ಒಂದೂ ಡ್ಯಾಮ್​ ಕಟ್ಟದೆ, ಬೆಂಗಳೂರಿನ 14 ಕೆರೆಗೆ ಜೀವ ತಂದ ಯೋಧನ ರೋಚಕ ಸ್ಟೋರಿ; ಆ ನಕ್ಷೆಯೇ ಶ್ರೀರಕ್ಷೆ

Published : Aug 10, 2026, 12:08 PM IST
Cap Santosh Kumar

ಸಾರಾಂಶ

ನಿವೃತ್ತ ಸೇನಾ ಕ್ಯಾಪ್ಟನ್ ಸಂತೋಷ್ ಕುಮಾರ್, ಬ್ರಿಟಿಷ್ ಕಾಲದ ನಕ್ಷೆಗಳ ಸಹಾಯದಿಂದ ಬೆಂಗಳೂರಿನ ಆನೇಕಲ್ ಬಳಿ ಅತಿಕ್ರಮಣಗೊಂಡಿದ್ದ ರಾಜಕಾಲುವೆಗಳನ್ನು ಪತ್ತೆಹಚ್ಚಿದರು. ಸ್ಥಳೀಯರ ಸಹಕಾರದೊಂದಿಗೆ ಸುಮಾರು 4 ಕಿ.ಮೀ. ರಾಜಕಾಲುವೆಯನ್ನು ಪುನಶ್ಚೇತನಗೊಳಿಸಿ, ಬತ್ತಿಹೋಗಿದ್ದ 14 ಕೆರೆಗಳಿಗೆ ಮರುಜೀವ ನೀಡುವಲ್ಲಿ ಯಶಸ್ವಿಯಾದರು.

ಬೆಂಗಳೂರು: 2008ರಲ್ಲಿ ಭಾರತೀಯ ಸೇನೆಯಿಂದ ನಿವೃತ್ತರಾದ ಕ್ಯಾಪ್ಟನ್ ಸಂತೋಷ್ ಕುಮಾರ್, ಬೆಂಗಳೂರು ಗ್ರಾಮಾಂತರ ಜಿಲ್ಲೆ ಆನೇಕಲ್ ಸಮೀಪದ ಮುತ್ತನಲ್ಲೂರಿಗೆ ಬಂದಾಗ ಒಂದು ವಿಚಿತ್ರ ಸಂಗತಿಯನ್ನು ಗಮನಿಸಿದರು. ಭಾರಿ ಮಳೆಯಾಗುತ್ತಿದ್ದರೂ ಕೆರೆಗಳು ತುಂಬುತ್ತಿರಲಿಲ್ಲ. ಆದರೆ ರಸ್ತೆಗಳು ಮಾತ್ರ ನದಿಗಳಾಗುತ್ತಿದ್ದವು. ಇದು ಅವರಿಗೆ ಕುತೂಹಲ ಮೂಡಿಸಿತು. ಬಹುತೇಕ ಮಂದಿ ಇದನ್ನು ಗಮನಿಸುತ್ತಿದ್ದರೂ ಯಾರೂ ಈ ಬಗ್ಗೆ ಚಿಂತಿಸುತ್ತಲೇ ಇರಲಿಲ್ಲ. ಆದರೆ ಕ್ಯಾಪ್ಟನ್​ ಸಂತೋಷ್​ ಕುಮಾರ್​ ಹಾಗೆ ಮಾಡಲಿಲ್ಲ. ಅವರು, 1923ರಲ್ಲಿ ಬ್ರಿಟಿಷ್ ಆಡಳಿತ ಸಿದ್ಧಪಡಿಸಿದ್ದ ಬೆಂಗಳೂರಿನ ಹಳೆಯ ಸರ್ವೆ ನಕ್ಷೆಗಳನ್ನು ಅಧ್ಯಯನ ಮಾಡಿದರು. ಇದು ನಡೆದದ್ದು, 2017–2019ರ ಅವಧಿಯಲ್ಲಿ, ಆ ನಕ್ಷೆಗಳಲ್ಲಿ ಕಾಣುತ್ತಿದ್ದ ರಾಜಕಾಲುವೆಗಳು ನೆಲದಲ್ಲಿ ಕಾಣುತ್ತಿರಲಿಲ್ಲ. ಸರ್ವೇ ನಡೆಸಿದಾಗ ಕೆಲವು ಕಾಲುವೆಗಳು ಕಟ್ಟಡಗಳ ಕೆಳಗೆ ಹೋಗಿದ್ದವು. ಕೆಲವು ಸಂಪೂರ್ಣವಾಗಿ ನಶಿಸಿಯೇ ಹೋಗಿದ್ದವು.

