BDA CA Site ಗುತ್ತಿಗೆ ಹಣ ವಸೂಲಿ ಬಿಡಿಎಗೆ ತಲೆಬೇನೆ!

By Kannadaprabha NewsFirst Published Jul 17, 2022, 6:11 AM IST
Highlights

ನಾಗರಿಕರ ಸೌಲಭ್ಯಕ್ಕೆ ಸಂಘ ಸಂಸ್ಥೆಗಳಿಗೆ ಸಿಎ ಸೈಟ್‌ ಗುತ್ತಿಗೆ. ಹಣ ಪಾವತಿಸದ್ದಕ್ಕೆ ಗುತ್ತಿಗೆ ಹಣದ ಬಡ್ಡಿ 50% ಮನ್ನ. ಬಡ್ಡಿ ಹಣವೇ ಕೋಟ್ಯಂತರು ಬಾಕಿ ಇದ್ದು ಹಣ ಕಟ್ಟಲು ಸಂಸ್ಥೆಗಳು ನಿರ್ಲಕ್ಷ್ಯ ತೋರಿವೆ. ಹೀಗಾಗಿ ಬಿಡಿಎಗೆ ಸಂಪನ್ಮೂಲ ಸಂಗ್ರಹ ಸವಾಲು ಎನಿಸಿದೆ.

