ಬೆಂಗಳೂರು: ಬಿಬಿಎಂಪಿಗೆ ಸೇರ್ಪಡೆಯಾದ 110 ಹಳ್ಳಿಗಳಿಗೆ ನಾಳೆಯಿಂದ ಕಾವೇರಿ ನೀರು!

By Kannadaprabha News  |  First Published Oct 15, 2024, 11:26 AM IST

ಕಾವೇರಿ ನದಿ ನೀರನ್ನು ಪೂರೈಸುವ ಸಲುವಾಗಿ 2014ರಲ್ಲಿ ಕಾವೇರಿ 5ನೇ ಹಂತದ  ಯೋಜನೆಗೆ ಚಾಲನೆ ನೀಡಲಾಗಿತ್ತು. ಇದೀಗ ಈ ಯೋಜನೆ ಪೂರ್ಣಗೊಂಡಿದ್ದು. ಮೊದಲ ಹಂತದಲ್ಲಿ ಕಾವೇರಿ ನೀರಿನ ಸಂಪರ್ಕ ಪಡೆದಿರುವ ಕಟ್ಟಡಗಳ ಪೈಕಿ 50 ಸಾವಿರ ಸಂಪರ್ಕಗಳಿಗೆ ನೀರು ಪೂರೈಕೆ ಆರಂಭಿಸಲಾಗುತ್ತಿದೆ. 


ಬೆಂಗಳೂರು(ಅ.15): ಬಿಬಿಎಂಪಿಗೆ ಸೇರ್ಪಡೆಯಾದ 110 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುವ ಸಲುವಾಗಿ ಜಲ ಮಂಡಳಿಯಿಂದ ಜಾರಿಗೊ ಳಿಸಲಾದ ಕಾವೇರಿ 5ನೇ ಹಂತದ ಯೋಜನೆಗೆ ಬುಧ ವಾರ ಲೋಕಾರ್ಪಣೆಗೊ ಳ್ಳುತ್ತಿದೆ. ಆಮೂಲಕ ಮೊದಲ ಹಂತದಲ್ಲಿ 110 ಹಳ್ಳಿಗಳ 50 ಸಾವಿರ ನೀರಿನ ಸಂಪರ್ಕಕ್ಕೆ ಬುಧವಾರದಿಂದಲೇ ಕಾವೇರಿ ನೀರು ಪೂರೈಕೆ ಆರಂಭವಾಗಲಿದೆ. 

ಕಳೆದ 2007ರಲ್ಲಿ ಬಿಬಿಎಂಪಿ ವ್ಯಾಪ್ತಿಗೆ ಸೇರ್ಪಡೆಯಾಗಿದ್ದ ಬೆಂಗಳೂರು ಹೊರವಲಯದ 110 ಹಳ್ಳಿಗಳ ನಿವಾಸಿಗಳಿಗೆ ಈವರೆಗೆ ಬೋರ್‌ವೆಲ್ ಸೇರಿ ಇನ್ನಿತರ ನೀರಿನ ಮೂಲಗಳಿಂದ ನೀರು ಪೂರೈಸಲಾಗುತ್ತಿತ್ತು. ಅದಕ್ಕಾಗಿ, ಕಾವೇರಿ ನದಿ ನೀರನ್ನು ಪೂರೈಸುವ ಸಲುವಾಗಿ 2014ರಲ್ಲಿ ಕಾವೇರಿ 5ನೇ ಹಂತದ  ಯೋಜನೆಗೆ ಚಾಲನೆ ನೀಡಲಾಗಿತ್ತು. ಇದೀಗ ಈ ಯೋಜನೆ ಪೂರ್ಣಗೊಂಡಿದ್ದು. ಮೊದಲ ಹಂತದಲ್ಲಿ ಕಾವೇರಿ ನೀರಿನ ಸಂಪರ್ಕ ಪಡೆದಿರುವಕಟ್ಟಡಗಳ ಪೈಕಿ 50 ಸಾವಿರ ಸಂಪರ್ಕಗಳಿಗೆ ನೀರು ಪೂರೈಕೆ ಆರಂಭಿಸಲಾಗುತ್ತಿದೆ. 

