
ಮಯೂರ್ ಹೆಗಡೆ
ಬೆಂಗಳೂರು(ಸೆ.01): ಬೆಂಗಳೂರು ಉಪನಗರ ರೈಲ್ವೆ ಯೋಜನೆ (ಬಿಎಸ್‌ಆರ್‌ಪಿ) ಕಾಮಗಾರಿಗಳಿಗೆ ವೇಗ ಸಿಗಲು ಯೋಜನೆ ಜಾರಿಗೊಳಿಸುತ್ತಿರುವ ಕೆ-ರೈಡ್ ಸಂಸ್ಥೆಗೆ ಬೇರೆ ಇಲಾಖೆಗಳ ಹೆಚ್ಚುವರಿ ಹೊಣೆಗಾರಿಕೆ ಇಲ್ಲದ ಕಾಯಂ ವ್ಯವಸ್ಥಾಪಕ ನಿರ್ದೇಶಕರು ಇರಬೇಕು ಎಂಬ ಒತ್ತಾಯ ಕೇಳಿ ಬಂದಿದೆ.
ಕೆ-ರೈಡ್‌ಗೆ ಈ ಹಿಂದೆ ಐಆರ್‌ಎಸ್‌ಇ (ಭಾರತೀಯ ರೈಲ್ವೆ ಎಂಜಿನಿಯರ್ ಸೇವೆ) ಹುದ್ದೆಯ ಅಮಿತ್ ಗಗ್‌ರ್ ಅವರು ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಅವರ ವರ್ಗಾವಣೆ ಬಳಿಕ ಪ್ರಸ್ತುತ ಹಿರಿಯ ಐಎಎಸ್ ಅಧಿಕಾರಿ ಗೌರವ್‌ಗುಪ್ತಾ ಅವರು ವ್ಯವಸ್ಥಾಪಕ ನಿರ್ದೇಶಕರಾಗಿ ಹೆಚ್ಚುವರಿ ಹೊಣೆ ನಿಭಾಯಿಸುತ್ತಿದ್ದಾರೆ. ಅವರಿಗೆ ಇಂಧನ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಇಲಾಖೆಗಳ ಜವಾಬ್ದಾರಿಯೂ ಇದೆ. ಆದರೆ ಕೆ-ರೈಡ್ ವ್ಯವಸ್ಥಾಪಕ ನಿರ್ದೇಶಕ ಹುದ್ದೆಗೆ ಐಆರ್‌ಎಸ್ ದರ್ಜೆಯ ಅಧಿಕಾರಿ ನಿಯೋಜಿಸಬೇಕು ಎಂಬುದು ಭಾರತೀಯ ರೈಲ್ವೆಯ ಅಭಿಮತ. ಆದರೆ, ರಾಜ್ಯ ಸರ್ಕಾರ ಐಎಎಸ್ ದರ್ಜೆಯ ಅಧಿಕಾರಿ ನೇಮಿಸಿಕೊಳ್ಳಲು ಒಲವು ತೋರುತ್ತಿದೆ.