ಸಂಪತ್‌ ತರೀಕೆರೆ

ಬೆಂಗಳೂರು (ಜು.17): ನಾಗರಿಕ ಸೌಲಭ್ಯ ನಿವೇಶನಗಳನ್ನು(ಸಿಎ ಸೈಟ್‌) ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ (ಬಿಡಿಎ) ಗುತ್ತಿಗೆ ಪಡೆದು ಹಣ ಪಾವತಿಸದ ಸಂಘ, ಸಂಸ್ಥೆಗಳಿಗೆ ಗುತ್ತಿಗೆ ಮೊತ್ತದ ಮೇಲಿನ ಬಡ್ಡಿಯಲ್ಲಿ ಶೇಕಡ 50 ಮನ್ನಾ ಮಾಡಿದೆ. ಆದರೂ ಬಾಕಿ ಹಣ ಪಾವತಿಸದೆ ನಿರ್ಲಕ್ಷ್ಯ ವಹಿಸಿದ್ದರಿಂದ ಬಿಡಿಎಗೆ ತಲೆನೋವಾಗಿ ಪರಿಣಮಿಸಿದೆ. ನಾಗರಿಕ ಸೌಲಭ್ಯ ನಿವೇಶನಗಳನ್ನು ಸಾರ್ವಜನಿಕರಿಗೆ ಅನುಕೂಲವಾಗುವ ಶಾಲೆ, ಕಾಲೇಜು, ತರಬೇತಿ ಸಂಸ್ಥೆ ಹೀಗೆ ಹತ್ತು ಹಲವು ಉದ್ದೇಶಗಳಿಗೆ ಬಿಡಿಎ ಹಂಚಿಕೆ ಮಾಡಿದೆ. ನಗರಾದ್ಯಂತ ಸುಮಾರು 1400ಕ್ಕೂ ಹೆಚ್ಚು ಸಿಎ ನಿವೇಶನಗಳನ್ನು ಬಿಡಿಎ ಹಂಚಿಕೆ ಮಾಡಿದೆ. ಈ ಹಿಂದೆ 90 ವರ್ಷಗಳ ಭೋಗ್ಯಕ್ಕೆ (ಲೀಸ್‌ಗೆ) ನಿವೇಶನಗಳನ್ನು ಬಿಡಿಎ ಹಂಚಿಕೆ ಮಾಡಿತ್ತು. ಆದರೆ ಈಗ ಕೇವಲ 30 ವರ್ಷಕ್ಕೆ ಮಾತ್ರ ಭೋಗ್ಯಕ್ಕೆ ನೀಡುತ್ತಿದೆ. ಹೀಗೆ ಸಿ.ಎ ಸೈಟ್‌ ಪಡೆದ ಬಹುತೇಕ ಸಂಘ, ಸಂಸ್ಥೆಗಳು ಹಲವು ವರ್ಷಗಳಿಂದ ಗುತ್ತಿಗೆ ಮೊತ್ತವನ್ನು ಪಾವತಿಸದೆ ನಿರ್ಲಕ್ಷ್ಯ ವಹಿಸಿದ್ದು ಕೋಟ್ಯಂತರ ರುಪಾಯಿ ಉಳಿಸಿಕೊಂಡಿವೆ. ನಾಗರಿಕ ಸೌಲಭ್ಯ ನಿವೇಶನಗಳನ್ನು ಗುತ್ತಿಗೆ ಆಧಾರದಲ್ಲಿ ಪಡೆದ ಸಂಸ್ಥೆಗಳು ಸಕಾಲದಲ್ಲಿ ಗುತ್ತಿಗೆ ಮೌಲ್ಯವನ್ನು ಪಾವತಿಸದಿದ್ದರೆ ಶೇ.18ರಷ್ಟುಬಡ್ಡಿಯನ್ನು ಕಟ್ಟಬೇಕು ಎಂಬ ನಿಯಮವಿದೆ. ಹಲವು ಸಂಘ, ಸಂಸ್ಥೆಗಳು ಗುತ್ತಿಗೆ ಪಡೆದಿದ್ದರೂ ಈವರೆಗೂ ಬಿಡಿಎಗೆ ಗುತ್ತಿಗೆ ಮೊತ್ತವನ್ನು ಪಾವತಿಸಿಲ್ಲ. ಹೀಗಾಗಿ ಸಂಘ, ಸಂಸ್ಥೆಗಳಿಗೆ ಬಡ್ಡಿ ವಿಧಿಸಿದ್ದು, ಈ ಮೊತ್ತವೇ ಕೋಟ್ಯಂತರ ರು. ಆಗಿದೆ ಎಂದು ಬಿಡಿಎ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಶೇ.50ರಷ್ಟುಬಡ್ಡಿ ಮನ್ನಾ: ಪ್ರಸ್ತುತ ಪ್ರಾಧಿಕಾರದ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಗೊಳಿಸಲು ಈಗಾಗಲೇ ಗುತ್ತಿಗೆ ಆಧಾರದ ಮೇಲೆ ವಿವಿಧ ಬಡಾವಣೆಗಳಲ್ಲಿ ಹಂಚಿಕೆ ಮಾಡಿರುವ ನಾಗರಿಕ ಸೌಲಭ್ಯ ನಿವೇಶನಗಳ ಗುತ್ತಿಗೆ ಮೊತ್ತವನ್ನು ಸಂಗ್ರಹಿಸಲು ಬಿಡಿಎ ಮುಂದಾಗಿದೆ. ಗುತ್ತಿಗೆ ಪಡೆದ ಸಂಘ, ಸಂಸ್ಥೆಗಳಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿತ್ತು. ಈ ಹಿನ್ನೆಲೆಯಲ್ಲಿ ದಂಡದ ಮೊತ್ತವನ್ನು ಮನ್ನಾ ಮಾಡುವಂತೆ ಕೆಲವು ಸಂಘ, ಸಂಸ್ಥೆಗಳು ರಾಜ್ಯ ಸರ್ಕಾರದ ಮೊರೆ ಹೋಗಿದ್ದರಿಂದ ಗುತ್ತಿಗೆ ಮೊತ್ತ ಮತ್ತು ದಂಡದ ಶೇ.50ರಷ್ಟುಹಣವನ್ನು ಪಾವತಿಸುವಂತೆ ಒಂದು ಬಾರಿಯ ಅವಕಾಶವನ್ನು ಸರ್ಕಾರ ಒದಗಿಸಿತ್ತು.

