ಮಾದಕ ವಸ್ತು, ಭೂ ಮಾಫಿಯಾಗೆ ಲಗಾಮು!

By Web DeskFirst Published Aug 18, 2019, 9:23 AM IST
Highlights

ಮಾದಕ ವಸ್ತು ಹಾಗೂ ಭೂ ಮಾಫಿಯಾಗಳಿಗೆ ಲಗಾಮು ಹಾಕಲು ಸಿಸಿಬಿ ಸಿದ್ಧತೆ ನಡೆಸಿದೆ. ಸಕ್ರಿಯ ರೌಡಿ ಗುಂಪುನ್ನು ಪಟ್ಟಿತಯಾರಿಸಿ ಕಾರ್ಯಾಚರಣೆ ಕೈಗೊಂಡಿದೆ.

ಗಿರೀಶ್‌ ಮಾದೇನಹಳ್ಳಿ

 ಬೆಂಗಳೂರು [ಆ.18]:  ರಾಜಧಾನಿಯ ಗಲ್ಲಿ ಗಲ್ಲಿಗಳಲ್ಲಿ ಬೇರೂರಿ ಆತಂಕ ಸೃಷ್ಟಿಸಿರುವ ಮಾದಕ ವಸ್ತು ಹಾಗೂ ಭೂ ಮಾಫಿಯಾಗಳಿಗೆ ಲಗಾಮು ಹಾಕಲು ಸಿಸಿಬಿ ಸಿದ್ಧತೆ ನಡೆಸಿದೆ. ವೃತ್ತಿಪರ ಮಾದಕ ವಸ್ತು ಮಾರಾಟಗಾರರು ಹಾಗೂ ಸಕ್ರಿಯ ರೌಡಿ ಗುಂಪುನ್ನು ಪಟ್ಟಿತಯಾರಿಸಿ ಕಾರ್ಯಾಚರಣೆ ಕೈಗೊಂಡಿದೆ.

ದಿನೇ ದಿನೇ ನಗರದಲ್ಲಿ ಮಾದಕ ವಸ್ತು ಜಾಲದ ಕದಂಬ ಬಾಹುಗಳು ಎಲ್ಲೆಡೆ ಚಾಚಿಕೊಳ್ಳುತ್ತಿದ್ದು, ವಾರ್ಷಿಕ ನೂರಾರು ಕೋಟಿ ವಹಿವಾಟು ನಡೆಸುವ ಲಾಭದಾಯಕ ಉದ್ಯಮವಾಗಿ ಬೆಳವಣಿಗೆ ಕಾಣುತ್ತಿದೆ. ಹಾಗೆ ಖಾಸಗಿ ಹಾಗೂ ಸರ್ಕಾರದ ಬೆಲೆಬಾಳುವ ಭೂಮಿಯನ್ನು ಕಬಳಿಸುವ ರೌಡಿ ಗುಂಪು ಹಾವಳಿ ಕೂಡಾ ನಿಯಂತ್ರಣಕ್ಕೆ ಸಿಗದಂತೆ ವೃದ್ಧಿಸುತ್ತಿವೆ.

