ಚನ್ನಪಟ್ಟಣ ಉಪಚುನಾವಣೆ ಟಿಕೆಟ್‌ಗೆ ಸಂಬಂಧಿಸಿದಂತೆ ಬಿಜೆಪಿ-ಜೆಡಿಎಸ್ ಪಕ್ಷಗಳಲ್ಲಿ ಹಗ್ಗಜಗ್ಗಾಟ ತೀವ್ರಗೊಂಡಿದ್ದು, ಕ್ಷೇತ್ರದ ಟಿಕೆಟ್ ಅನ್ನು ತಮ್ಮ ಪಕ್ಷಕ್ಕೆ ದಕ್ಕಿಸಿಕೊಳ್ಳುವ ನಿಟ್ಟಿನಲ್ಲಿ ಮೈತ್ರಿ ಮುಖಂಡರಲ್ಲಿ ಟಿಕೆಟ್ ದಂಗಲ್ ಆರಂಭಗೊಂಡಿದೆ.
-ವಿಜಯ್ ಕೇಸರಿ
ಚನ್ನಪಟ್ಟಣ : ಚನ್ನಪಟ್ಟಣ ಉಪಚುನಾವಣೆ ಟಿಕೆಟ್‌ಗೆ ಸಂಬಂಧಿಸಿದಂತೆ ಬಿಜೆಪಿ-ಜೆಡಿಎಸ್ ಪಕ್ಷಗಳಲ್ಲಿ ಹಗ್ಗಜಗ್ಗಾಟ ತೀವ್ರಗೊಂಡಿದ್ದು, ಕ್ಷೇತ್ರದ ಟಿಕೆಟ್ ಅನ್ನು ತಮ್ಮ ಪಕ್ಷಕ್ಕೆ ದಕ್ಕಿಸಿಕೊಳ್ಳುವ ನಿಟ್ಟಿನಲ್ಲಿ ಮೈತ್ರಿ ಮುಖಂಡರಲ್ಲಿ ಟಿಕೆಟ್ ದಂಗಲ್ ಆರಂಭಗೊಂಡಿದೆ.
ಕ್ಷೇತ್ರದಯಾವ ಪಕ್ಷಕ್ಕೆ ಮತ್ತು ಯಾರಿಗೆ ದೊರಕಬೇಕು ಎಂಬ ವಿಚಾರ ದಿನದಿಂದ ದಿನಕ್ಕೆ ಕಗ್ಗಂಟಾಗುತ್ತಿದ್ದು, ಟಿಕೆಟ್ ತಮ್ಮ ಪಕ್ಷಕ್ಕೇ ದೊರಕಬೇಕೆಂಬ ನಿಟ್ಟಿನಲ್ಲಿ ಒತ್ತಡ ತಂತ್ರ ಅನುಸರಿಸಲು ಮುಂದಾಗಿದ್ದಾರೆ.
ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಪ್ರಬಲ ಸ್ಪರ್ಧಾಕಾಂಕ್ಷಿಯಾಗಿದ್ದು, ಎನ್‌ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸುವ ಉತ್ಸಾಹದಲ್ಲಿದ್ದಾರೆ. ಆದರೆ, ಕ್ಷೇತ್ರವನ್ನು ಜೆಡಿಎಸ್ ತೆಕ್ಕೆಯಲ್ಲಿಯೇ ಉಳಿಸಿಕೊಳ್ಳಬೇಕೆಂಬುದು ಜೆಡಿಎಸ್ ಮುಖಂಡರ ಒತ್ತಾಸೆಯಾಗಿದ್ದು, ಟಿಕೆಟ್ ವಿಚಾರ ದಿನಕಳೆದಂತೆ ಕಗ್ಗಂಟಾಗುತ್ತಿದೆ.
ಸ್ಪರ್ಧೆಗೆ ಸಜ್ಜಾಗಿರುವ ಸೈನಿಕ:
ಈ ೨೦೧೧ರ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಸಿ.ಪಿ.ಯೋಗೇಶ್ವರ್ ಕ್ಷೇತ್ರದಲ್ಲಿ ಮೊದಲ ಬಾರಿ ಕಮಲ ಅರಳಿಸಿದ್ದರು. ಆನಂತರ ೨೦೧೮ ಹಾಗೂ ೨೦೨೩ರ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಮತ್ತೆ ಬಿಜೆಪಿಯಿಂದ ಸ್ಪರ್ಧಿಸಿದರಾದರೂ ಎರಡು ಬಾರಿಯೂ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಸೋಲು ಅನುಭವಿಸಿದ್ದರು. ಇದೀಗ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿ ಕೇಂದ್ರ ಸಚಿವರಾಗಿರುವ ಕುಮಾರಸ್ವಾಮಿ ಅವರ ರಾಜೀನಾಮೆಯಿಂದ ತೆರವಾಗಿರುವ ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸುವ ಇರಾದೆಯನ್ನು ಯೋಗೇಶ್ವರ್ ಹೊಂದಿದ್ದಾರೆ.
