ಮನೆ ಬಾಗಿಲಿಗೆ ಬರಲಿದೆ ಜಾತಿ ಹಾಗೂ ನಿವಾಸ ಪ್ರಮಾಣ ಪತ್ರ: ಅರ್ಹತೆ ಏನು? ಏನಿದು ಹೊಸ ಯೋಜನೆ

Published : Jul 20, 2026, 05:23 PM IST
Caste Certificate

ಸಾರಾಂಶ

ಕರ್ನಾಟಕ ಸರ್ಕಾರವು ಮನೆ ಮನೆಗೆ ತೆರಳಿ ಉಚಿತವಾಗಿ ಜಾತಿ ಹಾಗೂ ಶಾಶ್ವತ ನಿವಾಸ ಪ್ರಮಾಣಪತ್ರಗಳನ್ನು ವಿತರಿಸುವ ಮಹತ್ವದ ಯೋಜನೆಗೆ ಚಾಲನೆ ನೀಡಿದೆ. ಈ ಯೋಜನೆಯಡಿ, ಸುಮಾರು 4.85 ಕೋಟಿ ಡಿಜಿಟಲ್ ಜಾತಿ ಪ್ರಮಾಣಪತ್ರಗಳನ್ನು ಅರ್ಹ ಫಲಾನುಭವಿಗಳಿಗೆ ನೇರವಾಗಿ ತಲುಪಿಸಲಾಗುವುದು. ಈ ಮೂಲಕ ಆಡಳಿತವನ್ನು ಸರಳೀಕರಿಸಿ, ನಾಗರಿಕರು ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ.

ಬೆಂಗಳೂರು: ರಾಜ್ಯದಲ್ಲಿ ಸದ್ಯ ಮತದಾರರು ವಿಶೇಷ ಪಟ್ಟಿ ಪರಿಷ್ಕರಣೆ (SIR) ಜಾರಿಯಲ್ಲಿ ಇದೆ. ಜೊತೆ ಗೃಹಲಕ್ಷ್ಮಿ, ಗೃಹಜ್ಯೋತಿ ಕಾರ್ಯಕ್ರಮಕ್ಕೂ ಚಾಲನೆ ನೀಡಲಾಗಿದೆ. ಇದರ ನಡುವೆಯೇ, ಇದೀಗ ಮತ್ತೊಂದು ಮಹತ್ವದ ಹೆಜ್ಜೆಯನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ನೇತೃತ್ವದ ಸರ್ಕಾರ ಇಟ್ಟಿದೆ. ಅದೇನೆಂದರೆ, ಮನೆ ಮನೆಗೆ ತೆರಳಿ ಉಚಿತವಾಗಿ ಜಾತಿ ಹಾಗೂ ಶಾಶ್ವತ ನಿವಾಸ ಪ್ರಮಾಣಪತ್ರ ವಿತರಣೆ ಮಾಡುವ ಕಾರ್ಯಕ್ರಮ ಇದಾಗಿದೆ. ಇಂದು ವಿಧಾನಸೌಧದಲ್ಲಿ “ರಾಜ್ಯದಲ್ಲಿ ಮನೆ ಮನೆಗೆ ತೆರಳಿ ಉಚಿತ ಜಾತಿ ಪ್ರಮಾಣ ಪತ್ರ ವಿತರಣೆ” ಹಾಗೂ “ಶಾಶ್ವತ ನಿವಾಸ ಪ್ರಮಾಣಪತ್ರ (Permanent Resident Certificate) ವಿತರಿಸುವ ಯೋಜನೆಗೆ ಚಾಲನೆ ನೀಡಲಾಯಿತು.