ಅದಕ್ಕಾಗಿ 2022 ಜನವರಿ 13ರಂದು ಪ್ರಕಟಣೆಯನ್ನು ಹೊರಡಿಸಿದ್ದ ಪ್ರಾಧಿಕಾರ, 6 ತಿಂಗಳಲ್ಲಿ ಗುತ್ತಿಗೆ ಮೊತ್ತ ಮತ್ತು ದಂಡದ ಶೇ.50ರಷ್ಟುಪಾವತಿಸುವ ಗುತ್ತಿಗೆ ಪಡೆದ ಸಂಘ, ಸಂಸ್ಥೆಗಳ ಶೇ.50ರಷ್ಟುಬಡ್ಡಿಯನ್ನು ಮನ್ನಾ ಮಾಡುವುದಾಗಿ ಘೋಷಿಸಿತ್ತು. ಆ ನಂತರ ಜೂನ್‌ 20ರಂದು ಎರಡನೇ ಬಾರಿಗೆ ಶೇ.50ರಷ್ಟುಬಡ್ಡಿ ಮನ್ನಾ ಮಾಡುವ ಯೋಜನೆ ಸದುಪಯೋಗ ಪಡೆಯುವಂತೆ ತಿಳಿಸಿತ್ತು. ಇದೀಗ ಜುಲೈ 14ಕ್ಕೆ ಈ ಅವಕಾಶ ಮುಕ್ತಾಯವಾಗಿದೆ.

.15 ಕೋಟಿ ಸಂಗ್ರಹ: ನಾಗರಿಕ ಸೌಲಭ್ಯ ನಿವೇಶನಗಳ ಗುತ್ತಿಗೆ ಪಡೆದ ಕೆಲವು ಸಂಘ, ಸಂಸ್ಥೆಗಳು ಕಳೆದ ಆರು ತಿಂಗಳಲ್ಲಿ ಗುತ್ತಿಗೆ ಮೊತ್ತ ಮತ್ತು ಬಡ್ಡಿ ಸೇರಿ ಕೇವಲ .15 ಕೋಟಿ ಪಾವತಿಸಿವೆ. ಇದು ಒಟ್ಟು ಮೊತ್ತದ ಶೇ.40ರಿಂದ 50ರಷ್ಟುಮಾತ್ರ ಆಗಿದೆ. ಜುಲೈ 14ರಂದು ಶೇ.50ರಷ್ಟುವಿನಾಯ್ತಿ ಪಡೆದ ಸಂಘ, ಸಂಸ್ಥೆಗಳು ಆನ್‌ಲೈನ್‌ ಮೂಲಕ ಎಷ್ಟುಹಣ ಪಾವತಿಸಿವೆ ಎಂಬುದರ ಲೆಕ್ಕಾಚಾರ ನಡೆಯುತ್ತಿದೆ. ಆ ನಂತರ ನಿಗದಿತ ಅವಧಿಯಲ್ಲಿ ಹಣ ಪಾವತಿ ಮಾಡದ ಗುತ್ತಿಗೆ ಪಡೆದ ಸಂಘ, ಸಂಸ್ಥೆಗಳ ಪಟ್ಟಿಮಾಡುವುದಾಗಿ ಬಿಡಿಎ ಹಿರಿಯ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

ಈಗಾಗಲೇ ಬಿಡಿಎ ನೀಡಿದ್ದ ಶೇ.50ರಷ್ಟುಬಡ್ಡಿ ಮನ್ನಾದ ಕೊಡುಗೆ ಅವಧಿ ಮುಕ್ತಾಯವಾಗಿದ್ದು, ಜುಲೈ 15ರಿಂದ ಪೂರ್ಣ ಪ್ರಮಾಣದಲ್ಲಿ ಗುತ್ತಿಗೆ ಮೊತ್ತ ಮತ್ತು ಬಡ್ಡಿಯನ್ನು ಸಿಎ ನಿವೇಶನಗಳನ್ನು ಭೋಗ್ಯಕ್ಕೆ ಪಡೆದ ಸಂಘ, ಸಂಸ್ಥೆಗಳು ಪಾವತಿಸಬೇಕು. ಇಲ್ಲದಿದ್ದರೆ ಹಣ ಪಾವತಿಸದ ಗುತ್ತಿಗೆ ಪಡೆದ ಸಂಘ ಸಂಸ್ಥೆಗಳಿಗೆ ನೋಟಿಸ್‌ ನೀಡಿ, ಕಾನೂನು ರೀತ್ಯ ಕ್ರಮಕೈಗೊಳ್ಳುತ್ತೇವೆ.

-ರಾಜೇಶ್‌ಗೌಡ, ಆಯುಕ್ತ, ಬಿಡಿಎ.

click me!