100ಕ್ಕೆ ಕರೆ ಮಾಡಿ ಠಾಣಾಧಿಕಾರಿ ಭೇಟಿಗೆ ಸಮಯ ನಿಗದಿ ಪಡಿಸಿ!

By Web DeskFirst Published Jul 25, 2019, 9:29 AM IST
Highlights

ಬೆಂಗಳೂರು ಪೊಲೀಸ್ ಆಯುಕ್ತ ಅಲೋಕ್‌ ಕುಮಾರ್‌ ಅವರು, ಈಗ ನಿಯಂತ್ರಣ ಕೊಠಡಿಗೆ (ನಮ್ಮ 100) ಕರೆ ಮಾಡಿ ಠಾಣೆಗಳಲ್ಲಿ ಪೊಲೀಸರ ಭೇಟಿಗೆ ಸಮಯ ನಿಗದಿ ಮಾಡುವ ಸೌಲಭ್ಯವನ್ನು ಕಲ್ಪಿಸಿದ್ದಾರೆ.
 

ಬೆಂಗಳೂರು (ಜು.25):  ರಾಜಧಾನಿ ಠಾಣೆಗಳಲ್ಲಿ ‘ಜನ ಸ್ನೇಹಿ’ ಆಡಳಿತ ಜಾರಿಗೆ ಮುಂದಾಗಿರುವ ಆಯುಕ್ತ ಅಲೋಕ್‌ ಕುಮಾರ್‌ ಅವರು, ಈಗ ನಿಯಂತ್ರಣ ಕೊಠಡಿಗೆ (ನಮ್ಮ 100) ಕರೆ ಮಾಡಿ ಠಾಣೆಗಳಲ್ಲಿ ಪೊಲೀಸರ ಭೇಟಿಗೆ ಸಮಯ ನಿಗದಿ ಮಾಡುವ ಸೌಲಭ್ಯವನ್ನು ಕಲ್ಪಿಸಿದ್ದಾರೆ.

ಈ ಮೂಲಕ ಅಹವಾಲು ಸಲ್ಲಿಕೆಗೆ ಠಾಣಾಧಿಕಾರಿಗಳನ್ನು ಕಾಣಲು ಠಾಣೆಗಳಲ್ಲಿ ಗಂಟೆಗಟ್ಟಲೇ ನಾಗರಿಕರು ಕಾಯುವುದಕ್ಕೆ ಇತಿಶ್ರೀ ಹಾಡಿದಂತಾಗಿದೆ. ಸಮಯ ನಿಗದಿ ಮಾತ್ರವಲ್ಲದೆ ತಮ್ಮ ದೂರುಗಳ ಇತ್ಯರ್ಥ ಕುರಿತು ಸಾರ್ವಜನಿಕರಿಗೆ ಫೀಡ್‌ ಬ್ಯಾಕ್‌ ಸಹ ನೀಡುವಂತೆ ಆಯುಕ್ತರು ಸೂಚಿಸಿದ್ದಾರೆ.

ನಗರ ಆಯುಕ್ತ ಹುದ್ದೆ ಅಲಂಕರಿಸಿದ ದಿನವೇ ಅಲೋಕ್‌ ಕುಮಾರ್‌ ಅವರು, ಠಾಣೆಗಳಲ್ಲಿ ಜನ ಸ್ನೇಹಿ ಆಡಳಿತ ಜಾರಿಗೆ ತರುವುದಾಗಿ ಘೋಷಿಸಿದ್ದರು. ಅದರಂತೆ ಮುನ್ನಡೆದಿರುವ ಆಯುಕ್ತರು, ಠಾಣೆಗಳಲ್ಲಿ ಹೇಗೆ ನಾಗರಿಕರಿಗೆ ಸೇವೆ ಸಲ್ಲಿಸಬೇಕು ಎಂದು ಅಧಿಕಾರಿ ಮತ್ತು ಸಿಬ್ಬಂದಿಗೆ ಸುತ್ತೋಲೆ ಕಳುಹಿಸಿದ್ದಾರೆ.

ಆಯುಕ್ತರ ಸೂಚನೆಗಳು ಹೀಗಿವೆ

*ನಗರ ವ್ಯಾಪ್ತಿಯ ಪ್ರತಿ ಪೊಲೀಸ್‌ ಠಾಣೆ ಮತ್ತು ಕಚೇರಿಗಳಲ್ಲಿ ಸ್ವಾಗತಕಾರರ ಡೆಸ್ಕ್‌ ಪ್ರಾರಂಭಿಸಬೇಕು.