ಈ ಯೋಜನೆಯಿಂದಾಗಿ ಇನ್ನು ಮುಂದಿನ ದಿನಗಳಲ್ಲಿ ಅರ್ಹ ಫಲಾನುಭವಿಗಳು ತಮ್ಮ ಜಾತಿ ಪ್ರಮಾಣಪತ್ರಗಳನ್ನು ಯಾವುದೇ ವಿತರಣಾ ಶುಲ್ಕವಿಲ್ಲದೆ ಮನೆ ಬಾಗಿಲಲ್ಲೇ ಪಡೆಯಬಹುದಾಗಿದೆ. ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪ್ರವರ್ಗ 2ಎ, 2ಬಿ ಹಾಗೂ 3ಎ ಮತ್ತು 3ಬಿ ಪ್ರವರ್ಗಗಳಲ್ಲಿ 1.36 ಕೋಟಿ ಜನರಿದ್ದಾರೆ. ಪ್ರವರ್ಗ 1ರಲ್ಲಿ ಜಾತಿ ಪ್ರಮಾಣ ಪತ್ರಗಳ ಸಂಖ್ಯೆ 0.86 ಕೋಟಿ ಇದೆ. ಅನುಸೂಚಿ ಜಾತಿ ಮತ್ತು ಅನುಸೂಚಿತ ಪಂಗಡಗಳ ಪ್ರಮಾಣ ಪತ್ರ 2.63 ಕೋಟಿ ಇದೆ. ಒಟ್ಟಾರೆ 4.85 ಕೋಟಿ ಜಾತಿ ಪ್ರಮಾಣ ಪತ್ರವನ್ನು ನೀಡಲು ಲೆಕ್ಕ ಹಾಕಲಾಗಿದ್ದು, ತಲುಪಿಸುವ ಕಾರ್ಯ ಪ್ರಾರಂಭಿಸುವ ಉದ್ದೇಶ ಈ ಯೋಜನೆ ಹೊಂದಿದೆ. ಶಾಶ್ವತ ನಿವಾಸ ಪ್ರಮಾಣಪತ್ರಗಳನ್ನು ನೀಡುವ ಅಧಿಕಾರವನ್ನು ಉಪ ತಹಸೀಲ್ದಾರ್‌ಗಳಿಗೆ ನೀಡಲಾಗಿದೆ ಎಂದು ಇಂದು ನಡೆದಿರುವ ಪತ್ರಿಕಾಗೋಷ್ಠಿಯಲ್ಲಿ ಡಿಸಿಎಂ ಡಾ. ಜಿ. ಪರಮೇಶ್ವರ ಮಾಹಿತಿ ನೀಡಿದ್ದಾರೆ.

ತಂತ್ರಜ್ಞಾನ ಮತ್ತು ಸರಳೀಕೃತ ಕಾರ್ಯವಿಧಾನಗಳ ಮೂಲಕ ಆಡಳಿತವನ್ನು ಜನರಿಗೆ ಹತ್ತಿರವಾಗಿಸುವುದರೊಂದಿಗೆ ಇವು ರಾಜ್ಯದ ಆಡಳಿತಾತ್ಮಕ ಇತಿಹಾಸದಲ್ಲಿ ಹೊಸ ಅಧ್ಯಾಯವೊಂದನ್ನು ಸೃಷ್ಟಿಸುತ್ತವೆ ಎಂದು ಸಿಎಂ ಡಿ.ಕೆ.ಶಿವಕುಮಾರ್​ ಈ ಸಂದರ್ಭದಲ್ಲಿ ಹೇಳಿದ್ದಾರೆ. ಸರ್ಕಾರವೇ ನಿಮ್ಮ ಬಾಗಿಲಿಗೆ ಬರುತ್ತದೆ. ಇದು ನಮ್ಮ ಭರವಸೆ. ಅತ್ಯಂತ ತಳಮಟ್ಟದ ಅಥವಾ ಸಮಾಜದ ಅಂಚಿನಲ್ಲಿರುವ ನಾಗರಿಕರೂ ಸಹ ಯಾವುದೇ ತಾರತಮ್ಯ ಅಥವಾ ವಿಳಂಬವಿಲ್ಲದೆ, ಗೌರವಯುತವಾಗಿ ಮತ್ತು ಸುಲಭವಾಗಿ ಸೇವೆಗಳನ್ನು ಪಡೆಯುವುದನ್ನು ಖಚಿತಪಡಿಸುವುದು ಸರ್ಕಾರದ ಆದ್ಯತೆಯಾಗಿದೆ. ದಕ್ಷ ಮತ್ತು ಪಾರದರ್ಶಕ ಆಡಳಿತದ ಮೂಲಕ ನಾಗರಿಕರನ್ನು ಸಬಲೀಕರಣಗೊಳಿಸುವುದು ಕರ್ನಾಟಕದ ಪ್ರಗತಿಗೆ ಅತ್ಯಗತ್ಯ' ಎಂದಿದ್ದಾರೆ ಮುಖ್ಯಮಂತ್ರಿಗಳು.