ನೂರು ವರ್ಷಗಳ ಹಿಂದಿನ ನಕ್ಷೆ

ಕ್ಯಾಪ್ಟನ್ ಸಂತೋಷ್ ಕುಮಾರ್ ಅವರು ಭಾರತೀಯ ಸೇನೆಯ ನಿವೃತ್ತ ಯೋಧರು. ಇವರು, ಕೆರೆಗಳ ಸ್ಥಿತಿ ಕಂಡು, ಬೆಂಗಳೂರಿನ ಹಳೆಯ ಜಲಮಾರ್ಗಗಳನ್ನು ಪತ್ತೆ ಹಚ್ಚಲು ಬ್ರಿಟಿಷ್ ಕಾಲದ ಹಳೆಯ ನಕ್ಷೆಗಳನ್ನು ಇನ್ನಷ್ಟು ಅಧ್ಯಯನ ಮಾಡಿದರು. ಸ್ಥಳೀಯ ನಿವಾಸಿಗಳು ಹಾಗೂ ಸಣ್ಣ ನೀರಾವರಿ ಇಲಾಖೆಯ ಸಹಕಾರದೊಂದಿಗೆ ಮುತಾನಲ್ಲೂರು ಮತ್ತು ಬಿಡರಗುಪ್ಪೆ ಕೆರೆಗಳ ನಡುವಿನ ರಾಜಕಾಲುವೆಗಳನ್ನು ಗುರುತಿಸಿ ತೆರವುಗೊಳಿಸಿದರು. ಸುಮಾರು 4 ಕಿ.ಮೀ ಉದ್ದದ ರಾಜಕಾಲುವೆಯನ್ನು ಪುನಶ್ಚೇತನಗೊಳಿಸಿ, ಬತ್ತಿಹೋಗಿದ್ದ ಒಟ್ಟು 14 ಕೆರೆಗಳಿಗೆ ಮಳೆನೀರು ಹರಿಯುವಂತೆ ಮಾಡಿದರು.

ಅವರೇ ಹೇಳುವಂತೆ, ಇಂದು ರಾಜಕಾಲುವೆಗಳನ್ನು ಮುಚ್ಚಿ ಕಟ್ಟಡ ನಿರ್ಮಾಣ ಯಥೇಚ್ಛವಾಗಿ ನಡೆಯುತ್ತಿದೆ. ಆದರೆ, ರಾಜಕಾಲುವೆಗಳನ್ನು ಮುಚ್ಚಿದರೆ, ಮಳೆ ಬಂದಾಗ ನೀರು ತನ್ನ ಹಳೆಯ ದಾರಿಯನ್ನೇ ಹುಡುಕುತ್ತದೆ. ಪ್ರವಾಹ ತಡೆಯಲು ಹೊಸದಾಗಿ ದೊಡ್ಡ ಮೂಲಸೌಕರ್ಯ ನಿರ್ಮಿಸುವ ಅಗತ್ಯವಿಲ್ಲ. ನಮ್ಮ ಹಿರಿಯರು ರೂಪಿಸಿದ್ದ ನೈಸರ್ಗಿಕ ರಾಜಕಾಲುವೆಗಳನ್ನು ರಕ್ಷಿಸಿ ಅತಿಕ್ರಮಣ ತೆರವುಗೊಳಿಸಿದರೆ ಸಾಕು ಬೆಂಗಳೂರಿಗಷ್ಟೇ ಅಲ್ಲ, ದೇಶದ ಎಲ್ಲ ನಗರಗಳಿಗೂ ಅನ್ವಯಿಸುತ್ತದೆ ಎನ್ನುತ್ತಲೇ ಕೆರೆಗಳಿಗೆ ಅವರು, ಮರುಜೀವ ತುಂಬಿದರು.

ರಾಜಕಾಲುವೆ ತೆರವು

ರಾಜಕಾಲುವೆಗಳಿಗೆ ಮರುಜೀವ ನೀಡುವುದರ ಮೂಲಕ ಕೆರೆಗಳಿಗೆ ಸರಾಗವಾಗಿ ನೀರು ಹರಿಯುವಂತೆ ಮಾಡಿ, ಅಂತರ್ಜಲ ಮಟ್ಟ ಹೆಚ್ಚಳಕ್ಕೆ ಹಾಗೂ ಮಳೆಗಾಲದಲ್ಲಿ ಉಂಟಾಗುವ ಪ್ರವಾಹ ತಡೆಗೆ ಪ್ರಮುಖ ಕಾರಣರಾಗಿದ್ದಾರೆ. ಕ್ಯಾಪ್ಟನ್​ ಸಂತೋಷ್ ಕುಮಾರ್ ಸ್ಥಳೀಯರ ಸಹಕಾರ, ಜಿಲ್ಲಾಡಳಿತ, ಸಣ್ಣ ನೀರಾವರಿ ಇಲಾಖೆ, ಗ್ರಾಮ ಪಂಚಾಯಿತಿಗಳ ನೆರವಿನಿಂದ ಸುಮಾರು 4 ಕಿ.ಮೀ. ಉದ್ದದ ರಾಜಕಾಲುವೆಯನ್ನು ಪುನಃ ತೆರೆಸಿದರು. ಅದನ್ನು ಬಟ್ಟಲಕೆರೆಗೆ ಸಂಪರ್ಕಿಸಲಾಯಿತು. ಇದರಿಂದ ಮುಂದಿನ ಮಳೆಗಾಲದಲ್ಲಿ ಅಚ್ಚರಿಯ ಫಲಿತಾಂಶ ಕಂಡುಬಂತು. ಅವರ ಸಾಧನೆಯ ಫಲವಾಗಿ ಮಳೆನೀರು ರಸ್ತೆಯ ಬದಲು ಕೆರೆಗೆ ಹರಿಯಿತು, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರವಾಹ ಕಡಿಮೆಯಾಯಿತು, ಅಂತರ್ಜಲ ಮಟ್ಟ ಸುಧಾರಿಸಿತು.

PREV
Read more Articles on
click me!

Recommended Stories

9 ರೂಪಾಯಿಗೆ ಸತಾಯಿಸಿದ ಬ್ಯಾಂಕ್​ಗೇ ಬುದ್ಧಿ ಕಲಿಸಿದ ಹಾಸನದ ರೈತ: ಅಭಿನಂದನೆಗಳ ಸುರಿಮಳೆ
Hampi Excavation: ಹಂಪಿ ಉತ್ಖನನ ವೇಳೆ ಅಪರೂಪದ ವಿಗ್ರಹಗಳು ಪತ್ತೆ; ಏನಿದರ ವಿಶೇಷತೆ?