ಇನ್ನು ನಗರ ಪೊಲೀಸ್‌ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಆಯುಕ್ತ ಭಾಸ್ಕರ್‌ ರಾವ್‌ ಸಹ, ‘ಡ್ರಗ್ಸ್‌ ಮುಕ್ತ ಬೆಂಗಳೂರು’ ಮಾಡುವುದಾಗಿ ಘೋಷಿಸಿದ್ದರು. ಈ ಎರಡು ಮಾಫಿಯಾಗಳಿಗೆ ಮೂಗುದಾರ ಹಾಕಿ ಹಿಡಿತಕ್ಕೆ ತರಲು ಅಪರಾಧ ವಿಭಾಗದ ಜಂಟಿ ಪೊಲೀಸ್‌ ಆಯುಕ್ತ ಸಂದೀಪ್‌ ಪಾಟೀಲ್‌ ಅವರು, ಆ ದಂಧೆಗಳ ಸೀಮಿತವಾಗಿ ವೃತ್ತಿಪರ ಕ್ರಿಮಿನಲ್‌ಗಳ ಪಟ್ಟಿಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಅದರಂತೆ ಮೊದಲ ಹಂತದಲ್ಲಿ ವಿದೇಶಿ ಪ್ರಜೆಗಳು ಸೇರಿದಂತೆ 56 ಮಂದಿ ಮಾದಕ ವಸ್ತು ಮಾರಾಟಗಾರರು (ಪೆಡ್ಲರ್‌ಗಳು) ಹಾಗೂ 40 ರೌಡಿ ಗುಂಪು ಪಟ್ಟಿಮಾಡಲಾಗಿದೆ. ಈ ವರದಿ ಆಧರಿಸಿ ಪೆಡ್ಲರ್‌ಗಳ ಮತ್ತು ರೌಡಿಗಳ ಮೇಲೆ ಅಧಿಕಾರಿಗಳು ನಿಗಾ ವಹಿಸಲಿದ್ದಾರೆ.

ಡ್ರಗ್‌ ಯಾರ್ಡ್‌’ ಅಳಿಸಲು 3 ಯೋಜನೆ

ಮಾದಕ ವಸ್ತು ಜಾಲದ ನಿಯಂತ್ರಣಕ್ಕೆ ಮೂರು ಹಂತದ ಯೋಜನೆಯನ್ನು ಜಂಟಿ ಆಯುಕ್ತರು ರೂಪಿಸಿದ್ದಾರೆ. ಜಾಗತಿಕ ಮಟ್ಟದಲ್ಲಿ ಸಿಲಿಕಾನ್‌ ಸಿಟಿ, ಉದ್ಯಾನ ನಗರಿ ಎಂದೆಲ್ಲಾ ಖ್ಯಾತಿ ಪಡೆದಿರುವ ಬೆಂಗಳೂರು, ಇತ್ತೀಚಿನ ವರ್ಷಗಳಲ್ಲಿ ‘ಡ್ರಗ್ಸ್‌ ಯಾರ್ಡ್‌’ ಆಗಿ ಅಪಖ್ಯಾತಿಗೆ ಸಹ ತುತ್ತಾಗುತ್ತಿದೆ. ನಗರಕ್ಕೆ ರಸ್ತೆ, ವಾಯು ಮಾರ್ಗದಲ್ಲಿ ಮಾದಕ ವಸ್ತು ಹರಿದು ಬರುತ್ತಿದ್ದು, ಇಲ್ಲಿಂದ ರಾಜ್ಯದ ಇತರೆಡೆಗಳಿಗೆ ಹಂಚಿಕೆಯಾಗುತ್ತಿದೆ. ಕೆಲ ಶಾಲಾ-ಕಾಲೇಜು, ಐಟಿ-ಬಿಟಿ ಕಂಪನಿಗಳು ಹಾಗೂ ಪಬ್‌-ಬಾರ್‌ಗಳೇ ಡ್ರಗ್ಸ್‌ ಮಾರುಕಟ್ಟೆಗಳಾಗಿವೆ ಎನ್ನಲಾಗುತ್ತಿದೆ.

*ಪೆಡ್ಲರ್‌ಗಳ ಗುರುತು

ನಗರದಲ್ಲಿರುವ ವೃತ್ತಿಪರ ಡ್ರಗ್ಸ್‌ ಪೆಡ್ಲರ್‌ಗಳ (ಮಾರಾಟಗಾರರ) ಗುರುತಿಸುವ ಕೆಲಸ ನಡೆದಿದ್ದು, ಸದ್ಯ 12 ವಿದೇಶಿಯರು ಸೇರಿದಂತೆ 56 ಮಂದಿಯನ್ನು ಸಿಸಿಬಿ ಪಟ್ಟಿಮಾಡಿದೆ. ಈ ವೃತ್ತಿಪರ ಪೆಡ್ಲರ್‌ಗಳ ಮೇಲೆ ನಿರಂತರವಾಗಿ ನಿಗಾವಹಿಸಲಾಗುತ್ತದೆ. ಹಾಗೆಯೇ ಈ ದಂಧೆಕೋರರ ಸಂಪರ್ಕದ ಕೊಂಡಿಗಳ ಕುರಿತು ಸಹ ಮಾಹಿತಿ ಸಂಗ್ರಹಿಸಲಾಗುತ್ತಿದೆ.

