ದೇವಸ್ಥಾನಗಳ ಅಡುಗೆ ಕೋಣೆಗೆ ಸಿಸಿ ಟಿವಿ ಕಡ್ಡಾಯ: ಕೋಟ ಸೂಚನೆ

By Kannadaprabha NewsFirst Published Sep 28, 2019, 3:26 PM IST
Highlights

ದೇವಸ್ಥಾನದ ಪ್ರಸಾದದಲ್ಲಿ ಪಿನ್, ಜಿರಳೆ ಹೀಗೆ ಏನಾದರೊಂದು ಸಿಕ್ಕಿ ಸುದ್ದಿಯಾಗುತ್ತಲೇ ಇರುತ್ತದೆ. ಇದನ್ನು ತಡೆಯವುದಕ್ಕಾಗಿಯೇ ದೇವಸ್ಥಾನದ ಅಡುಗೆ ಕೋಣೆಗಳಲ್ಲಿ ಕಡ್ಡಾಯ ಸಿಸಿಟಿವಿ ಅಳವಡಿಸಲು ಸೂಚನೆ ನೀಡಲಾಗಿದೆ. ಸರ್ಕಾರಿ ಮತ್ತು ಖಾಸಗಿ ದೇವಾಲಯಗಳಲ್ಲಿ ಸಿಸಿ ಟಿವಿಯ ಅಳವಡಿಕೆಗೆ ಕೂಡಲೆ ದೇವಾಲಯಗಳ ಆಡಳಿತ ಮಂಡಳಿ ಗಮನ ಹರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚನೆ ನೀಡಿದ್ದಾರೆ.

ಮಂಗಳೂರು(ಸೆ.28): ದೇವಸ್ಥಾನಗಳ ಅಡುಗೆ ಕೋಣೆಗಳಿಗೆ ಸಿಸಿ ಟಿವಿ ಕಡ್ಡಾಯವಾಗಬೇಕು. ಸರ್ಕಾರಿ ಮತ್ತು ಖಾಸಗಿ ದೇವಾಲಯಗಳಲ್ಲಿ ಸಿಸಿ ಟಿವಿಯ ಅಳವಡಿಕೆಗೆ ಕೂಡಲೆ ದೇವಾಲಯಗಳ ಆಡಳಿತ ಮಂಡಳಿ ಗಮನ ಹರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚನೆ ನೀಡಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ದಸರಾ ಮಹೋತ್ಸವದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈ ಕಾರ್ಯಕ್ಕೆ ಪೂರ್ಣ ಸಹಕಾರ ನೀಡುವುದಾಗಿ ಹೇಳಿದರು. ದಸರಾ ಮೆರವಣಿಗೆಗೆ ಸಂಬಂಧಪಟ್ಟಂತೆ ರಸ್ತೆ ಬದಿಯಲ್ಲಿ ಅಡಚಣೆಯಾಗುವ ಮರಗಳ ಕೊಂಬೆಗಳನ್ನು ಕಡಿಯುವಂತೆ ಸಂಬಂಧಪಟ್ಟಇಲಾಖೆಗೆ ಸಚಿವರು ಸೂಚಿಸಿದರು.

ದೇವಾಲಯಗಳಲ್ಲಿ ಪ್ಲಾಸ್ಟಿಕ್‌ ನಿಷೇಧ:

ದಸರಾ ಸಂದರ್ಭ ದೇವಾಲಯಗಳಲ್ಲಿ ಪ್ಲಾಸ್ಟಿಕ್‌ ಕವರ್‌ಗಳಲ್ಲಿ ಪ್ರಸಾದ ನೀಡುವುದು ಅಥವಾ ಇನ್ನಿತರ ಕಡೆಗಳಲ್ಲಿ ಪ್ಲಾಸ್ಟಿಕ್‌ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಯಾವುದೇ ಕಾರಣಕ್ಕೂ ಹಬ್ಬ ಮತ್ತು ಉಳಿದ ಸಂದರ್ಭಗಳಲ್ಲಿ ಪ್ಲಾಸ್ಟಿಕ್‌ ಬಳಕೆ ಕಾಣಿಸಬಾರದು. ಇದರ ಕುರಿತು ಆಯಾ ದೇವಾಲಯಗಳ ಆಡಳಿತ ಮಂಡಳಿ ಗಮನ ಹರಿಸಬೇಕು ಎಂದು ದ.ಕ ಜಿಲ್ಲಾಧಿಕಾರಿ ಸಿಂಧೂ ರೂಪೇಶ್‌ ಹೇಳಿದರು.

