಆ ಚಿರತೆಗಳು ಜನವಸತಿ ಪ್ರದೇಶಗಳ ಬಳಿಯೇ ಬರುತ್ತಿವೆ. ಹೀಗಾಗಿ ಸಮಸ್ಯೆ ಬೃಹದಾಕಾರವಾಗಿ ಬೆಳೆದಿದೆ. ಈ ಮಧ್ಯೆ ನರಹಂತಕ ಚಿರತೆಗೆ ಗುಂಡು ಹೊಡಿಯಬೇಕೆಂದು ಆ ಭಾಗದ ಜನ ಆಗ್ರಹಿಸುತ್ತಿದ್ದಾರೆ. ಆದರೆ ಕಾನೂನಿನ ಪ್ರಕಾರ ಗುಂಡಿಕ್ಕಿ ಕೊಲ್ಲುವಂತಿಲ್ಲ. ಅಲ್ಲದೇ ನರಹಂತಕ ಚಿರತೆ ಯಾವುದೆಂದು ಕೂಡ ಸರಿಯಾಗಿ ಗೊತ್ತಿಲ್ಲ. ಹೀಗಾಗಿ ಅರಣ್ಯ ಇಲಾಖೆಗೆ ಈ ಚಿರತೆಗಳು ತಲೆ ನೋವು ತರಿಸಿದೆ.

ಕ್ಯಾಮರಾದಲ್ಲಿ ಸೆರೆ ಸಿಕ್ಕಿ ಚಿರತೆ

ಗುಬ್ಬಿ ತಾಲೂಕಿನಲ್ಲಿ ಬಾಲಕನನ್ನು ಕೊಂದ ಜಾಗದ ಸಮೀಪದಲ್ಲೇ ಕ್ಯಾಮರಾಗೆ ಚಿರತೆಯೊಂದು ಸೆರೆ ಸಿಕ್ಕಿದೆ. ಆದರೆ ಇದೇ ಚಿರತೆ ಮಗುವನ್ನು ಕೊಂದಿರಬಹುದು ಎಂಬ ಶಂಕೆಯನ್ನು ಅರಣ್ಯ ಇಲಾಖೆ ವ್ಯಕ್ತಪಡಿಸಿದೆ. ಒಟ್ಟಾರೆಯಾಗಿ ಕಳೆದ ಎರಡು ತಿಂಗಳಿನಿಂದ ನರಹಂತಕವಾಗಿರುವ ಚಿರತೆ ಸೆರೆ ಸಿಗದೇ ಚಳ್ಳೆಹಣ್ಣು ತಿನ್ನಿಸುತ್ತಿದೆ.

ಕುಣಿಗಲ್‌, ಗುಬ್ಬಿ , ತುಮಕೂರು ತಾಲೂಕು ಸಂಪರ್ಕಿಸುವ ಒಂದೇ ವಲಯದಲ್ಲಿ ದುರ್ಘಟನೆಗಳು ಪದೇ ಪದೇ ನಡೆಯುತ್ತಿದೆ, ಹೀಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು 15 ಕಿಲೋ ಮೀಟರ್‌ ವ್ಯಾಪ್ತಿಯಲ್ಲಿ 40 ಬೋನ್‌ ಗಳನ್ನು ಇಟ್ಟರು ಚಿರತೆ ಮಾತ್ರ ಸೆರೆಯಾಗುತ್ತಿಲ್ಲ ಎಂದು ಡಿಎಫ್‌ಒ ಗಿರೀಶ್‌ ಹೇಳಿದ್ದಾರೆ.

ತಾಯಿ ಕಣ್ಣೆದುರೇ ಮಗನನ್ನು ಕೊಂದು ಹಾಕಿದ ಚಿರತೆ..!

ತುಮಕೂರು ಗ್ರಾಮಾಂತರ ಭಾಗಗಳಲ್ಲಿ ದಿನೇ ದಿನೇ ಚಿರತೆ ದಾಳಿಗಳು ಹೆಚ್ಚುತ್ತಿದ್ದು ಪ್ರತಿ ಹಳ್ಳಿಗಳ ಬಳಿ ಮೂರ್ನಾಲ್ಕು ಚಿರತೆಗಳು ಕಣ್ಣಿಗೆ ಕಾಣಿಸಿಕೊಳ್ಳುತ್ತಿದೆ. ಕುರಿ, ಮೇಕೆಗಳನ್ನು ತಿನ್ನುತ್ತಿದ್ದ ಚಿರತೆ ಇದೀಗ ಜನರ ಮೇಲೆ ದಾಳಿ ಮಾಡುತ್ತಿರುವುದು ರೈತರನ್ನು ಚಿಂತೆಗೀಡು ಮಾಡಿದೆ. ಹೊಲ ತೋಟಗಳಲ್ಲಿ ಒಬ್ಬೊಂಟಿಯಾಗಿ ಕೆಲಸ ಮಾಡಲು ರೈತರು ಹೆದುರುತ್ತಿದ್ದಾರೆ ಎಂದು ಶಾಸಕ ಗೌರಿಶಂಕರ್‌ ಹೇಳಿದ್ದಾರೆ.

ಬಾಲಕನ ದೇಹವನ್ನು ಚಿರತೆ ಸುಮಾರು 150 ಮೀಟರ್‌ ದೂರ ಎಳೆದುಕೊಂಡು ಹೋಗಿತ್ತು. ಬಾಲಕ ಸಮರ್ಥಗೌಡ ಶಾಲೆ ಮುಗಿಸಿ ಹೊಲದ ಹತ್ತಿರ ಹೋಗುವಾಗ ಈ ಘಟನೆ ನಡೆದಿದೆ ಎಂದಿ ಮೃತ ಮಗುವಿನ ತಂದೆ ಶಿವಕುಮಾರ್‌ ಹೇಳಿದ್ದಾರೆ.

-ಉಗಮ ಶ್ರೀನಿವಾಸ್‌

click me!