*ಠಾಣೆಗೆ ಬರುವ ಪ್ರತಿಯೊಬ್ಬ ಸಂದರ್ಶಕರ ವಿವರಗಳನ್ನು ಬರೆದುಕೊಳ್ಳಲು ಸ್ವಾಗತರಾರರ ಡೆಸ್ಕ್‌ನಲ್ಲಿ ನೋಂದಣಿ ಪುಸ್ತಕವಿರಬೇಕು.

*ಸಂದರ್ಶಕರು ಅಥವಾ ದೂರುದಾರರು ಠಾಣೆಗೆ ಭೇಟಿ ನೀಡುವ ಉದ್ದೇಶವನ್ನು ಸಂದರ್ಶಕರ ರಿಜಿಸ್ಟ್ರರ್‌ನಲ್ಲಿ ಸಿಬ್ಬಂದಿ ನಮೂದಿಸುವುದು ಕಡ್ಡಾಯ.

*ಪೊಲೀಸ್‌ ಠಾಣೆಗೆ ಭೇಟಿ ನೀಡುವ ಸಂದರ್ಶಕರ ಮಾಹಿತಿಯನ್ನು ನಿರ್ವಹಿಸಲು ಠಾಣೆಗಳಲ್ಲಿ ಸಂದರ್ಶಕರ ನಿರ್ವಹಣಾ ಸಾಫ್ಟ್‌ವೇರ್‌ (ವಿಎಂಎಸ್‌) ತಂತ್ರಾಂಶ ಬಳಕೆ.

*ಠಾಣಾಧಿಕಾರಿಗಳು ಲಭ್ಯವಿಲ್ಲದ್ದಿದ್ದಲ್ಲಿ ಸಾರ್ವಜನಿಕರು ಅಥವಾ ದೂರುದಾರರನ್ನು ತುಂಬಾ ಸಮಯ ಕಾಯಿಸದೆ ಪೊಲೀಸರು, ಕೂಡಲೇ ಠಾಣಾಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ಕ್ರಮ ಕೈಗೊಳ್ಳಲು ವ್ಯವಸ್ಥೆ ಜಾರಿಯಾಗಬೇಕು.

*ಸಾರ್ವಜನಿಕರು, ದೂರುದಾರರು ಒಂದು ವೇಳೆ ತಮ್ಮ ದೂರುಗಳಿಗೆ ಸಂಬಂಧಿಸಿದ ಠಾಣಾಧಿಕಾರಿಗಳು ಸರಿಯಾಗಿ ಸ್ಪಂದಿಸದಿದ್ದಲ್ಲಿ ಆ ಬಗ್ಗೆ ಎಸಿಪಿ, ಡಿಸಿಪಿ, ಹೆಚ್ಚುವರಿ ಆಯುಕ್ತರು ಅಥವಾ ಆಯುಕ್ತರನ್ನು ನೇರವಾಗಿ ಭೇಟಿ ಮಾಡಬಹುದು.

*ಸಂದರ್ಶಕರು ಹಾಗೂ ದೂರುದಾರರು ಠಾಣೆಗೆ ಭೇಟಿ ನೀಡಿದ ಅಥವಾ ತಮ್ಮ ಅಹವಾಲುಗಳಿಗೆ ಠಾಣಾಧಿಕಾರಿಗಳು ಸ್ಪಂದಿಸಿದ ಕುರಿತು ಮಾಹಿತಿಯನ್ನು ಸ್ವೀಕರಿಸುವ ವ್ಯವಸ್ಥೆ ಲಭ್ಯವಿರುತ್ತದೆ.

*ಸಾರ್ವಜನಿಕರು ನಮ್ಮ 100 ಗೆ ಕರೆ ಮಾಡುವುದರ ಮೂಲಕ ಸಂಬಂಧಿಸಿದ ಠಾಣಾಧಿಕಾರಿಗಳ ಭೇಟಿಗಾಗಿ ನಿಗದಿತ ಸಮಯ (ಅಪಾಯಿಂಟ್‌ಮೆಂಟ್‌) ಪಡೆಯುವ ಸೌಲಭ್ಯ ಜಾರಿಗೊಳಿಸಲಾಗಿದೆ.

click me!