Latest Videos

undefined

ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ತೊರೆಕಾಡನಹಳ್ಳಿಯಲ್ಲಿ ನೀರು ಸರಬರಾಜು ಕಾರ್ಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅ 16 ರಂದು ಚಾಲನೆ ನೀಡಲಿದ್ದಾರೆ.

'ಮನೆ ಮನೆಗೂ ಕಾವೇರಿ ನೀರು-ಇದು ಸಮೃದ್ಧ 

ಬೆಂಗಳೂರು': ಆಮೆಗತಿಯಲ್ಲಿ ಸಾಗುತ್ತಿದ್ದ ಕಾವೇರಿ 5ನೇ ಹಂತದ ಕಾಮಗಾರಿಗೆ ಜಲಸಂಪನ್ಮೂಲ ಮತ್ತು ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ವೇಗ ನೀಡಲಾಯಿತು. ಎತ್ತಿನಹೊಳೆ ಯೋಜನೆಯ ಮೊದ ಲನೇ ಹಂತ ಲೋಕಾರ್ಪಣೆ ನಂತರ ಇದೀಗ ಬೆಂಗಳೂರಿನ ನೀರಿನ ಸಮಸ್ಯೆ ನಿವಾರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.  

'ಮನೆ ಮನೆಗೂ ಕಾವೇರಿ ನೀರು-ಇದು ಸಮೃದ್ದ ಬೆಂಗಳೂರು' ಘೋಷವಾಕ್ಯದ ಅಡಿಯಲ್ಲಿ ಜಲ ಮಂಡಳಿ ಕಾರ್ಯನಿರ್ವಹಿಸಿದೆ. ಯೋಜನೆ ಅಡಿಯಲ್ಲಿ ಅತ್ಯಾಧುನಿಕ ಹಾಗೂ ಬೃಹತ್ ನೀರಿನ ಸಂಸ್ಕರಣಾ ಘಟಕ ನಿರ್ಮಿಸಲಾಗಿದೆ. ನೆಟ್ಟಕಲ್ ಸಮ ತೋಲನಾ ಆಣೆಕಟ್ಟಿನಿಂದ ನೀರನ್ನು ಎತ್ತಿ ಟಿಕೆ ಹಳ್ಳಿ, ಹಾರೋಹಳ್ಳಿ, ತಾತಗುಣಿ ಪಂಪಿಂಗ್ ಸ್ಟೇಷನ್‌ಗಳ ಮೂಲಕ 4 ಲಕ್ಷ ನೀರಿನ ಸಂಪರ್ಕಗಳಿಗೆ ಕಾವೇರಿ ನೀರುಪೂರೈಸುವಂತಾಗಲಿದೆ. ಈ ಯೋಜನೆಯಿಂದ 50 ಲಕ್ಷ ಜನರಿಗೆ ಅನುಕೂಲವಾಗಲಿದೆ. ಅಲ್ಲದೆ, ಈ ಯೋಜನೆ ಅಡಿಯಲ್ಲಿ ಹೆಚ್ಚುವರಿಯಾಗಿ 775 ಎಂ ಎಲ್‌ಡಿ ನೀರನ್ನು ಸರಬರಾಜು ಮಾಡಲಾಗುತ್ತದೆ.

₹4,336 ಕೋಟಿ ವೆಚ್ಚ 

ಯೋಜನೆ ಕಾಮಗಾರಿಯಲ್ಲಿ ಜಪಾನ್ ಯಂತ್ರೋಪಕರಣ ಹಾಗೂ ಫ್ರೆಂಚ್ ತಂತ್ರಜ್ಞಾನಗಳನ್ನು ಬಳಸಲಾಗಿದೆ. ಆಮೂಲಕ ಪ್ರತಿ ಹಂತದಲ್ಲೂ ಗುಣಮಟ್ಟ ಕಾಯ್ದುಕೊಳ್ಳಲಾಗಿದೆ. 2.4 ಕೋಟಿ ಮಾನವ ಗಂಟೆಗಳಶ್ರಮ ಈ ಯೋಜನೆ ಹಿಂದಿದೆ. 1.45 ಲಕ್ಷಮೆಟ್ರಿಕ್ ಟನ್ ಸ್ಟೀಲ್ ಪ್ಲೇಟ್‌ ಗಳನ್ನು ಬಳಸಲಾಗಿದೆ. ಯೋಜನೆಗಾಗಿ 4,336 ಕೋಟಿ ರು. ವ್ಯಯಿಸಲಾಗಿದ್ದು, ಜೈಕಾದಿಂದ ಸಾಲ ಸೌಲಭ್ಯ ಪಡೆಯಲಾಗಿದೆ. ಮುಂದಿನ 10 ವರ್ಷಗಳಲ್ಲಿ ಜೈಕಾದಿಂದ ಪಡೆಯಲಾದ ಸಾಲವನ್ನು ಜಲಮಂಡಳಿ ತೀರಿಸಲಿದೆ.

