ಹುಬ್ಬಳ್ಳಿ ಧಾರವಾಡ ಮಹಾನಗರ ವ್ಯಾಪ್ತಿಯಲ್ಲಿ ನಡೆಯುತ್ತಿರುವ 26 ನೇ ರಾಷ್ಟ್ರೀಯ ಯುವಜನೋತ್ಸವದ ಅಂಗವಾಗಿ ಧಾರವಾಡ ಕೃಷಿ ಇಲಾಖೆಯಿಂದ ಸಿರಿಧಾನ್ಯ ಮತ್ತು ಸಾವಯವ ಮೇಳದ ಅಂಗವಾಗಿ ಸಾವಯವ ನಡಿಗೆಯನ್ನು ಆಯೋಜಿಸಲಾಗಿತ್ತು.
ವರದಿ : ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್
ಧಾರವಾಡ (ಜ.13): ಹುಬ್ಬಳ್ಳಿ ಧಾರವಾಡ ಮಹಾನಗರ ವ್ಯಾಪ್ತಿಯಲ್ಲಿ ನಡೆಯುತ್ತಿರುವ 26 ನೇ ರಾಷ್ಟ್ರೀಯ ಯುವಜನೋತ್ಸವದ ಅಂಗವಾಗಿ ಧಾರವಾಡ ಕೃಷಿ ಇಲಾಖೆಯಿಂದ ಸಿರಿಧಾನ್ಯ ಮತ್ತು ಸಾವಯವ ಮೇಳದ ಅಂಗವಾಗಿ ಇಂದ ಬೆಳಿಗ್ಗೆ ಕೃಷಿ ಇಲಾಖೆ ಹಾಗೂ ಕಂದಾಯ ಸೇರಿದಂತೆ ವಿವಿಧ ಇಲಾಖೆಗಳ ಹಾಗೂ ರೆಡ್‍ಕ್ರಾಸ್ ಸಂಸ್ಥೆಯ ಸದಸ್ಯರೊಂದಿಗೆ ಸಾವಯವ ನಡಿಗೆಯನ್ನು ಆಯೋಜಿಸಲಾಗಿತ್ತು. ಸಿರಿಧಾನ್ಯ ನಡಿಗೆಗೆ ಚಾಲನೆ ನೀಡಿದ ಧಾರವಾಡ ತಹಶೀಲ್ದಾರ ಸಂತೋಷ ಹಿರೇಮಠ ಅವರು ಮಾತನಾಡಿ, ಕೃಷಿ ಲಾಭದಾಯಕ ಉದ್ಯೋಗವನ್ನಾಗಿ ರೂಪಿಸುವುದರ ಜೊತೆಗೆ ಜನರಿಗೆ ಆರೋಗ್ಯಕರವಾಗಿಯೂ ಸಿಗುವಂತೆ ಮಾಡಲು ಸರ್ಕಾರ ಸಾವಯವ ಕೃಷಿಯನ್ನು ಪ್ರೋತ್ಸಾಹಿಸುತ್ತಿದೆ. ಸಾವಯವ ಕೃಷಿಯಿಂದ ಪಡೆಯುವ ಉತ್ಪನ್ನಗಳನ್ನು, ಸಿರಿಧಾನ್ಯಗಳನ್ನು ರೈತರು ಬೆಳೆಯಲು ಸರ್ಕಾರ ವಿವಿಧ ಪ್ರೋತ್ಸಾಹದಾಯಕ ಸಹಾಯಧನ ಹೊಂದಿರುವ ಯೋಜನೆಗಳನ್ನು ಜಾರಿಗೊಳಿಸಿದೆ. ಇಂದು ಸಾವಯವ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಬರುತ್ತಿದೆ. ಸಿರಿಧಾನ್ಯ ಬಳಕೆಯು ಹೆಚ್ಚುತ್ತಿದೆ. ಆರೋಗ್ಯಪೂರ್ಣ ಸಮಾಜ ನಿರ್ಮಿಸುವಲ್ಲಿ ಸಿರಿಧಾನ್ಯಗಳ ಬಳಕೆ ಮಹತ್ವದ್ದಾಗಿದೆ. ಮಕ್ಕಳಿಗೆ ಆರಂಭದಿಂದಲೇ ಸಿರಿಧಾನ್ಯ ಆಹಾರ ಉತ್ಪನ್ನಗಳನ್ನು ನೀಡುವ ಮೂಲಕ ರುಚಿಉಣಿಸಬೇಕು ಎಂದು ಹೇಳಿದರು.