*ಡ್ರಗ್ಸ್‌ ಮಾರಾಟದ ಸ್ಥಳಗಳು

ಪೆಡ್ಲರ್‌ಗಳು ಮಾತ್ರವಲ್ಲ ಡ್ರಗ್ಸ್‌ ವಹಿವಾಟಿನ ಸ್ಥಳಗಳನ್ನು ಸಹ ಸಿಸಿಬಿ ಪತ್ತೆಹಚ್ಚಿದೆ. ಇದರಲ್ಲಿ ಪ್ರಮುಖವಾಗಿ ಪಬ್‌ಗಳು, ಹೋಟೆಲ್‌ಗಳು, ಪಿಜಿಗಳು ಹಾಗೂ ಶಾಲಾ-ಕಾಲೇಜುಗಳಿದ್ದು, ಅವುಗಳ ಕಡೆ ಹೆಚ್ಚಿನ ಕಣ್ಗಾವಲು ಬೀಳಲಿದೆ. ಈ ಪ್ರದೇಶಗಳಲ್ಲಿ ನಿಯಮಿತವಾಗಿ ಸಿಸಿಬಿಯ ಮಾದಕ ನಿಗ್ರಹ ದಳ ಪರಿಶೀಲನೆ ನಡೆಸಲಿದೆ.

*ಡ್ರಗ್ಸ್‌ ಕುರಿತು ಜಾಗೃತಿ

ಮಾದಕ ವಸ್ತುಗಳ ದುಷ್ಪರಿಣಾಮ ಕುರಿತು ಜಾಗೃತಿ ಅಭಿಯಾನವನ್ನು ಪರಿಣಾಮಕಾರಿಯಾಗಿ ಹಮ್ಮಿಕೊಳ್ಳಲು ಜಂಟಿ ಆಯುಕ್ತ ಸಂದೀಪ್‌ ಪಾಟೀಲ್‌ ನಿರ್ಧರಿಸಿದ್ದಾರೆ. ಈಗಾಗಲೇ ಸಾಮಾಜಿಕ ಜಾಲ ತಾಣಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಅರಿವಿನ ಕಾರ್ಯಕ್ರಮಗಳು ನಡೆಸಲಾಗಿದೆ. ಇನ್ನೂ ಹೆಚ್ಚಿನದ್ದಾಗಿ ಶಾಲಾ-ಕಾಲೇಜಗಳಲ್ಲಿ ಜಾಗೃತಿ ಅಭಿಯಾನ ನಡೆಯಲಿದೆ.

-ಬಾಕ್ಸ್‌-ವಿದೇಶ, ಹೊರ ರಾಜ್ಯದಿಂದ ಡ್ರಗ್ಸ್‌

ಕೇರಳದ ನೈನೇಶ್‌, ವಿಬೇಶ್‌, ಉಳ್ಳಾಲ ಉಪ ನಗರದ ಹಮೀದ್‌, ಚಾಮರಾಜನಗರ ಜಿಲ್ಲೆಯ ಪುಷ್ಪಾಪುರದ ರಾಚಪ್ಪ, ಪೊನ್ನುಸ್ವಾಮಿ, ಮಲ್ಲಪ್ಪ, ಸೋಮ, ಮನುಕುಮಾರ್‌, ಆನೇಕಲ್‌ನ ಮೃತ್ಯುಂಜಯ ಸ್ವಾಮಿ, ನಂಜದೇವರು, ಹೊಸಕೋಟೆಯ ಸೈಯದ್‌ ಅಲಿಯಾಸ್‌ ಸದ್ದು ಹೀಗೆ ಕುಖ್ಯಾತ ಪೆಡ್ಲರ್‌ಗಳು ಸಿಸಿಬಿ ರಾಡರ್‌ಗೆ ಸಿಕ್ಕಿದ್ದಾರೆ. ಇವರೆಲ್ಲಾ ಗಾಂಜಾ ಮಾರಾಟಗಾರರಾಗಿದ್ದು, ಒಡಿಶಾ, ಆಂಧ್ರಪ್ರದೇಶ ಕಡೆಯಿಂದ ಹೆಚ್ಚಿನ ಗಾಂಜಾ ತಂದು ದಂಧೆ ನಡೆಸುತ್ತಿದ್ದಾರೆ. ಚಾಮರಾಜನಗರದ ಗುಂಪು ಮಾತ್ರ ಸ್ಥಳೀಯವಾಗಿ ಗಾಂಜಾ ಬೇಸಾಯ ನಡೆಸುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ವಿದೇಶಿ ಪ್ರಜೆಗಳೂ ಇದ್ದಾರೆ:  ನೈಜೀರಿಯಾದ ಫೇತ್‌ ಚುಂಗ್ಸ್‌, ಸಂಡೇ ಆನನ್ಯ, ಸೋನಿ ಲಕ್‌, ಅಬ್ದುಲ್ಲಾ, ಕಾಂಟೆ, ಜೇಮ್ಸ್‌ ಸೇರಿದಂತೆ ಇತರರ ಹೆಸರು ಪ್ರಸ್ತಾಪವಾಗಿದ್ದು, ಇದರಲ್ಲಿ ಆರು ಮಂದಿ ನಟೋರಿಯಸ್‌ಗಳಿದ್ದಾರೆ. ಮುಸ್ತಾಫ್‌, ನಾನಾ ಮೇನ್ಸ್‌, ಜರಿಯಾ ಆಗಾ, ಫ್ರಿನ್ಸ್‌ ಸೇರಿದಂತೆ ಇತರರು ಇದ್ದಾರೆ. ಹೆರಾಯಿನ್‌, ಕೊಕೇನ್‌, ಎಲ್‌ಎಸ್‌ಡಿ, ಯೂಬಾ ಸೇರಿದಂತೆ ಇನ್ನಿತರ ಪರದೇಶಿ ಬ್ರಾಂಡ್‌ ಮಾರಾಟದಲ್ಲಿ ವಿದೇಶಿಯರು ಕುಖ್ಯಾತಿ ಪಡೆದಿದ್ದಾರೆ ಎಂದು ಮೂಲಗಳು ಹೇಳಿವೆ.

 ವೈಟ್‌ ಆ್ಯಂಡ್‌ ಬ್ಲ್ಯಾಕ್‌ ರೌಡಿಗಳು!

ಮಾದಕ ವಸ್ತು ದಂಧೆ ಮಾತ್ರವಲ್ಲದೆ ಭೂ ಮಾಫಿಯಾ ಮಟ್ಟಹಾಕಲು ಮುಂದಾಗಿರುವ ಸಿಸಿಬಿ, ಈ ದಂಧೆಗೆ ರಕ್ಷಕರಂತಿರುವ ರೌಡಿಗಳನ್ನು ಬಗ್ಗು ಬಡಿಯಲು ಸಜ್ಜಾಗಿದೆ.

ಪ್ರಸುತ್ತ ನಗರದಲ್ಲಿ 9800 ಮಂದಿ ರೌಡಿಪಟ್ಟಿಯಲ್ಲಿದ್ದು, ಇವರಲ್ಲಿ ಕೆಲವರು ತಮ್ಮ ಭೀಭಿತ್ಸ ಕೃತ್ಯಗಳಿಂದ ಕುಖ್ಯಾತಿ ಪಡೆದಿದ್ದಾರೆ. ಈ ಪಾತಕಿಗಳನ್ನು ವೈಟ್‌ ಆ್ಯಂಡ್‌ ಬ್ಲ್ಯಾಕ್‌ ಎಂದು ವಿಂಗಡಿಸಲಾಗಿದೆ. ಒಟ್ಟು ನಗರದಲ್ಲಿ 40 ರೌಡಿಗಳ 40 ಗುಂಪುಗಳಿವೆ ಎಂದು ಜಂಟಿ ಪೊಲೀಸ್‌ ಆಯುಕ್ತ ಸಂದೀಪ್‌ ಪಾಟೀಲ್‌ ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ಇದರಲ್ಲಿ ಜೆಸಿಬಿ ನಾರಾಯಣ, ಸುನೀಲ್‌ ಅಲಿಯಾಸ್‌ ಸೈಲೆಂಟ್‌ ಸುನೀಲ, ರೋಹಿತ್‌ ಅಲಿಯಾಸ್‌ ಒಂಟೆ, ದಡಿಯಾ ಉಮೇಶ, ಕುಣಿಗಲ್‌ ಗಿರಿ, ರಾಮ, ಪಾಯನ್ಸ್‌ ರಾಮ, ಬೆತ್ತನಗೆರೆ ಶಂಕರ, ಮಾಲಯಾಳಿ ಪ್ರವೀಣ, ಮುಲಾಮು, ಕ್ಯಾಟ್‌ ಮಂಜ, ಕೊರಂಗು ಕೃಷ್ಣ ಹೀಗೆ ಹಳೆ ಮತ್ತು ಹೊಸ ಪೀಳಿಗೆಯ ರೌಡಿಗಳು ಸೇರಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ವೈಟ್‌ ಗುಂಪಿನ ರೌಡಿಗಳು :  ರಾಜಕೀಯ ಹಾಗೂ ಸಾಮಾಜಿಕ ವಲಯದಲ್ಲಿ ಗುರುತಿಸಿಕೊಂಡಿರುವ ಹಾಗೂ ತೆರೆಮರೆಯ ಸೂತ್ರಧಾರಿಗಳಂತಿರುವ ಪಾತಕಿಗಳನ್ನು ವೈಟ್‌ ಕಾಲರ್‌ ರೌಡಿಗಳು ಎಂದು ವಿಭಾಗಿಸಲಾಗಿದೆ. ಈ ರೌಡಿಗಳ ಪ್ರಸುತ್ತ ಜೀವನ ಮಟ್ಟ, ಅವರ ವ್ಯವಹಾರಗಳ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ. ಅಲ್ಲದೆ ಅವರ ಸಹಚರರ ಮೇಲೂ ನಿಗಾವಹಿಲಾಗುತ್ತಿದೆ.

ಬ್ಲ್ಯಾಕ್‌ ಗುಂಪಿನ ರೌಡಿಗಳು:  ರೌಡಿ ಪಟ್ಟಿಯಲ್ಲಿದ್ದು ಪಾತಕ ಲೋಕದಿಂದ ದೂರ ಸರಿದಿರುವವರನ್ನು ಬ್ಲಾಕ್‌ ಗುಂಪಿಸಲಾಗಿದೆ. ಈ ಗುಂಪಿನ ಸೇರಿರುವವರ ಮೇಲಿನ ಅಪರಾಧ ಪ್ರಕರಣಗಳು ಹಾಗೂ ಪ್ರಸುತ್ತ ವ್ಯವಹಾರಗಳ ಬಗ್ಗೆ ವಿವರ ಪಡೆಯುತ್ತಿದ್ದಾರೆ.

ಡ್ರಗ್ಸ್‌ ಮತ್ತು ಭೂ ಮಾಫಿಯಾ ನಿರ್ಮೂಲನೆಗೆ ಮೊದಲ ಆದ್ಯತೆ ನೀಡಲಾಗಿದೆ. ರೌಡಿಗಳ ಅಕ್ರಮ ಭೂ ವ್ಯವಹಾರ ಸಹಿಸುವುದಿಲ್ಲ. ಈ ದಂಧೆಗಳ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿದರೆ ಸೂಕ್ತ ಕ್ರಮ ಜರುಗಿಸಲಾಗುತ್ತದೆ.
 
ಸಂದೀಪ್‌ ಪಾಟೀಲ್‌, ಸಿಸಿಬಿ ಜಂಟಿ ಆಯುಕ್ತ.

click me!