ದೇಶದಲ್ಲಿ ಜಾಗತಿಕವಾಗಿ ಹಬ್ಬಿಕೊಂಡಿರುವ ಭಯೋತ್ಪಾದಕ ಕುರುಹುಗಳು ಕರಾವಳಿ ಪ್ರದೇಶದಲ್ಲಿಯೂ ಕಂಡುಬಂದಿದೆ. ಆದ್ದರಿಂದ ಹಬ್ಬದ ಸಂದರ್ಭಗಳಲ್ಲಿ ಅಪರಿಚಿತ ವ್ಯಕ್ತಿಗಳು ಕಂಡು ಬಂದು ಕೆಲಸ ಕಾರ್ಯಗಳಲ್ಲಿ ಕೈಜೋಡಿಸಲು ಮುಂದಾದರೆ ಅವಕಾಶ ಕೊಡದೆ ತಕ್ಷಣ ಪೊಲೀಸ್‌ ಇಲಾಖೆಗೆ ಮಾಹಿತಿ ಕಳುಹಿಸಬೇಕು. ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ನಿಗಾ ವಹಿಸಬೇಕು ಎಂದು ಮಂಗಳೂರು ಪೊಲೀಸ್‌ ಆಯುಕ್ತ ಪಿ.ಎಸ್‌. ಹರ್ಷ ತಿಳಿಸಿದರು.

ಮಂಡ್ಯ: ದಸರಾ ಪೆಂಡಾಲ್ ಹಾಕೋದಿಕ್ಕೂ JDS, BJP ಜಗಳ

ಸರಿಯಾದ ದಾಖಲಾತಿ ಹೊಂದಿದ ವಾಹನಗಳನ್ನು ದಸರಾ ಮೆರವಣಿಗೆಯಲ್ಲಿ ಬಳಸುವಂತೆ ಸೂಚಿಸಲಾಯಿತು. ವಿದ್ಯುತ್‌ ಬಳಕೆಯಲ್ಲಿ ಅತಿಯಾದ ಜಾಗರೂಕತೆ ಮುಖ್ಯ. ಆಹಾರ ವ್ಯವಸ್ಥೆಯು ಅಚ್ಚುಕಟ್ಟಾಗಿ, ಮಿತವ್ಯಯವಾಗಿ ಬಳಸುವಂತೆ ನೋಡಿಕೊಳ್ಳಬೇಕು. ಮುಖ್ಯವಾಗಿ ಹಿರಿಯರು, ಮಹಿಳೆಯರು, ಮಕ್ಕಳಿಗೆ ಮತ್ತು ವಿಕಲಚೇತನರಿಗೆ ವಿಶೇಷ ವ್ಯವಸ್ಥೆ ಮಾಡುವಂತೆ ದೇವಾಲಯಗಳ ಆಡಳಿತ ಮಂಡಳಿಗಳಿಗೆ ಸೂಚಿಸಲಾಯಿತು.

ಮಂಗಳೂರು: ನಡೆದುಕೊಂಡು ಹೋಗ್ತಿದ್ದ ವ್ಯಕ್ತಿಗೆ ದಂಡ..!

ದಸರಾ ಸಂದರ್ಭದಲ್ಲಿ ಪೊಲೀಸ್‌ ಇಲಾಖೆ ವತಿಯಿಂದ 24 ಗಂಟೆ ನಿರಂತರ ಸೇವೆ ಒದಗಿಸಲಾಗುವುದು ಎಂದು ಆಯುಕ್ತರು ಹೇಳಿದರು. ಶಾಸಕ ವೇದವ್ಯಾಸ್‌ ಕಾಮತ್‌, ಡಿಸಿಪಿ ಅರುಣಾಂಶುಗಿರಿ, ಮಹಾನಗರ ಪಾಲಿಕೆ ಆಯುಕ್ತ ಎಸ್‌. ಅಜಿತ್‌ ಕುಮಾರ್‌ ಹೆಗ್ಡೆ ಇದ್ದರು.

click me!