* ಅಡ್ವೋಕೇಟ್ ಜನರಲ್, ಲೋಕಾಯುಕ್ತಕ್ಕೆ, ಎಸಿಬಿಗೆ ದೂರು
* ದಾಖಲೆಗಳ ಸಮೇತ ದೂರು
* ಪರಿಷತ್ ಸದಸ್ಯ ಶಶಿಲ್ ನಮೋಶಿ ಪ್ರಶ್ನೆಗೆ ಲಿಖಿತ ಉತ್ತರ: ಅರಗ ಜ್ಞಾನೇಂದ್ರ ‘ಅರೆಬರೆ’ ಉತ್ತರ
ಆನಂದ್ ಎಂ. ಸೌದಿ
ಯಾದಗಿರಿ(ಮಾ.15): 545 ಪಿಎಸೈ(PSI) ಪರೀಕ್ಷೆಯಲ್ಲಿ ಅಕ್ರಮಗಳ ಕುರಿತು ಆರೋಪಿಸಿದ್ದ ನೊಂದ ಅಭ್ಯರ್ಥಿಗಳು, ಗೃಹ ಸಚಿವರ ಹಾರಿಕೆಯ ಉತ್ತರಗಳಿಂದಾಗಿ ರೋಸಿ ಹೋಗಿದ್ದು, ಇದೀಗ ಕಾನೂನು ಸಮರಕ್ಕೆ ಸಿದ್ಧತೆ ನಡೆಸಿದ್ದಾರೆ.
ಕಲ್ಯಾಣ ಕರ್ನಾಟಕ(Kalyana Karnataka) ಮೀಸಲಾತಿ ಕಲಂ 371 (ಜೆ) ಸರಿಪಡಿಸಲು ಎಂಬ ಕಾರಣದಿಂದಾಗಿ ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಸ್ಥಗಿತಗೊಳಿಸುವ ಗೃಹ ಇಲಾಖೆಯ ಈ ಸಮಜಾಯಿಷಿ, ಅಕ್ರಮದ ಕುರಿತು ಪ್ರಶ್ನಿಸುತ್ತಿರುವ ಅಭ್ಯರ್ಥಿಗಳಿಗೆ(Candidates) ಉತ್ತರ ನೀಡುವಲ್ಲಿ ಹಿಂದೇಟು ಹಾಕುತ್ತಿರುವುದು ಅನುಮಾನ ಮೂಡಿಸಿದೆ.
ವಿಜಯಪುರ(Vijayapura) ಹಾಗೂ ಬೆಳಗಾವಿ(Belagavi) ಸೇರಿದಂತೆ ಕೆಲವು ಜಿಲ್ಲೆಗಳ ಕೆಲ ಅಭ್ಯರ್ಥಿಗಳು ರಾಜ್ಯದ ಅಡ್ವೋಕೇಟ್ ಜನರಲ್ ನ್ಯಾ. ಪ್ರಭುಲಿಂಗ್ ನಾವದಗಿ, ಲೋಕಾಯುಕ್ತ ನ್ಯಾ. ವಿಶ್ವನಾಥ ಶೆಟ್ಟಿಹಾಗೂ ಭ್ರಷ್ಟಾಚಾರ ನಿಗ್ರಹ ದಳದ ಮುಖ್ಯಸ್ಥ ಸೀಮಾಂತಕುಮಾರ್ ಸಿಂಗ್, ಐಪಿಎಸ್ ಅವರಿಗೆ ದೂರು ನೀಡಿದ್ದಾರೆ. ಪಿಎಸೈ ಪರೀಕ್ಷೆಯಲ್ಲಿ ಅಕ್ರಮವಾಗಿದೆ ಎಂಬುದರ ಬಗ್ಗೆ ಒಂದಿಷ್ಟು ದಾಖಲೆಗಳು ಹಾಗೂ ಸೂಕ್ಷ್ಮ ಸುಳಿವುಗಳನ್ನು ದೂರುಪತ್ರದಲ್ಲಿ ಬರೆದಿರುವ ನೊಂದ ಅಭ್ಯರ್ಥಿಗಳು, ತನಿಖೆಗೆ ಆಗ್ರಹಿಸಿ, ನ್ಯಾಯಕ್ಕಾಗಿ ಮೊರೆ ಹೋಗಿದ್ದಾರೆ.
PSI Recruitment Scam: ಸದನದಲ್ಲಿ ಸುಳ್ಳು ಉತ್ತರ ನೀಡಿತೇ ಸರ್ಕಾರ..?