ಕ್ಷೇತ್ರದಿಂದ ಸ್ಪರ್ಧಿಸುವ ಕುರಿತಂತೆ ಈಗಾಗಲೇ ಕುಮಾರಸ್ವಾಮಿ ಅವರನ್ನು ಒಂದೆರಡು ಬಾರಿ ದೆಹಲಿಯಲ್ಲಿ ಭೇಟಿ ಮಾಡಿ ಚರ್ಚೆ ನಡೆಸಿದ್ದು, ಕೆಲ ದಿನಗಳ ಹಿಂದೆ ಪತ್ರಿಕಾಗೋಷ್ಠಿಯಲ್ಲಿ ಸ್ಪರ್ಧೆಗೆ ಕುಮಾರಸ್ವಾಮಿ ಅವರಿಂದ ಹಸಿರು ನಿಶಾನೆ ದೊರೆತ್ತಿದ್ದು, ಘೋಷಣೆಯೊಂದೇ ಬಾಕಿ ಎಂದು ಸಾರಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಎಚ್‌ಡಿಕೆ ಕಾರ್ಯಕರ್ತರೊಂದಿಗೆ ಚರ್ಚಿಸಿ ತೀರ್ಮಾನಿಸುವುದಾಗಿ ತಿಳಿಸಿದ್ದರು.
ಕ್ಷೇತ್ರ ಜೆಡಿಎಸ್ ತೆಕ್ಕೆಯಲ್ಲಿ ಉಳಿಸಿಕೊಳ್ಳಲು ಒತ್ತಾಯ: ಇನ್ನು ಕ್ಷೇತ್ರವನ್ನು ಜೆಡಿಎಸ್ ತೆಕ್ಕೆಯಲ್ಲಿಯೇ ಉಳಿಸಿಕೊಳ್ಳಬೇಕೆಂಬುದು ಜೆಡಿಎಸ್ ಮುಖಂಡರ ಒತ್ತಾಸೆಯಾಗಿದೆ. ೨೦೧೮ರ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ ಮೂರು ಕ್ಷೇತ್ರಗಳಲ್ಲಿ ಜೆಡಿಎಸ್ ಶಾಸಕರು ಗೆಲುವು ಸಾಧಿಸಿದ್ದರು. ಆದರೆ, ೨೦೨೩ರ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಜೆಡಿಎಸ್ ಮೂರು ಕ್ಷೇತ್ರವನ್ನು ಕಳೆದುಕೊಂಡಿದ್ದು, ಚನ್ನಪಟ್ಟಣದಲ್ಲಿ ಮಾತ್ರ ಗೆಲುವು ಸಾಧಿಸಿದೆ. ಇದೀಗ ಕ್ಷೇತ್ರವನ್ನು ಬಿಜೆಪಿಗೆ ಬಿಟ್ಟುಕೊಟ್ಟಲ್ಲಿ ಜಿಲ್ಲೆಯಲ್ಲಿ ಜೆಡಿಎಸ್ ಅಸ್ತಿತ್ವ ಕಳೆದುಕೊಳ್ಳಲಿದೆ ಎಂಬ ಆತಂಕ ಜೆಡಿಎಸ್‌ನದ್ದಾಗಿದೆ.
ನಿಖಿಲ್ ಸ್ಪರ್ಧೆಗೆ ಒತ್ತಡ:
ಕ್ಷೇತ್ರವನ್ನು ಪಕ್ಷದ ತೆಕ್ಕೆಯಲ್ಲಿಯೇ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸ್ಥಳೀಯ ಮುಖಂಡರು ಉಪಚುನಾವಣೆಯಲ್ಲಿ ನಿಖಿಲ್ ಸ್ಪರ್ಧಿಸಲಿ ಎಂಬ ಒತ್ತಡ ಹೇರುತ್ತಿದ್ದಾರೆ. ತಂದೆಯಿಂದ ತೆರವಾದ ಕ್ಷೇತ್ರಕ್ಕೆ ಮಗನನ್ನೇ ತರುವ ಮೂಲಕ ಕ್ಷೇತ್ರವನ್ನು ಉಳಿಸಿಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಜೆಡಿಎಸ್ ಮುಖಂಡರು ರ್ಕಾರ್ಯತಂತ್ರ ನಡೆಸಿದ್ದಾರೆ.
ಎಚ್‌ಡಿಕೆ ಅಂಗಳದಲ್ಲಿ ಚೆಂಡು:
ಮೈತ್ರಿ ಟಿಕೆಟ್ ಚೆಂಡು ಇದೀಗ ಕುಮಾರಸ್ವಾಮಿ ಅವರ ಅಂಗಳದಲ್ಲಿದೆ. ಯಾವ ಪಕ್ಷದಿಂದ ಯಾರು ಸ್ಪರ್ಧಿಸಬೇಕು ಎಂಬ ನಿರ್ಧಾರ ಬಹುತೇಕ ಕುಮಾರಸ್ವಾಮಿ ಅವರ ತೀರ್ಮಾನದ ಮೇಲೆ ಅಲವಂಬಿತವಾಗಿದ್ದು, ಕುಮಾರಸ್ವಾಮಿ ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.
ಕಾದು ನೋಡುವ ತಂತ್ರ ಅನುಸರಿಸುತ್ತಿರುವ ಕಾಂಗ್ರೆಸ್!