ಏನಿದು ಶಾಶ್ವತ ನಿವಾಸ ಪ್ರಮಾಣಪತ್ರ

ಶಾಶ್ವತ ನಿವಾಸ ಪ್ರಮಾಣಪತ್ರ (Permanent Resident Certificate-PCR) ಯಾವ ಆಧಾರದ ಮೇಲೆ ನೀಡಬೇಕು ಎಂಬ ಕುರಿತು ಕೆಲವು ನಿಯಮಗಳನ್ನು ರೂಪಿಸಲಾಗಿದೆ. ಉದ್ಯೋಗ, ವಿವಾಹ, ರಾಜ್ಯದಲ್ಲಿ ಸತತವಾಗಿ ಹತ್ತು ವರ್ಷಗಳ ಕಾಲ ವಾಸ ಮಾಡಿರಬೇಕು. ಕರ್ನಾಟದಲ್ಲಿ ಜನಿಸಿರುವ ಆಧಾರದ ಮೇಲೆ ಪಿಅರ್‌ಸಿ ನೀಡಲು ತೀರ್ಮಾನಿಸಲಾಗಿದೆ. ಈ ಪ್ರಮಾಣ ಪತ್ರವನ್ನು ಮನೆಮನೆಗೆ ತಲುಪಿಸಲಾಗುವುದು. ಜನರು ಹತ್ತಾರು ಬಾರಿ, ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸುವ ಕಾರಣದಿಂದ ಈ ತೀರ್ಮಾನ ಮಾಡಲಾಗಿದೆ.

ಶಾಶ್ವತ ನಿವಾಸ ಪ್ರಮಾಣಪತ್ರ ಪಡೆಯಲು ಅರ್ಜಿ ಸಲ್ಲಿಸುವವರು ಕರ್ನಾಟಕದಲ್ಲಿ ಜನಿಸಿರಬೇಕು. ಸಾಮಾನ್ಯ ವಾಸಸ್ಥಳ ಅರ್ಜಿದಾರರ ಪಾಲಕರು ಸಾಮಾನ್ಯವಾಗಿ ಕನಿಷ್ಟ ಹತ್ತು ವರ್ಷ ಕರ್ನಾಟಕದಲ್ಲಿ ವಾಸ ಇರಬೇಕು. ಅರ್ಜಿದಾರರು ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಗಳಲ್ಲಿ ದ್ವಿತೀಯ ಪಿಯುಸಿ ಅಥವಾ ಸತತ ಹತ್ತು ವರ್ಷ ವ್ಯಾಸಂಗ ಮಾಡಿರಬೇಕು. ಪೋಷಕರು ಅಥವಾ ಸಂಗಾತಿಯ ವಾಸಸ್ಥಳ, ಅರ್ಜಿದಾರರ ತಂದೆ-ತಾಯಿ, ಕಾನೂನು ಬದ್ಧ ಪಾಲಕರು ಅಥವಾ ಪತಿ-ಪತ್ನಿ ಕರ್ನಾಟಕದಲ್ಲಿ ಸಾಮಾನ್ಯ ನಿವಾಸಿಯಾಗಿರಬೇಕು. ಅರ್ಜಿದಾರರು ಅಥವಾ ಅವರ ಕುಟುಂಬ ಕರ್ನಾಟಕದಲ್ಲಿ ವಸತಿ ಅಥವಾ ಸ್ಥಿರಾಸ್ಥಿಯ ಮಾಲಿಕತ್ವ ಹೊಂದಿರಬೇಕು. ಕಾನೂನು ಬದ್ಧ ವಾರಸುದಾರರಾಗಿರಬೇಕು. ಮತದಾರರ ಪಟ್ಟಿಯಲ್ಲಿ ಅರ್ಜಿದಾರರ ಹೆಸರಿರಬೇಕು. ಆಧಾರ್, ಕಂದಾಯ ದಾಖಲೆಗಳು, ಪಡಿತರ ಚೀಟಿ ಅಥವಾ ಇತರೆ ಸರ್ಕಾರಿ ದಾಖಲೆಗಳಲ್ಲಿ ಅರ್ಜಿದಾರರ ಪೋಷಕರ ಹೆಸರು ಸಾಮಾನ್ಯ ನಿವಾಸಿಯಾಗಿ ದಾಖಲಾಗಿರಬೇಕು‌.