ಅಕ್ರಮದ ಅನುಮಾನವಿದ್ದರೆ ಉತ್ತರ ಪತ್ರಿಕೆ ಪಡೆದು ಮೇಲ್ಮನವಿ ಸಲ್ಲಿಸಬಹುದು ಎಂದು ಖುದ್ದು ಗೃಹ ಸಚಿವರೇ ಶಿವಮೊಗ್ಗದಲ್ಲಿ ಹೇಳಿದ್ದರು. ಅದರಂತೆ, ಅರ್ಜಿ ಸಲ್ಲಿಸಿದರೆ ಪ್ರತಿಗಳ ನೀಡಲಾಗುವುದಿಲ್ಲ ಎಂದು ಎಡಿಜಿಪಿ ಕಚೇರಿ ಉತ್ತರ ನೀಡಿದೆ. ಇಬ್ಬರ ಹೇಳಿಕೆಗಳನ್ನು ನೋಡಿದರೆ ಸಾಕಷ್ಟು ಶಂಕೆಗೆ ಕಾರಣವಾಗುತ್ತದೆ. ಹೀಗಾಗಿ, ಈಗ ಅಡ್ವೋಕೇಟ್ ಜನರಲ್, ಲೋಕಾಯುಕ್ತ ಹಾಗೂ ಎಸಿಬಿಗೆ ದಾಖಲೆಗಳ ಸಮೇತ ದೂರು ನೀಡಿದ್ದೇನೆ ಎಂದು ವಿಜಯಪುರ ಜಿಲ್ಲೆಯ ನೊಂದ ಅಭ್ಯರ್ಥಿಯೊಬ್ಬರು ‘ಕನ್ನಡಪ್ರಭ’ಕ್ಕೆ(Kannada Prabha) ತಿಳಿಸಿದರು.
ಶಶೀಲ್ ನಮೋಶಿ, ಎಸ್.ರವಿಗೂ ಅರೆಬರೆ ಉತ್ತರ:
ಈ ಮಧ್ಯೆ, ಪರಿಷತ್ ಸದಸ್ಯ ಶಶೀಲ್ ನಮೋಶಿ ಹಾಗೂ ಎಸ್.ರವಿ (ಸ್ಥಳೀಯ ಸಂಸ್ಥೆಗಳ) ಪಿಎಸೈ ಪರೀಕ್ಷೆ, ಮೀಸಲಾತಿ ಹಾಗೂ ಅಕ್ರಮದ ಕುರಿತು ಕೇಳಿದ್ದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಗೃಹ ಸಚಿವರ ಉತ್ತರ ಅಚ್ಚರಿ ಮೂಡಿಸಿದೆ. ಅಕ್ರಮದ ಬಗ್ಗೆ ಮಾಹಿತಿ ನೀಡುವಲ್ಲಿ ಗೃಹ ಇಲಾಖೆ(Home Department) ಹಿಂದೇಟು ಹಾಕಿದಂತಿದ್ದು, ಅರೆಬರೆ ಮಾಹಿತಿ ನೀಡಿದಂತಿದೆ.
545 ಪಿಎಸೈ ಹುದ್ದೆಗಳ ನೇಮಕಾತಿಯು(Recruitment) ಪಾರದರ್ಶಕವಾಗಿ ನಡೆದಿವೆಯೇ?, ಇದರಲ್ಲಿ ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳಿಗೆ ಅನ್ಯಾಯವಾಗಿರುವುದು ಗಮನಕ್ಕೆ ಬಂದಿದೆಯೇ ? ಲಿಖಿತ ಪರೀಕ್ಷೆಯಲ್ಲಿ ಅಭ್ಯರ್ಥಿಗಳ ಅಂಕದಲ್ಲಿ ಗೊಂದಲ ಮೂಡಿಸಿರುವುದು, ಆಯ್ಕೆಪಟ್ಟಿಯಲ್ಲಿ ಅಭ್ಯರ್ಥಿಗಳ ಪೂರ್ಣ ಮಾಹಿತಿ ನೀಡದಿರುವುದು ಹಾಗೂ ಹೆಸರು ವಿಳಾಸ ಒದಗಿಸಬಹುದೇ ಎಂಬ ಕುರಿತು ಪರಿಷತ್ ಸದಸ್ಯ ಶಶೀಲ್ ನಮೋಶಿಯವರ ಚುಕ್ಕೆ ಗುರುತಿಲ್ಲದೆ ಪ್ರಶ್ನೆಗಳಿಗೆ (ಪ್ರಶ್ನೆ ಸಂಖ್ಯೆ 1474) ಗೃಹ ಸಚಿವರ ಉತ್ತರ ಕೆಲವೆಡೆ ಅನುಮಾನಕ್ಕೆ ಕಾರಣವಾಗಿದೆ.
PSI ನೇಮಕಾತಿ ಆದೇಶಕ್ಕೆ ತಾತ್ಕಾಲಿಕ ತಡೆ
ಹೌದು, ಪರೀಕ್ಷೆ ಪಾರದರ್ಶಕವಾಗಿ ನಡೆದಿದೆ ಎಂದುತ್ತರಿಸಿರುವ ಸಚಿವರು, ಕಲ್ಯಾಣ ಕರ್ನಾಟಕ ಮೀಸಲಾತಿ ವಿಚಾರವಾಗಿ ಸಮಿತಿ ರಚನೆ ಬಗ್ಗೆ ತಿಳಿಸಿದ್ದಾರೆ. ಇನ್ನು ಲಿಖಿತ ಪರೀಕ್ಷೆಯನ್ನು ಯಾವುದೇ ಗೊಂದಲವಿಲ್ಲದಂತೆ ಸುಗಮವಾಗಿ ನಡೆಸಲಾಗಿದೆ ಎಂದು ತಿಳಿಸಿದ್ದು, ಅಭ್ಯರ್ಥಿಗಳ ವಿಳಾಸ ವೈಯುಕ್ತಿಕ ಮಾಹಿತಿಯಾಗಿದ್ದು, ದುರುಪಯೋಗವಾಗುವ ಸಾಧ್ಯತೆಯಿಂದ ಆಯ್ಕೆಪಟ್ಟಿಯಲ್ಲಿ ನೀಡಿಲ್ಲ. ಹೆಸರು, ಅರ್ಜಿ ಸಂಖ್ಯೆ, ರೋಲ್ ನಂ. ಲಿಖಿತ ಪರೀಕ್ಷೆಯಲ್ಲಿ ಪಡೆದ ಅಂಕಗಳು ಮತ್ತು ಯಾವ ಮೀಸಲಾತಿಯಲ್ಲಿ ಆಯ್ಕೆಯಾಗಿರುವ ಎಂಬ ಮಾಹಿತಿ ನೀಡಲಾಗಿದೆ ಎಂದುತ್ತರಿಸಿದ್ದಾರೆ.
ಅಕ್ರಮ ಬಗ್ಗೆ ಐವರು ದೂರು ನೀಡಿದ್ದರು: ಅರಗ ಜ್ಞಾನೇಂದ್ರ
ಇನ್ನು, ನೇಮಕಾತಿಗಾಗಿ ಸಲ್ಲಿಕೆಯಾದ ಅರ್ಜಿಗಳು, ಪರೀಕ್ಷಾ ಕೇಂದ್ರಗಳು, ಅಲ್ಲಿನ ಅಭ್ಯರ್ಥಿಗಳು ಸೇರಿದಂತೆ ಅಕ್ರಮ ದೂರು ಬಗ್ಗೆ ಎಸ್.ರವಿ ಅವರು ಕೇಳಿದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ (ಸಂಖ್ಯೆ 1474) ಉತ್ತರಿಸಿರುವ ಸಚಿವರು, ನೇಮಕಾತಿಯಲ್ಲಿ ಅಕ್ರಮವಾಗಿದೆ ಎಂದು ಐವರು ಅಭ್ಯರ್ಥಿಗಳು ದೂರು ನೀಡಿದ್ದರು. ಅವುಗಳ ಅಂಶಗಳ ಬಗ್ಗೆ ಹಿರಿಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಆಯ್ಕೆಯಾದ ಅಭ್ಯರ್ಥಿಗಳು ಅವರ ಅರ್ಹತೆಯ ಮೇಲೆ ಅಂಕಗಳ ಪಡೆದಿದ್ದಾರೆ. ದೂರು ಅರ್ಜಿಗಳಲ್ಲಿ ತಿಳಿಸಿರುವಂತೆ ಯಾವುದೇ ಅಕ್ರಮ ನಡೆದಿಲ್ಲ ಎಂದು ಅರಗ ಜ್ಞಾನೇಂದ್ರ(Araga Jnanendra) ಉತ್ತರಿಸಿದ್ದಾರೆ. ಅಲ್ಲದೆ, ಕಲ್ಯಾಣ ಕರ್ನಾಟದದ ಅಭ್ಯರ್ಥಿಗಳ ಆಕ್ಷೇಪಣೆ ಹಿನ್ನೆಲೆಯಲ್ಲಿ ಸಮಿತಿ ರಚಿಸಲಾಗಿದೆ ಎಂದಿದ್ದಾರೆ.
ಪರಿಷತ್ ಸದಸ್ಯ ಮರಿತಿಬ್ಬೇಗೌಡ ಸಹ ಕಲಂ 371 ಜೆ ಮೀಸಲಾತಿ(Reservtaion) ಹಾಗೂ ಪರೀಕ್ಷೆಯಲ್ಲಿ ಬ್ಲೂಟೂತ್ ಅಕ್ರಮದ ಕುರಿತು ಪ್ರಶ್ನಿಸಿದ್ದು, ನಿಯಮ 330ರಡಿಯಲ್ಲಿ ಚರ್ಚಿಸುವಂತೆ ಸಭಾಪತಿಗಳಿಗೆ ಅವರು ಕೋರಿದ್ದಾರೆ. ಮಾ.14 ರಂದು ಸದನದಲ್ಲಿ ತಿಳಿಸಲು ಅನುಮತಿ ಕೊಡಬೇಕೆಂದು ಅವರು ಕೇಳಿದ್ದಾರೆ.