ಅಕ್ರಮ ನೀರಿನ ಸಂಪರ್ಕಕ್ಕೆ ತಡೆ 

ಕಾವೇರಿ 5ನೇ ಹಂತ ಸೇರಿದಂತೆ ಉಳಿದ ಹಂತಗಳಲ್ಲಿನ ಅಕ್ರಮ ನೀರಿನ ಸಂಪರ್ಕ ತಡೆಗೆ ಕಾವೇರಿ ನೀರು ಸಂಪರ್ಕದ ನೋಂದಣಿಗೆ ಜಲಮಂಡಳಿ ಪ್ರತಿ ಮನೆಗೂ ತೆರಳಲು ಉದ್ದೇಶಿಸಿದೆ. ಈ ವೇಳೆ ಸಾರ್ವ ಜನಿಕರು ಅಗತ್ಯ ಮಾಹಿತಿ ನೀಡಿ ನೀರಿನ ಸಂಪರ್ಕ ಪಡೆಯುವುದು ಸೇರಿ ಮತ್ತಿತರ ಪ್ರಯೋ ಜನಗಳನ್ನು ಪಡೆಯಬಹುದಾಗಿದೆ. ಜತೆಗೆ ನೀರಿನ ಸಂಪರ್ಕಕ್ಕಾಗಿ ಆನ್‌ಲೈನ್ ಮೂಲಕವೂ ಅರ್ಜಿ ಸಲ್ಲಿಸಬಹು ದಾಗಿದೆ. ಈ ಪ್ರಕ್ರಿಯೆಯಿಂದ ಅಕ್ರಮ ನೀರಿನ ಸಂಪರ್ಕಕ್ಕೆ ತಡೆಯೊಡ್ಡುವುದು ಜಲಮಂಡಳಿ ಉದ್ದೇಶ ವಾಗಿದೆ. ಬೆಂಗಳೂರನ ನೀರಿನ ಕೊರತೆ ನೀಗಿಸುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ.

ನೀರು ಪಡೆಯುವ ಹಳ್ಳಿಗಳ ವಿವರ 

ಯಶವಂತಪುರ ವಿಧಾನಸಭಾ ಕ್ಷೇತ್ರದ 13 ಹಳ್ಳಿಗಳಲ್ಲಿ 48 ಸಾವಿರ ಸಂಪರ್ಕ, ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ 6 ಹಳ್ಳಿಗಳಲ್ಲಿ 37,500, ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ 26 ಹಳ್ಳಿಗಳಲ್ಲಿ 73,500, ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ 6 ಹಳ್ಳಿಗಳಲ್ಲಿ 96,750, ಮಹದೇವಪುರ ಕ್ಷೇತ್ರ ದ33 ಹಳ್ಳಿಗಳಲ್ಲಿ 93,100 ನೀರಿನ ಸಂಪರ್ಕಗಳಿಗೆ ನೀರು ಪೂರೈಸಲಾಗುತ್ತದೆ. ಅದರ ಜತೆಗೆ ರಾಜರಾಜೇಶ್ವರಿನಗರ, ಬೊಮ್ಮನಹಳ್ಳಿ, ಕೆಆರ್‌ಪುರ ವಿಧಾನಸಭಾ ಕ್ಷೇತ್ರಗಳ ಹಳ್ಳಿಗಳಿಗೂ ನೀರಿನ ಸಂಪರ್ಕಸಿಗಲಿದ್ದು, ಪ್ರತಿ ಮನೆಗೂ ಕಾವೇರಿ ನೀರು ಸರಬರಾಜು ಮಾಡುವ ಉದ್ದೇಶವಾಗಿದೆ.

click me!