ಚನ್ನಪಟ್ಟಣ ಉಪಚುನಾವಣೆಗೆ ಸಂಬಂಧಿಸಿದಂತೆ ಎಲ್ಲರಿಗಿಂತ ಮೊದಲು ರಣಕಹಳೆ ಮೊಳಗಿಸಿದ್ದ ಕಾಂಗ್ರೆಸ್, ಇದೀಗ ಕಾದು ನೋಡುವ ತಂತ್ರ ಅನುಸರಿಸುತ್ತಿರುವಂತಿದೆ.
ಲೋಕಸಭಾ ಚುನಾವಣೆ ಫಲಿತಾಂಶ ಘೋಷಣೆಯಾದ ಕೆಲ ದಿನಗಳಲ್ಲೇ ಕ್ಷೇತ್ರಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚನ್ನಪಟ್ಟಣಕ್ಕೆ ಲಗ್ಗೆ ಇಟ್ಟಿದ್ದರು. ಕ್ಷೇತ್ರದ ನಗರ ಹಾಗೂ ವಿವಿಧ ಜಿಪಂ ವ್ಯಾಪ್ತಿಯಲ್ಲಿ ಜನಸ್ಪಂದನಾ ಸಭೆಗಳನ್ನು ನಡೆಸುವ ಮೂಲಕ ಜನರನ್ನು ಸೆಳೆಯುವ ಪ್ರಯತ್ನ ಮಾಡಿದ್ದರು.
ಡಿ.ಕೆ.ಶಿವಕುಮಾರ್ ಅಥವಾ ಡಿ.ಕೆ.ಸುರೇಶ್ ಇಬ್ಬರಲ್ಲಿ ಒಬ್ಬರು ಸ್ಪರ್ಧಿಸುತ್ತಾರೆ ಎಂಬ ವಾತಾವರಣ ನಿರ್ಮಾಣವಾಗಿತ್ತು. ಆದರೆ, ಈ ಬಗ್ಗೆ ಯಾವುದೇ ಗುಟ್ಟನ್ನು ಬಂಡೆ ಸಹೋದರರು ಬಿಟ್ಟುಕೊಡುತ್ತಿಲ್ಲ. ಎಲ್ಲರಿಗಿಂತ ಮೊದಲು ರಣಕಹಳೆ ಮೊಳಗಿಸಿದ್ದ ಕಾಂಗ್ರೆಸ್ ಟಿಕೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಮೈತ್ರಿ ಪಕ್ಷದಲ್ಲಿನ ಬೆಳವಣಿಗೆಯನ್ನು ನೋಡುವ ಕಾರ್ಯತಂತ್ರ ಅನುಸರಿಸುತ್ತಿದೆ ಎನ್ನಲಾಗಿದೆ.
ಕಾಂಗ್ರೆಸ್‌ನಿಂದ ಮತ್ತೆ ಆಪರೇಷನ್ ಹಸ್ತ
ಲೋಕಸಭೆ ಚುನಾವಣೆ ವೇಳೆ ಆಪರೇಷನ್ ಹಸ್ತದ ಮೂಲಕ ಬಿಜೆಪಿ-ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರನ್ನು ಸೆಳೆದಿದ್ದ ಕಾಂಗ್ರೆಸ್ ಇದೀಗ ವಿಧಾನಸಭೆ ಉಪಚುನಾವಣೆ ಹಿನ್ನೆಲೆಯಲ್ಲಿ ಸದ್ದಿಲ್ಲದೇ ಆಪರೇಷನ್ ಕಾರ್ಯಾಚರಣೆ ಆರಂಭಿಸಿದೆ. ತಾಲೂಕಿನಲ್ಲಿ ಜೆಡಿಎಸ್-ಬಿಜೆಪಿ ಮುಖಂಡರನ್ನು ಸಂಪರ್ಕಿಸುತ್ತಿರುವ ಕಾಂಗ್ರೆಸ್ ಮುಖಂಡರು ಮತ್ತೊಂದು ಸುತ್ತಿನ ಆಪರೇಷನ್ ಹಸ್ತ ನಡೆಸುತ್ತಿದ್ದಾರೆ. ಬಿಎಂಐಸಿಎಪಿಎ ಅಧ್ಯಕ್ಷ ರಘುನಂದನ್ ರಾಮಣ್ಣ ಹಾಗೂ ಕೆಪಿಸಿಸಿ ಕಾರ್ಯದರ್ಶಿ ದುಂತೂರು ವಿಶ್ವನಾಥ್ ನೇತೃತ್ವದಲ್ಲಿ ಆಪರೇಷನ್ ಹಸ್ತ ನಡೆಸಿ ತಾಲೂಕಿನ ತಿಟ್ಟಮಾರನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಅಜಿತ್ ಸೇರಿದಂತೆ ಚಿಕ್ಕನದೊಡ್ಡಿ ಗ್ರಾಮದ ಯುವಕರನ್ನು ಮಾಜಿ ಸಂಸದ ಡಿ.ಕೆ.ಸುರೇಶ್ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದೆ.