ಜನಾಕ್ರೋಶಕ್ಕೆ ಮಣಿದ ಸೆಂಟ್ರಲ್ ರೈಲ್ವೆ ; ಸೂಪರ್ ಫಾಸ್ಟ್ ರೈಲು ಸೇವೆಗಿಲ್ಲ ಅಡೆತಡೆ

By Kannadaprabha News  |  First Published Feb 15, 2020, 3:01 PM IST

ಕೊನೆಗೂ ಸೂಪರ್‌ಫಾಸ್ಟ್ ಸೇವೆ ಕಲಬುರಗಿಯಿಂದಲೇ ಆರಂಭಿಸಲು ಗ್ರೀನ್ ಸಿಗ್ನಲ್ | ಗುಲ್ಬರ್ಗ- ಯಶ್ವಂತಪುರ- ಹಾಸನ ಸೂಪರ್ ಫಾಸ್ಟ್ ಸೇವೆ ಎಂದಿನಂತೆ ಕನ್ನಡಪ್ರಭ ವರದಿ ಪರಿಣಾಮ | ಹಠಮಾರಿತನ ತೊರೆದ ಸೆಂಟ್ರಲ್ ರೇಲ್ವೆ ಇಲಾಖೆ ಕಲ್ಯಾಣ ಕರ್ನಾಟಕ ಜನತೆಗೆ ಎಂದಿನಂತೆ ರೈಲು ಓಡಿಸಲು ಮುಂದಾಯ್ತು|


ಕಲಬುರಗಿ[ಫೆ.15]: ಪಿಟ್‌ಲೈನ್ ಸವಲತ್ತಿದ್ದರೂ ಅದನ್ನು ಬಳಸದೆ ಕಲಬುರಗಿ ಸೇರಿದಂತೆ ಕಲ್ಯಾಣ ನಾಡಿನ ಜನತೆಗೆ ಅತ್ಯಂತ ಅಗತ್ಯವಾಗಿರುವ ಸೂಪರ್ ಫಾಸ್ಟ್ ರೈಲು ಸೇವೆ ವಂಚಿತಗೊಳಿಸುವ ದುಸ್ಸಾಹಸಕ್ಕೆ ಕೈಹಾಕಿದ್ದ ಸೆಂಟ್ರಲ್ ರೇಲ್ವೆ ಇದೀಗ ತನ್ನ ಈ ಪ್ರಯತ್ನದಲ್ಲಿ ಯಶ ಕಾಣದೆ ಕೈ ಸುಟ್ಟುಕೊಂಡಿದೆ. 

ಸೆಂಟ್ರಲ್ ರೈಲ್ವೆ ಕೊನೆಗೂ ತನ್ನ ಮೊಂಡಾಟ ಧೋರಣೆ ಕೈಬಿಟ್ಟು ಕಲಬುರಗಿ, ರಾಯಚೂರು, ಯಾದಗಿರಿ ಜನರಿಗೆ ಎಂದಿನಂತೆ ಯಾವುದೇ ವ್ಯತ್ಯಯ ಇಲ್ಲದಂತೆ ಸೂಪರ್ ಫಾಸ್ಟ್ ರೈಲು ಸೇವೆ 10 ದಿನಗಳಲ್ಲಿಯೂ ನೀಡಲು ಮುಂದಾಗಿದೆ. 

Latest Videos

undefined

ಕಲಬುರಗಿ- ಸೊಲ್ಲಾಪುರ ಮಾರ್ಗದಲ್ಲಿನ ಬೋರೋಟಿ- ದುಧನಿ- ಕುಲಾಲಿ ಮಧ್ಯೆ ಫೆ.16ರಿಂದ ಫೆ.26ರ ವರೆಗೂ ನಾನ್ ಇಂಟರ್ ಲಾಕಿಂಗ್ ಕಾಮಗಾರಿ ಕೈಗೊಂಡಿದೆ. ಸೊಲ್ಲಾಪುರ- ಯಶ್ವಂತಪುರ- ಹಾಸನ್ ಸೂಪರ್‌ಫಾಸ್ಟ್ ರೈಲು ಸೇರಿದಂತೆ 13 ಎಕ್ಸ್‌ಪ್ರೆಸ್ ಹಾಗೂ ಪ್ಯಾಸೆಂಜರ್ ರೈಲುಗಳ ಸೇವೆ 10 ದಿನಗಳ ಮಟ್ಟಿಗೆ ರದ್ದುಗೊಳಿಸಿತ್ತು. ಸೆಂಟ್ರಲ್ ರೇಲ್ವೆ ಇದೀಗ ರದ್ದು ಮಾಡಲಾಗಿರುವ ರೈಲುಗಳ ಪಟ್ಟಿಯಿಂದ ಸೊಲ್ಲಾಪುರ- ಹಾಸನ ರೈಲನ್ನು ಕೈಬಿಟ್ಟಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ರೈಲನ್ನು ಸೊಲ್ಲಾಪುರದ ಬದಲಿಗೆ ಕಲಬುರಗಿಯಿಂದಲೇ ಹಾಸನ ವರೆಗೂ 10 ದಿನಗಳ ಕಾಲ ಓಡಿಸಲು ಮುಂದಾಗಿದೆ. ಸೊಲ್ಲಾಪುರ- ವಾಡಿ ಸೆಕ್ಷನ್‌ನಲ್ಲಿ ಬರುವ ಕಲಬುರಗಿ- ಬೋರೋಟಿ- ದುಧನಿ- ಕುಲಾಲಿ ಮಾರ್ಗದಲ್ಲಿ ಜೋಡಿ ಹಳಿ ಕಾಮಗಾರಿ ಕೈಗೆತ್ತಿಕೊಳ್ಳುವ ಕಾರಣದಿಂದ ಸೆಂಟ್ರಲ್ ರೇಲ್ವೆ ಸೊಲ್ಲಾಪುರ- ಹಾಸನ ರೈಲು ಸೇವೆ ರದ್ದು ಮಾಡಿ ಫೆ.11ರಂದು ಪ್ರಕಟಣೆ ಹೊರಡಿಸಿತ್ತು. ಈ ಘೋಷಣೆಯಿಂದಾಗಿ ಜನಮನದಲ್ಲಿ ಭಾರಿ ಕೋಪತಾಪ ಹೊರಹಾಕಿದ್ದರು. ಅನೇಕರು ಸೊಲ್ಲಾಪುರಕ್ಕೆ ನಿಯೋಗದಲ್ಲಿ ಹೋಗಿ ಈ ರೈಲು ಸೇವೆ ರದ್ದಾದಲ್ಲಿ ಹೋರಾಟದ ಎಚ್ಚರಿಕೆ ನೀಡಿದ್ದರು. ಇವೆಲ್ಲ ಬೆಳವಣಿಗೆಗಳ ಹಿನ್ನೆಲೆ ತನ್ನ ಮೊದಲಿನ ನಿರ್ಧಾರ ಬದಲಿಸಿರುವ ಸೆಂಟ್ರಲ್ ರೇಲ್ವೆ ಎನ್‌ಐ ಕಾಮಗಾರಿ ನಡೆಯುವ 10 ದಿನ ಈ ರೈಲು ಕಲಬುರಗಿಯಿಂದ ಹಾಸನ ವರೆಗೆ ಓಡಲಿದೆ ಎಂದು ರೇಲ್ವೆ ಇಲಾಖೆ ಶುಕ್ರವಾರ ಪ್ರಕಟಣೆ ತಿಳಿಸಿದೆ. 

ಕಲಬುರಗಿಯಲ್ಲಿ ಪಿಟ್‌ಲೈನ್, ಕೋಚಿಂಗ್ ಕಾಂಪ್ಲೆಕ್ಸ್ ಬಳಸಿ ಜನರಿಗೆ ಸವಲತ್ತು ನೀಡಲಿ. ಭವಿಷ್ಯದಲ್ಲಿ ಸೆಂಟ್ರಲ್ ರೇಲ್ವೆ ಇಂತಹ ದುಸ್ಸಾಹಸಗಳಿಗೆ ಕೈ ಹಾಕೋದು ಬೇಡ ಎಂದು ರೈಲ್ವೆ ಬಳಕೆದಾರ ಆನಂದ ದೇಶಪಾಂಡೆ, ಸುನೀಲ ಕುಲಕರ್ಣಿ ಅಭಿಪ್ರಾಯಪಟ್ಟಿದ್ದಾರೆ. 

ಈ ಬಗ್ಗೆ ಮಾತನಾಡಿದ ಕಲಬುರಗಿ  ಹೋರಾಟಗಾರ ಲಕ್ಷ್ಮಣ ದಸ್ತಿ ಅವರು, ಸೊಲ್ಲಾಪುರ ಡಿಆರ್‌ಎಂ ಶೈಲೇಶ ಗುಪ್ತ ಅವರೊಂದಿಗೆ ನಡೆದ ಮಾತುಕತೆ ಫಲವಾಗಿ ಸೂಪರ್ ಫಾಸ್ಟ್ ರೈಲು ಸೇವೆ ಕಲಬುರಗಿಯಿಂದಲೇ ಶುರುವಾಗಲಿದೆ. ಇದು ನಮ್ಮ ನಿಯೋಗದ ಭೇಟಿಗೆ ಸಿಕ್ಕ ಯಶಸ್ಸು. ಬರುವ ದಿನಗಳಲ್ಲಿ ಈ ಭಾಗದ ಜನರ ರೈಲು ಬೇಡಿಕೆಗಳ ಬಗ್ಗೆ ನಾವೇ ಖುದ್ದಾಗಿ ಸೊಲ್ಲಾಪುರಕ್ಕೆ ಹೋಗಿ, ಸೆಂಟ್ರಲ್ ರೇಲ್ವೆ ಮುಂಬೈ ಕಚೇರಿಗೂ ಹೋಗಿ ಮಾತುಕತೆ ನಡೆಸಿ ಗಮನ ಸೆಳೆಯುತ್ತೇವೆ ಎಂದು ತಿಳಿಸಿದ್ದಾರೆ. 
 

click me!