ಸರ್ಕಾರಿ ಅಥವಾ ಸಾರ್ವಜನಿಕ ಸೇವೆಯಲ್ಲಿ ಗಣನೀಯ ಅವಧಿ 7 ವರ್ಷ ಸೇವೆ ಸಲ್ಲಿಸಿರಬೇಕು. ಅರ್ಜಿದಾರರು ಕರ್ನಾಟಕದಲ್ಲಿ ವಾಸಿಸುವ ವ್ಯಕ್ತಿಯನ್ನು ವಿವಾಹವಾಗಿದ್ದರೆ ಶಾಶ್ವತ ನಿವಾಸ ಪ್ರಮಾಣಪತ್ರ ಪಡೆಯಲು ಅರ್ಹತೆ ಹೊಂದಿರುತ್ತಾರೆ. ಯಾವುದೇ ಅಂಶಗಳನ್ನು ಒಳಗೊಂಡ ಮಾಹಿತಿ ಲಭ್ಯ ಇದ್ದರೆ ಸರ್ಟಿಫಿಕೇಟ್‌ಗಳನ್ನು ನೀಡಲಾಗುತ್ತದೆ.

4.85 ಕೋಟಿ ಡಿಜಿಟಲ್ ಜಾತಿ ಪ್ರಮಾಣ ಪತ್ರ

ಅಂದಹಾಗೆ, ಈ ಯೋಜನೆಯ ಅಡಿ ಸರ್ಕಾರವು ಈಗಾಗಲೇ 4.85 ಕೋಟಿ ಡಿಜಿಟಲ್ ಜಾತಿ ಪ್ರಮಾಣಪತ್ರಗಳನ್ನು ಜಿಲ್ಲಾ, ತಾಲೂಕು ಮತ್ತು ಗ್ರಾಮವಾರು ಪಿಡಿಎಫ್ (PDF) ಸ್ವರೂಪದಲ್ಲಿ ವರ್ಗೀಕರಿಸಿ ಜಿಲ್ಲಾಧಿಕಾರಿಗಳೊಂದಿಗೆ ಹಂಚಿಕೊಂಡಿದೆ. ಜಿಲ್ಲಾಡಳಿತಗಳು ಈ ಪ್ರಮಾಣಪತ್ರಗಳನ್ನು ಮುದ್ರಿಸಿ ನೇರವಾಗಿ ಫಲಾನುಭವಿಗಳಿಗೆ ತಲುಪಿಸಲಿವೆ. ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು, ಫಲಾನುಭವಿಗಳ ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ ಮತ್ತು ಸೇವೆ/ಸೌಲಭ್ಯ ಪಡೆದ ನಂತರದ ಸ್ವೀಕೃತಿ ವಿವರಗಳನ್ನು ದಾಖಲಿಸಲು ಪ್ರತ್ಯೇಕ ಮೊಬೈಲ್ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ನಾಗರಿಕರು ನಿಗದಿತ ಸರ್ಕಾರಿ ವೆಬ್‌ಸೈಟ್‌ನಿಂದ ತಮ್ಮ ಜಾತಿ ಪ್ರಮಾಣಪತ್ರದ ಆರ್‌ಡಿ (RD) ಸಂಖ್ಯೆ, ಪಡಿತರ ಚೀಟಿ ಸಂಖ್ಯೆ ಅಥವಾ ಆಧಾರ್ ಸಂಖ್ಯೆಯನ್ನು ಬಳಸಿಕೊಂಡು ಪ್ರಮಾಣಪತ್ರಗಳನ್ನು ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಈ ಸೇವೆಯು ಸರ್ಕಾರಿ ಸಹಾಯ ಕೇಂದ್ರಗಳಲ್ಲೂ ಲಭ್ಯವಿರುತ್ತದೆ.

