ಆತ್ಮಹತ್ಯೆಗೆ ಯತ್ನಿಸಿದ್ದ ಕ್ಯಾಬ್‌ ಚಾಲಕ ಚಿಕಿತ್ಸೆ ಫಲಿಸದೆ ಸಾವು

By Kannadaprabha NewsFirst Published Apr 1, 2021, 7:43 AM IST
Highlights

ಅನ್ಯಾಯದ ಸಾವು| ಆರ್ಥಿಕ ಸಂಕಷ್ಟದಿಂದ ನೊಂದಿದ್ದ ಕ್ಯಾಬ್‌ ಚಾಲಕ| ಚಾಲಕನ ಸಾವಿನ ಸುದ್ದಿ ತಿಳಿದ ಆಕ್ರೋಶಗೊಂಡ ಟ್ಯಾಕ್ಸಿ ಚಾಲಕರು, ಕೆಐಎ ಆಡಳಿತ ಮಂಡಳಿ ವಿರುದ್ಧ ದಿಢೀರ್‌ ಪ್ರತಿಭಟನೆ| ಕೆಐಎಗೆ ಬರುವ ಎಲ್ಲ ಕ್ಯಾಬ್‌ಗಳಿಗೆ ಏಕರೂಪ ಬಾಡಿಗೆ ನಿಗದಿ ಮಾಡಬೇಕೆಂದು ಪ್ರತಿಭಟನಕಾರರ ಒತ್ತಾಯ| 

ಬೆಂಗಳೂರು(ಏ.01): ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎ) ಆವರಣದಲ್ಲೇ ಟ್ಯಾಕ್ಸಿಯಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಚಾಲಕ ಪ್ರತಾಪ್‌(28) ಚಿಕಿತ್ಸೆ ಫಲಿಸದೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಬುಧವಾರ ನಸುಕಿನಲ್ಲಿ ಮೃತಪಟ್ಟಿದ್ದಾರೆ.

ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ (ಕೆಎಸ್‌ಟಿಡಿಸಿ) ಗುತ್ತಿಗೆ ಅಡಿಯಲ್ಲಿ ಟ್ಯಾಕ್ಸಿ ಚಲಾಯಿಸುತ್ತಿದ್ದ ರಾಮನಗರ ತಾಲೂಕಿನ ಪ್ರತಾಪ್‌, ಮಂಗಳವಾರ ಸಂಜೆ ಕೆಐಎ ಆಗಮನ ಪಿಕ್‌ಅಪ್‌ ಪಾಯಿಂಟ್‌ನಲ್ಲಿ ಟ್ಯಾಕ್ಸಿಯೊಳಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿಕೊಂಡಿದ್ದ. ತಕ್ಷವೇ ಕೆಐಎ ಭದ್ರತಾ ಸಿಬ್ಬಂದಿ, ಪ್ರತಾಪ್‌ನನ್ನು ರಕ್ಷಿಸಿ ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗೆ ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಆತ ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಬೆಂಗಳೂರು: ಏರ್‌ಪೋರ್ಟ್‌ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಟ್ಯಾಕ್ಸಿ ಚಾಲಕ

ಚಾಲಕನ ಸಾವಿನ ಸುದ್ದಿ ತಿಳಿದ ಆಕ್ರೋಶಗೊಂಡ ಟ್ಯಾಕ್ಸಿ ಚಾಲಕರು, ಕೆಐಎ ಆಡಳಿತ ಮಂಡಳಿ ವಿರುದ್ಧ ದಿಢೀರ್‌ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಆ್ಯಪ್‌ ಆಧಾರಿತ ಕ್ಯಾಬ್‌ ಮತ್ತು ಕೆಎಸ್‌ಟಿಡಿಸಿ ಕ್ಯಾಬ್‌ಗಳಿಗೆ ಏಕರೂಪ ದರವನ್ನು ಸರ್ಕಾರ ನಿಗದಿ ಮಾಡಬೇಕು. ಕಡಿಮೆ ದರದಲ್ಲಿ ಸೇವೆ ನೀಡುತ್ತಿರುವ ಆ್ಯಪ್‌ ಆಧಾರಿತ ಕ್ಯಾಬ್‌ ಸಂಸ್ಥೆಗಳಿಗೆ ಕಡಿವಾಣ ಹಾಕಬೇಕು ಎಂದು ಟ್ಯಾಕ್ಸಿ ಚಾಲಕರು ಆಗ್ರಹಿಸಿದರು.

ಕೆಎಸ್‌ಟಿಡಿಸಿ ಕ್ಯಾಬ್‌ಗಳಿಗೆ ಸರಿಯಾಗಿ ಬಾಡಿಗೆ ಸಿಗದೆ ಇದ್ದರೇ ಸಾಲದ ಕಂತು ಪಾವತಿ ಮಾಡಲು ಸಾಧ್ಯವಾಗುತ್ತಿಲ್ಲ. ಇದರಿಂದ ಸಾಲಕ್ಕೆ ಸಿಲುಕಿ ಮಾನಸಿಕ ಒತ್ತಡಕ್ಕೆ ಒಳಗಾಗಬೇಕಾಗಿದೆ. ಲಾಕ್‌ಡೌನ್‌ನಿಂದ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿದ್ದೇವೆ. ಕೆಐಎಗೆ ಬರುವ ಎಲ್ಲ ಕ್ಯಾಬ್‌ಗಳಿಗೆ ಏಕರೂಪ ಬಾಡಿಗೆ ನಿಗದಿ ಮಾಡಬೇಕೆಂದು ಪ್ರತಿಭಟನಕಾರರು ಒತ್ತಾಯಿಸಿದರು. ಕೆಐಎ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

click me!