ಸಿರಿಧಾನ್ಯ ನಡಿಗೆ ಅಧ್ಯಕ್ಷತೆ ವಹಿಸಿದ್ದ ಕೃಷಿ ಇಲಾಖೆಯ ಜಂಟಿನಿರ್ದೇಶಕ ರಾಜಶೇಖರ ಐ.ಬಿ. ಅವರು ಮಾತನಾಡಿ, ಧಾರವಾಡ ಜಿಲ್ಲೆಯಲ್ಲಿ ಸಾವಯವ ಕೃಷಿ ಮತ್ತು ಸಿರಿಧಾನ್ಯ ಉತ್ಪನ್ನಗಳನ್ನು ಹೆಚ್ಚಿಸಲು ಇಲಾಖೆಯಿಂದ ಹೆಚ್ಚಿನ ಪ್ರಯತ್ನ ಮಾಡಲಾಗುತ್ತಿದೆ. ಜಿಲ್ಲೆಯ ಅಂದಾಜು 1800 ಹೆಕ್ಟೇರ್ ಪ್ರದೇಶದಲ್ಲಿ 1200 ಜನ ಸಾವಯವ ಕೃಷಿ ಮಾಡುತ್ತಿದ್ದಾರೆ. ಸಾವಯವ ಕೃಷಿ ಹೆಚ್ಚಿಸಲು ಆಸಕ್ತ ರೈತರಿಗೆ ಉತ್ತಮ ತರಬೇತಿ ಮತ್ತು ಯಶಸ್ವಿ ಸಾವಯವ ರೈತರ ತೋಟಗಳಿಗೆ ಅಧ್ಯಯನ ಪ್ರವಾಸಗಳನ್ನು ಕೈಗೊಳ್ಳಲಾಗುತ್ತಿದೆ. ಮತ್ತು ಆತ್ಮ ಯೋಜನೆಯಡಿ ಜೇನು ಸಾಕಾಣಿಕೆ ಸೇರಿದಂತೆ ವಿವಿಧ ತರಬೇತಿಗಳನ್ನು ನೀಡಲಾಗುತ್ತಿದೆ. ಜಿಲ್ಲೆಯ ವಿವಿಧ ರೈತರ ಜಮೀನುಗಳಲ್ಲಿ ಸುಮಾರು 5 ಸಾವಿರಕ್ಕೂ ಹೆಚ್ಚು ಏರೆಹುಳು ನಿರ್ಮಾಣದ ತೊಟ್ಟಿಗಳನ್ನು ನಿರ್ಮಿಸಲಾಗಿದೆ.
ಸರ್ಕಾರದ ಕೃಷಿಪರ ಯೋಜನೆಗಳನ್ನು ರೈತರಿಗೆ ತಲುಪಿಸುವ ಮೂಲಕ ಕೃಷಿಗೆ ಆಧ್ಯತೆ, ಆಕರ್ಷಣೆ ಸಿಗುವಂತೆ ಮತ್ತು ಆರೋಗ್ಯವರ್ಧಕ ಆಹಾರ ಉತ್ಪನ್ನಗಳನ್ನು ಬೆಳೆಯುವಂತೆ ರೈತರಿಗೆ ಸೂಕ್ತ ಮಾರ್ಗದರ್ಶನ ನೀಡಿ ಪ್ರೋತ್ಸಾಹಿಸಲಾಗುತ್ತಿದೆ ಎಂದು ಹೇಳಿದರು.
ಉಪನಿರ್ದೇಶಕಿ ಜಯಶ್ರೀ ಸಿ. ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನಿರ್ದೇಶಕ ಜಯಪ್ರಕಾಶ ಅವರು ಸ್ವಾಗತಿಸಿದರು. ಧಾರವಾಡ ತಾಲೂಕಾ ಸಹಾಯಕ ನಿರ್ದೇಶಕಿ ಸುಷ್ಮಾ ಮಳಿಮಠ ಕಾರ್ಯಕ್ರಮ ನಿರೂಪಿಸಿದರು. ಕೃಷಿ ಅಧಿಕಾರಿ ಮಹಾದೇವ ಸರಶೆಟ್ಟಿ ವಂದಿಸಿದರು.
ಧಾರವಾಡದ ಕಲಾಭವನದಿಂದ ಆರಂಭವಾದ ಸಿರಿಧಾನ್ಯ ಮ್ಯಾರಾಥಾನ್ ನಡಿಗೆಯು ಕೋರ್ಟ್ ಸರ್ಕಲ್ ಮುಖಾಂತರ ಜಿಲ್ಲಾಧಿಕಾರಿ ಕಛೇರಿ ಆವರಣ ಆಲೂರು ವೆಂಕಟರಾವ ಭವನ ಕರ್ನಾಟಕ ಕಾಲೇಜು ತಲುಪಿ ಅಂತಿಮವಾಗಿ ಆರ್.ಎನ್. ಶೆಟ್ಟಿ ಕ್ರಿಡಾಂಗಣದಲ್ಲಿ ಸಮಾಪ್ತಿಗೊಂಡಿತು.
ಸಿರಿಧಾನ್ಯ ಜಾಗೃತಿ ಕಾರ್ಯಕ್ರಮದಲ್ಲಿ ಕೃಷಿ ವಿಶ್ವವಿದ್ಯಾಲಯ, ಗ್ರೀನ್ ಪೌಂಡೇಶನ್, ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ಮತ್ತು ಇನ್ನಿತರ ಸ್ವಯಂ ಸೇವಾ ಸಂಸ್ಥೆಗಳು ಭಾಗವಹಿಸಿದ್ದವು. ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದ ಪ್ರತಿನಿಧಿಗಳು ಕೈಯಲ್ಲಿ ಪ್ರಚಾರ ಫಲಕಗಳನ್ನು ಹಿಡಿದು ಸಿರಿಧಾನ್ಯ ಬಳಕೆ ಮತ್ತು ಆರೋಗ್ಯ ರಕ್ಷಣೆ ಕುರಿತಂತೆ ಘೋಷಣೆಗಳನ್ನು ಕೂಗುತ್ತ ನಡೆದರು.
ಕಾರ್ಯಕ್ರಮದ ನಿಮಿತ್ತ ಧಾರವಾಡದ ಆರ್.ಎನ್. ಶೆಟ್ಟಿ ಸ್ಟೆಡಿಯಂ ಎದುರಿಗಿರುವ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಆವರಣದಲ್ಲಿ ವಸ್ತು ಪ್ರದರ್ಶನ ಮತ್ತು ಮಾರಾಟ ಮಳಿಗೆಗಳನ್ನು ಹಾಕಲಾಗಿದೆ. ಈ ಮಳಿಗೆಗಳಲ್ಲಿ ಕೃಷಿ ವಿಶ್ವ ವಿದ್ಯಾಲಯದ ವಿಜ್ಞಾನಿಗಳು, ವಿವಿಧ ಕೃಷಿ ವಿಜ್ಞಾನ ಕೇಂದ್ರಗಳ ವಿಜ್ಞಾನಿಗಳು ಮಾದರಿ ಹಾಗೂ ಪ್ರಚಾರ ಸಾಮಗ್ರಿಗಳನ್ನು ಪ್ರದರ್ಶಿಸುತ್ತಿದ್ದಾರೆ.
