ಮಲೆನಾಡಿಗೆ ಪ್ರವಾಸಕ್ಕೆ ತೆರಳುವವರಿಗೆ ಗುಡ್ ನ್ಯೂಸ್ . ಕೊಡಚಾದ್ರಿ ಹಾಗೂ ಕೊಲ್ಲೂರು ನಡುವೆ ಕೇಬಲ್ ಕಾರ್ ಸೇವೆ ಆರಂಭಿಸುವ ಬಗ್ಗೆ ಸಂಸದ ಬಿ ವೈ ರಾಘವೇಂದ್ರ ಮಾಹಿತಿ ನೀಡಿದ್ದಾರೆ.
ಶಿವಮೊಗ್ಗ [ಜ.16]: ಕೊಡಚಾದ್ರಿ, ಕೊಲ್ಲೂರು ನಡುವೆ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಸಾರ್ವಜನಿಕ ಸಹಭಾಗಿತ್ವದಲ್ಲಿ ಕೇಬಲ್‌ಕಾರ್ ಸಂಪರ್ಕ ವ್ಯವಸ್ಥೆ ಕಲ್ಪಿಸಲು ಉದ್ದೇಶಿಸಲಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ನೀಡಲು ಕೈಗೊಳ್ಳಬಹುದಾದ ಯೋಜನೆಗಳು, ಅವುಗಳ ಸಾಧ್ಯಾ ಸಾಧ್ಯತೆ, ಸವಾಲುಗಳ ಬಗ್ಗೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ತಜ್ಞರೊಂದಿಗೆ ಸಮಾಲೋಚನೆ ನಡೆಸಿದರು.
ಕೊಲ್ಲೂರು ಮತ್ತು ಕೊಡಚಾದ್ರಿ ನಡುವೆ ಸುಮಾರು 32 ಕಿ.ಮೀ. ದೂರದ ಅಂತರವಿದ್ದು, 11 ಕಿ.ಮೀ. ಕೇಬಲ್ ಕಾರ್ ಸಂಪರ್ಕ ಅಳವಡಿಸುವುದರಿಂದ ಪ್ರಯಾಣದ ಅಂತರ ಕಡಿಮೆಯಾಗಲಿದೆಯಲ್ಲದೆ, ಸಮಯದ ಉಳಿತಾಯವಾಗಲಿದೆ ಎಂದವರು ನುಡಿದರು.
ಈ ಭಾಗದ ಪ್ರಾಕೃತಿಕ ಸೌಂದರ್ಯಕ್ಕೆ ಕಿಂಚಿತ್ತೂ ಚ್ಯುತಿಯಾಗದಂತೆ ಹಾಗೂ ಇರುವ ಪ್ರಕೃತಿ ಸೌಂದರ್ಯವನ್ನು ಉಳಿಸಿಕೊಂಡು ಅಭಿವೃದ್ಧಿಪಡಿಸಬಹುದಾದ ವಿಧಾನಗಳ ಕುರಿತು ಸಮೀಕ್ಷೆ ಮಾಡಿ ಪ್ರಸ್ತಾವ ಸಲ್ಲಿಸಿದಲ್ಲಿ, ಅದನ್ನು ಪರಿಶೀಲಿಸಿ, ಪರಿಸರ, ಅರಣ್ಯ ಇಲಾಖೆಗಳಿಂದ ನಿರಾಕ್ಷೇಪಣ ಪತ್ರ ಪಡೆಯಲು ಹಾಗೂ ಕೇಂದ್ರ ಸರ್ಕಾರದಿಂದ ಅನುಮತಿ ಕೊಡಿ ಸುವ ಬಗ್ಗೆ ಆಲೋಚಿಸಲಾಗುವುದು ಎಂದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಬೆಂಗಳೂರು ಮೀನಸ್ ಅಡ್ವೆಂಚರ್ಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ನಜೀರ್ ಎ.ಭಟ್, ಪ್ರಸ್ತಾವಿತ ಯೋಜನೆಗೆ 1200 ಕೋಟಿ ರು. ಅಂದಾಜು ವೆಚ್ಚ ತಗಲುವ ಸಾಧ್ಯತೆ ಇದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಅಗತ್ಯ ಸಹಕಾರ ನೀಡಿದಲ್ಲಿ ಯೋಜನೆ ನಿಗದಿತ ಕಾಲಮಿತಿಯಲ್ಲಿ ಪೂರ್ಣಗೊಳಿಸಲು ಯತ್ನಿಸಲಾಗುವುದು ಎಂದರು.
ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಸಂಬಂಧಿಸಿದಂತೆಯೂ ಸಮಾಲೋಚನೆ ನಡೆಸಿದ ಸಂಸದ ಬಿ.ವೈ.ರಾಘವೇಂದ್ರ ಅವರು, ಇದೇ ಮಾದರಿಯಲ್ಲಿ ಜೋಗ ಅಭಿವೃ ದ್ಧಿಗೂ ಗಮನಹರಿಸುವ ಅಗತ್ಯ ಬಗ್ಗೆ ಕ್ರಮ ವಹಿಸುವುದಾಗಿ ತಿಳಿಸಿದರು.
ಹೈ ಟೆಕ್ ಆಗಲಿದೆ ತ್ಯಾವರೆಕೊಪ್ಪ ಹುಲಿ-ಸಿಂಹಧಾಮ...
ಈಗಾಗಲೇ ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರದ ವಿಕಾಸಕ್ಕೆ ಸರ್ಕಾರವು 20 ಕೋಟಿ ರು. ಅನುದಾನ ಮಂಜೂರು ಮಾಡಿದ್ದು, ಅಭಿವೃದ್ಧಿ ಕಾರ್ಯಗಳು ಪ್ರಗತಿಯಲ್ಲಿವೆ. ಜೋಗ ಅಭಿವೃದ್ಧಿ ಪ್ರಾಧಿಕಾರಕ್ಕೆ ಈಗಾಗಲೆ 20 ಕೋಟಿ ರು. ಅನುದಾನ ವನ್ನು ಮಂಜೂರು ಮಾಡಿದೆ. ಶರಣೆ ಅಕ್ಕಮಹಾದೇವಿ ಜನ್ಮಸ್ಥಳ ಉಡುತಡಿಯ ಸರ್ವಾಂಗೀಣ ವಿಕಾಸಕ್ಕೆ ಹಾಗೂ ಶರಣರ ಚಳವಳಿ ನಡೆದು ಬಂದ ಬಗೆಯನ್ನು ಜನಸಾಮಾನ್ಯರಿಗೆ ತಲುಪಿಸುವ ಸದುದ್ದೇಶದಿಂದ ಉಡುತಡಿಯ ಕೋಟೆಗೆ ಹೊಂದಿಕೊಂಡಂತಿರುವ ಅರ್ಧ ಕಿ.ಮೀ. ವಿಸ್ತೀರ್ಣದಲ್ಲಿರುವ ಅಗಳವನ್ನು ಅತ್ಯಾಧುನಿಕ ರೀತಿಯಲ್ಲಿ ಅಭಿವೃದ್ಧಿಪಡಿಸಲು ಯೋಜನೆ ತಯಾರಿಸಲಾಗಿದೆ. ಈ ಅಗಳಕ್ಕೆ ಅಂಜನಾಪುರ ಜಲಾಶಯದಿಂದ ನೀರು ತರುವ ಬಗ್ಗೆಯೂ ಚಿಂತಿಸಲಾಗಿದೆ. ಅದಕ್ಕಾಗಿ ಸುಮಾರು 5 ಕೋಟಿ ರು. ಸರ್ಕಾರ ಬಿಡುಗಡೆಗೊಳಿಸಿದೆ ಎಂದರು.
ಅಂತೆಯೇ ಚಂದ್ರಗುತ್ತಿ, ಕೆಳದಿ, ನಗರಕೋಟೆ ಹಾಗೂ ಕಲ್ಲೂರು-ಮಂಡ್ಲಿ ಸಾಹಸ ಕೇಂದ್ರ ಹಾಗೂ ಕವಲೇದುರ್ಗ ಕೋಟೆ ಅಭಿವೃದ್ಧಿಗೂ ಅನುದಾನ ಮಂಜೂರು ಮಾಡಲಾಗಿದೆ ಎಂದರು. ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ರಾಮಕೃಷ್ಣ, ಉಡುತಡಿ ಅಭಿವೃದ್ಧಿಗೆ ಸಂಬಂಧಿಸಿದ ಅಲ್ಕನ್ ಕನ್‌ಸ್ಟ್ರಕ್ಷನ್ಸ್ ಸಂಸ್ಥೆಯ ವಿನಾಯಕ ಇನ್ನಿತರರಿದ್ದರು.