ಬೆಂಗಳೂರು ಉಪನಗರ ರೈಲು ಯೋಜನೆ ಮೈಸೂರು, ಕೋಲಾರಕ್ಕೂ ವಿಸ್ತರಣೆ: ಸಚಿವ ಎಂ.ಬಿ.ಪಾಟೀಲ್
ರೈಲ್ವೆ ಮಂಡಳಿ ಸಹಯೋಗದಲ್ಲಿ ಬಿಎಸ್‌ಆರ್‌ಪಿ ಅನುಷ್ಠಾನಗೊಳ್ಳುತ್ತಿದ್ದು, ಯೋಜನೆಗಾಗಿ ನೈಋುತ್ಯ ರೈಲ್ವೆ ಭೂಮಿ ನೀಡಿದೆ. ಐಆರ್‌ಎಸ್ ಅಧಿಕಾರಿ ವ್ಯವಸ್ಥಾಪಕ ನಿರ್ದೇಶಕ ಸ್ಥಾನದಲ್ಲಿದ್ದರೆ ತನ್ನ ದೃಷ್ಟಿಕೋನದ ಪ್ರಕಾರ ಯೋಜನೆ ಜಾರಿಗೆ ಅನುಕೂಲವಾಗುತ್ತದೆ ಎಂಬುದು ರೈಲ್ವೆ ಮಂಡಳಿ ಉದ್ದೇಶ. ಆದರೆ, ಯೋಜನೆಗೆ ವಿದೇಶಿ ಬಂಡವಾಳ ಹೂಡಿಕೆ ಮಾತುಕತೆ, ಸ್ಥಳೀಯ ಸಮಸ್ಯೆ ನಿವಾರಣೆ ಸೇರಿ ತಾಂತ್ರಿಕ ನೈಪುಣ್ಯತೆ ಜತೆಗೆ ಸಂವಹನ ಕೂಡ ಮುಖ್ಯ. ಹೀಗಾಗಿ ಐಎಎಸ್ ಹುದ್ದೆಯ ಅಧಿಕಾರಿ ಇರಲಿ ಎಂದು ರಾಜ್ಯ ಸರ್ಕಾರ ಯೋಚಿಸುತ್ತಿದೆ. ಈ ಭಿನ್ನ ಅಭಿಪ್ರಾಯದ ಕಾರಣಕ್ಕಾಗಿ ಕೆ-ರೈಡ್‌ಗೆ ಕಾಯಂ ಅಧಿಕಾರಿಯ ನೇಮಕ ವಿಳಂಬವಾಗುತ್ತಿದೆ.
ಪ್ರಸ್ತುತ ಕೆ-ರೈಡ್ ಶೇ.15ರಷ್ಟು ಕಾಮಗಾರಿ ಪ್ರಗತಿ ಕಂಡಿದೆ. ಆದರೆ, ಮುಂದೆ ಹೆಚ್ಚಿನ ಜವಾಬ್ದಾರಿ ನಿಭಾಯಿಸುವ ಒತ್ತಡ ಬರಬಹುದು. ಅದಕ್ಕೆ ಹೆಚ್ಚುವರಿ ಹೊಣೆಗಾರಿಕೆ ಇಲ್ಲದ, ಕೆ-ರೈಡ್‌ಗೆ ಮೀಸಲಾದ ಅಧಿಕಾರಿ ಬೇಕಾಗುತ್ತಾರೆ. ಗುಪ್ತಾ ಅವರಿಗೆ ಹೆಚ್ಚುವರಿ ಹೊಣೆ ಬದಲು ಕೆ-ರೈಡ್‌ಗೆ ಕಾಯಂ ಆಗಿ ನಿಯೋಜಿಸಿದರೂ ಸರಿ, ಒಟ್ಟಿನಲ್ಲಿ ಉಪನಗರ ರೈಲ್ವೆ ಯೋಜನೆಗೆ ಮಾತ್ರ ಮೀಸಲಾದ ಅಧಿಕಾರಿ ಬೇಕು ಎಂದು ರೈಲ್ವೆ ತಜ್ಞರು ಅಭಿಪ್ರಾಯ ಪಡುತ್ತಾರೆ.
ಕಾಯಂ ಅಧಿಕಾರಿ ಯಾಕೆ ಬೇಕು?
ರೈಲ್ವೆ ಮಂಡಳಿ ಜೊತೆಗೆ ಸಮನ್ವಯ ಸಾಧಿಸಿ ಯೋಜನೆ ತ್ವರಿತ ತೀರ್ಮಾನ ಕೈಗೊಳ್ಳಲು ಕಾಯಂ ವ್ಯವಸ್ಥಾಪಕ ನಿರ್ದೇಶಕರು ಬೇಕು. ಕಾರಿಡಾರ್-1 ಕೆಎಸ್‌ಆರ್ ಬೆಂಗಳೂರು-ದೇವನಹಳ್ಳಿ (ಸಂಪಿಗೆ ಕಾರಿಡಾರ್) ಹಾಗೂ ಕಾರಿಡಾರ್-3 ಕೆಂಗೇರಿ-ವೈಟ್‌ಫೀಲ್ಡ್‌ಗೆ( ಪಾರಿಜಾತ ಕಾರಿಡಾರ್) ಟೆಂಡರ್ ವಿಳಂಬವಾಗುತ್ತಿದೆ. ವೈಟ್‌ಫೀಲ್ಡ್ ಮಾರ್ಗಕ್ಕಾಗಿ ಒಂದೇ ಕಾರಿಡಾರ್‌ನಲ್ಲಿ ನೈಋುತ್ಯ ರೈಲ್ವೆ ಹಾಗೂ ಬಿಎಸ್‌ಆರ್‌ಪಿ ಕಾರ್ಯಾಚರಣೆ ನಡೆಸುವ ಸಂಬಂಧ ರೈಲ್ ಇಂಡಿಯಾ ಟೆಕ್ನಿಕಲ್ ಆ್ಯಂಡ್ ಎಕನಾಮಿಕ್ ಸವೀರ್‍ಸ್ ಲಿ. (ರೈಟ್ಸ್) ಕಾರ್ಯಸಾಧ್ಯತಾ ವರದಿ ರೂಪಿಸುತ್ತಿದೆ. ಕಾರಿಡಾರ್‌ನಲ್ಲಿ ನಾಲ್ಕು ಹಳಿಗಳ ಅಳವಡಿಕೆ ಸಂಬಂಧ ಅಧ್ಯಯನ ನಡೆಸಲಾಗುತ್ತಿದೆ.
ಏರ್‌ಪೋರ್ಟ್ ಮಾರ್ಗಕ್ಕಾಗಿ ನೈಋುತ್ಯ ರೈಲ್ವೆಗೆ 2022ರ ಜುಲೈನಲ್ಲೇ ಪ್ರಸ್ತಾವನೆ ಕಳುಹಿಸಲಾಗಿತ್ತು. ಬಳಿಕ ಅವರು ಸೆಪ್ಟೆಂಬರ್‌ನಲ್ಲಿ ಪ್ರಶ್ನಿಸಿದ್ದ ಕೆಲ ತಾಂತ್ರಿಕ ವಿಚಾರಗಳಿಗೆ ನಾವು ನವೆಂಬರ್‌ನಲ್ಲೇ ಉತ್ತರಿಸಿದ್ದೇವೆ. ಆದರೆ, ಈವರೆಗೂ ರೈಲ್ವೆ ಮಂಡಳಿ ಟೆಂಡರ್‌ಗೆ ಒಪ್ಪಿಗೆ ನೀಡಿಲ್ಲ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಹೀಗಿರುವಾಗ ಈ ಹಂತದಲ್ಲಿ ಕಾಯಂ ಅಧಿಕಾರಿ ಇದ್ದರೆ ರೈಲ್ವೆ ಮಂಡಳಿ ಜೊತೆಗಿನ ಚರ್ಚೆಗೆ, ಕಡತಗಳ ಶೀಘ್ರ ವಿಲೇವಾರಿಗೆ ಅನುಕೂಲವಾಗುತ್ತದೆ ಎಂಬುದು ಸಾರಿಗೆ ತಜ್ಞರ ಅಭಿಪ್ರಾಯ.
ಬೆಂಗಳೂರು ಸಬ್‌ಅರ್ಬನ್ ರೈಲಿಗೆ ಖಾಸಗಿ ಕಂಪನಿ ಬೋಗಿ..!
ಇದು ಆಡಳಿತಾತ್ಮಕ ವಿಚಾರ, 3 ತಿಂಗಳಲ್ಲಿ ರೈಲ್ವೆ ಮಂಡಳಿ ಹಾಗೂ ರಾಜ್ಯ ಸರ್ಕಾರ ಕಾಯಂ ಎಂಡಿ ನೇಮಕ ವಿಚಾರ ಸಂಬಂಧ ಸಮರ್ಪಕ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ಈಗಾಗಲೇ ಕೆ-ರೈಡ್‌ಗೆ ಕಾಯಂ ವ್ಯವಸ್ಥಾಪಕ ನಿರ್ದೇಶಕರನ್ನು ನೇಮಿಸಬೇಕಿತ್ತು. ಯಾರೇ ಹಿರಿಯ ಅಧಿಕಾರಿ ನೇಮಿಸಿದರೂ ಒಳ್ಳೆಯದೆ. ಆದರೆ, ಈ ಹುದ್ದೆಗೆ ಮಾತ್ರ ಮೀಸಲಾಗಿ ನಿಯೋಜಿಸಬೇಕು ಎಂದು ರೈಲ್ವೆ ತಜ್ಞ ಕೃಷ್ಣಪ್ರಸಾದ್ ತಿಳಿಸಿದ್ದಾರೆ.