NATIONAL YOUTH FESTIVAL: ಸೇನೆ ಬಗ್ಗೆ ತಿಳಿಯಲು ಎರಡು ವಿಶೇಷ ಮಳಿಗೆಗಳು
ಕೃಷಿ ಇಲಾಖೆಯ ಕಾರ್ಯಕ್ರಮಗಳ ಕುರಿತು ಪ್ರಚಾರ ಹಾಗೂ ಸ್ಥಳದಲ್ಲಿಯೆ ಫಲಾನುಭವಿಗಳ ಆನ್ ಲೈನ್ ಸೇವೆ ನೀಡಲು ಮಳಿಗೆ ತೆರೆಯಲಾಗಿದೆ ಹಾಗೂ ರೈತ ಉತ್ಪಾದಕ ಕಂಪನಿಗಳು ಸ್ವ ಸಹಾಯ ಸಂಘಗಳು, ಸ್ತ್ರೀ ಶಕ್ತಿ ಗುಂಪುಗಳು, ಸಾವಯವ ಒಕ್ಕೂಟ, ಖಾಸಗಿ ಕಂಪನಿಗಳು, ಆತ್ಮ ನಿರ್ಭರ ಭಾರತ ಫಲಾನುಭವಿಗಳು, ಉದ್ದಿಮೆದಾರರು ವಿವಿಧ ಮಾರಾಟ ಸಾಮಗ್ರಿಗಳನ್ನು ಪ್ರದರ್ಶನ ಮತ್ತು ಮಾರಾಟ ಮಾಡುತ್ತಿದ್ದಾರೆ. ರೊಟ್ಟಿ, ಚಟ್ನಿ, ಉಪ್ಪಿನಕಾಯಿ, ಸಿಹಿ ತಿನಿಸುಗಳು, ಮಾದಲಿ, ಸಿರಿದಾನ್ಯ ಉತ್ಪನ್ನಗಳು, ಶುದ್ಧ ಗಾಣದ ಎಣ್ಣೆ, ಸಾವಯವ ಸಂಸ್ಕರಿತ ಆಹಾರ ಉತ್ಪನ್ನಗಳು, ಸಾವಯವ ಸಂಸ್ಕರಿತ ಆಹಾರ ಉತ್ಪನ್ನಗಳು ಮಾರಾಟಕ್ಕೆ ಲಭ್ಯವಿರುತ್ತವೆ.
National Youth Festival:15ರಂದು ಗಿನ್ನಿಸ್ ದಾಖಲೆಗೆ ಯೋಗಥಾನ್!
ಸಿರಿಧಾನ್ಯಗಳು ಕೃಷಿ ಪರಿಸರದಿಂದ ಕಣ್ಮರೆಯಾಗುತ್ತಿದ್ದು ಮಾನವನ ಆಹಾರದಲ್ಲಿ ಪೋಷಕಾಂಶಗಳ ಕೊರತೆ ಉಂಟಾಗಿದೆ, ಇದರಿಂದ ಬೇರೆ ಬೇರೆ ಅನಾರೋಗ್ಯದ ಸಮಸ್ಯೆಗಳು ತಲೆದೊರುತ್ತಿದ್ದು ಸಿರಿಧಾನ್ಯಗಳು ಕೃಷಿ ಮತ್ತು ಬಳಕೆಯನ್ನು ಉತ್ತೇಜಿಸಬೇಕಾಗಿದೆ. ನಮ್ಮ ಸಂಪ್ರದಾಯಿಕ ಆಹಾರ ಧಾನ್ಯಗಳಾದ ಜೋಳ, ರಾಗಿ, ಸಜ್ಜೆ, ನವಣೆ, ಅರಕ, ಉದಲು, ಕೊರಲು, ಸಾವೆ, ಬರಗು ಇವೆಲ್ಲ ಉತ್ತಮ ಪೋಷಕಾಂಶಗಳ ಮೂಲಗಳಾಗಿದ್ದು ಯಥೇಚ್ಚ ನಾರಿನ ಅಂಶವನ್ನು ಒಳಗೊಂಡಿವೆ ಇವನ್ನು ಸೇವನೆಯಿಂದ ಮನುಷ್ಯನ ಆರೋಗ್ಯದಲ್ಲಿ ಶೀಘ್ರ ಸುಧಾರಣೆ ಆಗುವುದನ್ನು ತಜ್ಞರು ಗುರುತಿಸಿದ್ದಾರೆ. ಈ ಎಲ್ಲ ಸಂಗತಿಗಳ ಕುರಿತಂತೆ ಜನರಲ್ಲಿ ಜಾಗೃತಿ ಮೂಡಿಸಲು ದಿನಾಂಕ 12 ರಿಂದ 16 ರ ವರೆಗೆ ಬೆಳೆಗ್ಗೆ 10 ರಿಂದ ಸಂಜೆ 7 ರ ವರೆಗೆ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಸಾರ್ವಜನಿಕರು ಹೆಚ್ಚಿನ ಸ್ಪಂಧನೆ ತೋರಿಸುತ್ತಿದ್ದಾರೆ.