
ಚಾಮರಾಜನಗರ (ಡಿ.14): ಕೊಳ್ಳೇಗಾಲ ತಾಲೂಕಿನ ಹೊಸ ಹಂಪಾಪುರ ಗ್ರಾಮದಲ್ಲಿ ಮನಕಲಕುವ ಘಟನೆಯೊಂದು ನಡೆದಿದ್ದು, ತೀವ್ರ ಸ್ವರೂಪದ ಹೊಟ್ಟೆನೋವನ್ನು ತಾಳಲಾರದೆ ಅಂತಿಮ ವರ್ಷದ ನರ್ಸಿಂಗ್ ವಿದ್ಯಾರ್ಥಿನಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮ*ಹತ್ಯೆ ಮಾಡಿಕೊಂಡಿದ್ದಾಳೆ. ವಿದ್ಯಾರ್ಥಿನಿ ಪ್ರಿಯಾಂಕ (20) ಸಾವನ್ನಪ್ಪಿದ ದುರ್ದೈವಿ.
ಘಟನೆ ಹೊಸ ಹಂಪಾಪುರ ಗ್ರಾಮದ ಅವರ ನಿವಾಸದಲ್ಲಿ ಶುಕ್ರವಾರ ತಡರಾತ್ರಿ ಸಂಭವಿಸಿದೆ ಎನ್ನಲಾಗಿದೆ. ಕೊಳ್ಳೇಗಾಲದ ಖಾಸಗಿ ಕಾಲೇಜಿನಲ್ಲಿ ಅಂತಿಮ ವರ್ಷದ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದ ಪ್ರಿಯಾಂಕ, ಕಳೆದ ಕೆಲವು ದಿನಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಳು. ಅದರಲ್ಲೂ ಹೊಟ್ಟೆನೋವು ಮಿತಿಮೀರಿತ್ತು ಎನ್ನಲಾಗಿದ್ದು, ನಿರಂತರ ಚಿಕಿತ್ಸೆಯ ಹೊರತಾಗಿಯೂ ನೋವು ಕಡಿಮೆಯಾಗದ ಕಾರಣ ತೀವ್ರ ಖಿನ್ನತೆಗೊಳಗಾಗಿದ್ದಳು ಎಂದು ಕುಟುಂಬ ಮೂಲಗಳು ತಿಳಿಸಿವೆ.
ಶುಕ್ರವಾರ ರಾತ್ರಿ ಕುಟುಂಬದ ಸದಸ್ಯರು ನಿದ್ರೆಗೆ ಜಾರಿದ ನಂತರ ಪ್ರಿಯಾಂಕ ತನ್ನ ಕೋಣೆಯೊಳಗೆ ನೇಣು ಬಿಗಿದುಕೊಂಡು ಆತ್ಮ*ಹತ್ಯೆ ಮಾಡಿಕೊಂಡಿದ್ದಾಳೆ. ಶನಿವಾರ ಬೆಳಿಗ್ಗೆ ಕೋಣೆಯ ಬಾಗಿಲು ತೆರೆಯದಿದ್ದಾಗ ಅನುಮಾನಗೊಂಡ ಮನೆಯವರು ಬಾಗಿಲು ಒಡೆದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಮಗಳ ಸ್ಥಿತಿ ನೋಡಿ ಕುಟುಂಬದವರು ಆಘಾತಕ್ಕೊಳಗಾಗಿದ್ದು, ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.
ಪ್ರಿಯಾಂಕ ಓದಿನಲ್ಲಿ ಚುರುಕಾಗಿದ್ದಳು ಮತ್ತು ಭವಿಷ್ಯದಲ್ಲಿ ಉತ್ತಮ ಆರೋಗ್ಯ ಸೇವಕಿಯಾಗುವ ಕನಸು ಕಂಡಿದ್ದಳು. ಇಂತಹ ಪ್ರತಿಭಾವಂತ ಯುವತಿಯ ನೋವಿನಿಂದಾಗಿ ಸಾವಿಗೆ ಶರಣಾಗಿರುವುದು ಸ್ಥಳೀಯರಲ್ಲಿ ಮತ್ತು ಆಕೆಯ ಸಹಪಾಠಿಗಳಲ್ಲಿ ತೀವ್ರ ದುಃಖವನ್ನುಂಟು ಮಾಡಿದೆ. ಪ್ರಿಯಾಂಕ ಆತ್ಮ*ಹತ್ಯೆಗೆ ನಿಖರ ಕಾರಣ ಹೊಟ್ಟೆನೋವು ಎಂಬುದು ಪ್ರಾಥಮಿಕ ತನಿಖೆಯಲ್ಲಿ ದೃಢಪಟ್ಟಿದ್ದರೂ, ಈ ಕುರಿತು ಕೊಳ್ಳೇಗಾಲ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪಂಚನಾಮೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಸಾವಿಗೆ ಹಿಂದೆ ಬೇರೆ ಯಾವುದೇ ಕಾರಣಗಳಿವೆಯೇ ಎಂಬ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ತೀವ್ರ ಆರೋಗ್ಯ ಸಮಸ್ಯೆ ಅಥವಾ ವೈಯಕ್ತಿಕ ಒತ್ತಡಗಳಿಗೆ ಒಳಗಾದಾಗ ಪ್ರತಿಯೊಬ್ಬರೂ ಮಾನಸಿಕ ಆರೋಗ್ಯ ತಜ್ಞರ ಅಥವಾ ನಂಬಿಕಸ್ಥರ ನೆರವು ಪಡೆಯಬೇಕು. ಯಾವುದೇ ಕಾರಣಕ್ಕೂ ಇಂತಹ ದುಡುಕಿನ ನಿರ್ಧಾರ ತೆಗೆದುಕೊಳ್ಳಬಾರದು ಎಂದು ಸಾರ್ವಜನಿಕರು ಮತ್ತು ಶಿಕ್ಷಣ ತಜ್ಞರು ಯುವ ಸಮುದಾಯಕ್ಕೆ ಮನವಿ ಮಾಡಿದ್ದಾರೆ.