ಸಹಾಯ ಕೇಂದ್ರದ ಸ್ಥಾಪನೆ

ಸರ್ಕಾರವು ಹೋಬಳಿ ಮಟ್ಟದಲ್ಲಿ ಸಹಾಯ ಕೇಂದ್ರಗಳನ್ನು ಸ್ಥಾಪಿಸಿದ್ದು, ಇಲ್ಲಿ ನಾಗರಿಕರು ಜಾತಿ ಪ್ರಮಾಣಪತ್ರಗಳು ಮತ್ತು ಇತರ ಅಗತ್ಯ ದಾಖಲೆಗಳ ಮುದ್ರಿತ ಪ್ರತಿಗಳನ್ನು ಉಚಿತವಾಗಿ ಪಡೆಯಬಹುದು. ಸುಮಾರು 57 ಲಕ್ಷ ಜಾತಿ ಪ್ರಮಾಣಪತ್ರಗಳನ್ನು ಈಗಾಗಲೇ ಫಲಾನುಭವಿಗಳ ಮೊಬೈಲ್ ಸಂಖ್ಯೆಗಳೊಂದಿಗೆ ಜೋಡಿಸಲಾಗಿದೆ. ವಾಟ್ಸಾಪ್ ಮತ್ತು ಎಸ್‌ಎಂಎಸ್ (SMS) ಮೂಲಕ ಡೌನ್‌ಲೋಡ್ ಲಿಂಕ್‌ಗಳನ್ನು ಕಳುಹಿಸಲಾಗಿದ್ದು, ಇದರಿಂದ ಯಾವುದೇ ವೆಚ್ಚವಿಲ್ಲದೆ ಡಿಜಿಟಲ್ ರೂಪದಲ್ಲಿ ಅವುಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಉಪ ತಹಸೀಲ್ದಾರರು ವಾಸಸ್ಥಳ ಪ್ರಮಾಣಪತ್ರಗಳನ್ನು ನೀಡಲಿದ್ದಾರೆ. ಮತ್ತೊಂದು ಪ್ರಮುಖ ಸುಧಾರಣೆಯಾಗಿ, ಕಾಯಂ ವಾಸಸ್ಥಳ ಪ್ರಮಾಣಪತ್ರಗಳನ್ನು ನೀಡುವ ಹೆಚ್ಚುವರಿ ಅಧಿಕಾರವನ್ನು ಕಂದಾಯ ಇಲಾಖೆಯು ಉಪ ತಹಸೀಲ್ದಾರರಿಗೆ ವಹಿಸಿದೆ. ಈ ಕ್ರಮದಿಂದಾಗಿ ಪ್ರಕ್ರಿಯೆಯ ಸಮಯ ಕಡಿಮೆಯಾಗಲಿದ್ದು, ಸೇವೆಯು ಜನರಿಗೆ ಇನ್ನಷ್ಟು ಸುಲಭವಾಗಿ ಲಭ್ಯವಾಗುವ ನಿರೀಕ್ಷೆಯಿದೆ.

PREV
Read more Articles on
click me!

Recommended Stories

ಶರಾವತಿ ಪಂಪ್ಡ್‌ ಸ್ಟೋರೇಜ್‌ ಶೀಘ್ರದಲ್ಲೇ ಶುರು ಮಾಡ್ತೇವೆ: ಮುಖ್ಯಮಂತ್ರಿ ಡಿಕೆ ಶಿವಕುಮಾರ್
Sa Re Ga Ma Pa Kannada ಶೋ ಜ್ಯೂರಿ ಮೋಹನ್‌ರ ಏಕೈಕ ಪುತ್ರ ಹೃತಿಕ್‌ ಇನ್ನಿಲ್ಲ: ಚಿಕ್ಕ ವಯಸ್ಸಿನವರಿಗೆ ಹೀಗಾದ್ರೆ...!